SOCIAL MEDIA

Newsletter

PARTNER SITES
Select Language Select State

ರಾಜಧಾನಿಯಲ್ಲಿ ಸಿಡಿದ ಜೆಂಜಿ ಪವರ್ : SIR ವಿರುದ್ಧ ಕಾಕ್ರೋಚ್‌ 'ಚಪ್ಪಲಿ ಪ್ರತಿಭಟನೆ'!

ಸಿಲಿಕಾನ್ ಸಿಟಿ ಬೆಂಗಳೂರಿನ ಹೃದಯಭಾಗ ಫ್ರೀಡಂ ಪಾರ್ಕ್‌ನಲ್ಲಿ ಇಂದು SIR ವಿರುದ್ಧ ಬೃಹತ್ ಹೋರಾಟ ಸಿಡಿದಿದೆ.. ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ಕರೆ ಕೊಟ್ಟಿದ್ದ ಜನತಾ ನ್ಯಾಯಾಲಯ ಹೆಸರಿನ ಪ್ರತಿಭಟನೆಗೆ ಜೆಂಜಿ ಯುವಶಕ್ತಿ ಸಿಡಿದೆದ್ದಿದೆ.. ಒಂದು ದಿನದ ಸಾಂಕೇತಿಕ ಪ್ರತಿಭಟನೆ ಅಂದ್ರೂ ಫ್ರೀಡಂ ಪಾರ್ಕ್ ತುಂಬಾ ಯುವಕ ಯುವತಿಯರಿಂದ ತುಂಬಿ ತುಳುಕಿದೆ.. ಈ ಹೋರಾಟಕ್ಕೆ ನಟ ಪ್ರಕಾಶ್ ರಾಜ್, ಯೂಟ್ಯೂಬರ್ ಧ್ರುವ್ ರಾಠಿ, ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಸೇರಿ ಹಲವು ಗಣ್ಯರು ಸಾಥ್ ಕೊಟ್ಟಿದ್ದು, ಚಪ್ಪಲಿ ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಗುಡುಗಿದ್ದಾರೆ..

Reported By Krishna NK Written By Krishna NK
Published: Oct 08, 2026, 05:52 PM IST | Updated: Oct 08, 2026, 05:54 PM IST
Image Credit: Bengaluru cjp protest
Join

ಬೆಂಗಳೂರು : ನಗರದ ಫ್ರೀಡಂ ಪಾರ್ಕ್ ನಲ್ಲಿ ಇಂದು SIR ವಿರುದ್ಧದ ಹೋರಾಟ ಜೋರಾಗಿದೆ.. ಕಾಕ್ರೋಚ್ ಜನತಾ ಪಾರ್ಟಿ ಅಲಿಯಾಸ್ ಸಿಜೆಪಿ ಕೊಟ್ಟ ಕರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಯುವಕ ಯುವತಿಯರು ಹರಿದು ಬಂದಿದ್ದಾರೆ.. ಕಾಲೇಜು, ಕೆಲಸ ಮುಗಿಸಿ ಫ್ರೀಡಂ ಪಾರ್ಕ್‌ಗೆ ಆಗಮಿಸುತ್ತಿರುವ ಯುವ ಶಕ್ತಿ ಸಮಯ ಕಳೆದಂತೆ ಹೆಚ್ಚಾಗುತ್ತಿದೆ.. SIR ನಿಂದ ನೊಂದವರ ಅಹವಾಲು ಆಲಿಕೆಗೆ ಜನತಾ ನ್ಯಾಯಾಲಯ ಎಂಬ ವೇದಿಕೆ ಸೃಷ್ಟಿ ಮಾಡಲಾಗಿದ್ದು, ಸಂತ್ರಸ್ತರ ಆರೋಪ ಆಲಿಸಿ ತೀರ್ಪು ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ನಡೆಯುತ್ತಿದೆ.. ಇದು ಕೇವಲ ಪ್ರತಿಭಟನೆ ಅಲ್ಲ, ಇದು ಮತ ಉಳಿಸುವ ಹೋರಾಟ ಅಂತ ಪ್ರತಿಭಟನಾಕಾರರು ಗುಡುಗಿದ್ದಾರೆ..

