Tooth Decay in Children: ಮಕ್ಕಳಲ್ಲಿ ಹಲ್ಲು ಹುಳುಕಾಗುವುದು ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಲ್ಲಿ ಒಂದಾಗಿದೆ. ಕೆಲವು ಮಕ್ಕಳಲ್ಲಿ ಒಂದೆರಡು ಹಲ್ಲುಗಳು ಹುಳುಕಾಗಿದ್ದರೆ, ಇನ್ನೂ ಕೆಲವರಲ್ಲಿ ಬಹುತೇಕ ಹಲ್ಲುಗಳು ಹಾಳಾಗಿರುವುದು ಕಂಡುಬರುತ್ತದೆ. ಆದರೆ ಹಾಲುಹಲ್ಲುಗಳು ಬಿದ್ದುಹೋದ ಬಳಿಕ ಹೊಸ ಹಲ್ಲುಗಳು ಬರುತ್ತವೆಂಬ ಕಾರಣಕ್ಕೆ ಅನೇಕ ಪೋಷಕರು ಈ ಸಮಸ್ಯೆಯನ್ನ ಗಂಭೀರವಾಗಿ ಪರಿಗಣಿಸುವುದಿಲ್ಲ.
ಮಕ್ಕಳ ಹಲ್ಲುಗಳ ಆರೋಗ್ಯ ಕಾಪಾಡಲು ಚಿಕ್ಕ ವಯಸ್ಸಿನಿಂದಲೇ ಕೆಲವು ಅಭ್ಯಾಸಗಳನ್ನ ರೂಢಿಸಿಕೊಳ್ಳುವುದು ಮುಖ್ಯವಾಗಿದೆ. ಮಕ್ಕಳ ಹಲ್ಲುಗಳು ಹುಳುಕಾಗದಂತೆ ತಡೆಯಲು ಹಲ್ಲುಜ್ಜುವ ಅಭ್ಯಾಸ, ಆಹಾರ ಪದ್ಧತಿ, ಹಾಲು ಕುಡಿಸುವ ವಿಧಾನ ಹಾಗೂ ಸ್ವಚ್ಛತೆಯ ಬಗ್ಗೆ ಪೋಷಕರು ಗಮನಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅನುಸರಿಸಬಹುದಾದ ಆರು ಪ್ರಮುಖ ಸಲಹೆಗಳು ಇಲ್ಲಿವೆ.
ಚಿಕ್ಕ ವಯಸ್ಸಿನಿಂದಲೇ ಹಲ್ಲು ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಸಿ
ಮಗುವಿನ ಮೊದಲ ಹಲ್ಲುಗಳು ಕಾಣಿಸಿಕೊಳ್ಳಲು ಆರಂಭಿಸಿದಾಗಿನಿಂದಲೇ ಅವುಗಳ ಸ್ವಚ್ಛತೆಗೆ ಗಮನ ನೀಡಬೇಕು. ಆರಂಭದಲ್ಲಿ ಸ್ವಚ್ಛವಾದ ಮೃದುವಾದ ಬಟ್ಟೆಯಿಂದ ಹಲ್ಲುಗಳನ್ನ ನಿಧಾನವಾಗಿ ಒರೆಸಿ ಸ್ವಚ್ಛಗೊಳಿಸಬಹುದು. ಮಗುವಿನ ಹಲ್ಲುಗಳು ಬೆಳೆಯುತ್ತಿದ್ದಂತೆ ಹಲ್ಲುಜ್ಜುವ ಅಭ್ಯಾಸವನ್ನ ರೂಢಿಸಬೇಕು. ಚಿಕ್ಕ ಮಕ್ಕಳಿಗೆ ಅಕ್ಕಿಕಾಳಿನಷ್ಟು ಟೂತ್‌ಪೇಸ್ಟ್ ಬಳಸಬಹುದು. ಮೂರು ವರ್ಷ ದಾಟಿದ ಮಕ್ಕಳಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದ ಟೂತ್‌ಪೇಸ್ಟ್ ಬಳಸಿ ಹಲ್ಲುಜ್ಜಲು ಕಲಿಸಬಹುದು. ಮಕ್ಕಳು ಪ್ರತಿದಿನ ಹಲ್ಲುಗಳನ್ನ ಸ್ವಚ್ಛವಾಗಿಟ್ಟುಕೊಳ್ಳುವಂತೆ ಪೋಷಕರು ಗಮನಹರಿಸುವುದು ಮುಖ್ಯವಾಗಿದೆ.
ಹಲ್ಲುಗಳಲ್ಲಿ ಸಕ್ಕರೆ ಮತ್ತು ಹಾಲಿನ ಅಂಶ ಉಳಿಯದಂತೆ ನೋಡಿಕೊಳ್ಳಿ
ಮಕ್ಕಳು ಹೆಚ್ಚಾಗಿ ಮಿಠಾಯಿ ಹಾಗೂ ಸಿಹಿ ಪದಾರ್ಥಗಳನ್ನ ಸೇವಿಸುವುದರಿಂದ ಹಲ್ಲುಗಳು ಹಾಳಾಗುವ ಸಾಧ್ಯತೆಯಿದೆ. ಹಲ್ಲುಗಳಲ್ಲಿ ಸಕ್ಕರೆಯ ಅಂಶ ಉಳಿದುಕೊಂಡರೆ ಹುಳುಕು ಹಲ್ಲಿನ ಸಮಸ್ಯೆ ಉಂಟಾಗಬಹುದು. ಅದೇ ರೀತಿ ಹಾಲು ಕುಡಿದ ನಂತರವೂ ಬಾಯಿಯ ಸ್ವಚ್ಛತೆಗೆ ಗಮನ ನೀಡಬೇಕು. ವಿಶೇಷವಾಗಿ ಬಾಟಲಿಯಲ್ಲಿ ಹಾಲು ಕುಡಿಯುವ ಅಭ್ಯಾಸವನ್ನ ಕಡಿಮೆ ಮಾಡುವುದು ಉತ್ತಮ. ಮಗುವಿಗೆ ಹಾಲುಣಿಸಿದ ಬಳಿಕ ಹಲ್ಲುಗಳನ್ನ ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಸುವುದರಿಂದ ಹಲ್ಲುಗಳ ಮೇಲೆ ಉಳಿಯುವ ಹಾಲಿನ ಅಂಶವನ್ನ ತೆಗೆದುಹಾಕಬಹುದು.
ಹಣ್ಣಿನ ಜ್ಯೂಸ್ ಬದಲು ಹಣ್ಣುಗಳನ್ನ ತಿನ್ನಲು ನೀಡಿ
ಮಕ್ಕಳಿಗೆ ಹಣ್ಣಿನ ಜ್ಯೂಸ್ ನೀಡುವ ಬದಲು ಹಣ್ಣುಗಳನ್ನ ನೇರವಾಗಿ ತಿನ್ನುವ ಅಭ್ಯಾಸ ಮಾಡಿಸುವುದು ಉತ್ತಮ. ಸಾಮಾನ್ಯವಾಗಿ ಹಣ್ಣಿನ ಜ್ಯೂಸ್ ತಯಾರಿಸುವಾಗ ರುಚಿಗಾಗಿ ಸಕ್ಕರೆ ಸೇರಿಸಲಾಗುತ್ತದೆ. ಈ ಸಕ್ಕರೆಯ ಅಂಶ ಹಲ್ಲುಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಾರುಕಟ್ಟೆಯಲ್ಲಿ ದೊರೆಯುವ ಜ್ಯೂಸ್‌ಗಳನ್ನ ಮಕ್ಕಳಿಗೆ ನೀಡುವಾಗಲೂ ಎಚ್ಚರಿಕೆ ವಹಿಸಬೇಕು. ಜ್ಯೂಸ್ ನೀಡುವುದಾದರೆ ಶೇ.100ರಷ್ಟು ಶುದ್ಧ ಹಣ್ಣಿನ ಜ್ಯೂಸ್ ಎಂಬ ಲೇಬಲ್ ಇರುವ ಉತ್ಪನ್ನವನ್ನ ಆಯ್ಕೆ ಮಾಡಬಹುದು. ಆದರೆ ಜ್ಯೂಸ್ ಕುಡಿಯುವುದನ್ನೇ ನಿತ್ಯದ ಅಭ್ಯಾಸವನ್ನಾಗಿ ಮಾಡುವ ಬದಲು ಹಣ್ಣುಗಳನ್ನ ಹಾಗೆಯೇ ತಿನ್ನುವಂತೆ ಮಕ್ಕಳನ್ನ ಪ್ರೋತ್ಸಾಹಿಸಬೇಕು.
ಬಾಟಲಿ ಬದಲು ಕಪ್ ಅಥವಾ ಲೋಟ ಬಳಸಲು ಕಲಿಸಿ
ಕೆಲವು ಮಕ್ಕಳಿಗೆ ಹಾಲು ಮತ್ತು ನೀರನ್ನ ಬಾಟಲಿಯ ಮೂಲಕ ಕುಡಿಸುವ ಅಭ್ಯಾಸವಿರುತ್ತದೆ. ಆದರೆ ದೀರ್ಘಕಾಲ ಬಾಟಲಿ ಬಳಸುವುದರಿಂದ ಹಲ್ಲುಗಳ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಚಮಚ ಅಥವಾ ಕಪ್ ಮೂಲಕ ನೀರು ಕುಡಿಯುವ ಅಭ್ಯಾಸ ಮಾಡಿಸಬೇಕು. ಸುಮಾರು ಆರು ಅಥವಾ ಏಳು ತಿಂಗಳ ವಯಸ್ಸಿನಿಂದ ಕಪ್ ಬಳಸುವುದನ್ನ ಪರಿಚಯಿಸಬಹುದು. ಮಗು ಎಂಟು ಅಥವಾ ಒಂಬತ್ತು ತಿಂಗಳ ವಯಸ್ಸಿಗೆ ಬಂದಾಗ ಲೋಟದಲ್ಲಿ ಕುಡಿಯುವ ಅಭ್ಯಾಸವನ್ನ ನಿಧಾನವಾಗಿ ರೂಢಿಸಬಹುದು. ಇದರಿಂದ ಬಾಟಲಿಯ ಮೇಲಿನ ಅವಲಂಬನೆಯನ್ನ ಕಡಿಮೆ ಮಾಡಲು ಸಹಾಯವಾಗುತ್ತದೆ.
ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಿ
ಮಕ್ಕಳ ಹಲ್ಲುಗಳ ಆರೋಗ್ಯ ಕಾಪಾಡುವಲ್ಲಿ ಆಹಾರ ಪದ್ಧತಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಿಗೆ ಪೋಷಕಾಂಶಗಳುಳ್ಳ ಆಹಾರ ನೀಡುವುದಕ್ಕೆ ಆದ್ಯತೆ ಕೊಡಬೇಕು. ದವಸಧಾನ್ಯಗಳು, ಹಣ್ಣುಗಳು ಹಾಗೂ ತರಕಾರಿಗಳನ್ನ ಅವರ ದಿನನಿತ್ಯದ ಆಹಾರದಲ್ಲಿ ಸೇರಿಸಬಹುದು. ಇದರೊಂದಿಗೆ ಹಾಲು, ಮೊಸರು ಮತ್ತು ಚೀಸ್‌ನಂತಹ ಆಹಾರ ಪದಾರ್ಥಗಳನ್ನೂ ನೀಡಬಹುದು. ಮಕ್ಕಳು ಸಿಹಿ ತಿಂಡಿಗಳನ್ನ ಸೇವಿಸಿದ ನಂತರ ಹಲ್ಲುಗಳನ್ನ ಸ್ವಚ್ಛಗೊಳಿಸುವುದನ್ನ ಮರೆಯಬಾರದು. ಹಲ್ಲುಗಳಲ್ಲಿ ಆಹಾರದ ಅಂಶಗಳು ಉಳಿಯದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಮಕ್ಕಳಿಗೆ ಪ್ರತ್ಯೇಕ ಚಮಚ ಮತ್ತು ಲೋಟ ಬಳಸಿ
ಪೋಷಕರು ಬಳಸಿದ ಚಮಚ ಅಥವಾ ಲೋಟವನ್ನೇ ಮಕ್ಕಳಿಗೂ ಬಳಸುವ ಅಭ್ಯಾಸ ಕೆಲವೊಮ್ಮೆ ಕಂಡುಬರುತ್ತದೆ. ಆದರೆ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಎಂಜಲಿನ ಮೂಲಕ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆಯಿದೆ. ವಯಸ್ಕರು ಬಳಸಿದ ಎಂಜಲು ಚಮಚ ಅಥವಾ ಲೋಟವನ್ನ ಮಕ್ಕಳಿಗೆ ಬಳಸುವುದರಿಂದ ಬ್ಯಾಕ್ಟೀರಿಯಾಗಳು ಮಕ್ಕಳ ಬಾಯಿಗೆ ಹರಡಬಹುದು. ಇದರಿಂದ ಹಲ್ಲು ಹುಳುಕಾಗುವ ಅಪಾಯ ಹೆಚ್ಚಾಗಬಹುದು. ಹೀಗಾಗಿ ಮಕ್ಕಳಿಗಾಗಿ ಪ್ರತ್ಯೇಕ ಚಮಚ, ಲೋಟ ಮತ್ತು ಇತರ ಪಾತ್ರೆಗಳನ್ನ ಬಳಸುವುದು ಉತ್ತಮ. ಅವುಗಳನ್ನ ಸ್ವಚ್ಛವಾಗಿಟ್ಟುಕೊಳ್ಳುವುದಕ್ಕೂ ಪೋಷಕರು ಗಮನ ನೀಡಬೇಕು.
ಮಕ್ಕಳ ಹಲ್ಲಿನ ಆರೈಕೆಯಲ್ಲಿ ಪೋಷಕರ ಪಾತ್ರ ಮುಖ್ಯ
ಮಕ್ಕಳ ಹಾಲುಹಲ್ಲುಗಳು ಮುಂದೆ ಬಿದ್ದುಹೋಗುತ್ತವೆಂಬ ಕಾರಣಕ್ಕೆ ಅವುಗಳ ಆರೈಕೆಯನ್ನ ನಿರ್ಲಕ್ಷಿಸಬಾರದು. ಚಿಕ್ಕ ವಯಸ್ಸಿನಿಂದಲೇ ಹಲ್ಲುಜ್ಜುವ ಅಭ್ಯಾಸ, ಸಕ್ಕರೆಯುಕ್ತ ಆಹಾರದ ನಿಯಂತ್ರಣ, ಪೌಷ್ಟಿಕ ಆಹಾರ ಸೇವನೆ ಮತ್ತು ಸ್ವಚ್ಛತೆಯ ಕ್ರಮಗಳನ್ನ ರೂಢಿಸುವುದು ಮುಖ್ಯವಾಗಿದೆ. ಈ ಸರಳ ಅಭ್ಯಾಸಗಳ ಮೂಲಕ ಮಕ್ಕಳಲ್ಲಿ ಹುಳುಕು ಹಲ್ಲಿನ ಸಮಸ್ಯೆ ಉಂಟಾಗುವ ಸಾಧ್ಯತೆಯನ್ನ ಕಡಿಮೆ ಮಾಡಲು ನೆರವಾಗಬಹುದು.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ತಜ್ಞ ಮೂಲಗಳ ಮಾಹಿತಿಯನ್ನ ಆಧರಿಸಿದೆ. ಇದನ್ನ Zee Kannada News ದೃಢಪಡಿಸುವುದಿಲ್ಲ. ಇಲ್ಲಿನ ಸಲಹೆಗಳನ್ನ ಪಾಲಿಸುವ ಮುನ್ನ ತಜ್ಞರ ಸಲಹೆ ಪಡೆಯುವುದು ಉತ್ತಮ.)