ಬೆಳಿಗ್ಗೆ ಚಹಾ ಕುಡಿಯಬೇಕೋ ಅಥವಾ ಕಾಫಿನೋ? ಆಹಾರ ತಜ್ಞರ ಸಲಹೆ ಕೇಳಿದ್ರೆ ಶಾಕ್ ಆಗ್ತೀರಾ
ನಮ್ಮ ದೇಶದಲ್ಲಿ ಕಾಫಿ-ಟೀ ಕುಡಿಯದೆ ಅದೆಷ್ಟೋ ಜನರಿಗೆ ದಿನವೇ ಶುರುವಾಗುವುದಿಲ್ಲ. ದೈನಂದಿನ ಬದುಕಿನ ಭಾಗವಾಗಿರುವ ಈ ಎರಡು ಪಾನೀಯಗಳಲ್ಲಿ ಆರೋಗ್ಯಕ್ಕೆ ಯಾವುದು ಹೆಚ್ಚು ಒಳ್ಳೆಯದು ಎಂಬ ಚರ್ಚೆ ಬಹಳ ದಿನಗಳಿಂದ ನಡೆಯುತ್ತಲೇ ಇದೆ.. ಹಾಗಿದ್ರೆ ಈ ವಿಚಾರವಾಗಿ ತಜ್ಞರು ಹೇಳೋದು ಏನು..? ಬನ್ನಿ ಸಂಪೂರ್ಣವಾಗಿ ತಿಳಿಯೋಣ..
Health tips : ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಚಹಾ ಅಥವಾ ಘಮಘಮಿಸುವ ಕಾಫಿ ಕುಡಿಯದೆ ಹಲವರಿಗೆ ದಿನವೇ ಶುರುವಾಗಲ್ಲ. ಕೆಲವರಿಗೆ ಚಹಾ ಇಷ್ಟವಾದರೆ, ಇನ್ನು ಕೆಲವರಿಗೆ ಕಾಫಿ ಕುಡಿದರೇನೇ ಸ್ವಲ್ಪ ಚುರುಕು ಅನಿಸುತ್ತದೆ. ಹೀಗೆ ದಿನನಿತ್ಯ ಕುಡಿಯುವ ಈ ಎರಡು ಪಾನೀಯಗಳಲ್ಲಿ ಯಾವುದು ಆರೋಗ್ಯಕ್ಕೆ ಹೆಚ್ಚು ಒಳ್ಳೆಯದು ಅನ್ನೋ ಚರ್ಚೆ ತುಂಬಾ ದಿನಗಳಿಂದ ಇದೆ. ಹಾಗಿದ್ರೆ ಈ ಕುರಿತು ತಜ್ಞರು ಏನ್ ಹೇಳ್ತಾರೆ ಬನ್ನಿ ನೋಡೋಣ..
ಮೊದಲು ಕ್ಯಾಲೊರಿ ವಿಚಾರಕ್ಕೆ ಬರುವುದಾದರೆ, ಹಾಲು ಮತ್ತು ಸಕ್ಕರೆ ಹಾಕದೆ ಕುಡಿಯುವ ಬ್ಲ್ಯಾಕ್ ಟೀ ಅಥವಾ ಬ್ಲ್ಯಾಕ್ ಕಾಫಿಯಲ್ಲಿ ಕ್ಯಾಲೊರಿ ತುಂಬಾ ಕಡಿಮೆ ಇರುತ್ತದೆ. ಆದರೆ ನಾವು ಮಾಮೂಲಿಯಾಗಿ ಕುಡಿಯುವ ಹಾಲು-ಸಕ್ಕರೆ ಬೆರೆಸಿದ ಚಹಾ ಮತ್ತು ಕಾಫಿಯಲ್ಲಿ ಕ್ಯಾಲೊರಿ ಪ್ರಮಾಣ ನಾವು ಹಾಕುವ ಹಾಲು ಮತ್ತು ಸಕ್ಕರೆಯ ಮೇಲೆ ಅವಲಂಬಿತವಾಗಿರುತ್ತದೆ. ಆರೋಗ್ಯದ ಕಡೆ ಗಮನ ಕೊಡುವವರು ಚಹಾ ಅಥವಾ ಕಾಫಿಯಲ್ಲಿ ಸಕ್ಕರೆ ಕಡಿಮೆ ಬಳಸುವುದು ಒಳ್ಳೆಯದು ಎಂದು ಅವರು ಸಲಹೆ ನೀಡುತ್ತಾರೆ. ಇನ್ನು ಕೆಫೀನ್ ವಿಚಾರ ನೋಡುವುದಾದರೆ, ಚಹಾಕ್ಕಿಂತ ಕಾಫಿಯಲ್ಲಿ ಕೆಫೀನ್ ಅಂಶ ಹೆಚ್ಚಿರುತ್ತದೆ. ಒಂದು ಕಪ್ ಚಹಾದಲ್ಲಿ ಸುಮಾರು 30 ಮಿಲಿಗ್ರಾಂ ಕೆಫೀನ್ ಇದ್ದರೆ, ಕಾಫಿಯಲ್ಲಿ 80 ರಿಂದ 100 ಮಿಲಿಗ್ರಾಂ ವರೆಗೆ ಇರಬಹುದು. ಆದರೆ ತಯಾರಿಸುವ ರೀತಿ ಮತ್ತು ಕಪ್ ದೊಡ್ಡದಾಗಿದೆಯೋ ಚಿಕ್ಕದಾಗಿದೆಯೋ ಎಂಬುದರ ಮೇಲೆ ಇದು ಸ್ವಲ್ಪ ಹೆಚ್ಚು ಕಡಿಮೆ ಆಗಬಹುದು.
ಚಹಾ ಮತ್ತು ಕಾಫಿ ಎರಡರಲ್ಲೂ ಉತ್ಕರ್ಷಣ ನಿರೋಧಕಗಳು (ಆಂಟಿಆಕ್ಸಿಡೆಂಟ್‌ಗಳು) ಇರುತ್ತವೆ ಎಂಬುದು ಗಮನಾರ್ಹ ವಿಷಯ. ಕಾಫಿಯಲ್ಲಿ ಕ್ಲೋರೊಜೆನಿಕ್ ಆಮ್ಲ ಎಂಬ ಅಂಶ ಇದ್ದರೆ, ಚಹಾದಲ್ಲಿ ಕ್ಯಾಟೆಚಿನ್‌ಗಳಂತಹ ನೈಸರ್ಗಿಕ ಅಂಶಗಳು ಇರುತ್ತವೆ. ಇವು ನಮ್ಮ ದೇಹದ ಜೀವಕೋಶಗಳಿಗೆ ಆಗುವ ಒತ್ತಡವನ್ನು ತಡೆಯಲು ಸಹಾಯ ಮಾಡುತ್ತವೆ. ಕೆಲವು ಅಧ್ಯಯನಗಳ ಪ್ರಕಾರ, ಇವು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಆದರೂ, ಇವನ್ನೇ ಔಷಧಿ ಎಂದುಕೊಂಡು ಅತಿಯಾಗಿ ಕುಡಿಯಬಾರದು ಎಂಬುದನ್ನು ಮರೆಯಬಾರದು.
ಎಷ್ಟೇ ಒಳ್ಳೆಯ ಅಂಶಗಳಿದ್ದರೂ, ಚಹಾ ಅಥವಾ ಕಾಫಿಯನ್ನು ಅತಿಯಾಗಿ ಕುಡಿದರೆ ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ. ಇವುಗಳಲ್ಲಿರುವ ಟ್ಯಾನಿನ್ ಮತ್ತು ಪಾಲಿಫಿನಾಲ್‌ಗಳಂತಹ ಅಂಶಗಳು ಆಹಾರದಲ್ಲಿರುವ ಕಬ್ಬಿಣದ ಅಂಶವನ್ನು ದೇಹ ಹೀರಿಕೊಳ್ಳುವುದನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತವೆ. ಅದರಲ್ಲೂ ಸಸ್ಯಾಹಾರದಲ್ಲಿರುವ ಕಬ್ಬಿಣದ ಅಂಶ ಹೀರಿಕೊಳ್ಳುವುದಕ್ಕೆ ಇದು ಅಡ್ಡಿಯಾಗಬಹುದು. ಹಾಗೆಯೇ ಕಾಫಿಯಲ್ಲಿ ಕೆಫೀನ್ ಜಾಸ್ತಿ ಇರುವುದರಿಂದ, ಹೆಚ್ಚು ಕುಡಿಯುವವರಿಗೆ ನಿದ್ರೆ ಬಾರದಿರುವುದು, ಆತಂಕ ಅಥವಾ ಹೃದಯ ಬಡಿತ ವೇಗವಾಗುವಂತಹ ತೊಂದರೆಗಳು ಕಾಣಿಸಬಹುದು. ಆದ್ದರಿಂದ ಊಟದ ಜೊತೆಗೇ ಚಹಾ ಅಥವಾ ಕಾಫಿ ಕುಡಿಯುವ ಅಭ್ಯಾಸ ಇದ್ದರೆ ಬಿಡುವುದು ಒಳ್ಳೆಯದು. ಅದರಲ್ಲೂ ಕಬ್ಬಿಣದ ಕೊರತೆ ಇರುವವರು ಊಟ ಮತ್ತು ಚಹಾ-ಕಾಫಿ ನಡುವೆ ಸಾಕಷ್ಟು ಸಮಯದ ಅಂತರ ಇಟ್ಟುಕೊಳ್ಳಬೇಕು ಎನ್ನುತ್ತಾರೆ ತಜ್ಞರು.
ಹಾಗಾದರೆ ಕೊನೆಗೆ ಯಾವುದು ಬೆಸ್ಟ್? ಚಹಾನಾ ಅಥವಾ ಕಾಫಿನಾ? ಇವೆರಡರಲ್ಲಿ ಒಂದೇ ಉತ್ತಮ ಎಂದು ಹೇಳುವುದು ಸರಿಯಲ್ಲ. ನಮ್ಮ ದೇಹಕ್ಕೆ ಯಾವುದು ಒಗ್ಗುತ್ತದೆ, ಕೆಫೀನ್ ಎಷ್ಟು ತಡೆದುಕೊಳ್ಳುತ್ತದೆ ಮತ್ತು ನಮ್ಮ ಜೀವನಶೈಲಿ ಹೇಗಿದೆ ಎಂಬುದರ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬೇಕು. ದಿನಕ್ಕೆ ಒಂದರಿಂದ ಎರಡು ಕಪ್‌ಗೆ ಸೀಮಿತವಾಗಿರುವುದು ಒಳ್ಳೆಯದು. ರಾತ್ರಿ ವೇಳೆ ಕೆಫೀನ್ ಕಡಿಮೆ ಮಾಡಿದರೆ ನಿದ್ರೆ ಚೆನ್ನಾಗಿ ಆಗುತ್ತದೆ. ಸಕ್ಕರೆ ಪ್ರಮಾಣವನ್ನೂ ಕಡಿಮೆ ಇಟ್ಟುಕೊಳ್ಳಬೇಕು. ಒಟ್ಟಿನಲ್ಲಿ ಯಾವುದೇ ಪಾನೀಯವಾಗಲಿ ಮಿತವಾಗಿ ಕುಡಿಯುವುದೇ ಆರೋಗ್ಯಕ್ಕೆ ಕ್ಷೇಮ ಎಂದು ರವಿರಾಜು ಹೇಳಿದ್ದಾರೆ.
(ಗಮನಿಸಿ: ಈ ವರದಿಯನ್ನು ಆಹಾರ ತಜ್ಞರು ನೀಡಿದ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ದೃಢೀಕರಿಸುವುದಿಲ್ಲ.)