ಆಕಸ್ಮಿಕ ಅಗ್ನಿ ಅವಘಡದಿಂದಾಗಿ ಶಾಲೆಯ ಮೇಲ್ಚಾವಣಿಯೂ ಸೇರಿದಂತೆ ಅಲ್ಲಿದ್ದ ಪೀಠೋಪಕರಣಗಳು ಬೆಂಕಿಗೆ ಆಹುತಿ ಆಗಿರುವ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕೆನ್ನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಅಗ್ನಿ ಅವಘಡಕ್ಕೆ ಶಾಲೆಯಲ್ಲಿದ್ದ ಹಲವು ವಸ್ತುಗಳು ಸುಟ್ಟು ಕರಕಲು:
ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೆನ್ನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಚಾವಣಿಯೂ ಸೇರಿದಂತೆ ಹಲವು ಪೀಠೋಪಕರಣಗಳು ಬೆಂಕಿಗೆ ಆಹುತಿ ಆಗಿವೆ. ವರದಿಗಳ ಪ್ರಕಾರ, ಅಗ್ನಿ ಅನಾಹುತದಲ್ಲಿ ಬಹಳ ಬೇಗ ಇಡೀ ಶಾಸಲೆಗೆ ಬೆಂಕಿ ಆವರಿಸಿದ್ದು, ಸರ್ಕಾರಿ ಶಾಲೆಯಲ್ಲಿ ಮಕ್ಕಳು ಕೂರುವ ಪೀಠೋಪಕರಣಗಳು, ಟೇಬಲ್‌ಗಳು, ಹೊಲಿಗೆ ಯಂತ್ರ, ಮೇಲ್ಚಾವಣಿಯೂ ಸೇರಿ ಹಲವು ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.

ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ:
ಶಾಲೆಯಲ್ಲಿ ಹೊಗೆ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಗ್ರಾಮಸ್ಥರು ಕರೆ ಮಾಡಿ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಹೊತ್ತಿ ಉರಿಯುತ್ತಿದ್ದ ಸರ್ಕಾರಿ ಶಾಲೆಯ ಬೆಂಕಿ ನಿಂದಿಸುವಲ್ಲಿ ಯಶಸ್ವಿ ಆಗಿದ್ದಾರೆ. ಪಾಂಡವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಸರಾ ರಜೆಯಿಂದಾಗಿ ತಪ್ಪಿದ ಭಾರೀ ಅನಾಹುತ:
ಪ್ರಸ್ತುತ, ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳಿಗೆ ದಸರಾ ಪ್ರಯುಕ್ತ ರಜೆ ನೀಡಲಾಗಿದೆ. ಹೀಗಾಗಿ, ಅಗ್ನಿ ಅನಾಹುತ ಸಂಭವಿಸಿದ ಸಮಯದಲ್ಲಿ ಶಾಲೆಯಲ್ಲಿ ಮಕ್ಕಳಾಗಲಿ (ವಿದ್ಯಾರ್ಥಿಗಳು) ಅಥವಾ ಶಿಕ್ಷಕರಾಗಲಿ ಉಪಸ್ಥಿತರಿರಲಿಲ್ಲ. ಹಾಗಾಗಿ, ಅಗ್ನಿ ಅವಘಡದಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.

45ರಿಂದ 50 ಸಾವಿರ ರೂ. ನಷ್ಟ!
ಕೆನ್ನಾಳು ಸರ್ಕಾರಿ ಶಾಲೆಯಲ್ಲಿ ಸಂಭವಿಸಿದ ಈ ಅಗ್ನಿ ಅವಘಡದಿಂದಾಗಿ ಪೀಠೋಪಕರಣಗಳು ಭಸ್ಮವಾಗಿರುವುದರಿಂದ ಸುಮಾರು 45ರಿಂದ 50 ಸಾವಿರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿ ಅವಘಡಕ್ಕೆ ಕಾರಣ ಏನು?
ಕೆನ್ನಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭವಿಸಿರುವ ಈ ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಇರಬಹುದು ಎಂದು ಊಹಿಸಲಾಗಿದೆ. ಆದಾಗ್ಯೂ, ಈ ಬಗ್ಗೆ ನಿಖರ ಕಾರಣ ಏನು ಎಂದು ತಿಳಿದು ಬಂದಿಲ್ಲ. ಪೊಲೀಸರ ತನಿಖೆ ಬಳಿಕವೇ ನಿಖರ ಕಾರಣದ ಬಗ್ಗೆ ಮಾಹಿತಿ ಹೊರಬೀಳಬೇಕಿದೆ.