ಮುರುಸು" ಚಂಡಮಾರುತ ಏಫೆಕ್ಟ್ : ತಿರುಪತಿ ಭಕ್ತರಿಗೆ ಮಹತ್ವದ ಸೂಚನೆ ನೀಡಿದ TTD
ಆಂಧ್ರಪ್ರದೇಶದಾದ್ಯಂತ ಅಪ್ಪಳಿಸಿರುವ 'ಮುರುಸು' ಚಂಡಮಾರುತದ (Cyclone Muras) ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ, ತಿರುಪತಿ ಹಾಗೂ ತಿರುಮಲದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿದೆ. ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ TTD ಮಹತ್ವದ ಸೂಚನೆಗಳನ್ನು ನೀಡಿದೆ.
ತಿರುಮಲ : ಆಂಧ್ರಪ್ರದೇಶದಾದ್ಯಂತ ಅಪ್ಪಳಿಸಿರುವ 'ಮುರುಸು' ಚಂಡಮಾರುತದ (Cyclone Muras) ಎಫೆಕ್ಟ್ ತಿರುಪತಿಯಲ್ಲೂ ತೀವ್ರಗೊಂಡಿದೆ. ತಿರುಮಲದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಗಾಳಿ ಸಹಿತ ಮಳೆಯಾಗುತ್ತಿದ್ದು, ಶ್ರೀವಾರಿಯ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಿರುಮಲ ತಿರುಪತಿ ದೇವಸ್ಥಾನಮ್ಸ್ (TTD) ಆಡಳಿತ ಮಂಡಳಿಯು ಬಿಗ್ ಅಲರ್ಟ್ ಘೋಷಿಸಿದೆ. ಭಕ್ತರ ಸುರಕ್ಷತೆ ಮತ್ತು ಸೌಲಭ್ಯಗಳ ಕುರಿತು ತುರ್ತು ಸಭೆ ನಡೆಸಿ ಮಹತ್ವದ ಸೂಚನೆಗಳನ್ನು ನೀಡಲಾಗಿದೆ.
ಮಳೆಯ ಅಬ್ಬರ ಹೆಚ್ಚಿರುವ ಹಿನ್ನೆಲೆಯಲ್ಲಿ, ಭಕ್ತರಿಗೆ ಸಾಧ್ಯವಾದಷ್ಟು ಬೇಗ ಮತ್ತು ಸುಲಭವಾಗಿ ಶ್ರೀವಾರಿಯ ದರ್ಶನ (Darshan) ದೊರೆಯುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಟಿಟಿಡಿ ಹೆಚ್ಚುವರಿ ಇಒ ಶ್ರೀ ಸಿ.ಎಚ್. ವೆಂಕಯ್ಯ ಚೌಧರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಮಳೆಯಿಂದಾಗಿ ಸರತಿ ಸಾಲುಗಳು ಹೊರಬರದಂತೆ ಎಚ್ಚರಿಕೆ ವಹಿಸಲು ಮತ್ತು ಯಾತ್ರಿಕರಿಗೆ ವಸತಿ ಕೊಠಡಿಗಳಲ್ಲಿ ಸಂಪೂರ್ಣ ಸುರಕ್ಷತೆ ಒದಗಿಸಲು ಸೂಚಿಸಲಾಗಿದೆ.
ಮಳೆಗಾಲದಲ್ಲಿ ಅನ್ನಪ್ರಸಾದ ವಿತರಣೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಅಗತ್ಯವಿರುವ ಸ್ಥಳಗಳಲ್ಲಿ ಟಾರ್ಪಲ್‌ಗಳನ್ನು ಅಳವಡಿಸಿ, ಭಕ್ತರಿಗೆ ನಿರಂತರವಾಗಿ ಊಟೋಪಹಾರ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದರೆ ಕೂಡಲೇ ಸಮಸ್ಯೆಯನ್ನು ಬಗೆಹರಿಸಲು ವಿದ್ಯುತ್ ಹಾಗೂ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಘಾಟ್ ರಸ್ತೆಗಳಲ್ಲಿ ಮಳೆಯಿಂದಾಗಿ ಬಂಡೆಗಳು ಅಥವಾ ಸಣ್ಣ ಕಲ್ಲುಗಳು ಜಾರಿಬೀಳುವ ಅಪಾಯವಿರುವ ಸ್ಥಳಗಳನ್ನು ಮುಂಚಿತವಾಗಿ ಗುರುತಿಸಿ, ಅಪ್ ಘಾಟ್ ಮತ್ತು ಡೌನ್ ಘಾಟ್ ರಸ್ತೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಲಾಗಿದೆ. ಮಳೆಯಲ್ಲಿ ನಡೆಯುವಾಗ ಭಕ್ತರು ಜಾರಿಬೀಳುವ ಸಾಧ್ಯತೆ ಇರುವುದರಿಂದ, ವೈದ್ಯಕೀಯ ಸಿಬ್ಬಂದಿ ಸದಾ ಲಭ್ಯವಿರುವಂತೆ ಮತ್ತು ತುರ್ತು ಚಿಕಿತ್ಸೆ ನೀಡಲು ವೈದ್ಯಕೀಯ ವಿಭಾಗಕ್ಕೆ ಸೂಚಿಸಲಾಗಿದೆ. ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಭಕ್ತರು ಸುರಕ್ಷಿತವಾಗಿ ದರ್ಶನ ಪಡೆದು ತಲುಪಬೇಕಾದ ಸ್ಥಳಗಳಿಗೆ ತಲುಪುವಂತೆ ನೋಡಿಕೊಳ್ಳಲು ತಿಳಿಸಲಾಗಿದೆ. ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಭಕ್ತರು ಟಿಟಿಡಿಯ ಅಧಿಕೃತ ವೆಬ್‌ಸೈಟ್ ಮೂಲಕ 'ವಿಶೇಷ ಪ್ರವೇಶ ದರ್ಶನ' ಅಥವಾ ನೇರವಾಗಿ 'ಸರ್ವ ದರ್ಶನ' ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು.