ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ PM ನರೇಂದ್ರ ಮೋದಿ ಹೆಸರಿಡಲು ಯುಪಿ ಕ್ಯಾಬಿನೆಟ್ ಗ್ರೀನ್ ಸಿಗ್ನಲ್
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಲು ಉತ್ತರ ಪ್ರದೇಶ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನರೇಂದ್ರ ಮೋದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರು ನಾಮಕರಣ ಮಾಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಈ ಕುರಿತಂತೆ ಅಕ್ಟೋಬರ್ 09 (ಶುಕ್ರವಾರ) ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜೆವಾರ್ನಲ್ಲಿರುವ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು "ರಾಜ್ಯಕ್ಕೆ ಉಡುಗೊರೆಯಾಗಿ" ನೀಡಿದ್ದಕ್ಕಾಗಿ ಯುಪಿ ಕ್ಯಾನಿನೆಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತದೆ. ʼ ನೋಯ್ಡಾ-ಜೆವಾರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು 'ನರೇಂದ್ರ ಮೋದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣʼ ಎಂದು ಮರು ನಾಮಕರಣ ಮಾಡಲಾಗುವುದು. ಈ ನಿಲ್ದಾಣವು ಭವಿಷ್ಯದಲ್ಲಿ ಭಾರತದ ಅತಿದೊಡ್ಡ ವಿಮಾನ ನಿಲ್ದಾಣವಾಗಲು ಸಜ್ಜಾಗಿದೆ ಎಂದು ಹೇಳಿದರು.
"ಉತ್ತರ ಪ್ರದೇಶ ಸಚಿವ ಸಂಪುಟವು ರಾಜ್ಯಕ್ಕೆ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಜೆವಾರ್)ವನ್ನು ಉಡುಗೊರೆಯಾಗಿ ನೀಡಿದ್ದಕ್ಕಾಗಿ ಪ್ರಧಾನ ಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸುತ್ತದೆ; ಇದು ಉತ್ತರ ಪ್ರದೇಶದ ಅತಿದೊಡ್ಡ ವಿಮಾನ ನಿಲ್ದಾಣವಾಗಲಿದ್ದು, ಭವಿಷ್ಯದಲ್ಲಿ ದೇಶದ ಅತಿದೊಡ್ಡ ವಾಯುಯಾನ ಕೇಂದ್ರವಾಗಲಿದೆ. ಪರಿಣಾಮವಾಗಿ, ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು - ನರೇಂದ್ರ ಮೋದಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನೋಯ್ಡಾ-ಜೆವಾರ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯನ್ನು ಸಚಿವ ಸಂಪುಟ ಅಂಗೀಕರಿಸಿದೆ" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಭಾಷಣದಲ್ಲಿ ಹೇಳಿದರು.
ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆಗೆ ಪ್ರಮುಖ ವಾಯುಯಾನ ಕೇಂದ್ರವಾಗಿ ಕಾರ್ಯನಿರ್ವಹಿಸಲಿರುವ ಈ ವಿಮಾನ ನಿಲ್ದಾಣವನ್ನು ಉತ್ತರ ಪ್ರದೇಶ ಸರ್ಕಾರ ಮತ್ತು ಜ್ಯೂರಿಚ್ ವಿಮಾನ ನಿಲ್ದಾಣದ ಅಂಗಸಂಸ್ಥೆಯು ಅಭಿವೃದ್ಧಿಪಡಿಸಿದೆ. ಇದನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಅಡಿಯಲ್ಲಿ ನಿರ್ಮಿಸಲಾಗಿದೆ ಎಂಬುದು ಗಮನಾರ್ಹವಾಗಿದೆ.
2026ರ ಮಾರ್ಚ್ನಲ್ಲಿ ಉದ್ಘಾಟನೆಗೊಂಡಿದ್ದ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ:
ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ 1 ಅನ್ನು ಮಾರ್ಚ್ 28, 2026 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಉದ್ಘಾಟಿಸಿದ್ದರು. ಆದಾಗ್ಯೂ, ಜೂನ್ 15, 2026 ರಿಂದ ಈ ಏರ್ಪೋರ್ಟ್ನಲ್ಲಿ ವಾಣಿಜ್ಯ ವಿಮಾನ ಕಾರ್ಯಾಚರಣೆ ಆರಂಭಗೊಂಡಿತು.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯ YEIDA ನಗರದ ಜೇವರ್ ಬಳಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿದ್ದು, ಹಂತ 1 ರಲ್ಲಿ ಸುಮಾರು 12 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ ಎಂದು ವರದಿಯಾಗಿದೆ. ಇದಲ್ಲದೆ, ಮುಂದಿನ 25 ವರ್ಷಗಳಲ್ಲಿ ಇದರ ಸಾಮರ್ಥ್ಯವು 60-120 ಮಿಲಿಯನ್ ಪ್ರಯಾಣಿಕರಿಗೆ ಬೆಳೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.
ವರದಿಯ ಪ್ರಕಾರ, ವಿಮಾನ ನಿಲ್ದಾಣವನ್ನು ಅಪರಾಧ ತಡೆಗಟ್ಟುವಿಕೆ ಮೂಲಕ ಪರಿಸರ ವಿನ್ಯಾಸ (CPTED) ತತ್ವಗಳೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಈ ಏರ್ಪೋರ್ಟ್ 350 ಕ್ಕೂ ಹೆಚ್ಚು ಹೈ-ರೆಸಲ್ಯೂಷನ್ ಸಿಸಿಟಿವಿ ಕ್ಯಾಮೆರಾಗಳು, ವಿದ್ಯುತ್ ಬೇಲಿಗಳು ಮತ್ತು 24/7 ಕಣ್ಗಾವಲು ಹೊಂದಿರುವ ಏಕೀಕೃತ ಭದ್ರತಾ ಕಾರ್ಯಾಚರಣೆ ಕೇಂದ್ರವನ್ನು ಕೂಡ ಒಳಗೊಂಡಿದೆ ಎಂಬುದು ವಿಶೇಷ.