ವಿಚ್ಛೇದನದ ಬಳಿಕ ಮಿತಿಮೀರಿದ ಕುಡಿತದ ಚಟ! 26 ದಿನ ಪುನರ್ವಸತಿ ಕೇಂದ್ರದಲ್ಲಿದ್ದ ಯಜ್ವೇಂದ್ರ ಚಹಲ್
Yuzvendra Chahal alcohol addiction: ಭಾರತೀಯ ಕ್ರಿಕೆಟಿಗ ಯಜ್ವೇಂದ್ರ ಚಹಲ್ ಅವರು ವಿಚ್ಛೇದನದ ಬಳಿಕ ಎದುರಿಸಿದ ವೈಯಕ್ತಿಕ ಸವಾಲುಗಳು ಹಾಗೂ ಮದ್ಯಪಾನದ ಅವಲಂಬನೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
Yuzvendra Chahal alcohol addiction: ಟೀಂ ಇಂಡಿಯಾದ ಖ್ಯಾತ ಲೆಗ್ ಸ್ಪಿನ್ನರ್ ಯಜ್ವೇಂದ್ರ ಚಹಲ್ ತಮ್ಮ ವೈಯಕ್ತಿಕ ಜೀವನದ ಕಠಿಣ ಹಂತದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ವಿಚ್ಛೇದನದ ಬಳಿಕ ಕುಡಿತದ ಚಟ ಮಿತಿಮೀರಿತ್ತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತು ಪುನರ್ವಸತಿ ಕೇಂದ್ರಕ್ಕೆ ದಾಖಲಾಗಬೇಕಾಯಿತು. ಅಲ್ಲಿ 26 ದಿನಗಳ ಕಾಲ ಇದ್ದೆ ಎಂದು ಚಹಲ್ ಬಹಿರಂಗಪಡಿಸಿದ್ದಾರೆ. ಮಾಜಿ ಭಾರತೀಯ ಆರಂಭಿಕ ಆಟಗಾರ ಆಕಾಶ್ ಚೋಪ್ರಾ ಅವರ ಪಾಡ್ಕಾಸ್ಟ್ನಲ್ಲಿ ಮಾತನಾಡುವಾಗ ತಮ್ಮ ಜೀವನದಲ್ಲಿ ಎದುರಾದ ಸವಾಲುಗಳನ್ನು ಹಂಚಿಕೊಂಡಿದ್ದಾರೆ.
ಐಪಿಎಲ್ ಇತಿಹಾಸದ ಯಶಸ್ವಿ ಬೌಲರ್ಗಳಲ್ಲಿ ಒಬ್ಬರಾಗಿರುವ ಚಹಲ್, ಕ್ರಿಕೆಟ್ ಮೈದಾನದಲ್ಲಿ ತಮ್ಮ ಪ್ರದರ್ಶನದ ಮೂಲಕ ಗುರುತಿಸಿಕೊಂಡಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದಾರೆ. ಇದೀಗ ತಮ್ಮ ಮದ್ಯಪಾನದ ಚಟದ ಕುರಿತು ಮಾತನಾಡಿರುವ ಅವರು, ಆ ಹಂತದಿಂದ ಹೊರಬರಲು ಕುಟುಂಬದವರು ಮತ್ತು ಸ್ನೇಹಿತರು ನೀಡಿದ ಬೆಂಬಲ ಮಹತ್ವದ್ದಾಗಿತ್ತು ಎಂದು ಹೇಳಿದ್ದಾರೆ.
ಯಜ್ವೇಂದ್ರ ಚಹಲ್ ಪ್ರಕಾರ, 2011ರಲ್ಲಿ ಐಪಿಎಲ್ಗೆ ಪ್ರವೇಶಿಸಿದ ಸಮಯದಿಂದಲೇ ಮದ್ಯಪಾನದ ಅಭ್ಯಾಸ ಆರಂಭವಾಗಿತ್ತು. ಆರಂಭದಲ್ಲಿ ಯುವ ವಯಸ್ಸು ಮತ್ತು ಪಾರ್ಟಿಗಳ ವಾತಾವರಣದಿಂದಾಗಿ ಈ ಅಭ್ಯಾಸ ಬೆಳೆಯಿತು. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಒಮ್ಮೆ ಜೀವನದಲ್ಲಿ ಸಮತೋಲನ ಬಹಳ ಮುಖ್ಯ ಎಂದು ಹೇಳಿದ್ದನ್ನು ಚಹಲ್ ನೆನಪಿಸಿಕೊಂಡಿದ್ದಾರೆ.
