ಕಲಬುರಗಿ: ರಾಜ್ಯ ಸರ್ಕಾರದ ವಿಫಲತೆಗಳು ಹಾಗೂ ವಿವಿಧ ಹಗರಣಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸ್ಟಿಂಗ್ ಆಪರೇಷನ್ಗಳ ಪಿತಾಮಹ ಯಾರು ಎಂಬುದು ಎಲ್ಲರಿಗೂ ಗೊತ್ತು
ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ಗಳ ಹಿಂದೆ ಯಾರಿದ್ದಾರೆ ಮತ್ತು ಅದರ ಪಿತಾಮಹ ಯಾರು ಎನ್ನುವುದು ಕಾಂಗ್ರೆಸ್ ಶಾಸಕರಿಗೇ ಚೆನ್ನಾಗಿ ತಿಳಿದಿದೆ. ಮುಂಬರುವ ದಿನಗಳಲ್ಲಿ ಎಲ್ಲ ಸತ್ಯಗಳೂ ಹೊರಬರಲಿವೆ ಎಂದು ಮಾರ್ಮಿಕವಾಗಿ ನುಡಿದರು.
ಅನುದಾನ ಕೊರತೆಯಿಂದ ಮುಖ್ಯಮಂತ್ರಿ ವಿಚಲಿತ
ಸಿಎಂ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಿ ವಿವಿಧ ಯೋಜನೆಗಳಿಗೆ ಅನುದಾನ ಘೋಷಣೆ ಮಾಡಿದ್ದರು. ಆದರೆ, ರಾಜ್ಯದಲ್ಲಿ ಅನುದಾನ ಲಭ್ಯವಿಲ್ಲ ಎಂದು ಆರ್ಥಿಕ ಇಲಾಖೆಯು ಪತ್ರ ಬರೆದಿತ್ತು. ಈ ಘಟನೆಯಿಂದ ತೀವ್ರ ವಿಚಲಿತರಾಗಿರುವ ಮುಖ್ಯಮಂತ್ರಿಗಳು ಇದೀಗ ಪೆನ್ ಡ್ರೈವ್ಗಳನ್ನು ಹರಿಬಿಡುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಆರೋಪಿಸಿದರು.
ಶಾಸಕ ರವಿ ಗಾಣಿಗ ಹೇಳಿಕೆ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ
ಶಾಸಕ ರವಿ ಗಾಣಿಗ ಅವರ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಮಂಡ್ಯ ಶಾಸಕರಾಗಿ ಅವರು ಏನು ಕೆಲಸ ಮಾಡಿದ್ದಾರೆ ಎಂಬುದು ಕ್ಷೇತ್ರ ಹಾಗೂ ರಾಜ್ಯದ ಜನತೆಗೆ ತಿಳಿದಿದೆ ಎಂದರು. ಇನ್ನು ಆರ್ ಅಶೋಕ್ ಅವರ ಬಳಿ ಮೂರು ಪೆನ್ ಡ್ರೈವ್ಗಳಿವೆ ಎಂಬ ಹೇಳಿಕೆ ಕುರಿತು ಮಾಧ್ಯಮದವರು ಪ್ರಶ್ನಿಸಿದಾಗ, "ಆ ಬಗ್ಗೆ ನನಗೆ ಮಾಹಿತಿ ಇಲ್ಲ" ಎಂದು ಕೈಮುಗಿದು ಪ್ರತಿಕ್ರಿಯಿಸಿದರು.
ಬಿಎಲ್ಒಗಳ ಮೂಲಕ ಎಸ್ಐಆರ್ ಕಾರ್ಯಕರ್ತರ ಟಾರ್ಗೆಟ್
ಫಾರ್ಮ್ ನಂಬರ್ 7 ಸ್ವೀಕರಿಸುವುದು ಬಿಎಲ್ಒಗಳು, ಅಂದರೆ ಅವರು ರಾಜ್ಯ ಸರ್ಕಾರದ ಅಧಿಕಾರಿಗಳೇ ಆಗಿದ್ದಾರೆ. ಒಂದು ವೇಳೆ ಅರ್ಜಿಗಳು ಬೋಗಸ್ ಆಗಿದ್ದರೆ ಅಧಿಕಾರಿಗಳೇ ಅವುಗಳನ್ನು ತಿರಸ್ಕರಿಸಲಿ (ರಿಜೆಕ್ಟ್ ಮಾಡಲಿ). ಅದನ್ನು ಬಿಟ್ಟು ಸ್ವತಃ ಸರ್ಕಾರವೇ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ಡಿ.ಕೆ. ಶಿವಕುಮಾರ್ ಅವರು ಸುಮ್ಮನೆ ಸಮಯ ವ್ಯರ್ಥ ಮಾಡುವುದನ್ನು ಬಿಡಬೇಕು ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಪ್ರಧಾನಿಯಾಗಲ್ಲ
ರಾಹುಲ್ ಗಾಂಧಿ ಅವರು ಎಂದಿಗೂ ದೇಶದ ಪ್ರಧಾನಿಯಾಗಲು ಸಾಧ್ಯವಿಲ್ಲ. ದೇಶದ ಜನತೆ ಈಗಾಗಲೇ ನರೇಂದ್ರ ಮೋದಿ ಅವರ ನಾಯಕತ್ವವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆ ಎಂದು ವಿಜಯೇಂದ್ರ ಪ್ರತಿಪಾದಿಸಿದರು.
ಕೆಪಿಎಸ್ಸಿ ಹಗರಣದ ಸವಾಲು
ಕೆಪಿಎಸ್ಸಿ ಹಗರಣದಲ್ಲಿ ಶಿವಶಂಕರಪ್ಪ ಸಾಹುಕಾರ್ ಹೆಸರನ್ನು ವಿಜಯೇಂದ್ರ ಒಮ್ಮೆಯೂ ಪ್ರಸ್ತಾಪಿಸಿಲ್ಲ ಎಂಬ ಗೃಹ ಸಚಿವರ ಹೇಳಿಕೆಗೆ ತಿರುಗೇಟು ನೀಡಿದ ಅವರು, "ಸಾಹುಕಾರ್ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ಕೆಪಿಎಸ್ಸಿ ಅಧ್ಯಕ್ಷರಾಗಿದ್ದು ನಿಜ. ಆದರೆ ಕಾಂಗ್ರೆಸ್ ನಾಯಕರು ಸುಮ್ಮನೆ ಹಿಟ್ & ರನ್ ರಾಜಕಾರಣ ಮಾಡುವುದನ್ನು ಬಿಟ್ಟು, ನಾವು ಹಗರಣದಲ್ಲಿ ಭಾಗಿಯಾಗಿದ್ದೇವೆ ಎನ್ನಲು ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಲಿ" ಎಂದು ಸವಾಲು ಹಾಕಿದರು.