• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕ್ರೀಡೆ
  • /ರನ್ ಚೇಸ್‌ನಲ್ಲಿ ವಿರಾಟ್ ಕೊಹ್ಲಿಯದ್ದೇ ಅಧಿಪತ್ಯ; ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

ರನ್ ಚೇಸ್‌ನಲ್ಲಿ ವಿರಾಟ್ ಕೊಹ್ಲಿಯದ್ದೇ ಅಧಿಪತ್ಯ; ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

ಏಕದಿನ ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟುವಾಗ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನ ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನ ಹಿಂದಿಕ್ಕಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 74 ರನ್ ಗಳಿಸಿದ ಕೊಹ್ಲಿ, 3ನೇ ಕ್ರಮಾಂಕದಲ್ಲಿ 13 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೆ ರಿಕಿ ಪಾಂಟಿಂಗ್ ಅವರ ದಾಖಲೆಯನ್ನೂ ಸರಿಗಟ್ಟಿದ್ದಾರೆ.

Written ByPuttaraj K Alur
Published: Nov 04, 2026, 08:10 PM IST|Updated: Nov 04, 2026, 08:18 PM IST
joinshare
ರನ್ ಚೇಸ್‌ನಲ್ಲಿ ವಿರಾಟ್ ಕೊಹ್ಲಿಯದ್ದೇ ಅಧಿಪತ್ಯ; ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕಿಂಗ್ ಕೊಹ್ಲಿ!
Image Credit: Virat Kohli

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

Trending

  • News
  • Photos
  • Videos
ಹಬ್ಬದ ಸೀಸನ್‌ನಲ್ಲಿ ಹೊಸ ವಾಹನ ಖರೀದಿಯ ಉತ್ಸಾಹ : ಈ ತಪ್ಪುಗಳನ್ನು ಮಾಡಿದ್ರೆ ನಷ್ಟ ಗ್ಯಾರಂಟಿ!

ಹಬ್ಬದ ಸೀಸನ್‌ನಲ್ಲಿ ಹೊಸ ವಾಹನ ಖರೀದಿಯ ಉತ್ಸಾಹ : ಈ ತಪ್ಪುಗಳನ್ನು ಮಾಡಿದ್ರೆ ನಷ್ಟ ಗ್ಯಾರಂಟಿ!

2

332 ಕಿ.ಮೀ ರೇಂಜ್, ಐಷಾರಾಮಿ ಫೀಚರ್ಸ್‌ಗಳೇ ಹೈಲೈಟ್! MG ವಿಂಡ್ಸರ್‌ನ ಹೊಸ ಅವತಾರ ಅನಾವರಣ

3

WPL 2027 ವೇಳಾಪಟ್ಟಿ ಪ್ರಕಟ : ಜನವರಿ 14 ರಿಂದ ಕ್ರಿಕೆಟ್ ಹಬ್ಬ ಆರಂಭ.. ಮೊದಲ ಮ್ಯಾಚ್‌ ಎಲ್ಲಿ..?

4

ಖರ್ಗೆ ಮನೆಯ ವರಾಂಡಾದಲ್ಲಷ್ಟೇ ರಾಹುಲ್ ಗಾಂಧಿ ಪ್ರಧಾನಿಯಾಗಬಹುದು; ಹಿಮಂತ ಬಿಸ್ವ ಶರ್ಮಾ ವ್ಯಂಗ್ಯ!

5

ರನ್ ಚೇಸ್‌ನಲ್ಲಿ ವಿರಾಟ್ ಕೊಹ್ಲಿಯದ್ದೇ ಅಧಿಪತ್ಯ; ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ಕಿಂಗ್ ಕೊಹ್ಲಿ!

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Virat Kohli Records: ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ ದಾಖಲೆಯ ಓಟವನ್ನ ಮುಂದುವರಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ಒಂದರ ಹಿಂದೆ ಒಂದರಂತೆ ಮೈಲಿಗಲ್ಲುಗಳನ್ನ ಸ್ಥಾಪಿಸುತ್ತಿರುವ ಕೊಹ್ಲಿ, ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಗುರಿ ಬೆನ್ನಟ್ಟುವಾಗ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನ ಹಿಂದಿಕ್ಕಿದ್ದಾರೆ. ಅಷ್ಟೇ ಅಲ್ಲ ಏಕದಿನ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ 13 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ.