ಆದರೆ ವಿಚ್ಛೇದನದ ಬಳಿಕ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ತಮ್ಮ ಮಾನಸಿಕ ಸ್ಥಿತಿ ಉತ್ತಮವಾಗಿರಲಿಲ್ಲ ಮತ್ತು ಮದ್ಯಪಾನದ ಪ್ರಮಾಣ ಮಿತಿಮೀರಿತ್ತು ಎಂದು ಅವರು ತಿಳಿಸಿದ್ದಾರೆ. ಕಳೆದ ವರ್ಷದ ಕೌಂಟಿ ಕ್ರಿಕೆಟ್ ಬಳಿಕ ಮದ್ಯಪಾನದ ಚಟ ಎಲ್ಲ ಮಿತಿಗಳನ್ನೂ ದಾಟಿತ್ತು. ಹೀಗಾಗಿ ಪುನರ್ವಸತಿ ಕೇಂದ್ರಕ್ಕೆ ದಾಖಲಾಗಬೇಕಾಯಿತು. ಅಲ್ಲಿ 26 ದಿನಗಳ ಕಾಲ ಇದ್ದೆ. ಈಗ ಅದನ್ನು ಹೇಗೆ ನಿಭಾಯಿಸಬೇಕು ಎಂಬುದು ನನಗೆ ತಿಳಿದಿದ ಎಂದು ಯಜ್ವೇಂದ್ರ ಚಹಲ್ ಹೇಳಿದ್ದಾರೆ.
ಈ ನಿರ್ಧಾರ ತಮ್ಮ ವೈಯಕ್ತಿಕ ಜೀವನದಲ್ಲಿ ದೊಡ್ಡ ಬದಲಾವಣೆ ತಂದಿತು. ಭಾವನೆಗಳನ್ನು ಸಮತೋಲನದಲ್ಲಿಟ್ಟುಕೊಳ್ಳಲು ಸಾಧ್ಯವಾಯಿತು. ಜೀವನದ ಬಗ್ಗೆ ಹೆಚ್ಚು ಪ್ರಬುದ್ಧತೆ ಬೆಳೆಸಿಕೊಂಡೆ ಎಂದು ಅವರು ವಿವರಿಸಿದ್ದಾರೆ. ಮದ್ಯಪಾನದ ಚಟ ಮುಂದುವರಿದರೆ ತಾನು ಅತ್ಯಂತ ಪ್ರೀತಿಸುವ ಕ್ರಿಕೆಟ್ಗೇ ಹಾನಿಯಾಗಬಹುದು ಎಂಬ ಅರಿವು ಚಹಲ್ಗೆ ಬಂದಿತ್ತು. ಹೀಗಾಗಿ ಆ ಅಭ್ಯಾಸಕ್ಕೆ ಅಂತ್ಯ ಹಾಡಲು ನಿರ್ಧರಿಸಿದರು.
“ನಾನು ಇದೇ ದಾರಿಯಲ್ಲಿ ಮುಂದುವರಿದರೆ, ನಾನು ಹೆಚ್ಚು ಪ್ರೀತಿಸುವ ಕ್ರಿಕೆಟ್ ಅನ್ನೇ ಹಾಳುಮಾಡಿಕೊಳ್ಳುತ್ತೇನೆ ಎಂದು ಅರಿತುಕೊಂಡೆ. ಹೀಗಾಗಿ ಅದನ್ನು ನಿಲ್ಲಿಸಿದೆ. ಈಗ ನಾನು ಹೆಚ್ಚು ಸಂತೋಷವಾಗಿದ್ದೇನೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದೇನೆ” ಎಂಬುದು ಚಹಲ್ ಹೇಳಿದ್ದಾರೆ.
ತಮ್ಮ ದೈಹಿಕ ಸಾಮರ್ಥ್ಯದಲ್ಲಿಯೂ ಸುಧಾರಣೆ ಕಂಡಿದ್ದಾಗಿ ಅವರು ಹೇಳಿದ್ದಾರೆ. ಕಳೆದ ಐಪಿಎಲ್ ಅವಧಿಯಲ್ಲಿ ಜಿಮ್ ವ್ಯಾಯಾಮ, ಫೀಲ್ಡಿಂಗ್ ಅಭ್ಯಾಸ ಮತ್ತು ತರಬೇತಿಯನ್ನು ಸರಿಯಾಗಿ ಮಾಡಲು ಸಾಧ್ಯವಾಗಿತ್ತು. ದೇಹ ಮತ್ತೆ 30 ವರ್ಷದ ಯುವಕನಂತಿದೆ ಎಂಬ ಅನುಭವವಾಗಿತ್ತು ಎಂದು ತಿಳಿಸಿದ್ದಾರೆ.