Dimple Queen Rachita Ram praises Premada Urali Movie: ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ದೊಡ್ಡ ಸೌಂಡ್ ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ನಟಿ ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಕೂಡ ಸಾಥ್ ನೀಡಿದ್ದಾರೆ. ಸಿನಿಮಾದ ಯಶಸ್ಸಿಗೆ ಇಡೀ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿರುವ ರಚಿತಾ ರಾಮ್ ಅವರು, ಸಿನಿಮಾದ ಕಥೆ ಹಾಗೂ ನಿರೂಪಣೆಯನ್ನು ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಪ್ರೇಮದ ಊರಲಿ ಸಿನಿಮಾ ಕುರಿತು ಮಾತನಾಡಿರುವ ರಚಿತಾ ರಾಮ್ ಅವರು, ಮೊದಲನೆಯದಾಗಿ 'ಪ್ರೇಮದ ಊರಲಿ' ಸಿನಿಮಾ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು. ಒಂದು ಅದ್ಭುತವಾದ ಮತ್ತು ಸುಂದರವಾದ ಪ್ರೇಮಕಥೆಯನ್ನು ಕನ್ನಡಿಗರಿಗೆ ತಲುಪಿಸಿ, ಪ್ರತಿಯೊಬ್ಬರ ಮನಸ್ಸು ಗೆಲ್ಲುವಲ್ಲಿ ನೀವು ಯಶಸ್ವಿಯಾಗಿದ್ದೀರಿ ಎಂದು ಪ್ರೇಮದ ಊರಲಿ ಚಿತ್ರತಂಡದ ಪ್ರಯತ್ನವನ್ನು ಕೊಂಡಾಡಿದ್ದಾರೆ.
ಪ್ರೇಮದ ಊರಲಿ ಚಿತ್ರದಲ್ಲಿ ನಟಿಸಿರುವ ಕಲಾವಿದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ರಚಿತಾ ರಾಮ್ ಅವರು, ನನ್ನ ನೆಚ್ಚಿನ ಆಕ್ಟರ್ ರಂಗಾಯಣ ರಘು ಸರ್, ನಾಯಕ ಶ್ರೀರಾಮ್, ತಪಸ್ವಿನಿ, ರಮಿಕಾ, ಇಳಾ ವಿಟ್ಲ ಸೇರಿದಂತೆ ಇಡೀ ತಾರಾಗಣ ಅತ್ಯುತ್ತಮವಾಗಿ ನಟಿಸಿದೆ. ಅವರ ಪರಿಶ್ರಮಕ್ಕೆ ಅದ್ಭುತವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಲು ಹಳ್ಳಿಗಳಿಂದಲೂ ಜನರು ಬರುತ್ತಿರುವುದು ಇನ್ನೊಂದು ವಿಶೇಷವಾಗಿದೆ. ಸಿನಿಮಾಗೆ ಎಲ್ಲಾ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಒಂದು ಸಿನಿಮಾದಲ್ಲಿ ಉತ್ತಮ ಕಂಟೆಂಟ್, ಗಟ್ಟಿಯಾದ ಕಥೆ ಮತ್ತು ಸ್ಕ್ರೀನ್‌ಪ್ಲೇ ಇದ್ದು ಅದು ಜನರ ಹೃದಯ ಮುಟ್ಟಿದರೆ ಖಂಡಿತವಾಗಿಯೂ ದೊಡ್ಡ ಮಟ್ಟದ ಗೆಲುವು ಸಿಗುತ್ತದೆ ಎಂಬುದನ್ನು ನಾವು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇವೆ. ಈ ಚಿತ್ರಕ್ಕೂ ಅದೇ ರೀತಿ ಮೆಚ್ಚುಗೆ ಸಿಗುತ್ತಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಒಂದೇ ಚಿತ್ರರಂಗದವರಾಗಿದ್ದು, ಇಂತಹ ಗುಣಮಟ್ಟದ ಸಿನಿಮಾವೊಂದು ಪ್ರೇಕ್ಷಕರ ಮನಗೆದ್ದಿರುವುದಕ್ಕೆ ಇಡೀ ಚಿತ್ರರಂಗವೇ ಹೆಮ್ಮೆಪಡುವಂತಾಗಿದೆ ಎಂದು ಅಭಿಪ್ರಾಯಪಟ್ಟ ರಚಿತಾ ರಾಮ್, ಚಿತ್ರದ ನಿರ್ಮಾಪಕರು, ಸಂಗೀತ ನಿರ್ದೇಶಕರು, ಗೀತರಚನೆಕಾರರು ಸೇರಿದಂತೆ ತೆರೆಯ ಹಿಂದೆ ಕೆಲಸ ಮಾಡಿದ ಪ್ರತಿಯೊಬ್ಬ ತಂತ್ರಜ್ಞರಿಗೂ ಶುಭ ಕೋರಿದ್ದಾರೆ. ಜೊತೆಗೆ, ಮುಂದೆಯೂ ಇಂತಹ ಅರ್ಥಪೂರ್ಣ ಕಥೆಗಳುಳ್ಳ ಸಿನಿಮಾಗಳು ಇದೇ ತಂಡದಿಂದ ಮೂಡಿಬರಲಿ ಎಂದು ಹಾರೈಸಿದ್ದಾರೆ.
ಮೊನ್ನೆ ಅಷ್ಟೇ ರಚಿತಾ ರಾಮ್ ಅವರು ತಮ್ಮ ಹುಟ್ಟುಹಬ್ಬವನ್ನು ಸಂಭ್ರಮದಿಂದ ಅಭಿಮಾನಿಗಳೊಟ್ಟಿಗೆ ಆಚರಣೆ ಮಾಡಿಕೊಂಡರು. ರಚಿತಾ ರಾಮ್ ಅವರು ಬರ್ತ್‌ಡೇ ಗೆ ನಟ, ನಟಿಯರು ಸೇರಿದಂತೆ ಅಭಿಮಾನಿಗಳು ಕೂಡ ವಿಶ್ ಮಾಡಿದರು. ಪ್ರತಿಯೊಬ್ಬ ಅಭಿಮಾನಿಗೂ, ರಚಿತಾ ರಾಮ್ ಅವರು ಸೆಲ್ಫಿ ಫೋಟೋ ಕೊಟ್ಟರು. ಅಭಿಮಾನಿಗಳು ಕೂಡ ಸಾಲು ಸಾಲಾಗಿ ಬಂದು ರಚಿತಾ ರಾಮ್‌ಗೆ ವಿಶ್ ಮಾಡಿದರು.
ಹಳ್ಳಿ ಪರಿಸರದ ನಡುವೆ ಅರಳುವ ಸುಂದರ ಪ್ರೇಮಕಥೆ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ನಿರ್ದೇಶಕ ಮನೋಜ್ ಕುಮಾರ್ ಅವರು ಹೊರಾಂಗಣದಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಹಚ್ಚ ಹಸಿರಿನ ಕೃಷಿ ಭೂಮಿ, ಹಳ್ಳಿಯ ಬದುಕಿನ ಸಹಜ ವಾತಾವರಣವನ್ನು ರಾಜ್‌ಕಾಂತ್ ಎಸ್‌ಕೆ ಅವರ ಕ್ಯಾಮೆರಾ ಕೆಲಸ ಅದ್ಭುತವಾಗಿ ಇದೆ. ಗ್ರಾಮೀಣ ಪರಿಸರ ಮತ್ತು ಮಾನವ ಸಂಬಂಧಗಳನ್ನು ಸಹಜವಾಗಿಯೇ ಬಿಂಬಿಸುವ ಪಾತ್ರಗಳು ಪ್ರೇಕ್ಷಕರನ್ನು ಹಿಡಿದಿಡುತ್ತವೆ. ಸಿನಿಮಾ ಅತ್ಯುತ್ತಮವಾಗಿ ನಿರ್ಮಾಣ ಆಗಿದ್ದರಿಂದ ನೋಡುಗರ ಮನ ಗೆಲ್ಲುತ್ತಿದೆ. ರಿಲೀಸ್ ಆಗಿರುವ ದಿನದಿಂದಲೂ ಪ್ರೇಮದ ಊರಲಿ ಸಿನಿಮಾ ಎಲ್ಲ ಥಿಯೇಟರ್‌ಗಳಲ್ಲಿ ಮುನ್ನುಗ್ಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಇಂತಹ ಒಂದು ಒಳ್ಳೆಯ ಸಿನಿಮಾ ನೋಡಿ ಎಷ್ಟೋ ದಿನಗಳು ಆಗಿತ್ತು ಎಂದು ಹೇಳುತ್ತಿದ್ದಾರೆ. ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾಗಳ ನಡುವೆ ಪ್ರೇಮದ ಊರಲಿ ಹೊಸ ಇತಿಹಾಸ ಬರೆಯುತ್ತಿದೆ.