ಸಚಿನ್ ದಾಖಲೆಯನ್ನ ಹಿಂದಿಕ್ಕಿದ ವಿರಾಟ್

ಬುಧವಾರ ಆಕ್ಲೆಂಡ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಮಹತ್ವದ ಸಾಧನೆ ಮಾಡಿದ್ದಾರೆ. ಪಂದ್ಯದಲ್ಲಿ ಗುರಿ ಬೆನ್ನಟ್ಟುವ ಜವಾಬ್ದಾರಿ ಹೊತ್ತ ಕೊಹ್ಲಿ ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 51 ಎಸೆತಗಳನ್ನ ಎದುರಿಸಿದ ಅವರು 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 74 ರನ್ ಗಳಿಸಿದರು. ಈ ಇನಿಂಗ್ಸ್ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ರನ್ ಚೇಸ್ ವೇಳೆ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನ ತಮ್ಮದಾಗಿಸಿಕೊಂಡರು.

ಇದುವರೆಗೆ ಈ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು. ಸಚಿನ್ 242 ಇನಿಂಗ್ಸ್‌ಗಳಲ್ಲಿ 42.33ರ ಸರಾಸರಿಯಲ್ಲಿ ಒಟ್ಟು 8,720 ರನ್ ಗಳಿಸಿದ್ದರು. ಅವರ ಈ ಸಾಧನೆಯಲ್ಲಿ 17 ಶತಕಗಳು ಮತ್ತು 52 ಅರ್ಧಶತಕಗಳು ಸೇರಿದ್ದವು. ಇದೀಗ ವಿರಾಟ್ ಕೊಹ್ಲಿ ಸಚಿನ್ ಅವರ ದಾಖಲೆಯನ್ನ ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

8,741 ರನ್ ಗಳಿಸಿದ ಕಿಂಗ್ ಕೊಹ್ಲಿ

ರನ್ ಚೇಸ್‌ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶಿಸಿರುವ ಸ್ಥಿರ ಆಟ ಅವರ ಅಂಕಿಅಂಶಗಳಲ್ಲೂ ಸ್ಪಷ್ಟವಾಗಿ ಕಾಣಿಸುತ್ತದೆ. 180 ಪಂದ್ಯಗಳ 169 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿರುವ ಕೊಹ್ಲಿ, 66.21ರ ಅತ್ಯುತ್ತಮ ಸರಾಸರಿಯಲ್ಲಿ 8,741 ರನ್ ಕಲೆಹಾಕಿದ್ದಾರೆ. ಈ ಅವಧಿಯಲ್ಲಿ ಅವರು 30 ಶತಕ ಹಾಗೂ 46 ಅರ್ಧಶತಕಗಳನ್ನ ದಾಖಲಿಸಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗುರಿ ಬೆನ್ನಟ್ಟುವಾಗ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ ಎಂಬ ಸ್ಥಾನವನ್ನ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ರನ್ ಚೇಸ್‌ನಲ್ಲಿ ಕೊಹ್ಲಿ ಈಗಾಗಲೇ 30 ಶತಕಗಳನ್ನ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಗುರಿ ಬೆನ್ನಟ್ಟುವ ಸಂದರ್ಭಗಳಲ್ಲಿ ತಂಡಕ್ಕೆ ಅಗತ್ಯವಾದ ರನ್ ಗಳಿಸುವಲ್ಲಿ ಅವರು ತೋರಿರುವ ಪ್ರದರ್ಶನ ಈ ದಾಖಲೆಯ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ.

ಭಾರತ ಗೆದ್ದ ಪಂದ್ಯಗಳಲ್ಲಿ ಕೊಹ್ಲಿ ಅಂಕಿಅಂಶ ಹೇಗಿದೆ?

ಭಾರತ ತಂಡ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿದ ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಅವರ ದಾಖಲೆ ಗಮನಾರ್ಹವಾಗಿದೆ. ಇಂತಹ ಪಂದ್ಯಗಳಲ್ಲಿ ಅವರು 114 ಪಂದ್ಯಗಳ 108 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 89.95ರ ಸರಾಸರಿಯಲ್ಲಿ ಒಟ್ಟು 6,477 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್‌ರೇಟ್ 98ಕ್ಕೂ ಅಧಿಕವಾಗಿದೆ. ಈ ಪಂದ್ಯಗಳಲ್ಲಿ ಕೊಹ್ಲಿ 25 ಶತಕ ಮತ್ತು 30 ಅರ್ಧಶತಕಗಳನ್ನ ಬಾರಿಸಿದ್ದಾರೆ. ಹೀಗಾಗಿ ತಂಡ ಗುರಿ ಬೆನ್ನಟ್ಟುವಾಗ ಕೊಹ್ಲಿ ನೀಡಿರುವ ಕೊಡುಗೆ ಅವರ ವೃತ್ತಿಜೀವನದ ಪ್ರಮುಖ ಅಂಕಿಅಂಶಗಳಲ್ಲಿ ಒಂದಾಗಿದೆ.

ರಿಕಿ ಪಾಂಟಿಂಗ್ ದಾಖಲೆಯನ್ನೂ ಸರಿಗಟ್ಟಿದ ಕೊಹ್ಲಿ

ನ್ಯೂಜಿಲೆಂಡ್ ವಿರುದ್ಧದ ಇದೇ ಪಂದ್ಯದಲ್ಲಿ ಕೊಹ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಕಿವೀಸ್ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 37 ಇನಿಂಗ್ಸ್‌ಗಳಲ್ಲಿ ಆಡಿರುವ ಕೊಹ್ಲಿ, 57.97ರ ಸರಾಸರಿ ಹಾಗೂ 97.86ರ ಸ್ಟ್ರೈಕ್‌ರೇಟ್‌ನಲ್ಲಿ 1,971 ರನ್ ಗಳಿಸಿದ್ದಾರೆ. ಈ ರನ್‌ಗಳ ಪೈಕಿ ಏಳು ಶತಕ ಮತ್ತು 11 ಅರ್ಧಶತಕಗಳು ಸೇರಿವೆ. ಮತ್ತೊಂದೆಡೆ ರಿಕಿ ಪಾಂಟಿಂಗ್ ನ್ಯೂಜಿಲೆಂಡ್ ವಿರುದ್ಧ 51 ಪಂದ್ಯಗಳ 50 ಇನಿಂಗ್ಸ್‌ಗಳಲ್ಲಿ 45.83ರ ಸರಾಸರಿಯಲ್ಲಿ 1,971 ರನ್ ಗಳಿಸಿದ್ದರು. ಅವರ ಖಾತೆಯಲ್ಲಿ ಆರು ಶತಕ ಮತ್ತು 12 ಅರ್ಧಶತಕಗಳಿದ್ದವು. ಇದೀಗ ಕೊಹ್ಲಿ ರನ್‌ಗಳ ಸಂಖ್ಯೆಯಲ್ಲಿ ಪಾಂಟಿಂಗ್ ದಾಖಲೆಯನ್ನ ಸರಿಗಟ್ಟಿದ್ದಾರೆ.

3ನೇ ಕ್ರಮಾಂಕದಲ್ಲಿ 13 ಸಾವಿರ ರನ್ ಪೂರೈಸಿದ ಮೊದಲ ಆಟಗಾರ

ವಿರಾಟ್ ಕೊಹ್ಲಿ ಅವರ ಮತ್ತೊಂದು ಐತಿಹಾಸಿಕ ಸಾಧನೆಯೆಂದರೆ ಏಕದಿನ ಕ್ರಿಕೆಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 13 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ. 3ನೇ ಕ್ರಮಾಂಕದಲ್ಲಿ ಇದುವರೆಗೆ 254 ಪಂದ್ಯಗಳ 251 ಇನಿಂಗ್ಸ್‌ಗಳಲ್ಲಿ ಆಡಿರುವ ಕೊಹ್ಲಿ, 61.61ರ ಸರಾಸರಿಯಲ್ಲಿ 13,062 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು 48 ಶತಕ ಹಾಗೂ 70 ಅರ್ಧಶತಕಗಳನ್ನ ಬಾರಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 183 ರನ್ ಆಗಿದೆ. ಈ ಮೂಲಕ ಏಕದಿನ ಕ್ರಿಕೆಟ್‌ನ ಈ ನಿರ್ದಿಷ್ಟ ಬ್ಯಾಟಿಂಗ್ ಕ್ರಮಾಂಕದಲ್ಲಿ 13 ಸಾವಿರ ರನ್‌ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಒಟ್ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ 74 ರನ್ ಗಳಿಸಿದ ವಿರಾಟ್ ಕೊಹ್ಲಿ ಒಂದೇ ಪಂದ್ಯದಲ್ಲಿ ಹಲವು ಮಹತ್ವದ ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ರನ್ ಚೇಸ್‌ನಲ್ಲಿ ಸಚಿನ್ ತೆಂಡೂಲ್ಕರ್ ಅವರನ್ನ ಹಿಂದಿಕ್ಕಿರುವುದರ ಜೊತೆಗೆ, ರಿಕಿ ಪಾಂಟಿಂಗ್ ದಾಖಲೆಯನ್ನ ಸರಿಗಟ್ಟಿದ್ದಾರೆ. 3ನೇ ಕ್ರಮಾಂಕದಲ್ಲಿ 13 ಸಾವಿರ ರನ್ ಪೂರೈಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಹೆಸರಿನಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನ ದಾಖಲಿಸಿದ್ದಾರೆ.

Add Zee News as a Preferred Source
TAGS:
Cricket
Sports
Kannada News