ನ್ಯಾಶನಲ್ ಕ್ರಶ್ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಸಿನಿಮಾ ‘ರಣಬಾಲಿ’ ಪ್ರಮೋಷನ್‌ನಲ್ಲಿ ಬ್ಯುಸಿ ಆಗಿದ್ದು, ಪತಿ ವಿಜಯ್ ದೇವರಕೊಂಡ ಜೊತೆ ಸಿನಿಮಾ ಪ್ರಚಾರ ಮಾಡ್ತಿರೋ ರಶ್ಮಿಕಾ, ಕನ್ನಡದ ನಿರೂಪಕಿ ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ಕೊಡಗಿನ ಹುಡುಗಿ ತಪಸ್ವಿನಿ ಪೂಣಚ್ಚ ಅವರ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ‘ಪ್ರೇಮದ ಊರಲಿ’ ಸಿನಿಮಾದ ಬಗ್ಗೆ ತಿಳಿದು ಖುಷಿಪಟ್ಟಿರುವ ರಶ್ಮಿಕಾ, ತಪಸ್ವಿನಿ ಸಾಧನೆಗೆ ಫುಲ್ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿಯ ಸಂದೇಶವನ್ನೂ ಹಂಚಿಕೊಂಡಿದ್ದಾರೆ. ಹಾಗಾದ್ರೆ, ರಶ್ಮಿಕಾ ಪೋಸ್ಟ್‌ನಲ್ಲಿ ಏನಿದೆ? ತಪಸ್ವಿನಿ ಕೊಟ್ಟ ಪ್ರತಿಕ್ರಿಯೆ ಏನು? ನೋಡೋಣ ಈ ಸ್ಟೋರಿ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಈಗ ‘ರಣಬಾಲಿ’ ಸಿನಿಮಾದ ಪ್ರಚಾರದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಅಕ್ಟೋಬರ್ 16ರಂದು ತೆಲುಗು, ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಹೀಗಾಗಿ, ವಿವಿಧ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಾ ಸಿನಿಮಾ ಪ್ರಚಾರ ಮಾಡ್ತಿದ್ದಾರೆ ಈ ತಾರಾ ದಂಪತಿ. ಇನ್ನು ಕನ್ನಡದ ನಿರೂಪಕಿ ಅನುಶ್ರೀ ಜೊತೆಗಿನ ಸಂದರ್ಶನದಲ್ಲಿ ‘ಪ್ರೇಮದ ಊರಲಿ’ ಸಿನಿಮಾ ವಿಚಾರವೂ ಪ್ರಸ್ತಾಪವಾಗಿದೆ. ಕೊಡಗಿನ ಪ್ರತಿಭೆ ತಪಸ್ವಿನಿ ಪೂಣಚ್ಚ ಅಭಿನಯದ ಈ ಸಿನಿಮಾದ ಬಗ್ಗೆ ತಿಳಿದ ರಶ್ಮಿಕಾ, ತಮ್ಮೂರಿನ ಹುಡುಗಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ತಪಸ್ವಿನಿ ಅವರನ್ನು ಮನಸಾರೆ ಹೊಗಳಿ, ಸೋಷಿಯಲ್ ಮೀಡಿಯಾದಲ್ಲೂ ಪ್ರೀತಿಯ ಸಂದೇಶ ಹಂಚಿಕೊಂಡಿದ್ದಾರೆ.
ರಶ್ಮಿಕಾ ಪ್ರೀತಿಯ ಪೋಸ್ಟ್
“ಕೊಡಗಿನಿಂದ ಬಂದ ಸಿನಿಮಾ, ಆ ಸಿನಿಮಾ ಅದ್ಭುತವಾಗಿ ಸಾಗುತ್ತಿರುವುದು ಖುಷಿಯ ವಿಚಾರ. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಿಮಗೆ ನನ್ನ ಪ್ರೀತಿ ಮತ್ತು ಅಪ್ಪುಗೆ, ಬ್ಯೂಟಿಫುಲ್ ಗರ್ಲ್. ಇದು ಕೇವಲ ಆರಂಭವಷ್ಟೇ. ನಿಮ್ಮ ಎಲ್ಲಾ ಕನಸುಗಳು ನನಸಾಗಲಿ ಎಂದು ಮನಸಾರೆ ಹಾರೈಸುತ್ತೇನೆ” ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಜೊತೆಗೆ, ತಪಸ್ವಿನಿ ಬಗ್ಗೆ ತಿಳಿಸಿಕೊಟ್ಟು ಮಾತನಾಡಲು ಅವಕಾಶ ಮಾಡಿಕೊಟ್ಟ ಅನುಶ್ರೀ ಅವರಿಗೂ ಧನ್ಯವಾದ ಹೇಳಿದ್ದಾರೆ.
ಇತ್ತ ರಶ್ಮಿಕಾ ಅವರ ಪ್ರೀತಿಯ ಮಾತುಗಳನ್ನು ಕೇಳಿ ತಪಸ್ವಿಮಿ ಪೂಣಚ್ಚ ಸಖತ್ ಖುಷಿಯಾಗಿದ್ದಾರೆ. ರಶ್ಮಿಕಾ ಪೋಸ್ಟ್ ಮರುಹಂಚಿಕೊಂಡಿರುವ ತಪಸ್ವಿನಿ, “ನನ್ನ ದೇವತೆ ನೀವು ರಶ್ಮಿಕಾ. ನಿಮ್ಮಿಂದ ಈ ಮಾತುಗಳನ್ನು ಕೇಳಿ ಬಹಳ ಖುಷಿಯಾಯಿತು. ನನ್ನ ದಿನ ಸಾರ್ಥಕವಾಯಿತು ಎಲ್ಲದಕ್ಕೂ ಥ್ಯಾಂಕ್ಯೂ ಅನುಶ್ರೀ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಸದ್ಯ ಒಟ್ಟಾರೆಯಾಗಿ ಸಿನಿಮಾ ಪ್ರಮೋಷನ್ ನಡುವೆಯೂ ತಮ್ಮೂರಿನ ಪ್ರತಿಭೆಯನ್ನು ಗುರುತಿಸಿ ಬೆನ್ನುತಟ್ಟಿದ ರಶ್ಮಿಕಾ ಮಂದಣ್ಣ ಅವರ ನಡೆ ಅಭಿಮಾನಿಗಳ ಗಮನ ಸೆಳೆದಿದೆ. ‘ಪ್ರೇಮದ ಊರಲಿ’ ಮೂಲಕ ಗಮನ ಸೆಳೆಯುತ್ತಿರುವ ತಪಸ್ವಿನಿಗೆ ರಶ್ಮಿಕಾ ನೀಡಿದ ಈ ಪ್ರೋತ್ಸಾಹ ಹೊಸ ಹುರುಪು ನೀಡಿದೆ.