ರಾಜ್ಯದ ಜನತೆಗೆ ಮತ್ತೊಂದು ಶಾಕ್: ಬಸ್ ಟಿಕೆಟ್ ದರ 9 ರೂ. ಹೆಚ್ಚಳ
ರಾಜ್ಯದ ಜನತೆಗೆ ದುಬಾರಿ ದುನಿಯಾ ಆರಂಭವಾಗಿದೆ. ಹಾಲಿನ ದರ ಹೆಚ್ಚಳ ಬೆನ್ನಲ್ಲೇ KSRTC, BMTC ಸೇರಿದಂತೆ ನಾಲ್ಕು ನಿಗಮಗಳ ಟಿಕೆಟ್ ಬೆಲೆ ಇಂದಿನಿಂದ 9 ರೂ. ಏರಿಕೆಯಾಗಲಿದೆ. ಡೀಸೆಲ್ ಬೆಲೆ ಏರಿಕೆ, ನೌಕರರ ಸಂಬಳ ಮತ್ತು ಕಾರ್ಯಾಚರಣೆಯ ವೆಚ್ಚವೇ ಇದಕ್ಕೆ ಮುಖ್ಯ ಕಾರಣ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಬೆಂಗಳೂರು: ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಈಗಾಗಲೇ ಹಾಲು, ಮೊಸರು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಇದೀಗ ಬಸ್ ಪ್ರಯಾಣವೂ ದುಬಾರಿಯಾಗಲಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಅನಿವಾರ್ಯ ಎಂದು ಸಾರಿಗೆ ಸಚಿವ ಭೈರತಿ ಸುರೇಶ್ ಹೇಳಿದ್ದಾರೆ.
ಬಸ್ ದರ ಹೆಚ್ಚಳ ಅನಿವಾರ್ಯ ಎಂದ ಸಚಿವರು!
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಭೈರತಿ ಸುರೇಶ್, ಡೀಸೆಲ್ ಬೆಲೆ ಏರಿಕೆ, ನೌಕರರ ವೇತನ ಹೆಚ್ಚಳ ಹಾಗೂ ನಿರ್ವಹಣಾ ವೆಚ್ಚದಿಂದ ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲೂ ಬಸ್ ಪ್ರಯಾಣ ದರ ಹೆಚ್ಚಳವಾಗಿದೆ. ನಾವು ನೀರು ಹಾಕಿ ಬಸ್ ಓಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಮ್ಮದು ಲಾಭದಾಯಕ ಸಂಸ್ಥೆಯಲ್ಲ, ಜನರಿಗೆ ಸೇವೆ ನೀಡುವ ಸಂಸ್ಥೆ. ಟಿಕೆಟ್ ದರ ಹೆಚ್ಚಳ ಮಾಡಿದರೂ ನಿಗಮಗಳ ನಷ್ಟ ಸಂಪೂರ್ಣ ಕಡಿಮೆಯಾಗುವುದಿಲ್ಲ. ಆದರೆ ಆರ್ಥಿಕ ಒತ್ತಡ ಸ್ವಲ್ಪ ಮಟ್ಟಿಗೆ ತಗ್ಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
KSRTC 23%, BMTC 33ರಿಂದ 35%ರಷ್ಟು ಹೆಚ್ಚಳ!
ಸುದ್ದಿಗೋಷ್ಠಿಯಲ್ಲಿ ಸಾರಿಗೆ ದರ ಪರಿಷ್ಕರಣೆ ಕುರಿತು ಮಾಹಿತಿ ನೀಡಿದ ಸಚಿವರು, ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರದಲ್ಲಿ ಶೇ.23ರಷ್ಟು ಹೆಚ್ಚಳ ಮಾಡಿರುವುದಾಗಿ ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಶೇ.33ರಿಂದ 35ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಡೈಲಿ ಪಾಸ್ ಸೇರಿದಂತೆ ವಿವಿಧ ಬಸ್ ಪಾಸ್‌ಗಳ ದರವನ್ನೂ ಪರಿಷ್ಕರಿಸಲಾಗಿದೆ.
ಈ ದರ ಏರಿಕೆಯಿಂದ ಪ್ರತಿದಿನ ಬಸ್‌ನಲ್ಲಿ ಪ್ರಯಾಣಿಸುವ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಪ್ರಯಾಣಿಕರ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ.
ನಾಲ್ಕು ಸಾರಿಗೆ ನಿಗಮಗಳು 10,200 ಕೋಟಿ ನಷ್ಟ!
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಒಟ್ಟಾರೆ 10,200 ಕೋಟಿ ರೂಪಾಯಿ ನಷ್ಟದಲ್ಲಿವೆ ಎಂದು ಸಚಿವರು ಮಾಹಿತಿ ನೀಡಿದ್ದು, ನಿಗಮಗಳ ಮೇಲಿರುವ ವಿವಿಧ ಬಾಕಿಗಳ ವಿವರವನ್ನು ಹಂಚಿಕೊಂಡಿದ್ದಾರೆ.
* ಭವಿಷ್ಯ ನಿಧಿ ಬಾಕಿ: 2,916 ಕೋಟಿ ರೂ.
* ನಿವೃತ್ತ ನೌಕರರ ಬಾಕಿ: 603 ಕೋಟಿ ರೂ.
* ವೇತನ ಪರಿಷ್ಕರಣೆ ಬಾಕಿ: 664 ಕೋಟಿ ರೂ.
* ಸಿಬ್ಬಂದಿಯ ಇತರೆ ಪಾವತಿ ಬಾಕಿ: 356 ಕೋಟಿ ರೂ.
ಈ ಎಲ್ಲ ಬಾಕಿಗಳನ್ನು ಪಾವತಿಸುವ ಜವಾಬ್ದಾರಿ ನಿಗಮಗಳ ಮೇಲಿದೆ. ಹೀಗಾಗಿ ಆದಾಯ ಹೆಚ್ಚಳದ ಮೂಲಕ ಆರ್ಥಿಕ ಒತ್ತಡ ಕಡಿಮೆ ಮಾಡಬೇಕಿದೆ ಎಂದಿದ್ದಾರೆ.
ಶಕ್ತಿ ಯೋಜನೆಯಿಂದ ನಿಗಮಗಳಿಗೆ ಹೊರೆಯಾಗಿಲ್ಲ!
ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆರ್ಥಿಕ ಹೊರೆ ಉಂಟಾಗಿಲ್ಲ ಎಂದು ಭೈರತಿ ಸುರೇಶ್ ಸಮರ್ಥಿಸಿಕೊಂಡರು. ಸರ್ಕಾರದಿಂದ ಶಕ್ತಿ ಯೋಜನೆಯಡಿ ನಿಗಮಗಳಿಗೆ ಸುಮಾರು 6,300 ಕೋಟಿ ರೂಪಾಯಿ ಪಾವತಿಸಬೇಕಿದೆ. 2023-24ರಲ್ಲಿಯೂ ಸರ್ಕಾರಕ್ಕೆ 1,140 ಕೋಟಿ ರೂಪಾಯಿ ಬಾಕಿ ಇತ್ತು ಎಂದು ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಉಳಿದಿರುವ ಆರ್ಥಿಕ ಹೊಣೆಯನ್ನು ಮುಂದಿನ ಸರ್ಕಾರವೂ ಹೊರಬೇಕಾಗುತ್ತದೆ. ನೀರಾವರಿ ಇಲಾಖೆಯಲ್ಲಿಯೂ ಸುಮಾರು 60 ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಎಂದು ಉಲ್ಲೇಖಿಸಿದರು. ನಮ್ಮ ಸರ್ಕಾರ ಸಾರಿಗೆ ನಿಗಮಗಳಿಗೆ ಕಾಲಕಾಲಕ್ಕೆ ಆರ್ಥಿಕ ನೆರವು ನೀಡುತ್ತಾ ಬಂದಿದೆ. ಶಕ್ತಿ ಯೋಜನೆಯಿಂದ ನಿಗಮಗಳಿಗೆ ಹೊರೆ ಉಂಟಾಗಿದೆ ಎಂಬ ಆರೋಪ ಸರಿಯಲ್ಲ ಎಂದು ಸಚಿವರು ಹೇಳಿದರು.
ಮಾಧ್ಯಮಗಳ ಪ್ರಶ್ನೆಗೆ ಬೈರತಿ ಸುರೇಶ್ ಗರಂ!
ಇನ್ನು ಸುದ್ದಿಗೋಷ್ಠಿಯಲ್ಲಿ ವರದಿಗಾರರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸುವಾಗ ಸಚಿವರು ತಡವರಿಸಿದ್ದು, ಸೂಕ್ತ ಮಾಹಿತಿ ಇಲ್ಲದೆ ಸುದ್ದಿಗೋಷ್ಠಿಗೆ ಬಂದಿದ್ದಾರೆಯೇ ಎಂಬ ಚರ್ಚೆಯೂ ಕೇಳಿಬಂದಿದೆ. ಪ್ರಶ್ನೆಗಳಿಗೆ ಉತ್ತರಿಸುವ ವೇಳೆ ನನ್ನ ಬಳಿ ಈ ರೀತಿಯ ಪ್ರಶ್ನೆಗಳನ್ನು ಕೇಳಬೇಡಿ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಮಾಹಿತಿ ಒದಗಿಸುತ್ತೇವೆ ಎಂದು ಹೇಳಿ ಪರಿಸ್ಥಿತಿಯನ್ನು ಸಮಾಧಾನಪಡಿಸಿದಾರೆ.
ಒಟ್ಟಿನಲ್ಲಿ ಸಾರಿಗೆ ನಿಗಮಗಳ ನಷ್ಟ, ಶಕ್ತಿ ಯೋಜನೆಯ ವೆಚ್ಚ, ನೌಕರರ ಬಾಕಿ ಹಾಗೂ ಡೀಸೆಲ್ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಸರ್ಕಾರ ಬಸ್ ಟಿಕೆಟ್ ದರ ಹೆಚ್ಚಳವನ್ನು ಸಮರ್ಥಿಸಿಕೊಂಡಿದೆ. ಆದರೆ ಬೆಲೆ ಏರಿಕೆಯ ನಡುವೆಯೇ ಬಸ್ ಪ್ರಯಾಣವೂ ದುಬಾರಿಯಾಗುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.