ಮುಂಬೈ: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ 18ನೇ ವಾರ್ಷಿಕೋತ್ಸವದ ದಿನವಾದ ಗುರುವಾರ (ನವೆಂಬರ್ 26, 2026) ನಗರದ ಪ್ರಮುಖ ಸ್ಥಳಗಳು ಮತ್ತು ಗಣ್ಯರನ್ನು ಗುರಿಯಾಗಿಸಿಕೊಂಡು ಬೆದರಿಕೆ ಇಮೇಲ್ ಬಂದಿರುವುದು ಪೊಲೀಸ್ ಇಲಾಖೆ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ತೀವ್ರ ಆತಂಕ ಮೂಡಿಸಿದೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ 'ಜಲ್ಸಾ' ನಿವಾಸ, ಮುಂಬೈ ಮೇಯರ್ ರಿತು ತಾವ್ಡೆ ಅವರ ಕಚೇರಿ, ಬೃಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆಯುಕ್ತ ಅಶ್ವಿನಿ ಭಿಡೆ, ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಚೇರಿ ನಡೆಯುವ ಸ್ಥಳ ಹಾಗೂ ಮೆಟ್ರೋ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ಬಂದಿದೆ.
ಬೆದರಿಕೆ ಸಂದೇಶದಲ್ಲಿ ಏನಿತ್ತು?
ಮುಂಬೈ ಮೇಯರ್ ರಿತು ತಾವ್ಡೆ ಮತ್ತು ಬಿಎಂಸಿ ಆಯುಕ್ತ ಅಶ್ವಿನಿ ಭಿಡೆ ಅವರಿಗೆ ಬಂದ ಬೆದರಿಕೆ ಇಮೇಲ್‌ನಲ್ಲಿ ಪ್ರತ್ಯೇಕತಾವಾದಿ ಘೋಷಣೆಗಳು ಹಾಗೂ ಖಲಿಸ್ತಾನಕ್ಕೆ ಸಂಬಂಧಿಸಿದ ಉಲ್ಲೇಖಗಳಿದ್ದವು ಎಂದು ಮೂಲಗಳು ತಿಳಿಸಿವೆ. ಮೇಯರ್ ಕಚೇರಿಯಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಸುವುದರ ಜೊತೆಗೆ, ಮಹಾಲಕ್ಷ್ಮಿ ರೇಸ್ ಕೋರ್ಸ್, ಜುಹುವಿನಲ್ಲಿರುವ ಅಮಿತಾಭ್ ಬಚ್ಚನ್ ಅವರ 'ಜಲ್ಸಾ' ಬಂಗಲೆ, ಸೈನ್ಸ್ ಮತ್ತು ಆಚಾರ್ಯ ಮೆಟ್ರೋ ನಿಲ್ದಾಣಗಳಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಇರಿಸಲಾಗಿದೆ ಎಂದು ಸಂದೇಶದಲ್ಲಿ ಹೇಳಿಕೊಳ್ಳಲಾಗಿತ್ತು.
ಗ್ರೆನೇಡ್ ದಾಳಿ ನಡೆಸುವ ಬೆದರಿಕೆ
ಅಲ್ಲದೆ, ಗಾಯಕ ದಿಲ್ಜಿತ್ ದೋಸಾಂಜ್ ಅವರ ಮುಂಬೈ ಸಂಗೀತ ಕಾರ್ಯಕ್ರಮಕ್ಕೆ ಅವಕಾಶ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮುಂದಿನ 30 ದಿನಗಳ ಕಾಲ ನಗರದಲ್ಲಿ ಗ್ರೆನೇಡ್ ದಾಳಿ ನಡೆಸುವುದಾಗಿಯೂ, ನವೆಂಬರ್ 27 ರಿಂದ ಡಿಸೆಂಬರ್ 31ರ ಅವಧಿಯಲ್ಲಿ ಮೆಟ್ರೋ ನಿಲ್ದಾಣಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಾಗಿಯೂ ಇಮೇಲ್‌ನಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ. ಪ್ರತ್ಯೇಕತಾವಾದಿ ಸಂಘಟನೆಗಳ ಹೆಸರನ್ನು ಉಲ್ಲೇಖಿಸಿ ಈ ಬೆದರಿಕೆ ಕಳುಹಿಸಲಾಗಿದ್ದರೂ, ಕಳುಹಿಸಿದವರ ನಿಜವಾದ ಗುರುತು ಮತ್ತು ಹೇಳಿಕೆಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪೊಲೀಸ್ ಕಾರ್ಯಾಚರಣೆ ಮತ್ತು ತಪಾಸಣೆಬೆದರಿಕೆ ಇಮೇಲ್ ಮಾಹಿತಿ ಲಭ್ಯವಾದ ತಕ್ಷಣ ಮುಂಬೈ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ (ಬಿಡಿಡಿಎಸ್) ಸಿಬ್ಬಂದಿ ಸಂಬಂಧಪಟ್ಟ ಸ್ಥಳಗಳಿಗೆ ಧಾವಿಸಿ ವ್ಯಾಪಕ ಶೋಧ ಮತ್ತು ತಪಾಸಣೆ ನಡೆಸಿದರು. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಯಿತು. ತಪಾಸಣೆಯ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದು, ಇದರಿಂದ ಸ್ಥಳೀಯರು ಹಾಗೂ ಆಡಳಿತ ವರ್ಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಬೆದರಿಕೆ ಇಮೇಲ್ ಸಂಬಂಧ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸರಣಿ ಬೆದರಿಕೆಗಳು ಮತ್ತು ಆತಂಕಇತ್ತೀಚಿನ ವಾರಗಳಲ್ಲಿ ಮುಂಬೈನ ಪ್ರಮುಖ ತಾಣಗಳು ಮತ್ತು ಗಣ್ಯರ ನಿವಾಸಗಳನ್ನು ಗುರಿಯಾಗಿಸಿಕೊಂಡು ಇಂತಹ ಬೆದರಿಕೆ ಸಂದೇಶಗಳು ಬರುತ್ತಿರುವುದು ಆತಂಕ ಹೆಚ್ಚಿಸಿದೆ. ಮೇಯರ್ ಕಚೇರಿ ಮತ್ತು ಅಮಿತಾಭ್ ಬಚ್ಚನ್ ಅವರ ನಿವಾಸಕ್ಕೆ ಈ ಹಿಂದೆಯೂ ಇದೇ ರೀತಿಯ ಬೆದರಿಕೆ ಇಮೇಲ್‌ಗಳು ಬಂದಿದ್ದವು.
ಕಳೆದ ಕೆಲವು ದಿನಗಳ ಹಿಂದೆ ನಟ ಟೈಗರ್ ಶ್ರಾಫ್ ಅವರ ಮೇಲೆ ಸಾರ್ವಜನಿಕವಾಗಿ ಗುಂಡಿನ ದಾಳಿ ನಡೆದ ಘಟನೆ ಹಾಗೂ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ದಾಳಿ ಪ್ರಕರಣಗಳ ಹಿನ್ನೆಲೆಯಲ್ಲಿ, ಇದೀಗ ಅಮಿತಾಭ್ ಬಚ್ಚನ್ ಅವರ ನಿವಾಸಕ್ಕೂ ಬೆದರಿಕೆ ಬಂದಿರುವುದು ಬಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಬೆದರಿಕೆ ಇಮೇಲ್‌ನ ಮೂಲ ಪತ್ತೆಹಚ್ಚಲು ಸೈಬರ್ ಅಪರಾಧ ವಿಭಾಗದ ಪೊಲೀಸರು ತಾಂತ್ರಿಕ ತನಿಖೆಯನ್ನು ಚುರುಕುಗೊಳಿಸಿದ್ದು, ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.