45 ನಿಮಿಷಕ್ಕೆ ಹಣ ಪಡೆದು 12 ಮಿನಿಟ್ ಡ್ಯಾನ್ಸ್ ..! "ಕಚ್ಚಾ ಬದಾಮ್" ಗರ್ಲ್ ಅಂಜಲಿ ವಿರುದ್ಧ ದೂರು
ಕಾನ್ಪುರದಲ್ಲಿ ನಡೆದ 'ನಾಗಡಾ ನೈಟ್ಸ್' ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಅಂಜಲಿ ಅರೋರಾ ಕೇವಲ 12 ನಿಮಿಷಗಳ ಕಾಲ ನೃತ್ಯ ಮಾಡಿ, ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರನಡೆದ ಘಟನೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.. ಈ ಕುರಿತು ನಟಿಗೆ ನೋಟೀಸ್ ನೀಡಲಾಗಿದೆ..
Anjali Arora legal notice : ಕಾನ್ಪುರದಲ್ಲಿ ಇತ್ತೀಚೆಗೆ ನಡೆದ 'ನಾಗಡಾ ನೈಟ್ಸ್' (Nagada Nights) ಕಾರ್ಯಕ್ರಮ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ಆಯೋಜಕರು ಸೋಶಿಯಲ್ ಮೀಡಿಯಾ ಸ್ಟಾರ್, ಕಚ್ಚಾ ಬದಾಮ್ ಗರ್ಲ್ ಖ್ಯಾತೀಯ, ನಟಿ ಅಂಜಲಿ ಅರೋರಾ ಸಂಕಷ್ಟ ಎದುರಾಗಿದೆ. ಅಸಲಿಗೆ ಆಗಿದ್ದೇನು..? ಸಂಪೂರ್ಣ ಮಾಹಿತಿ ಇಲ್ಲಿದೆ..
ಅಸಲಿಗೆ ಅಲ್ಲಿ ಆಗಿದ್ದೇನು?
ವರದಿಗಳ ಪ್ರಕಾರ, ಅಕ್ಟೋಬರ್ 15ರಂದು ಕಾನ್ಪುರದ ಲಜಪತ್ ಭವನ್‌ನಲ್ಲಿ 'ನಾಗಡಾ ನೈಟ್ಸ್' ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಶೋರ್ ಬ್ಯಾಂಡ್‌ನ ನಿರ್ದೇಶಕ ಅಮನ್ ನಿಗಮ್, ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ನಿರ್ದೇಶಕ ಆಶಿಶ್ ಕುಮಾರ್ ಹಾಗೂ ಈವೆಂಟ್ ಪ್ಲಾನರ್ ಅನುಭವ್ ರಾಜ್ ಈ ಕಾರ್ಯಕ್ರಮದ ರೂವಾರಿಗಳು. ಜನರನ್ನು ರಂಜಿಸಲು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫಾಲೋವರ್ಸ್ ಹೊಂದಿರುವ ಅಂಜಲಿ ಅರೋರಾ ಅವರನ್ನು ಆಹ್ವಾನಿಸಲಾಗಿತ್ತು. ಮಾತುಕತೆಯಂತೆ ಅಂಜಲಿ ಅವರು ಒಟ್ಟು 45 ನಿಮಿಷಗಳ ಕಾಲ ವೇದಿಕೆ ಮೇಲೆ ನಿರಂತರವಾಗಿ ಡ್ಯಾನ್ಸ್ ಮಾಡಬೇಕಿತ್ತು. ಆದರೆ, ಅವರು ಕೇವಲ 12 ನಿಮಿಷಗಳ ಕಾಲ ಮಾತ್ರ ನೃತ್ಯ ಮಾಡಿ, ಅರ್ಧದಲ್ಲೇ ಕಾರ್ಯಕ್ರಮವನ್ನು ಬಿಟ್ಟು ತೆರಳಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹಣದ ವಿಚಾರವಾಗಿ ನಡೆದ ಜಟಾಪಟಿ
ಆಯೋಜಕರು ಹಾಗೂ ಅಂಜಲಿ ಅವರ ನಡುವೆ ಸಂಭಾವನೆ ವಿಚಾರವಾಗಿ ಮೊದಲೇ ಮಾತುಕತೆಯಾಗಿತ್ತು. ಒಟ್ಟು 3 ಲಕ್ಷ ರೂಪಾಯಿಗಳ ಒಪ್ಪಂದದಂತೆ, ಮುಂಚಿತವಾಗಿಯೇ 2.75 ಲಕ್ಷ ರೂಪಾಯಿಗಳನ್ನು ಅಂಜಲಿ ಅವರಿಗೆ ನೀಡಲಾಗಿತ್ತು. ಇದರೊಂದಿಗೆ ಅವರ ವಿಮಾನ ಪ್ರಯಾಣ, ಐಷರಾಮಿ ವಸತಿ ಹಾಗೂ ಊಟದ ಖರ್ಚನ್ನು ಆಯೋಜಕರೇ ಭರಿಸಿದ್ದರು. ಅಕ್ಟೋಬರ್ 15ರಂದು ಕಾನ್ಪುರ ವಿಮಾನ ನಿಲ್ದಾಣಕ್ಕೆ ಬರುವ ಮುನ್ನವೇ 75 ಸಾವಿರ ರೂಪಾಯಿಗಳನ್ನು ಅಂಜಲಿ ಪಡೆದಿದ್ದರು. ವಿಮಾನ ನಿಳ್ದಾಣಕ್ಕೆ ಬಂದಿಳಿದ ತಕ್ಷಣವೇ ಬಾಕಿ ಉಳಿದ ಹಣವನ್ನೂ ಸಂಪೂರ್ಣವಾಗಿ ಜಮೆ ಮಾಡುವಂತೆ ಅವರು ಪಟ್ಟು ಹಿಡಿದರು. ಆಯೋಜಕರು ಒಪ್ಪಿದಂತೆ ಸಂಪೂರ್ಣ ಹಣವನ್ನು ಪಾವತಿಸಿದ ಬಳಿಕವೇ ಅವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ್ದರು ಎಂದು ಸಂಘಟಕರು ತಿಳಿಸಿದ್ದಾರೆ.
ವೇದಿಕೆಯಲ್ಲಿ ಅಸಮಾಧಾನ ಮತ್ತು ಹೊರನಡೆದ ಅಂಜಲಿ
ರಾತ್ರಿ 9:00 ಗಂಟೆಯಿಂದ 9:45ರವರೆಗೆ ಅಂಜಲಿ ಅವರ ಪ್ರದರ್ಶನಕ್ಕಾಗಿ ಸಮಯ ನಿಗದಿಪಡಿಸಲಾಗಿತ್ತು. ಆದರೆ ಅವರು ತಡವಾಗಿ ಅಂದರೆ ರಾತ್ರಿ 9:45ರ ಸುಮಾರಿಗೆ ವೇದಿಕೆಗೆ ಬಂದರು. ವೇದಿಕೆಗೆ ಬಂದ ಕೆಲವೇ ನಿಮಿಷಗಳಲ್ಲಿ (ಸುಮಾರು 12 ನಿಮಿಷಗಳ ಬಳಿಕ) ಆಯೋಜಕರೊಂದಿಗೆ ಯಾವುದೋ ವಿಚಾರಕ್ಕೆ ವಾಗ್ವಾದ ನಡೆಸಿ, ಪ್ರದರ್ಶನವನ್ನು ಮೊಟಕುಗೊಳಿಸಿ ಅಲ್ಲಿಂದ ಹೊರಟುಹೋದರು ಎಂದು ಆಯೋಜಕರು ಅಳಲು ತೋಡಿಕೊಂಡಿದ್ದಾರೆ.
ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರಿದ್ದರು. ಅಂಜಲಿ ಅವರ ಈ ವರ್ತನೆಯಿಂದ ಪ್ರೇಕ್ಷಕರಿಗೆ ತೀವ್ರ ನಿರಾಶೆಯಾಗಿದ್ದು ಮಾತ್ರವಲ್ಲದೆ, ತಮಗೆ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ ಎಂದು ಆಯೋಜಕರು ದೂರಿದ್ದಾರೆ. ಕಾರ್ಯಕ್ರಮ ಅರ್ಧಕ್ಕೆ ನಿಂತಿದ್ದರಿಂದ ತಮಗೆ ಸುಮಾರು 20 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಸ್ವರೂಪ್ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಕರು ಅಧಿಕೃತವಾಗಿ ದೂರು ದಾಖಲಿಸಿದ್ದು, ಅಂಜಲಿ ಅರೋರಾ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ಕಾರ್ಯಕ್ರಮಕ್ಕಾಗಿ ತಾವು ಮಾಡಿರುವ ಒಟ್ಟು ವೆಚ್ಚ ಹಾಗೂ ತಮಗಾದ ನಷ್ಟವನ್ನು ಸೇರಿಸಿ ಒಟ್ಟು 1.20 ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿ ವಕೀಲರ ಮೂಲಕ ಕಾನೂನು ನೋಟಿಸ್ ಕಳುಹಿಸಲಾಗಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವು ದೊಡ್ಡ ಮಟ್ಟದಲ್ಲಿ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.