ಈ ಪ್ರತಿಭಟನೆಗೆ ದೊಡ್ಡ ಮಟ್ಟದ ಗಣ್ಯರ ದಂಡೇ ಹರಿದು ಬಂದಿದೆ.. ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟದಲ್ಲಿ ನಟ ಪ್ರಕಾಶ್ ರಾಜ್, ಯೂಟ್ಯೂಬರ್ ಧ್ರುವ್ ರಾಠಿ ಭಾಗಿಯಾಗಿದ್ದಾರೆ.. ಫ್ರೀಡಂ ಪಾರ್ಕ್‌ಗೆ ಅವರು ಆಗಮಿಸುತ್ತಿದ್ದಂತೆ ಯುವಕರ ಕೂಗು, ಉತ್ಸಾಹ ದುಪ್ಪಟ್ಟಾಗಿದೆ.. ಜೊತೆಗೆ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ, ದೇವನೂರು ಮಹಾದೇವ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್, ಕಿಶೋರ್ ಕುಮಾರ್, ಸೌರವ್ ದಾಸ್, ಅಶುತೋಷ್ ರಾಂಕಾ ಸೇರಿ ಹಲವರು ಸಾಥ್ ಕೊಟ್ಟಿದ್ದಾರೆ.. AITUC, SFI, ಜನಶಕ್ತಿ ಸೇರಿ ಹಲವು ದಲಿತಪರ, ಮುಸ್ಲಿಂಪರ, ಕಾರ್ಮಿಕ ಮತ್ತು ವಿದ್ಯಾರ್ಥಿ ಸಂಘಟನೆಗಳು ಈ ಹೋರಾಟದಲ್ಲಿ ಕೈಜೋಡಿಸಿವೆ.. ಇದೇ ಮೊದಲ ಬಾರಿಗೆ ಧ್ರುವ್ ರಾಠಿ ಬೀದಿ ಪ್ರತಿಭಟನೆಗೆ ಇಳಿದಿರೋದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ..

ವೇದಿಕೆ ಮೇಲೆ ಮಾತನಾಡಿದ ನಟ ಪ್ರಕಾಶ್ ರಾಜ್ ಅವರು SIR ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ನಮ್ಮ ವೋಟ್ ಹೋಯ್ತು ಅಂತ ತಲೆ ಕೆಡಿಸಿಕೊಳ್ಳಬೇಡಿ, ಯಾರೂ ನಮ್ಮ ಮತ ತೆಗೆಯೋ ಹಾಗಿಲ್ಲ ಅಂತ ಯುವಕರಿಗೆ ಧೈರ್ಯ ತುಂಬಿದ್ದಾರೆ.. 13 ಕೋಟಿ ಮತ ಹೋಯ್ತು ಅಂದ್ರೆ ಅದು ಬರಿ ನಂಬರ್ ಅಲ್ಲ, ಅದು ನಮ್ಮ ದೇಶದ ಪ್ರಜೆಗಳು, ಅವರ ಗೌರವ ಹೋಗ್ತಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಐದು ವರ್ಷಕ್ಕೊಮ್ಮೆ ನಮ್ಮ ಕಾಲಿಗೆ ಬೀಳೋರು ಈಗ ಅವರ ಆಫೀಸ್‌ಗೆ ಬಂದು ವೋಟ್ ಹಾಕೋಕೆ ಅವಕಾಶ ಕೊಡಿ ಅಂತ ಕೇಳುವ ಪರಿಸ್ಥಿತಿ ಬಂದಿದೆ.. ಬಡವರ, ಮುಸ್ಲಿಂ, ಅಲ್ಪಸಂಖ್ಯಾತರ, ಬುಡಕಟ್ಟು ಜನಾಂಗದವರ ವೋಟ್ ಡಿಲೀಟ್ ಮಾಡುವ ಪ್ಲಾನ್ ಮಾಡಿದ್ದಾರೆ.. ಜ್ಞಾನೇಶ್ ಕುಮಾರ್ ಹೋದ್ರೆ ಇನ್ನೊಬ್ಬ ಅಜ್ಞಾನೇಶ್ ಕುಮಾರ್ ಬರ್ತಾನೆ, ನಮ್ಮ ಹೋರಾಟ ವ್ಯಕ್ತಿ ವಿರುದ್ಧ ಅಲ್ಲ, SIR ರದ್ದಾಗಬೇಕು, ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಅಂತ ಗುಡುಗಿದ್ದಾರೆ..

ಇನ್ನು ವೇದಿಕೆ ಮೇಲೆ ಕನ್ನಡದಲ್ಲೇ ಭಾಷಣ ಶುರು ಮಾಡಿದ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ.. ನರೇಂದ್ರ ಮೋದಿ ವೋಟ್ ಚೋರ್, ಈ ವೋಟ್ ಚೋರಿಯ ಪಿತಾಮಹ ಮೋದಿ ಅಂತ ಕಿಡಿಕಾರಿದ್ದಾರೆ.. ಮೋದಿ, ಅಮಿತ್ ಶಾ, ಜ್ಞಾನೇಶ್ ಎಲ್ಲರೂ ಸೇರಿ ವೋಟ್ ಡಿಲೀಟ್ ಮಾಡಿದ್ದಾರೆ, ಇವರೆಲ್ಲ RSS ಮೆಂಟಾಲಿಟಿ ಇರುವ ಜನರು, ಇವರು ಅಂಬೇಡ್ಕರ್, ಗಾಂಧೀಜಿ ಸಿದ್ಧಾಂತ ಒಪ್ಪೋದಿಲ್ಲ, ಗೋಡ್ಸೆ ತತ್ವ ಅನುಕರಣೆ ಮಾಡ್ತಾರೆ ಅಂತ ವಾಗ್ದಾಳಿ ನಡೆಸಿದ್ದಾರೆ.. 1951ರಲ್ಲಿ ಮತದಾನ ವ್ಯವಸ್ಥೆ ಜಾರಿಗೆ ಬಂತು, ಆದ್ರೆ ವಿಶ್ವಗುರು ವೋಟ್ ಚೋರಿ ಮಾಡ್ತಿದ್ದಾರೆ.. ಒಂದು ದೇಶ ಒಂದು ಚುನಾವಣೆ ಅನ್ನೋದು ಬರಿ ಘೋಷಣೆ, ಆದ್ರೆ SIR ಮೂಲಕ 13 ಕೋಟಿ ವೋಟ್ ಡಿಲೀಟ್ ಮಾಡಿದ್ದಾರೆ, ಕರ್ನಾಟಕದಲ್ಲಿ ಒಂದು ಕೋಟಿ ವೋಟ್ ಡಿಲೀಟ್ ಮಾಡಿದ್ದಾರೆ.. ಬಿಜೆಪಿ ಗೆದ್ದಲ್ಲಿ ಕಡಿಮೆ ಡಿಲೀಟ್, ಬಿಜೆಪಿ ಇಲ್ಲದ ರಾಜ್ಯದಲ್ಲಿ ಹೆಚ್ಚು ಡಿಲೀಟ್ ಮಾಡಿದ್ದಾರೆ ಅಂತ ಆರೋಪಿಸಿದ್ದಾರೆ.. ನಮಗೆ ಜಿರಳೆ ಅಂತ ಕರೀತಾರೆ, ಯಾಕಂದ್ರೆ ನಾವು ಜಿರಳೆಗಳಂತೆ ಬದುಕುತ್ತೇವೆ, ಈಗ ರಸ್ತೆಗಳು ನಮ್ಮವು, ರಸ್ತೆಗಳಿಂದ ಪ್ರಜಾಪ್ರಭುತ್ವ ಉಳಿಸುತ್ತೇವೆ ಅಂತ ಗುಡುಗಿದ್ದಾರೆ..

ಇನ್ನು ಇದೇ ಮೊದಲ ಬಾರಿಗೆ ಪ್ರತಿಭಟನೆಗೆ ಬಂದಿರುವ ಯೂಟ್ಯೂಬರ್ ಧ್ರುವ್ ರಾಠಿ ಅವರು ಇದು ನನ್ನ ಮೊದಲ ಪ್ರತಿಭಟನೆ, ನಾನು ಸರ್ಕಾರ ಬದಲಿಸಲು ಬಂದಿಲ್ಲ, ನನಗೆ ಎಲಾನ್ ಮಸ್ಕ್, ಸೊರೋಸ್ ದುಡ್ಡು ಕೊಟ್ಟಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.. ಇದು ಎಲ್ಲ ದೇಶದ ನಾಗರಿಕರ ಮೇಲೆ ಪರಿಣಾಮ ಬೀರುವ ವಿಚಾರ, ಬಂಗಾಳದಲ್ಲಿ 70 ಲಕ್ಷ, ಬಿಹಾರದಲ್ಲಿ 75 ಲಕ್ಷ ಜನರ ಹೆಸರು ತೆಗೆದು ಹಾಕಲಾಗಿದೆ, ಗೋವಾದಲ್ಲಿ 100 ಜನರ ಹೆಸರು ಸೇರಿಸೋಕೆ ಆಗಿಲ್ಲ ಅಂತ ಅಂಕಿ ಅಂಶ ಬಿಚ್ಚಿಟ್ಟಿದ್ದಾರೆ.. ಗೋಷಣೆ ಕೂಗುತ್ತಾ ವಿಡಿಯೋ ಮಾಡಿಕೊಂಡಿದ್ದು, ಅವರ ವಿಡಿಯೋ ನೋಡುತ್ತಿದ್ದಂತೆ ಯುವಕರ ಧ್ವನಿ ಮತ್ತಷ್ಟು ಹೆಚ್ಚಾಗಿದೆ..

ಇನ್ನು ವೇದಿಕೆ ಮೇಲೆ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರು ನಿಮ್ಮ ಹೋರಾಟಕ್ಕೆ ಬೆಂಬಲ ಕೊಡೋಕೆ ಬಂದಿದ್ದೇನೆ, 78 ವರ್ಷ ಸ್ವತಂತ್ರ ಬಂದು ಆದ್ರೂ SIR ಹೆಸರಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ.. ಮೇ ತಿಂಗಳಲ್ಲಿ ಬಂದ ತೀರ್ಪು ಸಂವಿಧಾನಿಕವಲ್ಲ, ಚುನಾವಣಾ ಆಯೋಗ ಪ್ರಜಾಪ್ರಭುತ್ವ ಹಾಳು ಮಾಡುತ್ತಿದೆ, ಜನರು ಪಾಠ ಕಲಿಸುತ್ತಾರೆ ಅಂತ ಹೇಳಿದ್ದಾರೆ.. SIR ರದ್ದಾಗಬೇಕು, ಇದು ಅವೈಜ್ಞಾನಿಕ, ಕಾನೂನು ಬಾಹಿರ ಅಂತ ಗುಡುಗಿದ್ದು, ಯುವಕರು ದೇಶದ ಚುಕ್ಕಾಣಿ ಹಿಡಿಯಲಿದ್ದಾರೆ ಅಂತ ಕರೆ ಕೊಟ್ಟಿದ್ದಾರೆ..

ಒಟ್ಟಾರೆ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಈ ಜನತಾ ನ್ಯಾಯಾಲಯ, SIR ವಿರೋಧಿ ಚಪ್ಪಲಿ ಪ್ರತಿಭಟನೆ ಈಗ ರಾಜ್ಯ ಮಾತ್ರವಲ್ಲ ದೇಶದ ಗಮನ ಸೆಳೆದಿದೆ.. ಕಾಲೇಜು, ಕೆಲಸ ಮುಗಿಸಿ ಬರುತ್ತಿರುವ ಜೆಂಜಿ ಪಡೆ ಹೋರಾಟಕ್ಕೆ ಮತ್ತಷ್ಟು ಬಲ ತುಂಬುತ್ತಿದೆ.. ಇದು ಸ್ಯಾಂಪಲ್ ಮಾತ್ರ, SIR ರದ್ದಾಗೋವರೆಗೂ ಹೋರಾಟ ಬಿಡಲ್ಲ ಅಂತ ಪ್ರತಿಭಟನಾಕಾರರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.. ಸರ್ಕಾರ ಮತ್ತು ಚುನಾವಣಾ ಆಯೋಗ ಈ ಹೋರಾಟಕ್ಕೆ ಸ್ಪಂದಿಸುತ್ತಾ? ಅಥವಾ ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆಯುತ್ತಾ? ಕಾದು ನೋಡಬೇಕಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES