Ishan Kishan Records: ಟೀಮ್ ಇಂಡಿಯಾದ ವಿಕೆಟ್ ಕೀಪರ್ ಹಾಗೂ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಇಶಾನ್ ಪಾತ್ರರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನ ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ಭಾನುವಾರ (ನವೆಂಬರ್ 1, 2026) ನಡೆದ ಐದನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಈ ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಇಶಾನ್, ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು. ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅವರು, ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನ ಮತ್ತೊಮ್ಮೆ ಸಾಬೀತುಪಡಿಸಿದರು.
ಈ ಅರ್ಧಶತಕದೊಂದಿಗೆ ಇಶಾನ್ ಕಿಶನ್ ಈ ವರ್ಷದ ಟಿ20 ಕ್ರಿಕೆಟ್‌ನ ರನ್ ಗಳಿಕೆಯನ್ನ 1,170ಕ್ಕೆ ಹೆಚ್ಚಿಸಿಕೊಂಡರು. ಇದರೊಂದಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆಯನ್ನ ತಮ್ಮ ಹೆಸರಿಗೆ ಬರೆದುಕೊಂಡರು.
ಸೂರ್ಯಕುಮಾರ್ ಯಾದವ್ ದಾಖಲೆ ಪತನ
ಇಶಾನ್ ಕಿಶನ್ ಮುರಿದಿರುವ ದಾಖಲೆ ಈ ಹಿಂದೆ ಟೀಮ್ ಇಂಡಿಯಾದ ಮಾಜಿ ನಾಯಕ ಸೂರ್ಯಕುಮಾರ್ ಯಾದವ್ ಅವರ ಹೆಸರಿನಲ್ಲಿತ್ತು. 2022ರಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಒಂದೇ ವರ್ಷದಲ್ಲಿ ಒಟ್ಟು 1,164 ರನ್ ಕಲೆಹಾಕಿದ್ದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನ ನಿರ್ಮಿಸಿದ್ದರು. ಸೂರ್ಯಕುಮಾರ್ ಯಾದವ್ ನಿರ್ಮಿಸಿದ್ದ ಈ ದಾಖಲೆಯನ್ನ ಹಲವು ವರ್ಷಗಳ ಬಳಿಕ ಇಶಾನ್ ಕಿಶನ್ ಮುರಿದಿದ್ದಾರೆ.
2026ರಲ್ಲಿ ಆಡಿರುವ 36 ಟಿ20 ಇನಿಂಗ್ಸ್‌ಗಳಲ್ಲಿ ಇಶಾನ್ ಒಟ್ಟು 1,170 ರನ್ ಗಳಿಸಿದ್ದಾರೆ. ಈ ಮೂಲಕ ಸೂರ್ಯಕುಮಾರ್ ಅವರ 1,164 ರನ್‌ಗಳ ದಾಖಲೆಯನ್ನ ಆರು ರನ್‌ಗಳಿಂದ ಹಿಂದಿಕ್ಕಿದ್ದಾರೆ. ಇಶಾನ್ ಅವರ ಈ ಸಾಧನೆ ಟಿ20 ಕ್ರಿಕೆಟ್‌ನಲ್ಲಿ ಅವರ ಸ್ಥಿರ ಪ್ರದರ್ಶನಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಈ ವರ್ಷದ ಹಲವು ಇನಿಂಗ್ಸ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಅವರು, ಇದೀಗ ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
Innings Break! A collective batting effort helps #TeamIndia set a target of 1️⃣9️⃣2️⃣ 🙌 Over to our bowlers to defend this ⏳ Scorecard ▶️ https://t.co/B5TqF9MWu4 #NZvIND https://t.co/Jm4HhjFOHO
— BCCI (@BCCI) November 1, 2026
ಇಶಾನ್ ದಾಖಲೆ ಮುರಿಯಲು ಅಭಿಷೇಕ್ ಶರ್ಮಾಗೂ ಅವಕಾಶ
ಇಶಾನ್ ಕಿಶನ್ ಹೊಸ ದಾಖಲೆ ನಿರ್ಮಿಸಿರುವ ಬೆನ್ನಲ್ಲೇ ಮತ್ತೊಬ್ಬ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಕೂಡ ಇದೇ ದಾಖಲೆಯನ್ನ ಮುರಿಯುವ ಅವಕಾಶ ಹೊಂದಿದ್ದಾರೆ. ಈ ವರ್ಷ ಅತ್ಯುತ್ತಮ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಕೂಡ ಟಿ20 ಕ್ರಿಕೆಟ್‌ನಲ್ಲಿ ಭರ್ಜರಿ ರನ್ ಗಳಿಸುತ್ತಿದ್ದಾರೆ. 2026ರಲ್ಲಿ ಈವರೆಗೆ ಒಟ್ಟು 38 ಟಿ20 ಇನಿಂಗ್ಸ್‌ಗಳನ್ನು ಆಡಿರುವ ಅಭಿಷೇಕ್ ಶರ್ಮಾ 1,153 ರನ್ ಕಲೆಹಾಕಿದ್ದಾರೆ.
ಈ ಮೂಲಕ ಇಶಾನ್ ಕಿಶನ್ ಅವರ ದಾಖಲೆಯ ಸನಿಹದಲ್ಲಿದ್ದಾರೆ. ಸದ್ಯ ಅಭಿಷೇಕ್ ಅವರ ರನ್ ಗಳಿಕೆ ಇಶಾನ್‌ಗಿಂತ ಕೇವಲ 17 ರನ್‌ಗಳಷ್ಟು ಕಡಿಮೆಯಿದೆ. ಮುಂಬರುವ ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಉತ್ತಮ ಪ್ರದರ್ಶನ ನೀಡಿದರೆ ಇಶಾನ್ ಕಿಶನ್ ಅವರ ದಾಖಲೆಯನ್ನ ಹಿಂದಿಕ್ಕುವ ಅವಕಾಶವಿದೆ. ಹೀಗಾಗಿ ಈ ವರ್ಷದ ಉಳಿದ ಟಿ20 ಪಂದ್ಯಗಳಲ್ಲಿ ಇಬ್ಬರು ಭಾರತೀಯ ಬ್ಯಾಟರ್‌ಗಳ ನಡುವಿನ ರನ್ ಪೈಪೋಟಿ ಮುಂದುವರಿಯಲಿದೆ.
ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲು
ಒಂದೇ ಕ್ಯಾಲೆಂಡರ್ ವರ್ಷದಲ್ಲಿ 1,170 ರನ್ ಗಳಿಸುವ ಮೂಲಕ ಇಶಾನ್ ಕಿಶನ್ ಭಾರತೀಯ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಈ ಹಿಂದೆ ಸೂರ್ಯಕುಮಾರ್ ಯಾದವ್ ನಿರ್ಮಿಸಿದ್ದ 1,164 ರನ್‌ಗಳ ದಾಖಲೆಯನ್ನ ಹಿಂದಿಕ್ಕಿರುವುದು ಅವರ ಸಾಧನೆಯ ಪ್ರಮುಖ ಅಂಶವಾಗಿದೆ. ಇನ್ನೊಂದೆಡೆ 1,153 ರನ್ ಗಳಿಸಿರುವ ಅಭಿಷೇಕ್ ಶರ್ಮಾ ಕೂಡ ಈ ಪಟ್ಟಿಯಲ್ಲಿ ಇಶಾನ್‌ಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಹೀಗಾಗಿ 2026ರ ಟಿ20 ಕ್ರಿಕೆಟ್‌ನಲ್ಲಿ ಒಂದೇ ವರ್ಷದಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯ ಮೇಲೆ ಎಲ್ಲರ ಗಮನ ನೆಟ್ಟಿದೆ. ಸದ್ಯಕ್ಕೆ ಈ ಐತಿಹಾಸಿಕ ದಾಖಲೆಯ ಒಡೆಯ ಇಶಾನ್ ಕಿಶನ್ ಆಗಿದ್ದಾರೆ.
ಬೃಹತ್ ಮೊತ್ತ ಪೇರಿಸಿದ ಟೀಂ ಇಂಡಿಯಾ
ನ್ಯೂಜಿಲೆಂಡ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ. ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲ ಬ್ಯಾಟಿಂಗ್ ಮಾಡಿದ ಭಾರತದ ಪರ ಇಶಾನ್ ಕಿಶನ್ 32 ಎಸೆತಗಳಲ್ಲಿ 5 ಫೋರ್, 5 ಸಿಕ್ಸ್‌ಗಳೊಂದಿಗೆ 61 ರನ್ ಸಿಡಿಸಿದರೆ, ಶ್ರೇಯಸ್ ಅಯ್ಯರ್ 23 ಎಸೆತಗಳಲ್ಲಿ 4 ಸಿಕ್ಸ್, 3 ಫೋರ್‌ಗಳ ನೆರವಿನಿಂದ 50 ರನ್ ಚಚ್ಚಿದರು. ಇನ್ನು ನಮನ್ ಧೀರ್ 23 ಎಸೆತಗಳಲ್ಲಿ 33 ರನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ 17 ಎಸೆತಗಳಲ್ಲಿ 22 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು.