ರಿಕೊ : ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳ ಇತಿಹಾಸದಲ್ಲಿ ಇದೊಂದು ಮಹತ್ವದ ಬದಲಾವಣೆ ಮತ್ತು ಅಚ್ಚರಿಯ ಘಟನೆ. ದಶಕಗಳಿಂದ ಇದ್ದ ಹಳೆಯ ಕಟ್ಟುಪಾಡುಗಳನ್ನು ಮುರಿದು, ಒಂದು ಮಗುವಿನ ತಾಯಿಯಾಗಿರುವ 27 ವರ್ಷದ ಮಹಿಳೆಯೊಬ್ಬರು 2026ರ ಮಿಸ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಪೋರ್ಟೊ ರಿಕೊ ದೇಶದ ಜೆನ್ನಿಫರ್ ಬ್ಯಾರೆಟ್ಟೊ ಈ ದೊಡ್ಡ ಸಾಧನೆ ಮಾಡಿದ ಮಹಿಳೆ.
ನವೆಂಬರ್ 24 ರಂದು ಪೋರ್ಟೊ ರಿಕೊದ ರಾಜಧಾನಿ ಸ್ಯಾನ್ ಜುವಾನ್‌ನಲ್ಲಿರುವ ಕೊಲಿಸಿಯಂ ಡಿ ಪೋರ್ಟೊ ರಿಕೊ ಜೋಸ್ ಮಿಗುಯೆಲ್ ಅಗ್ರೆಲಾಟ್‌ನಲ್ಲಿ ಅದ್ದೂರಿಯಾಗಿ ನಡೆದ ಫೈನಲ್ ಸುತ್ತಿನಲ್ಲಿ, ಜಗತ್ತಿನ ವಿವಿಧ ಭಾಗಗಳಿಂದ ಬಂದಿದ್ದ 115 ಸುಂದರಿಯರನ್ನು ಹಿಂದಿಕ್ಕಿ ಜೆನ್ನಿಫರ್ ವಿಜೇತರಾಗಿ ಹೊರಹೊಮ್ಮಿದರು. ಈ ಸ್ಪರ್ಧೆಯಲ್ಲಿ ಡೊಮಿನಿಕನ್ ಗಣರಾಜ್ಯದ ಮೆಲಿಸ್ಸಾ ನುನೆಜ್ ಮೊದಲ ರನ್ನರ್ ಅಪ್ ಆದರೆ, ವೆನೆಜುವೆಲಾದ ಕ್ಲಾರಾ ವೇಗಾಸ್ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಪೋರ್ಟೊ ರಿಕೊಗೆ ಆರನೇ ಕಿರೀಟದ ಸಂಭ್ರಮ
ಜೆನ್ನಿಫರ್ ಅವರ ಗೆಲುವಿನೊಂದಿಗೆ ಪೋರ್ಟೊ ರಿಕೊ ದೇಶವು ಆರನೇ ಬಾರಿಗೆ ಮಿಸ್ ಯೂನಿವರ್ಸ್ ಕಿರೀಟವನ್ನು ತನ್ನದಾಗಿಸಿಕೊಂಡಂತಾಗಿದೆ. ಈ ಹಿಂದೆ 1970, 1985, 1993, 2001 ಮತ್ತು 2006 ರಲ್ಲಿ ಪೋರ್ಟೊ ರಿಕೊ ಸುಂದರಿಯರು ಈ ವಿಶ್ವ ಮಟ್ಟದ ಗೌರವವನ್ನು ಪಡೆದಿದ್ದರು. ಸುಮಾರು ಎರಡು ದಶಕಗಳ ನಂತರ ಮತ್ತೊಮ್ಮೆ ಆ ಕಿರೀಟ ತವರಿಗೆ ಬಂದಿರುವುದು ಅಲ್ಲಿನ ಜನರಲ್ಲಿ ಭಾರಿ ಸಂತಸ ತಂದಿದೆ.
ಮಾಡೆಲಿಂಗ್ ಅನುಭವವೇ ಇಲ್ಲದ ಸಾಧನೆ
ಜೆನ್ನಿಫರ್ ಅವರ ಈ ಗೆಲುವಿನ ಹಿಂದಿನ ಕಥೆ ನಿಜಕ್ಕೂ ಸ್ಫೂರ್ತಿದಾಯಕವಾಗಿದೆ. ಅವರಿಗೆ ಮಾಡೆಲಿಂಗ್ ಲೋಕದ ಬಗ್ಗೆ ಯಾವುದೇ ಪೂರ್ವಾನುಭವ ಇರಲಿಲ್ಲ. ಹೆಚ್ಚಾಗಿ ಸಮುದಾಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಇದೇ ವರ್ಷದ ಫೆಬ್ರವರಿಯಲ್ಲಿ ಮೊದಲ ಬಾರಿಗೆ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. ಆ ನಂತರ ಜೂನ್ ತಿಂಗಳಲ್ಲಿ ಮಿಸ್ ಯೂನಿವರ್ಸ್ ಪೋರ್ಟೊ ರಿಕೊ ಪಟ್ಟ ಗೆದ್ದು, ಅಂತರಾಷ್ಟ್ರೀಯ ವೇದಿಕೆಗೆ ಟಿಕೆಟ್ ಪಡೆದರು. ಸ್ಪರ್ಧೆಗೆ ಸಜ್ಜಾಗಲು ಅವರು ಸುಮಾರು 30 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಶಿಸ್ತು ಮತ್ತು ಕಠಿಣ ಪರಿಶ್ರಮವೇ ಇಂದು ಅವರನ್ನು ವಿಶ್ವ ವೇದಿಕೆಯಲ್ಲಿ ನಿಲ್ಲಿಸಿದೆ.
ಓದು ಮತ್ತು ಸಮಾಜ ಸೇವೆಯಲ್ಲಿ ಎತ್ತಿದ ಕೈ
ಕೇವಲ ಸೌಂದರ್ಯ ಸ್ಪರ್ಧೆಯಿಂದ ಮಾತ್ರವಲ್ಲದೆ, ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಸಮಾಜಮುಖಿ ಕೆಲಸಗಳಿಂದಲೂ ಜೆನ್ನಿಫರ್ ಗುರುತಿಸಿಕೊಂಡಿದ್ದಾರೆ. ಮನೋವಿಜ್ಞಾನದಲ್ಲಿ ಪದವಿ ಪಡೆದಿರುವ ಅವರು, ಮನೋವಿಜ್ಞಾನ ಹಾಗೂ ಕ್ಲಿನಿಕಲ್ ಸಾಮಾಜಿಕ ಕಾರ್ಯದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ಈ ಹಿಂದೆ ಅವರು ಯುಎಸ್ ಮಿಲಿಟರಿ ಜೊತೆಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಕೌಟುಂಬಿಕ ಹಿಂಸಾಚಾರಕ್ಕೊಳಗಾದ ಮಹಿಳೆಯರ ಪರವಾಗಿ ಧ್ವನಿ ಎತ್ತಿರುವುದರ ಜೊತೆಗೆ, ಮಾನಸಿಕ ಆರೋಗ್ಯ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಜನರಲ್ಲಿ ಅರಿವು ಮೂಡಿಸಿದ್ದಾರೆ. ಅಲ್ಲದೆ, ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ನೆರವು ನೀಡುವ ಹಲವು ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಹಳೆಯ ನಿಯಮಗಳು ಬದಲಾಗಿದ್ದು ಯಾವಾಗ?
1952 ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಲಾಂಗ್ ಬೀಚ್‌ನಲ್ಲಿ ಮಿಸ್ ಯೂನಿವರ್ಸ್ ಸ್ಪರ್ಧೆ ಶುರುವಾದಾಗಿನಿಂದ ಸುಮಾರು 70 ವರ್ಷಗಳ ಕಾಲ ಕಟ್ಟುನಿಟ್ಟಿನ ನಿಯಮಗಳಿದ್ದವು. ಮದುವೆಯಾಗದ, ಮಕ್ಕಳಿಲ್ಲದ 18 ರಿಂದ 28 ವರ್ಷದೊಳಗಿನ ಮಹಿಳೆಯರಿಗೆ ಮಾತ್ರ ಇಲ್ಲಿ ಅವಕಾಶವಿತ್ತು. ಕಿರೀಟ ಗೆದ್ದ ನಂತರವೂ ಅಧಿಕಾರಾವಧಿ ಮುಗಿಯುವವರೆಗೆ ಮದುವೆಯಾಗುವಂತಿರಲಿಲ್ಲ.
ಆದರೆ ಈ ನಿಯಮಗಳು ಮಹಿಳೆಯರ ವೈಯಕ್ತಿಕ ಬದುಕಿನ ನಿರ್ಧಾರಗಳಿಗೆ ತೊಡಕಾಗುತ್ತಿವೆ ಎಂಬ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ, ಆಗಸ್ಟ್ 2022 ರಲ್ಲಿ ಸಂಸ್ಥೆಯು ಈ ನಿಯಮಗಳನ್ನು ಸಡಿಲಿಸುವುದಾಗಿ ಘೋಷಿಸಿತು. 2023 ರಿಂದ ವಿವಾಹಿತರು, ವಿಚ್ಛೇದಿತರು ಮತ್ತು ಮಕ್ಕಳಿರುವ ತಾಯಂದಿರಿಗೂ ಭಾಗವಹಿಸಲು ಅವಕಾಶ ನೀಡಲಾಯಿತು; ಜೊತೆಗೆ ಗರಿಷ್ಠ ವಯಸ್ಸಿನ ಮಿತಿಯನ್ನೂ ತೆಗೆದುಹಾಕಲಾಯಿತು. ನಿಯಮ ಬದಲಾದ ನಂತರ ಹಲವರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರೂ, ತಾಯಿಯಾದ ಬಳಿಕ ಕಿರೀಟ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಗೆ ಇದೀಗ ಜೆನ್ನಿಫರ್ ಬ್ಯಾರೆಟ್ಟೊ ಅವರಿಗೆ ಸಂದಿದೆ.