Bigg Boss Lakshmi Gowda : 'ಬಿಗ್ ಬಾಸ್ ಕನ್ನಡ ಸೀಸನ್-13' ಕಾರ್ಯಕ್ರಮದಲ್ಲಿ ಹೊಸ ಬೆಳವಣಿಗೆಯೊಂದು ನಡೆದಿದ್ದು, ವೈಲ್ಡ್ ಕಾರ್ಡ್ ಮೂಲಕ ಹೊಸ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಒಟ್ಟು ಐದು ಜನ ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಪ್ರವೇಶ ಮಾಡಿರೋದು ಇದೇ ಮೊದಲು.
ಅನಿರೀಕ್ಷಿತ ಎಲಿಮಿನೆಟ್..
ಶೋನಲ್ಲಿ ಒಂದೇ ವಾರದಲ್ಲಿ ಅನೇಕ ಅನಿರೀಕ್ಷಿತ ಬೆಳವಣಿಗೆಗಳು ನಡೆದಿವೆ. ಸಂಗೀತಾ ಭಟ್ ಅವರು ಅನಾರೋಗ್ಯದ ಕಾರಣದಿಂದ ಮನೆಯಿಂದ ಹೊರಬಂದರು. ಹಾಗೆಯೇ, ಮಾಡ್ರನ್ ಮಹಾಕವಿ ಮಂಜ ಅವರು ಕೇವಲ ಐದೇ ವಾರಕ್ಕೆ ತಮ್ಮ ಮಾತಿನ ಮೇಲೆ ಕಂಟ್ರೋಲ್ ಇಲ್ಲದೇ ಶೋನಿಂದ ಹೊರ ಹಾಕಲ್ಪಟ್ಟರು. ಇಬ್ಬರೂ ಆಕಸ್ಮಿಕವಾಗಿ ಎಲಿಮಿನೇಟ್ ಆದ ಹಿನ್ನೆಲೆಯಲ್ಲಿ, ಅಗ್ನಿಪರೀಕ್ಷೆಯಲ್ಲಿ ಭಾಗಿಯಾಗಿದ್ದ ಸಾಮಾನ್ಯ ಜನತೆ ಕ್ಯಾಟಗರಿಯಿಬ್ಬರನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಕಳುಹಿಸಲಾಗಿದೆ. ಕುಮಾರಿ ಅವರನ್ನ ಕಿಚ್ಚ ಸುದೀಪ್ ಅವರೇ ಪರಿಚಯಿಸಿ ಕಳುಹಿಸಿದ್ದರೆ, ಅವರ ಜೊತೆಗೆ ಲಕ್ಷ್ಮೀ ಗೌಡ ಕೂಡ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ.
ಯಾರು ಈ ಲಕ್ಷ್ಮೀ ಗೌಡ?
ಲಕ್ಷ್ಮೀ ಗೌಡ ಅವರು ಮಂಡ್ಯ ಮೂಲದವರಾಗಿದ್ದು, ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಇವರಿಗೆ ಓರ್ವ ಸಹೋದರರಿದ್ದಾರೆ. 24 ವರ್ಷ ವಯಸ್ಸಿನ ಲಕ್ಷ್ಮೀ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರೊಂದಿಗೆ ಅಭಿನಯದ ಮೇಲಿನ ಒಲವಿನಿಂದ ಹಲವು ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಸಿಬ್ಲಿಂಗ್‌ಗಳಿಗೆ ಸಂಬಂಧಪಟ್ಟ ಫನ್ ವಿಡಿಯೋ ಕಂಟೆಂಟ್‌ಗಳನ್ನು ಕ್ರಿಯೇಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ.
ಬಿಗ್ ಬಾಸ್ ಕನಸು ಮತ್ತು ಅಗ್ನಿಪರೀಕ್ಷೆ ಪಯಣ
ಬಹಳ ವರ್ಷಗಳಿಂದ ಬಿಗ್ ಬಾಸ್ ಮನೆ ಪ್ರವೇಶಿಸುವ ಕನಸು ಕಂಡಿದ್ದ ಲಕ್ಷ್ಮೀ, ಸಾಮಾನ್ಯ ಜನತೆಗಾಗಿ ನಡೆಸಿದ್ದ 'ಅಗ್ನಿಪರೀಕ್ಷೆ' ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ಲುಂಗಿ ಧರಿಸಿ ವೇದಿಕೆ ಪ್ರವೇಶಿಸಿದ್ದ ಅವರು, ಸಂಸ್ಕೃತಿ ಎಂಬ ತೃತೀಯ ಲಿಂಗಿ ಸ್ಪರ್ಧಿ ಜೊತೆ ಸ್ಪರ್ಧಿಸಿ, ಕೆಟ್ಟ ಜ್ಯೂಸ್ ಕುಡಿಯುವ ಟಾಸ್ಕ್ ಸೇರಿದಂತೆ ವಿವಿಧ ಸವಾಲುಗಳನ್ನು ಎದುರಿಸಿ ಅಗ್ನಿಪರೀಕ್ಷೆ ಪಾಸ್ ಮಾಡಿದ್ದರು. ಈ ಮೂಲಕ ಟಾಪ್ ಸ್ಪರ್ಧಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.
ಧನುಷ್ ಆಯ್ಕೆ ಬಗ್ಗೆ ಅಸಮಾಧಾನ
ಅಗ್ನಿಪರೀಕ್ಷೆಯ ಮೂಲಕವೇ ಆಯ್ಕೆ ಆಗಿದ್ದ ಮತ್ತೊಬ್ಬ ಸ್ಪರ್ಧಿ ಧನುಷ್ ಮಂಜುನಾಥ್ ಆಯ್ಕೆ ಬಗ್ಗೆ ಲಕ್ಷ್ಮೀ ಹಿಂದೆ ಅಸಮಾಧಾನ ವ್ಯಕ್ತಪಡಿಸಿದ್ದರು. ಧನುಷ್ ಟಾಸ್ಕ್‌ನಲ್ಲಿ ಅಷ್ಟಾಗಿ ಪರ್ಫಾಮ್ ಮಾಡಿಲ್ಲ, ಕೇವಲ ಒಂದು ಗಿನ್ನಿಸ್ ದಾಖಲೆಯ ರೆಕಾರ್ಡ್‌ನ್ನ ಹರಿದು ಹಾಕಿದ್ರು ಎಂಬಿತ್ಯಾದಿ ವಿಚಾರವಾಗಿ ಕೆಲ ಸಂದರ್ಶನಗಳಲ್ಲಿ ಮಾತನಾಡಿದ್ದರು. ಸದ್ಯ ಧನುಷ್ ಅವರೇ ಕ್ಯಾಪ್ಟನ್ ಆಗಿದ್ದಾಗಲೇ ಲಕ್ಷ್ಮೀ ಗೌಡ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವುದು ವಿಶೇಷ ಕುತೂಹಲ ಮೂಡಿಸಿದೆ.