MG Windsor Indulge EV: ಎಲೆಕ್ಟ್ರಿಕ್ ಕಾರುಗಳ ಮಾರುಕಟ್ಟೆಯಲ್ಲಿ ತನ್ನದೇಯಾದ ಸ್ಥಾನ ಹೊಂದಿರುವ JSW ಎಂಜಿ ಮೋಟಾರ್ ಇಂಡಿಯಾ ಇದೀಗ ತನ್ನ ಜನಪ್ರಿಯ ವಿಂಡ್ಸರ್ ಎಲೆಕ್ಟ್ರಿಕ್ ಕಾರಿನ ವಿಶೇಷ ಆವೃತ್ತಿಯಾದ ‘MG Windsor Indulge Edition’ ಅನ್ನ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಐಷಾರಾಮಿ ಪ್ರಯಾಣದ ಅನುಭವ, ಆಕರ್ಷಕ ವಿನ್ಯಾಸ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ಒತ್ತು ನೀಡಿರುವ ಈ ಹೊಸ ಆವೃತ್ತಿ ಹಲವು ವಿಶೇಷತೆಗಳನ್ನ ಒಳಗೊಂಡಿದೆ.
ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದರೆ 332 ಕಿಲೋಮೀಟರ್‌ಗಳವರೆಗೆ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ಕಾರಿನ ಎಕ್ಸ್‌ಶೋರೂಂ ಬೆಲೆ 17,99,800 ರೂಪಾಯಿ ಎಂದು ಕಂಪನಿ ತಿಳಿಸಿದೆ. ಸಾಮಾನ್ಯ ವಿಂಡ್ಸರ್ ಮಾದರಿಗಿಂತ ವಿಭಿನ್ನವಾದ ವಿನ್ಯಾಸ ಮತ್ತು ಕ್ಯಾಬಿನ್ ಸೌಲಭ್ಯಗಳನ್ನ ಹೊಂದಿರುವ ಇಂಡಲ್ಜ್ ಆವೃತ್ತಿಯನ್ನ ಬಿಸಿನೆಸ್ ಕ್ಲಾಸ್ ಪ್ರಯಾಣದ ಅನುಭವವನ್ನ ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ. ನಗರ ಪ್ರದೇಶದ ದೈನಂದಿನ ಓಡಾಟದ ಜೊತೆಗೆ ದೂರದ ಪ್ರಯಾಣಕ್ಕೂ ಅನುಕೂಲವಾಗುವಂತೆ ಇದರ ವಿನ್ಯಾಸ ಮತ್ತು ಸೌಲಭ್ಯಗಳನ್ನ ಸಿದ್ಧಪಡಿಸಲಾಗಿದೆ.
332 ಕಿ.ಮೀ ರೇಂಜ್ ನೀಡುವ ಬ್ಯಾಟರಿ
MG Windsor Indulge Edition ಕಾರಿನಲ್ಲಿ 38kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಈ ಬ್ಯಾಟರಿ ಮೂಲಕ ಪೂರ್ಣ ಚಾರ್ಜ್‌ನಲ್ಲಿ ಗರಿಷ್ಠ 332 ಕಿಲೋಮೀಟರ್ ಪ್ರಯಾಣಿಸಬಹುದು. ಕಾರಿನ ಎಲೆಕ್ಟ್ರಿಕ್ ಮೋಟಾರ್ 100kW ಅಂದರೆ 136 ಪಿಎಸ್ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಜೊತೆಗೆ 200Nm ಟಾರ್ಕ್ ನೀಡುತ್ತದೆ. ಈ ತಾಂತ್ರಿಕ ಸಾಮರ್ಥ್ಯವು ಕಾರಿನ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.
ಶ್ಯಾಡೋ ಗೋಲ್ಡ್ ಬಣ್ಣದ ಆಕರ್ಷಕ ವಿನ್ಯಾಸ
ಹೊಸ ಇಂಡಲ್ಜ್ ಆವೃತ್ತಿಯ ಹೊರಭಾಗದಲ್ಲಿ ವಿಶೇಷ ಡ್ಯುಯಲ್ ಟೋನ್ ಬಣ್ಣಗಳ ಸಂಯೋಜನೆ ನೀಡಲಾಗಿದೆ. ಶ್ಯಾಡೋ ಗೋಲ್ಡ್ ಬಣ್ಣದ ಬಾಡಿ ಮತ್ತು ಕಪ್ಪು ಬಣ್ಣದ ರೂಫ್ ಕಾರಿಗೆ ವಿಭಿನ್ನ ಹಾಗೂ ಪ್ರೀಮಿಯಂ ನೋಟವನ್ನ ಒದಗಿಸುತ್ತವೆ. ಇದರ ಜೊತೆಗೆ ಕಪ್ಪು ಬಣ್ಣದ ORVMಗಳು ಮತ್ತು R-18 ಗಾತ್ರದ ಕಪ್ಪು ಅಲಾಯ್ ವೀಲ್‌ಗಳನ್ನ ಅಳವಡಿಸಲಾಗಿದೆ. ಕಾರಿನ C-ಪಿಲ್ಲರ್ ಭಾಗದಲ್ಲಿ ವಿಶೇಷ ‘INDULGE’ ಬ್ಯಾಡ್ಜಿಂಗ್ ನೀಡಲಾಗಿದ್ದು, ಇದು ಈ ಆವೃತ್ತಿಯನ್ನ ಗುರುತಿಸಲು ನೆರವಾಗುತ್ತದೆ. ಹೊರಭಾಗದ ಬಣ್ಣಗಳ ಸಂಯೋಜನೆಯಿಂದ ಹಿಡಿದು ಚಕ್ರಗಳ ವಿನ್ಯಾಸದವರೆಗೆ ವಿಶೇಷ ಆವೃತ್ತಿಗೆ ಪ್ರತ್ಯೇಕ ಗುರುತು ನೀಡುವ ಪ್ರಯತ್ನ ಮಾಡಲಾಗಿದೆ.
ಒಳಾಂಗಣದಲ್ಲಿ ಐಷಾರಾಮಿ ಅನುಭವ
ಕಾರಿನ ಕ್ಯಾಬಿನ್‌ನಲ್ಲಿ ಅರ್ಬನ್ ಟ್ಯಾನ್ ಮತ್ತು ಬ್ಲ್ಯಾಕ್ ಬಣ್ಣಗಳ ಅಪ್‌ಹೋಲ್ಸ್ಟರಿ ಥೀಮ್ ನೀಡಲಾಗಿದೆ. ಈ ಬಣ್ಣಗಳ ಸಂಯೋಜನೆಯು ಒಳಾಂಗಣಕ್ಕೆ ಆಧುನಿಕ ಹಾಗೂ ಪ್ರೀಮಿಯಂ ಲುಕ್ ನೀಡುತ್ತದೆ. ಮುಂಭಾಗದ ಸೀಟುಗಳ ಹೆಡ್‌ರೆಸ್ಟ್‌ಗಳಲ್ಲಿ ವಿಶೇಷ ‘INDULGE’ ಎಂಬ್ರಾಯ್ಡರಿ ಮಾಡಲಾಗಿದೆ. ಇದರಿಂದ ಕಾರಿನ ವಿಶೇಷ ಆವೃತ್ತಿಯ ಗುರುತು ಒಳಾಂಗಣದಲ್ಲಿಯೂ ಸ್ಪಷ್ಟವಾಗಿ ಕಾಣಿಸುತ್ತದೆ.
ಹಿಂಬದಿ ಸೀಟಿನಲ್ಲಿ ಪ್ರಯಾಣಿಸುವವರ ಅನುಕೂಲಕ್ಕೂ ಕಂಪನಿ ಹೆಚ್ಚಿನ ಗಮನ ನೀಡಿದೆ. ಎರಡನೇ ಸಾಲಿನ ಪ್ರಯಾಣಿಕರಿಗಾಗಿ ‘PRIVE Screen’ ಸೌಲಭ್ಯವನ್ನ ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗಿದೆ. ಇದರಿಂದ ಹಿಂಬದಿ ಪ್ರಯಾಣಿಕರಿಗೆ ಹೆಚ್ಚುವರಿ ಅನುಕೂಲತೆ ಮತ್ತು ಮನರಂಜನೆಯ ಆಯ್ಕೆ ದೊರೆಯಲಿದೆ. ಇದರ ಜೊತೆಗೆ ಇಂಡಲ್ಜ್ ಥೀಮ್‌ಗೆ ಹೊಂದುವ ಕುಶನ್‌ಗಳು ಹಾಗೂ ಕುತ್ತಿಗೆಯ ದಿಂಬುಗಳನ್ನ ನೀಡಲಾಗಿದೆ. ಇವು ಪ್ರಯಾಣದ ವೇಳೆ ಹೆಚ್ಚಿನ ಆರಾಮ ಒದಗಿಸುವ ಉದ್ದೇಶ ಹೊಂದಿವೆ.
135 ಡಿಗ್ರಿವರೆಗೆ ಒರಗುವ ಏರೋ ಲೌಂಜ್ ಆಸನಗಳು
ಎಂಜಿ ವಿಂಡ್ಸರ್ ಕಾರಿನ ಮತ್ತೊಂದು ಪ್ರಮುಖ ಆಕರ್ಷಣೆ ಅದರ ಆಸನ ವ್ಯವಸ್ಥೆ. ಕಾರಿನ ಏರೋ ಲೌಂಜ್ ಸೀಟುಗಳನ್ನ 135 ಡಿಗ್ರಿಗಳವರೆಗೆ ಒರಗಿಸಬಹುದು. ಇದರಿಂದ ಪ್ರಯಾಣಿಕರು ಹೆಚ್ಚು ಆರಾಮದಾಯಕವಾಗಿ ಕುಳಿತುಕೊಳ್ಳಲು ಅನುಕೂಲವಾಗುತ್ತದೆ. ಸೆಡಾನ್ ಕಾರಿನ ವಿಶಾಲತೆ ಮತ್ತು ಸೌಕರ್ಯವನ್ನ SUV ಮಾದರಿಯ ಬಹುಮುಖತೆಯೊಂದಿಗೆ ಸಂಯೋಜಿಸುವ ವಿನ್ಯಾಸವನ್ನ ಈ ಕಾರಿನಲ್ಲಿ ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
15.6 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ
ಕಾರಿನ ಒಳಾಂಗಣದಲ್ಲಿ 15.6 ಇಂಚಿನ ಗ್ರ್ಯಾಂಡ್ ವ್ಯೂ ಟಚ್‌ಸ್ಕ್ರೀನ್ ಡಿಸ್‌ಪ್ಲೇ ನೀಡಲಾಗಿದೆ. ಸೆಂಟರ್ ಕನ್ಸೋಲ್‌ನಲ್ಲಿ ಅಳವಡಿಸಿರುವ ಈ ದೊಡ್ಡ ಪರದೆಯು ಚಾಲಕನಿಗೆ ಅಗತ್ಯ ಮಾಹಿತಿಗಳನ್ನ ಸುಲಭವಾಗಿ ನಿರ್ವಹಿಸಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಆಧುನಿಕ ವಿನ್ಯಾಸದ ಜೊತೆಗೆ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನೂ ಈ ಕಾರಿನಲ್ಲಿ ಒದಗಿಸಲಾಗಿದೆ.
ಎಂಜಿ ವಿಂಡ್ಸರ್ ಕುರಿತು ಕಂಪನಿ ಹೇಳಿದ್ದೇನು?
JSW ಎಂಜಿ ಮೋಟಾರ್ ಇಂಡಿಯಾದ ವಾಣಿಜ್ಯ ಅಧಿಕಾರಿ ವಿನಯ್ ರೈನಾ ಅವರ ಪ್ರಕಾರ, ಎಂಜಿ ವಿಂಡ್ಸರ್ ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರನ್ನ ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಎಲೆಕ್ಟ್ರಿಕ್ ಕಾರು ಖರೀದಿಸುವ ಬಗ್ಗೆ ಇನ್ನೂ ನಿರ್ಧಾರಕ್ಕೆ ಬರದಿದ್ದ ಅನೇಕ ಗ್ರಾಹಕರಿಗೆ ಈ ಕಾರು ಹೊಸ ಆಯ್ಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಈಗಾಗಲೇ ವಿಂಡ್ಸರ್ ಸಾಧಿಸಿರುವ ಯಶಸ್ಸಿನ ಹಿನ್ನೆಲೆಯಲ್ಲಿ ಇಂಡಲ್ಜ್ ಆವೃತ್ತಿಯನ್ನ ಪರಿಚಯಿಸಲಾಗಿದ್ದು, ಇದು ವಿಶೇಷ ವಿನ್ಯಾಸ ಮತ್ತು ಸುಧಾರಿತ ಕ್ಯಾಬಿನ್ ಅನುಭವವನ್ನ ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಒಟ್ನಲ್ಲಿ 332 ಕಿಲೋಮೀಟರ್ ರೇಂಜ್, 38kWh ಬ್ಯಾಟರಿ, 135 ಡಿಗ್ರಿವರೆಗೆ ಒರಗುವ ಆಸನಗಳು, ಹಿಂಬದಿ ಪ್ರಯಾಣಿಕರಿಗೆ ಪ್ರೈವ್ ಸ್ಕ್ರೀನ್ ಹಾಗೂ 15.6 ಇಂಚಿನ ಟಚ್‌ಸ್ಕ್ರೀನ್ ಸೇರಿದಂತೆ ಹಲವು ವೈಶಿಷ್ಟ್ಯಗಳೊಂದಿಗೆ MG Windsor Indulge Edition ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ಇದರ ಎಕ್ಸ್‌ಶೋರೂಂ ಬೆಲೆ 17,99,800 ರೂಪಾಯಿ ಆಗಿದೆ.