Bigg Boss Kannada Season 13 : 'ಬಿಗ್‌ಬಾಸ್' ದಿನದಿಂದ ದಿನಕ್ಕೆ ವೀಕ್ಷಕರನ್ನು ತನ್ನತ್ತ ಆಕರ್ಷಿಸಲು ಹೊಸ ಹೊಸ ಪ್ರಯೋಗಗಳಿಗೆ ಕೈಹಾಕುತ್ತಿದೆ. ಇದರ ಭಾಗವಾಗಿ, ಪ್ರೇಕ್ಷಕರಿಗೆ ಕೇವಲ ಮನರಂಜನೆ ನೀಡುವುದು ಮಾತ್ರವಲ್ಲದೆ, ಶೋ ನೋಡುತ್ತಲೇ ಬಹುಮಾನಗಳನ್ನು ಗೆಲ್ಲುವ ಸುವರ್ಣಾವಕಾಶವನ್ನು ನೀಡುತ್ತಿದೆ. ಈ ಕುರಿತು ಸ್ವತಃ ನಟ ಕಿಚ್ಚ ಸುದೀಪ್ ಅವರೇ ಘೋಷಿಸಿದ್ದಾರೆ.
ಹೌದು.. ಕಳೆದ ಕೆಲವು ಸೀಸನ್‌ಗಳಿಗೆ ಹೋಲಿಸಿದರೆ, ಪ್ರಸ್ತುತ ಬಿಗ್‌ಬಾಸ್ ರಿಯಾಲಿಟಿ ಷೋ ಮೇಲಿನ ವೀಕ್ಷಕರ ಆಸಕ್ತಿ ಹಾಗೂ ಕ್ರೇಜ್ ತುಸು ಕಡಿಮೆಯಾದಂತೆ ಕಾಣಿಸುತ್ತಿದೆ. ಪ್ರತಿಯೊಂದು ಭಾಷೆಯ ಬಿಗ್‌ಬಾಸ್ ಶೋಗಳಲ್ಲೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವಿಶೇಷವಾಗಿ ಕನ್ನಡ ಬಿಗ್‌ಬಾಸ್‌ನ 12ನೇ ಸೀಸನ್ ಸೃಷ್ಟಿಸಿದ್ದ ಅಭೂತಪೂರ್ವ ಯಶಸ್ಸು ಮತ್ತು ಹವಾ, ಈ ಬಾರಿಯ 13ನೇ ಸೀಸನ್‌ನಲ್ಲಿ ಕಂಡುಬರುತ್ತಿಲ್ಲ ಎಂಬುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿರುವ ಪ್ರೇಕ್ಷಕರ ಪ್ರತಿಕ್ರಿಯೆಗಳೇ ಸಾಕ್ಷಿಯಾಗಿವೆ.
ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬಿಗ್‌ಬಾಸ್ ಪ್ರೊಮೋಗಳು ಬಿಡುಗಡೆಯಾದಾಗಲೆಲ್ಲಾ ನೆಟ್ಟಿಗರು ಕಮೆಂಟ್ ಬಾಕ್ಸ್‌ನಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. "ಅದೇ ಹಳೆಯ ಜಗಳ, ಗಲಾಟೆ, ಸಣ್ಣಪುಟ್ಟ ವಿಷಯಗಳಿಗೆ ಕಚ್ಚಾಟ ಹಾಗೂ ನಾಟಕೀಯ ಪ್ರೇಮಕಥೆಗಳನ್ನು ನೋಡಿ ನೋಡಿ ಸಾಕಾಗಿದೆ. ಶೋನಲ್ಲಿ ಯಾವುದೇ ಹೊಸತನ ಇಲ್ಲ" ಎಂದು ಹಲವರು ಮುಕ್ತವಾಗಿ ಕಮೆಂಟ್ ಮಾಡುತ್ತಿದ್ದಾರೆ. ಇದರಿಂದಾಗಿ ವೀಕ್ಷಕರು ಶೋ ವೀಕ್ಷಣೆಯಿಂದ ದೂರ ಸರಿಯುತ್ತಿದ್ದಾರೆ.
ಈ ಎಲ್ಲ ಹಿನ್ನೆಲೆಯಲ್ಲಿ ಪ್ರೇಕ್ಷಕರನ್ನು ಮತ್ತೆ ಶೋನತ್ತ ಸೆಳೆಯಲು ಮತ್ತು ಟಿಆರ್‌ಪಿ ಹೆಚ್ಚಿಸಿಕೊಳ್ಳಲು ಆಯೋಜಕರು ಈ ಹೊಸ ಕಾಂಟೆಸ್ಟ್ ಹಾದಿ ತುಳಿದಿದ್ದಾರೆ. ಈ ಕುರಿತು ಖುದ್ದು ಮಾಹಿತಿ ಹಂಚಿಕೊಂಡಿರುವ ಕಿಚ್ಚ ಸುದೀಪ್, "ಈ ಬಾರಿ ನೀವು ಬಿಗ್‌ಬಾಸ್ ನೋಡುತ್ತಲೇ ಸುಲಭವಾಗಿ ಬಹುಮಾನಗಳನ್ನು ಗೆಲ್ಲಬಹುದು ಅಂತ ಪ್ರೇಕ್ಷಕರಿಗೆ ಬಿಗ್ ಆಫರ್ ಒಂದನ್ನು ನೀಡಿದ್ದಾರೆ..
ಜಿಯೋ ಆ್ಯಪ್ ಓಪನ್ ಮಾಡಿ, ಶೋ ಪ್ರಸಾರವಾಗುವಾಗ ಕೇಳಲಾಗುವ ಸರಳ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ತಕ್ಷಣವೇ ಆಕರ್ಷಕ ಬಹುಮಾನಗಳನ್ನು ನಿಮ್ಮದಾಗಿಸಿಕೊಳ್ಳಿ" ಎಂದು ಕಿಚ್ಚ ವೀಕ್ಷಕರಿಗೆ ಆಹ್ವಾನ ನೀಡಿದ್ದಾರೆ. ಈ ನೂತನ ಆಫರ್ ಮೂಲಕ ಬಿಗ್‌ಬಾಸ್ ತಂಡವು ವೀಕ್ಷಕರನ್ನು ಮತ್ತೆ ತನ್ನತ್ತ ಸೆಳೆಯುವಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.