Dhanveer Gowda Police Complaint: ನಟ ಧನ್ವೀರ್ ಗೌಡ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಧನ್ವೀರ್ ಗೌಡ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿದ್ದು, ಇದೀಗ ಹಣ, ಕಾರು ಹಿಂತಿರುಗಿಸದಿರುವುದು ಹಾಗೂ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ದೂರುಗಳು ಸಲ್ಲಿಕೆಯಾಗಿವೆ. ಬ್ಯಾಟರಾಯನಪುರ ಮತ್ತು ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎನ್‌ಸಿಆರ್‌ಗಳು ದಾಖಲಾಗಿವೆ.
ಬ್ಯಾಟರಾಯನಪುರ ಠಾಣೆಯಲ್ಲಿ ಧನ್ವೀರ್ ವಿರುದ್ಧ ಎನ್‌ಸಿಆರ್
ನಟ ಧನ್ವೀರ್ ಗೌಡ ವಿರುದ್ಧ ಗೌರವ್ ಎಂಬುವರು ನೀಡಿರುವ ದೂರಿನ ಆಧಾರದಲ್ಲಿ ಬ್ಯಾಟರಾಯನಪುರ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ. ಧನ್ವೀರ್ ಗೌಡ ಮತ್ತು ಶಶಿ ಎಂಬುವರ ವಿರುದ್ಧ ಗೌರವ್ ದೂರು ಸಲ್ಲಿಸಿದ್ದು, ಹಣ ಹಾಗೂ ಕಾರು ಹಿಂತಿರುಗಿಸದೆ ಬೆದರಿಕೆ ಹಾಕಿರುವುದಾಗಿ ಆರೋಪಿಸಿದ್ದಾರೆ. ಗೌರವ್ ನೀಡಿರುವ ದೂರಿನ ಪ್ರಕಾರ, ಧನ್ವೀರ್ ಗೌಡ ಅವರಿಗೆ ₹5 ಲಕ್ಷ ಮೌಲ್ಯದ ವಿಮಾನ ಟಿಕೆಟ್‌ಗಳನ್ನ ಬುಕ್ ಮಾಡಿಕೊಡಲಾಗಿತ್ತು. ಟಿಕೆಟ್ ಬುಕ್ಕಿಂಗ್ ಪೂರ್ಣಗೊಂಡ ನಂತರ ಹಣ ಕೇಳಿದಾಗ ಧನ್ವೀರ್ ಹಣ ಪಾವತಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದರೊಂದಿಗೆ ತಮ್ಮ ವೋಕ್ಸ್‌ವ್ಯಾಗನ್ ಕಾರನ್ನ ಧನ್ವೀರ್, ಶಶಿ ಎಂಬುವರಿಗೆ ನೀಡಿದ್ದು, ಅದನ್ನ ಕೂಡ ಹಿಂತಿರುಗಿಸಿಲ್ಲ ಎಂದು ಗೌರವ್ ದೂರಿನಲ್ಲಿ ತಿಳಿಸಿದ್ದಾರೆ. ಹಣ ಮತ್ತು ಕಾರನ್ನ ವಾಪಸ್ ನೀಡುವಂತೆ ಕೇಳಿದಾಗ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂಬುದು ಅವರ ಆರೋಪವಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಬೆಂಗಳೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬಸವೇಶ್ವರ ನಗರ ಠಾಣೆಯಲ್ಲೂ ದೂರು ದಾಖಲು
ಮತ್ತೊಂದೆಡೆ ಬೋಜರಾಜ್ ಎಂಬುವರು ನಟ ಧನ್ವೀರ್ ಗೌಡ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರಿನ ಆಧಾರದಲ್ಲಿಯೂ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದಾರೆ.
ಬೋಜರಾಜ್ ನೀಡಿರುವ ದೂರಿನಲ್ಲಿ ಅಕ್ಟೋಬರ್ 21ರಂದು ನಡೆದ ಘಟನೆಗಳನ್ನ ಉಲ್ಲೇಖಿಸಲಾಗಿದೆ. ನಟ ದರ್ಶನ್ ಅವರ ಪಿಎ ನಾಗರಾಜ್ ಕರೆ ಮಾಡಿ ಧನ್ವೀರ್ ಮನೆ ಸಮೀಪ ಬರುವಂತೆ ತಿಳಿಸಿದ್ದರು. ಅದರಂತೆ ತಾವು ಸ್ಥಳಕ್ಕೆ ತೆರಳಿ ನಾಗರಾಜ್ ಅವರನ್ನ ಕರೆದುಕೊಂಡು ಹೋಗಿದ್ದಾಗಿ ಬೋಜರಾಜ್ ತಿಳಿಸಿದ್ದಾರೆ. ಇದಾದ ನಂತರ ಧನ್ವೀರ್ ಗೌಡ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ತಮ್ಮ ಲೊಕೇಶನ್ ಕಳುಹಿಸುವಂತೆ ಒತ್ತಾಯಿಸಿದ್ದಾರೆ ಎಂದು ಬೋಜರಾಜ್ ಆರೋಪಿಸಿದ್ದಾರೆ.
ವಾಟ್ಸಾಪ್ ಸಂದೇಶಗಳ ಮೂಲಕ ಬೆದರಿಕೆ ಆರೋಪ
ಧನ್ವೀರ್ ಗೌಡ ವಾಟ್ಸಾಪ್ ಮೂಲಕವೂ ಪದೇಪದೆ ಬೆದರಿಕೆ ಸಂದೇಶಗಳನ್ನ ಕಳುಹಿಸಿದ್ದಾರೆ ಎಂದು ಬೋಜರಾಜ್ ದೂರಿನಲ್ಲಿ ತಿಳಿಸಿದ್ದಾರೆ. ತಮಗೆ ಬಂದಿರುವ ಸಂದೇಶಗಳನ್ನ ಪೊಲೀಸರಿಗೆ ಸಲ್ಲಿಸಲು ಸಿದ್ಧವಿರುವುದಾಗಿ ಹೇಳಿದ್ದಾರೆ. ಧನ್ವೀರ್ ಮನೆ ಸಮೀಪ ತಾವು ತೆರಳಿದ್ದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ ಎಂದೂ ಬೋಜರಾಜ್ ತಿಳಿಸಿದ್ದಾರೆ. ಈ ದೃಶ್ಯಗಳನ್ನ ಅಳಿಸುವ ಸಾಧ್ಯತೆ ಇರುವುದರಿಂದ ಪೊಲೀಸರು ಕೂಡಲೇ ಸಿಸಿಟಿವಿ ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಧನ್ವೀರ್ ತಂದೆಯ ಪ್ರತಿದೂರಿನಲ್ಲೂ ಬೋಜರಾಜ್ ಹೆಸರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಧನ್ವೀರ್ ಗೌಡ ಅವರ ತಂದೆ ತಿಮ್ಮೇಗೌಡ ಸಲ್ಲಿಸಿರುವ ಪ್ರತಿದೂರಿನಲ್ಲಿಯೂ ಬೋಜರಾಜ್ ಹೆಸರು ಉಲ್ಲೇಖವಾಗಿದೆ. ಅಕ್ಟೋಬರ್ 21ರಂದು ವಿಜಯಲಕ್ಷ್ಮಿ ಹಾಗೂ ದರ್ಶನ್ ಪಿಎ ನಾಗರಾಜ್ ಅವರು ಧನ್ವೀರ್ ಮನೆಗೆ ತೆರಳಿದ್ದ ಸಂದರ್ಭದಲ್ಲಿ ನಾಗರಾಜ್, ಲೋಕೇಶ್ ಎಂಬುವರಿಗೆ ಕರೆ ಮಾಡಿ ಇಬ್ಬರನ್ನ ಸ್ಥಳಕ್ಕೆ ಕರೆಸಿಕೊಂಡಿದ್ದರು ಎಂದು ತಿಮ್ಮೇಗೌಡ ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಇಬ್ಬರಲ್ಲಿ ಬೋಜರಾಜ್ ಕೂಡ ಒಬ್ಬರಾಗಿದ್ದರು ಎಂದು ಉಲ್ಲೇಖಿಸಲಾಗಿದೆ.
ನಾಗರಾಜ್ ದೂರಿನ ಬೆನ್ನಲ್ಲೇ ಮತ್ತೊಂದು ದೂರು
ಇದಕ್ಕೂ ಮೊದಲು ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಕೂಡ ಧನ್ವೀರ್ ಗೌಡ ವಿರುದ್ಧ ದೂರು ನೀಡಿದ್ದರು. ಧನ್ವೀರ್ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎಂದು ನಾಗರಾಜ್ ಆರೋಪಿಸಿದ್ದರು. ತಮಗೆ ಬಂದಿರುವ ಕರೆಗಳು ಹಾಗೂ ಸಂದೇಶಗಳಿಗೆ ಸಂಬಂಧಿಸಿದ ದಾಖಲೆಗಳನ್ನ ಪೊಲೀಸರಿಗೆ ಸಲ್ಲಿಸಿರುವುದಾಗಿಯೂ ನಾಗರಾಜ್ ತಿಳಿಸಿದ್ದರು. ಈ ದೂರಿನ ಬೆನ್ನಲ್ಲೇ ಇದೀಗ ಬೋಜರಾಜ್ ಕೂಡ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ವಿಜಯಲಕ್ಷ್ಮಿ, ನಾಗರಾಜ್ ವಿರುದ್ಧವೂ ಪ್ರತಿದೂರು
ಇನ್ನೊಂದೆಡೆ ಧನ್ವೀರ್ ಗೌಡ ಅವರ ತಂದೆ ತಿಮ್ಮೇಗೌಡ, ವಿಜಯಲಕ್ಷ್ಮಿ ಮತ್ತು ನಾಗರಾಜ್ ಸೇರಿದಂತೆ ಇತರರ ವಿರುದ್ಧ ಪ್ರತಿದೂರು ಸಲ್ಲಿಸಿದ್ದಾರೆ. ತಮ್ಮ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಈ ಮೂಲಕ ಧನ್ವೀರ್ ಗೌಡ ಮತ್ತು ವಿಜಯಲಕ್ಷ್ಮಿ ನಡುವಿನ ವಿವಾದದಲ್ಲಿ ಎರಡೂ ಕಡೆಯಿಂದ ದೂರುಗಳು ದಾಖಲಾಗಿವೆ. ಹಣ, ಕಾರು ಹಿಂತಿರುಗಿಸದಿರುವುದು, ದೂರವಾಣಿ ಕರೆಗಳು, ವಾಟ್ಸಾಪ್ ಸಂದೇಶಗಳು ಹಾಗೂ ಮನೆಗೆ ತೆರಳಿ ಬೆದರಿಕೆ ಹಾಕಿರುವ ಆರೋಪಗಳು ಪೊಲೀಸ್ ಠಾಣೆ ತಲುಪಿವೆ.
ಸದ್ಯ ಪೊಲೀಸರು ದೂರುಗಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ. ಪ್ರಕರಣದ ವಿಚಾರಣೆಗೆ ನಟ ಧನ್ವೀರ್ ಗೌಡನನ್ನ ಕರೆಸುವ ಸಾಧ್ಯತೆಯೂ ಇದೆ. ಎರಡೂ ಕಡೆಯ ಆರೋಪಗಳ ಕುರಿತು ಪೊಲೀಸರು ಮುಂದಿನ ಹಂತದಲ್ಲಿ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ತನಿಖೆಯ ಬಳಿಕ ತಿಳಿದುಬರಬೇಕಿದೆ.