Actor Darshan supreme court verdict : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟಗಳು ಮುಂದುವರಿದಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪ್ರದೂಷ್ ಅವರನ್ನು 'ಮಾಫಿ ಸಾಕ್ಷಿ'ಯಾಗಿ ಪರಿಗಣಿಸುವುದನ್ನು ಪ್ರಶ್ನಿಸಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅಕ್ಟೋಬರ್ 8) ವಜಾಗೊಳಿಸಿದೆ.
ಅರ್ಜಿ ವಜಾಕ್ಕೆ ಸುಪ್ರೀಂ ಕೋರ್ಟ್ ನೀಡಿದ ಕಾರಣವೇನು?
ನ್ಯಾಯಮೂರ್ತಿ ಪರ್ದಿವಾಲಾ ಹಾಗೂ ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ, "ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ವಿರೋಧಿಸುವ ಅಥವಾ ಪ್ರಶ್ನಿಸುವ ಅಧಿಕಾರ ಆರೋಪಿ ಕಡೆಯವರಿಗೆ ಇರುವುದಿಲ್ಲ," ಎಂದು ಪೀಠವು ಸ್ಪಷ್ಟವಾಗಿ ತಿಳಿಸಿತು.
ನ್ಯಾಯಾಲಯದಲ್ಲಿ ನಡೆದ ವಾದ-ಪ್ರತಿವಾದದ ವಿವರ
ದರ್ಶನ್ ಪರ ವಕೀಲರ ವಾದ: ದರ್ಶನ್ ಪರ ಹಿರಿಯ ವಕೀಲ ನಾಗಮುತ್ತು ವಾದ ಮಂಡಿಸಿ, ಮಾಫಿ ಸಾಕ್ಷಿಯ ಹೇಳಿಕೆಯನ್ನು ಪರಿಗಣಿಸುವ ಅಧಿಕಾರ ಕೇವಲ ಪ್ರಿನ್ಸಿಪಲ್ ಕೋರ್ಟ್‌ಗೆ ಮಾತ್ರ ಇದೆ, ವಿಚಾರಣಾ (ಟ್ರಯಲ್) ನ್ಯಾಯಾಲಯಕ್ಕೆ ಈ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದ್ದರು. ಅಲ್ಲದೆ, ಸೆಷನ್ಸ್ ನ್ಯಾಯಾಲಯವು ಇಂತಹ ಹೇಳಿಕೆ ದಾಖಲಿಸಿಕೊಳ್ಳುವುದನ್ನು ವಿಜಯಲಕ್ಷ್ಮೀ ತಮ್ಮ ಅರ್ಜಿಯಲ್ಲಿ ವಿರೋಧಿಸಿದ್ದರು.
ಸರ್ಕಾರದ ಪರ ವಾದ: ಸರ್ಕಾರದ ಪರ ಹಾಜರಾಗಿದ್ದ ಹಿರಿಯ ವಕೀಲ ಸಿದ್ಧಾರ್ಥ್ ಲೂಥ್ರಾ, "ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ಆರೋಪಿಗಳು ಪ್ರಶ್ನಿಸುವಂತಿಲ್ಲ. ಆದರೆ, ಆ ಸಾಕ್ಷಿಯನ್ನು ಪಾಟಿಸವಾಲಿಗೆ (ಕ್ರಾಸ್ ಎಕ್ಸಾಮಿನೇಷನ್) ಒಳಪಡಿಸುವ ಹಕ್ಕು ಆರೋಪಿಗೆ ಇರುತ್ತದೆ" ಎಂದು ವಾದಿಸಿದರು.
ಸುಪ್ರೀಂ ಕೋರ್ಟ್ ತೀರ್ಪು: ದರ್ಶನ್ ಪರ ವಕೀಲರ ವಾದವನ್ನು ತಿರಸ್ಕರಿಸಿದ ನ್ಯಾಯಪೀಠ, ಮಾಫಿ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಳ್ಳುವ ಸಂಪೂರ್ಣ ಅಧಿಕಾರ ವಿಚಾರಣಾ ನ್ಯಾಯಾಲಯಕ್ಕೆ ಇದೆ ಎಂದು ಸ್ಪಷ್ಟಪಡಿಸಿತು. ಅಲ್ಲದೆ, ಸರ್ಕಾರದ ಪರ ವಕೀಲರ ವಾದವನ್ನು ಪುರಸ್ಕರಿಸಿದ ಕೋರ್ಟ್, ಆರೋಪಿಗೆ ಕೇವಲ ಸಾಕ್ಷಿಯನ್ನು ಪಾಟಿಸವಾಲು ಮಾಡುವ ಹಕ್ಕಿದೆಯೇ ಹೊರತು, ಮಾಫಿ ಸಾಕ್ಷಿಯನ್ನೇ ರದ್ದುಗೊಳಿಸುವಂತೆ ಕೋರುವ ಹಕ್ಕಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಈ ತೀರ್ಪಿನೊಂದಿಗೆ, ಪ್ರಕರಣದಲ್ಲಿ ಪ್ರದೂಷ್ ನೀಡಿರುವ ಹೇಳಿಕೆಯನ್ನು ಸಾಕ್ಷಿಯಾಗಿ ಪರಿಗಣಿಸಲು ಇದ್ದ ಕಾನೂನು ಅಡಚಣೆಗಳು ನಿವಾರಣೆಯಾಗಿದ್ದು, ಮಾಫಿ ಸಾಕ್ಷಿಯಿಂದ ಮುಕ್ತಿ ಪಡೆಯಲು ದರ್ಶನ್ ಬಳಿ ಇದ್ದ ಕೊನೆಯ ಅವಕಾಶವೂ ಕೈತಪ್ಪಿದಂತಾಗಿದೆ.