SOCIAL MEDIA

Newsletter

PARTNER SITES
Select Language Select State

ಕನ್ನಡ ರಾಜ್ಯೋತ್ಸವದ ವಿಶೇಷ: ಕರುನಾಡಿನ ಇತಿಹಾಸ, ಪರಂಪರೆಯ ‘ನಮ್ಮ ಉತ್ಸವ’ ವಿಡಿಯೋ ಸರಣಿ ಆರಂಭ

ಕರುನಾಡಿನ ಶ್ರೀಮಂತ ಇತಿಹಾಸ, ಪರಂಪರೆ, ಭಾಷೆ ಮತ್ತು ಸಾಂಸ್ಕೃತಿಕ ವೈಭವವನ್ನ ಪರಿಚಯಿಸುವ ಉದ್ದೇಶದಿಂದ ನಟ ರಮೇಶ್ ಅರವಿಂದ್ ಅವರ ನಿರೂಪಣೆಯಲ್ಲಿ 30 ಕಂತುಗಳ ‘ನಮ್ಮ ಉತ್ಸವ’ ವಿಶೇಷ ವಿಡಿಯೋ ಸರಣಿ ಆರಂಭಿಸಲಾಗಿದೆ. ಎನ್‌ಯು ಆಸ್ಪತ್ರೆಯ ಸಹಯೋಗದಲ್ಲಿ ಮೂಡಿಬಂದಿರುವ ಈ ಸರಣಿಯಲ್ಲಿ ಕರ್ನಾಟಕದ ವಿವಿಧ ಭಾಗಗಳ 19 ಕಥೆಗಳು ಹಾಗೂ ಬೆಂಗಳೂರಿನ ಇತಿಹಾಸ ಮತ್ತು ಪರಂಪರೆಗೆ ಸಂಬಂಧಿಸಿದ 11 ಕಂತುಗಳಿವೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪ್ರತಿದಿನವೂ ಕರುನಾಡಿನ ಅಪರೂಪದ ಕಥೆಗಳನ್ನ ವೀಕ್ಷಿಸಬಹುದು.

Written By Puttaraj K Alur
Published: Nov 26, 2026, 17:10 IST | Updated: Nov 26, 2026, 17:26 IST
Image Credit: Namma Utsava
Join

Namma Utsava Video Series: ಕರುನಾಡಿನ ಶ್ರೀಮಂತ ಇತಿಹಾಸ, ಪರಂಪರೆ, ಭಾಷೆ ಹಾಗೂ ಸಾಂಸ್ಕೃತಿಕ ವೈಭವವನ್ನ ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ‘ನಮ್ಮ ಉತ್ಸವ’ ಎಂಬ ವಿನೂತನ 30 ಕಂತುಗಳ ವಿಶೇಷ ವಿಡಿಯೋ ಸರಣಿಯನ್ನ ಆರಂಭಿಸಲಾಗಿದೆ. ನಾಡಿನ ಖ್ಯಾತ ನಟ, ನಿರ್ದೇಶಕ ಹಾಗೂ ಕಥೆಗಾರ ರಮೇಶ್ ಅರವಿಂದ್ ಅವರ ಮನೋಜ್ಞ ನಿರೂಪಣೆಯಲ್ಲಿ ಈ ಸರಣಿ ಮೂಡಿಬಂದಿದ್ದು, ಎನ್‌ಯು ಆಸ್ಪತ್ರೆಯು ಈ ಸಾಂಸ್ಕೃತಿಕ ಉಪಕ್ರಮಕ್ಕೆ ಕೈಜೋಡಿಸಿದೆ. ಕರ್ನಾಟಕದ ಅಸ್ಮಿತೆಯನ್ನ ರೂಪಿಸಿದ ಅನೇಕ ಕುತೂಹಲಕಾರಿ ಹಾಗೂ ಇಂದಿಗೂ ಹೆಚ್ಚಿನವರಿಗೆ ಪರಿಚಯವಿಲ್ಲದ ಅಪರೂಪದ ಕಥೆಗಳನ್ನ ಈ ಸರಣಿಯ ಮೂಲಕ ನಾಡಿನ ಜನತೆಗೆ ತಲುಪಿಸಲಾಗುತ್ತಿದೆ.

30 ಕಂತುಗಳಲ್ಲಿ ಕರುನಾಡಿನ ವೈಭವ

ಒಟ್ಟು 30 ಕಂತುಗಳನ್ನ ಒಳಗೊಂಡಿರುವ ‘ನಮ್ಮ ಉತ್ಸವ’ ಸರಣಿಯಲ್ಲಿ ಕರ್ನಾಟಕದ ವಿವಿಧ ಭಾಗಗಳ 19 ವಿಶೇಷ ಕಥೆಗಳು ಹಾಗೂ ರಾಜಧಾನಿ ಬೆಂಗಳೂರಿನ ಇತಿಹಾಸ ಮತ್ತು ಪರಂಪರೆಗೆ ಮೀಸಲಾದ 11 ಕಂತುಗಳಿವೆ. ಕರುನಾಡಿನ ಐತಿಹಾಸಿಕ ಸ್ಮಾರಕಗಳು, ವಾಸ್ತುಶಿಲ್ಪದ ಅದ್ಭುತಗಳು, ಕನ್ನಡ ಭಾಷೆಯ ವಿಕಾಸ, ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಈ ನೆಲದ ಕುತೂಹಲಕಾರಿ ಸಂಗತಿಗಳನ್ನ ಈ ವಿಡಿಯೋಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಟ್ಟಿಕೊಡಲಾಗಿದೆ. ಈ ವಿಶೇಷ ಸರಣಿಯ ಕುರಿತು ಮಾತನಾಡಿದ ನಟ ರಮೇಶ್ ಅರವಿಂದ್, ʼಕರ್ನಾಟಕವು ಅಸಾಧಾರಣ ಕಥೆಗಳು, ಶ್ರೀಮಂತ ಸಂಪ್ರದಾಯಗಳು ಹಾಗೂ ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಸಾಂಸ್ಕೃತಿಕ ಪರಂಪರೆಯ ನೆಲವಾಗಿದೆʼ ಎಂದು ಹೇಳಿದರು.

ನಮ್ಮ ಇತಿಹಾಸ, ಭಾಷೆ ಮತ್ತು ಪರಂಪರೆಯ ಕುರಿತಾದ ಅನೇಕ ಕುತೂಹಲಕಾರಿ ಸಂಗತಿಗಳು ಇಂದಿಗೂ ಹೆಚ್ಚಿನವರಿಗೆ ತಿಳಿದಿಲ್ಲ. ‘ನಮ್ಮ ಉತ್ಸವ’ದ ಮೂಲಕ ಈ ಕಥೆಗಳಿಗೆ ಜೀವ ತುಂಬಿ, ನಮ್ಮ ಬೇರುಗಳ ಬಗ್ಗೆ ಹೆಮ್ಮೆ ಮೂಡಿಸುವುದರ ಜೊತೆಗೆ, ವಿಶೇಷವಾಗಿ ಇಂದಿನ ಯುವ ಪೀಳಿಗೆಯು ಕರ್ನಾಟಕವನ್ನ ಹೊಸ ದೃಷ್ಟಿಕೋನದಿಂದ ಅರಿಯುವಂತೆ ಪ್ರೇರೇಪಿಸುವ ಆಶಯ ಹೊಂದಿದ್ದೇವೆ ಎಂದು ಅವರು ಸಂತಸ ಹಂಚಿಕೊಂಡರು.

ಕರ್ನಾಟಕದ ಸಂಸ್ಕೃತಿಯನ್ನ ಸಂಭ್ರಮಿಸುವ ಪ್ರಯತ್ನ

ಈ ಉಪಕ್ರಮಕ್ಕೆ ನೆರವು ನೀಡಿರುವ ಎನ್‌ಯು ಆಸ್ಪತ್ರೆಯ ಹಿರಿಯ ಪೀಡಿಯಾಟ್ರಿಕ್ ಯುರಾಲಜಿಸ್ಟ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಸನ್ನ ವೆಂಕಟೇಶ್ ಎಂ.ಕೆ. ಮಾತನಾಡಿ, ಆರೋಗ್ಯ ಸೇವೆಯು ಕೇವಲ ಚಿಕಿತ್ಸೆಗೆ ಸೀಮಿತವಾಗಿರದೆ, ನಾವು ಸೇವೆ ಸಲ್ಲಿಸುವ ಸಮುದಾಯದೊಂದಿಗೆ ಅರ್ಥಪೂರ್ಣ ಬಾಂಧವ್ಯ ಬೆಸೆಯುವುದನ್ನೂ ಒಳಗೊಂಡಿದೆ ಎಂದು ಹೇಳಿದರು. ನಮ್ಮ ಪಯಣದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದ ನೆಲ, ಜಲ ಮತ್ತು ಸಂಸ್ಕೃತಿಯನ್ನ ಸಂಭ್ರಮಿಸುವ ಉದ್ದೇಶದಿಂದ ಕೈಗೊಂಡಿರುವ ಪುಟ್ಟ ಪ್ರಯತ್ನವೇ ಈ ‘ನಮ್ಮ ಉತ್ಸವ’ ಎಂದು ಅವರು ತಿಳಿಸಿದರು.

ಕ್ಯೂಆರ್ ಕೋಡ್ ಮೂಲಕ ವೀಕ್ಷಣೆಗೆ ಲಭ್ಯ

“ಪ್ರತಿ ಬೀದಿಗೂ ಒಂದು ಕಥೆಯಿದೆ, ಪ್ರತಿ ಸಂಪ್ರದಾಯಕ್ಕೂ ಒಂದು ಪರಂಪರೆಯಿದೆ ಮತ್ತು ಪ್ರತಿ ಮೂಲೆಗೂ ಒಂದು ನೆನಪಿದೆ” ಎಂಬ ಸುಂದರ ಆಶಯದೊಂದಿಗೆ ಈ ಸರಣಿಯನ್ನ ಸಿದ್ಧಪಡಿಸಲಾಗಿದೆ. ತಂತ್ರಜ್ಞಾನದ ಬಳಕೆಯೊಂದಿಗೆ ಸಾರ್ವಜನಿಕರಿಗೆ ಸುಲಭವಾಗಿ ತಲುಪುವಂತೆ ಈ ಸರಣಿಯನ್ನ ವಿನ್ಯಾಸಗೊಳಿಸಲಾಗಿದೆ. ನಿಗದಿತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೀಕ್ಷಕರು ಪ್ರತಿದಿನವೂ ಕರುನಾಡಿನ ಹೊಸದೊಂದು ಅಪರೂಪದ ಕಥೆಯನ್ನ ವೀಕ್ಷಿಸಿ ಆನಂದಿಸಬಹುದಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES