Namma Utsava Video Series: ಕರುನಾಡಿನ ಶ್ರೀಮಂತ ಇತಿಹಾಸ, ಪರಂಪರೆ, ಭಾಷೆ ಹಾಗೂ ಸಾಂಸ್ಕೃತಿಕ ವೈಭವವನ್ನ ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ‘ನಮ್ಮ ಉತ್ಸವ’ ಎಂಬ ವಿನೂತನ 30 ಕಂತುಗಳ ವಿಶೇಷ ವಿಡಿಯೋ ಸರಣಿಯನ್ನ ಆರಂಭಿಸಲಾಗಿದೆ. ನಾಡಿನ ಖ್ಯಾತ ನಟ, ನಿರ್ದೇಶಕ ಹಾಗೂ ಕಥೆಗಾರ ರಮೇಶ್ ಅರವಿಂದ್ ಅವರ ಮನೋಜ್ಞ ನಿರೂಪಣೆಯಲ್ಲಿ ಈ ಸರಣಿ ಮೂಡಿಬಂದಿದ್ದು, ಎನ್‌ಯು ಆಸ್ಪತ್ರೆಯು ಈ ಸಾಂಸ್ಕೃತಿಕ ಉಪಕ್ರಮಕ್ಕೆ ಕೈಜೋಡಿಸಿದೆ. ಕರ್ನಾಟಕದ ಅಸ್ಮಿತೆಯನ್ನ ರೂಪಿಸಿದ ಅನೇಕ ಕುತೂಹಲಕಾರಿ ಹಾಗೂ ಇಂದಿಗೂ ಹೆಚ್ಚಿನವರಿಗೆ ಪರಿಚಯವಿಲ್ಲದ ಅಪರೂಪದ ಕಥೆಗಳನ್ನ ಈ ಸರಣಿಯ ಮೂಲಕ ನಾಡಿನ ಜನತೆಗೆ ತಲುಪಿಸಲಾಗುತ್ತಿದೆ.
30 ಕಂತುಗಳಲ್ಲಿ ಕರುನಾಡಿನ ವೈಭವ
ಒಟ್ಟು 30 ಕಂತುಗಳನ್ನ ಒಳಗೊಂಡಿರುವ ‘ನಮ್ಮ ಉತ್ಸವ’ ಸರಣಿಯಲ್ಲಿ ಕರ್ನಾಟಕದ ವಿವಿಧ ಭಾಗಗಳ 19 ವಿಶೇಷ ಕಥೆಗಳು ಹಾಗೂ ರಾಜಧಾನಿ ಬೆಂಗಳೂರಿನ ಇತಿಹಾಸ ಮತ್ತು ಪರಂಪರೆಗೆ ಮೀಸಲಾದ 11 ಕಂತುಗಳಿವೆ. ಕರುನಾಡಿನ ಐತಿಹಾಸಿಕ ಸ್ಮಾರಕಗಳು, ವಾಸ್ತುಶಿಲ್ಪದ ಅದ್ಭುತಗಳು, ಕನ್ನಡ ಭಾಷೆಯ ವಿಕಾಸ, ವಿಶಿಷ್ಟ ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಈ ನೆಲದ ಕುತೂಹಲಕಾರಿ ಸಂಗತಿಗಳನ್ನ ಈ ವಿಡಿಯೋಗಳಲ್ಲಿ ಅತ್ಯಂತ ಆಕರ್ಷಕವಾಗಿ ಕಟ್ಟಿಕೊಡಲಾಗಿದೆ. ಈ ವಿಶೇಷ ಸರಣಿಯ ಕುರಿತು ಮಾತನಾಡಿದ ನಟ ರಮೇಶ್ ಅರವಿಂದ್, ʼಕರ್ನಾಟಕವು ಅಸಾಧಾರಣ ಕಥೆಗಳು, ಶ್ರೀಮಂತ ಸಂಪ್ರದಾಯಗಳು ಹಾಗೂ ತಲೆಮಾರುಗಳಿಗೆ ಸ್ಫೂರ್ತಿ ನೀಡುವ ಸಾಂಸ್ಕೃತಿಕ ಪರಂಪರೆಯ ನೆಲವಾಗಿದೆʼ ಎಂದು ಹೇಳಿದರು.
ನಮ್ಮ ಇತಿಹಾಸ, ಭಾಷೆ ಮತ್ತು ಪರಂಪರೆಯ ಕುರಿತಾದ ಅನೇಕ ಕುತೂಹಲಕಾರಿ ಸಂಗತಿಗಳು ಇಂದಿಗೂ ಹೆಚ್ಚಿನವರಿಗೆ ತಿಳಿದಿಲ್ಲ. ‘ನಮ್ಮ ಉತ್ಸವ’ದ ಮೂಲಕ ಈ ಕಥೆಗಳಿಗೆ ಜೀವ ತುಂಬಿ, ನಮ್ಮ ಬೇರುಗಳ ಬಗ್ಗೆ ಹೆಮ್ಮೆ ಮೂಡಿಸುವುದರ ಜೊತೆಗೆ, ವಿಶೇಷವಾಗಿ ಇಂದಿನ ಯುವ ಪೀಳಿಗೆಯು ಕರ್ನಾಟಕವನ್ನ ಹೊಸ ದೃಷ್ಟಿಕೋನದಿಂದ ಅರಿಯುವಂತೆ ಪ್ರೇರೇಪಿಸುವ ಆಶಯ ಹೊಂದಿದ್ದೇವೆ ಎಂದು ಅವರು ಸಂತಸ ಹಂಚಿಕೊಂಡರು.
ಕರ್ನಾಟಕದ ಸಂಸ್ಕೃತಿಯನ್ನ ಸಂಭ್ರಮಿಸುವ ಪ್ರಯತ್ನ
ಈ ಉಪಕ್ರಮಕ್ಕೆ ನೆರವು ನೀಡಿರುವ ಎನ್‌ಯು ಆಸ್ಪತ್ರೆಯ ಹಿರಿಯ ಪೀಡಿಯಾಟ್ರಿಕ್ ಯುರಾಲಜಿಸ್ಟ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಪ್ರಸನ್ನ ವೆಂಕಟೇಶ್ ಎಂ.ಕೆ. ಮಾತನಾಡಿ, ಆರೋಗ್ಯ ಸೇವೆಯು ಕೇವಲ ಚಿಕಿತ್ಸೆಗೆ ಸೀಮಿತವಾಗಿರದೆ, ನಾವು ಸೇವೆ ಸಲ್ಲಿಸುವ ಸಮುದಾಯದೊಂದಿಗೆ ಅರ್ಥಪೂರ್ಣ ಬಾಂಧವ್ಯ ಬೆಸೆಯುವುದನ್ನೂ ಒಳಗೊಂಡಿದೆ ಎಂದು ಹೇಳಿದರು. ನಮ್ಮ ಪಯಣದ ಅವಿಭಾಜ್ಯ ಅಂಗವಾಗಿರುವ ಕರ್ನಾಟಕದ ನೆಲ, ಜಲ ಮತ್ತು ಸಂಸ್ಕೃತಿಯನ್ನ ಸಂಭ್ರಮಿಸುವ ಉದ್ದೇಶದಿಂದ ಕೈಗೊಂಡಿರುವ ಪುಟ್ಟ ಪ್ರಯತ್ನವೇ ಈ ‘ನಮ್ಮ ಉತ್ಸವ’ ಎಂದು ಅವರು ತಿಳಿಸಿದರು.
ಕ್ಯೂಆರ್ ಕೋಡ್ ಮೂಲಕ ವೀಕ್ಷಣೆಗೆ ಲಭ್ಯ
“ಪ್ರತಿ ಬೀದಿಗೂ ಒಂದು ಕಥೆಯಿದೆ, ಪ್ರತಿ ಸಂಪ್ರದಾಯಕ್ಕೂ ಒಂದು ಪರಂಪರೆಯಿದೆ ಮತ್ತು ಪ್ರತಿ ಮೂಲೆಗೂ ಒಂದು ನೆನಪಿದೆ” ಎಂಬ ಸುಂದರ ಆಶಯದೊಂದಿಗೆ ಈ ಸರಣಿಯನ್ನ ಸಿದ್ಧಪಡಿಸಲಾಗಿದೆ. ತಂತ್ರಜ್ಞಾನದ ಬಳಕೆಯೊಂದಿಗೆ ಸಾರ್ವಜನಿಕರಿಗೆ ಸುಲಭವಾಗಿ ತಲುಪುವಂತೆ ಈ ಸರಣಿಯನ್ನ ವಿನ್ಯಾಸಗೊಳಿಸಲಾಗಿದೆ. ನಿಗದಿತ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ವೀಕ್ಷಕರು ಪ್ರತಿದಿನವೂ ಕರುನಾಡಿನ ಹೊಸದೊಂದು ಅಪರೂಪದ ಕಥೆಯನ್ನ ವೀಕ್ಷಿಸಿ ಆನಂದಿಸಬಹುದಾಗಿದೆ.