SOCIAL MEDIA

Newsletter

PARTNER SITES
Select Language Select State

ಎಲೆಕ್ಟ್ರಿಕ್ ಅವತಾರದಲ್ಲಿ ಮಾರುತಿ ಇಗ್ನಿಸ್ ಕಾರು! ಒಂದೇ ಚಾರ್ಜ್‌ಗೆ 310 ಕಿ.ಮೀ., 25 ನಿಮಿಷದಲ್ಲಿ ಶೇ.80 ಚಾರ್ಜ್!

ಹೊಸ ಇಗ್ನಿಸ್ ಎಲೆಕ್ಟ್ರಿಕ್ ಕಾರಿನಲ್ಲಿ 26kWh ಸಾಮರ್ಥ್ಯದ ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿಗೆ ಹೊಂದಿಕೊಂಡಂತೆ ಎಲೆಕ್ಟ್ರಿಕ್ ಮೋಟಾರ್ ಕಾರ್ಯನಿರ್ವಹಿಸುತ್ತದೆ. ಮೋಟಾರ್ ಸುಮಾರು 90hp ಪವರ್ ಮತ್ತು 133Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟು-ವೀಲ್ ಡ್ರೈವ್ ವ್ಯವಸ್ಥೆಯನ್ನೂ ಈ ಕಾರಿನಲ್ಲಿ ನೀಡಲಾಗಿದೆ. ಬ್ಯಾಟರಿ ಸಾಮರ್ಥ್ಯವನ್ನ ಆಧರಿಸಿ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 310 ಕಿಲೋಮೀಟರ್ ಸಂಚರಿಸಬಹುದು.

Written By Puttaraj K Alur
Published: Nov 29, 2026, 09:34 IST | Updated: Nov 29, 2026, 09:57 IST
Image Credit: Suzuki Ignis EV
Join

Maruti Suzuki Electric Car: ಸಣ್ಣ ಕಾರುಗಳ ವಿಭಾಗದಲ್ಲಿ ತನ್ನದೇ ಆದ ಗುರುತನ್ನ ಮೂಡಿಸಿದ್ದ ಮಾರುತಿ ಸುಜುಕಿ ಇಗ್ನಿಸ್ ಇದೀಗ ಎಲೆಕ್ಟ್ರಿಕ್ ಅವತಾರದಲ್ಲಿ ಗಮನ ಸೆಳೆಯಲು ಸಜ್ಜಾಗಿದೆ. ಪೆಟ್ರೋಲ್ ಕಾರಿನ ರೂಪದಲ್ಲಿ ಪರಿಚಿತವಾಗಿದ್ದ ಇಗ್ನಿಸ್, ಇದೀಗ ಸಂಪೂರ್ಣ ವಿದ್ಯುತ್ ಚಾಲಿತ ಕಾರಿನ ರೂಪದಲ್ಲಿ ಅನಾವರಣಗೊಂಡಿದೆ. ಹೊಸ ಇಗ್ನಿಸ್ ಎಲೆಕ್ಟ್ರಿಕ್ ಕಾರಿನ ವಿಶೇಷವೆಂದರೆ, ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 310 ಕಿಲೋಮೀಟರ್ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುವ ಸಾಧ್ಯತೆಯಿದೆ. ಅಷ್ಟೇ ಅಲ್ಲ ವೇಗದ ಚಾರ್ಜಿಂಗ್ ವ್ಯವಸ್ಥೆಯ ಮೂಲಕ ಕೇವಲ 25 ನಿಮಿಷಗಳಲ್ಲಿ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಬಹುದು ಎಂದು ವರದಿಯಾಗಿದೆ.

26kWh ಬ್ಯಾಟರಿ ಪ್ಯಾಕ್ ಹೊಂದಿರುವ ಕಾರು

ಹೊಸ ಇಗ್ನಿಸ್ ಎಲೆಕ್ಟ್ರಿಕ್ ಕಾರಿನಲ್ಲಿ 26kWh ಸಾಮರ್ಥ್ಯದ ಲಿಥಿಯಂ ಐರನ್ ಫಾಸ್ಫೇಟ್ (LFP) ಬ್ಯಾಟರಿ ಅಳವಡಿಸಲಾಗಿದೆ. ಈ ಬ್ಯಾಟರಿಗೆ ಹೊಂದಿಕೊಂಡಂತೆ ಎಲೆಕ್ಟ್ರಿಕ್ ಮೋಟಾರ್ ಕಾರ್ಯನಿರ್ವಹಿಸುತ್ತದೆ. ಮೋಟಾರ್ ಸುಮಾರು 90hp ಪವರ್ ಮತ್ತು 133Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಟು-ವೀಲ್ ಡ್ರೈವ್ ವ್ಯವಸ್ಥೆಯನ್ನೂ ಈ ಕಾರಿನಲ್ಲಿ ನೀಡಲಾಗಿದೆ. ಬ್ಯಾಟರಿ ಸಾಮರ್ಥ್ಯವನ್ನ ಆಧರಿಸಿ ಒಂದು ಬಾರಿ ಚಾರ್ಜ್ ಮಾಡಿದರೆ ಸುಮಾರು 310 ಕಿಲೋಮೀಟರ್ ಸಂಚರಿಸಬಹುದು ಎಂದು ಅಂದಾಜಿಸಲಾಗಿದೆ. ಆದರೆ ಕಾರಿನ ಅಧಿಕೃತ ಮೈಲೇಜ್ ಅಂಕಿ-ಅಂಶವನ್ನ ಇನ್ನೂ ಬಹಿರಂಗಪಡಿಸಿಲ್ಲ ಎಂಬುದನ್ನ ಗಮನಿಸಬೇಕು.

25 ನಿಮಿಷದಲ್ಲಿ ಶೇ.80ರಷ್ಟು ಚಾರ್ಜ್!

ಈ ಎಲೆಕ್ಟ್ರಿಕ್ ಕಾರಿನ ಪ್ರಮುಖ ಆಕರ್ಷಣೆ ವೇಗದ ಚಾರ್ಜಿಂಗ್ ವ್ಯವಸ್ಥೆ. ವರದಿಯ ಪ್ರಕಾರ, ಕೇವಲ 25 ನಿಮಿಷಗಳಲ್ಲಿ ಬ್ಯಾಟರಿಯನ್ನ ಶೂನ್ಯದಿಂದ ಶೇ.80ರಷ್ಟು ಚಾರ್ಜ್ ಮಾಡಬಹುದಾಗಿದೆ. ಇದರಿಂದ ದೀರ್ಘ ಪ್ರಯಾಣದ ನಡುವೆ ಚಾರ್ಜಿಂಗ್‌ಗಾಗಿ ಹೆಚ್ಚು ಸಮಯ ಕಾಯುವ ಅಗತ್ಯ ಕಡಿಮೆಯಾಗುವ ನಿರೀಕ್ಷೆಯಿದೆ. ಮೋಟಾರ್, ಇನ್ವರ್ಟರ್ ಮತ್ತು ರಿಡಕ್ಷನ್ ಗೇರ್‌ಗಳನ್ನ ಒಂದೇ ಕಾಂಪ್ಯಾಕ್ಟ್ ಘಟಕದಲ್ಲಿ ಅಳವಡಿಸಿರುವುದು ಮತ್ತೊಂದು ವಿಶೇಷ. ಈ ವ್ಯವಸ್ಥೆಯು ಕಾರಿನ ಎಲೆಕ್ಟ್ರಿಕ್ ಪವರ್‌ಟ್ರೇನ್ ವಿನ್ಯಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಕಾಂಪ್ಯಾಕ್ಟ್ ವಿನ್ಯಾಸ, ನಾಲ್ವರಿಗೆ ಪ್ರಯಾಣದ ವ್ಯವಸ್ಥೆ

ಹೊಸ ಇಗ್ನಿಸ್ ಇವಿ ಕಾರು HEARTECT-e ಪ್ಲಾಟ್‌ಫಾರ್ಮ್ ಆಧಾರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಕಾರಿನ ಉದ್ದ 3,570 ಮಿ.ಮೀ., ಅಗಲ 1,565 ಮಿ.ಮೀ. ಮತ್ತು ಎತ್ತರ 1,635 ಮಿ.ಮೀ. ಆಗಿದೆ. ಇದರ ವೀಲ್‌ಬೇಸ್ 2,460 ಮಿ.ಮೀ. ಹಾಗೂ ಗ್ರೌಂಡ್ ಕ್ಲಿಯರೆನ್ಸ್ 150 ಮಿ.ಮೀ. ಇದೆ. ಈ ಕಾರಿನಲ್ಲಿ ನಾಲ್ವರು ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಂಪ್ಯಾಕ್ಟ್ ಗಾತ್ರದೊಂದಿಗೆ ನಗರ ಪ್ರದೇಶಗಳಲ್ಲಿ ಸುಲಭವಾಗಿ ಸಂಚರಿಸಲು ಅನುಕೂಲವಾಗುವ ರೀತಿಯಲ್ಲಿ ಕಾರನ್ನ ವಿನ್ಯಾಸಗೊಳಿಸಲಾಗಿದೆ.

ಆರಾಮದಾಯಕ ಪ್ರಯಾಣಕ್ಕೆ ಹಲವು ಸೌಲಭ್ಯಗಳು

ಕಾರಿನಲ್ಲಿ ಸಸ್ಪೆನ್ಷನ್ ವ್ಯವಸ್ಥೆ, ರೀಜೆನರೇಟಿವ್-ಹೈಡ್ರಾಲಿಕ್ ಬ್ರೇಕಿಂಗ್ ವ್ಯವಸ್ಥೆ ಹಾಗೂ ಎಲೆಕ್ಟ್ರಿಕ್ ಬ್ರೇಕ್ ಬೂಸ್ಟರ್ ನೀಡಲಾಗಿದೆ. ಸುಲಭವಾಗಿ ವಾಹನವನ್ನ ನಿಯಂತ್ರಿಸಲು ನೆರವಾಗುವ ಈ ವ್ಯವಸ್ಥೆಗಳು ಚಾಲನಾ ಅನುಭವವನ್ನ ಉತ್ತಮಗೊಳಿಸುವ ಉದ್ದೇಶ ಹೊಂದಿವೆ. ಸುಲಭವಾಗಿ ಕಾರ್ಯನಿರ್ವಹಿಸುವ ಪೆಡಲ್ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಹೊಸ ವಿನ್ಯಾಸದ ಇಂಟೀರಿಯರ್ ಕಾರಿನ ಮತ್ತೊಂದು ಆಕರ್ಷಣೆಯಾಗಿದೆ. ಕಾಂಪ್ಯಾಕ್ಟ್ ಗಾತ್ರದ ಕಾರಿನಲ್ಲಿಯೇ ಪ್ರಯಾಣಿಕರಿಗೆ ಅಗತ್ಯವಾದ ಸ್ಥಳಾವಕಾಶ ಮತ್ತು ಅನುಕೂಲಗಳನ್ನ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ.

ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ?

ಹೊಸ ಇಗ್ನಿಸ್ ಎಲೆಕ್ಟ್ರಿಕ್ ಕಾರು 2027ರ ಬೇಸಿಗೆಯಲ್ಲಿ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದರೆ ಭಾರತದಲ್ಲಿ ಈ ಕಾರನ್ನ ಬಿಡುಗಡೆ ಮಾಡುವ ಕುರಿತು ಸುಜುಕಿ ಕಂಪನಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಇತ್ತ ಭಾರತದಲ್ಲಿ ಪೆಟ್ರೋಲ್ ಚಾಲಿತ ಇಗ್ನಿಸ್ ಕಾರನ್ನ ಮಾರುತಿ ಸುಜುಕಿ ತನ್ನ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಿಂದ ತೆಗೆದುಹಾಕಿದೆ.

ಹೀಗಾಗಿ ಹೊಸ ಎಲೆಕ್ಟ್ರಿಕ್ ಮಾದರಿ ಭಾರತಕ್ಕೂ ಬರಬಹುದೇ ಎಂಬ ಕುತೂಹಲ ಮೂಡಿದೆ. ಆದರೆ ಭಾರತದಲ್ಲಿ ಬಿಡುಗಡೆಯ ದಿನಾಂಕ, ಬೆಲೆ ಅಥವಾ ಲಭ್ಯತೆ ಕುರಿತು ಸದ್ಯಕ್ಕೆ ಅಧಿಕೃತ ಮಾಹಿತಿ ಇಲ್ಲ. ಒಟ್ನಲ್ಲಿ 26kWh ಬ್ಯಾಟರಿ, ಸುಮಾರು 310 ಕಿಲೋಮೀಟರ್‌ ಸಂಭಾವ್ಯ ರೇಂಜ್ ಮತ್ತು ವೇಗದ ಚಾರ್ಜಿಂಗ್ ವ್ಯವಸ್ಥೆಯೊಂದಿಗೆ ಹೊಸ ಇಗ್ನಿಸ್ ಎಲೆಕ್ಟ್ರಿಕ್ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES