ಸಹ ಪ್ರಯಾಣಿಕನೊಂದಿಗೆ ಗಲಾಟೆ: ಚಲಿಸುತ್ತಿದ್ದ ಮುಂಬೈ ಲೋಕಲ್ ರೈಲಿನಿಂದ ಬಿದ್ದ ಪ್ರಯಾಣಿಕ: ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಕರ ನಡುವೆ ಜಟಾಪಟಿ ನಡೆದಿದ್ದು, ಚಲಿಸುತ್ತಿದ್ದ ರೈಲಿನಿಂದ ಓರ್ವ ಪ್ರಯಾಣಿಕ ಕೆಳಗೆ ಬಿದ್ದಿರುವ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ.
ಇಬ್ಬರು ಪ್ರಯಾಣಿಕರ ನಡುವಿನ ಫೈಟ್ ವೇಳೆ ಓರ್ವ ಪ್ರಯಾಣಿಕ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದಿರುವ ಶಾಕಿಂಗ್ ಘಟನೆ ಮುಂಬೈ ಲೋಕಲ್ ರೈಲಿನಲ್ಲಿ ನಡೆದಿದೆ. ಈ ಘಟನೆಯ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಆಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಪ್ರಯಾಣಿಕರ ನಡುವಿನ ಫೈಟ್ ನಡೆದಿದ್ದು ಎಲ್ಲಿ?
ಲಭ್ಯವಿರುವ ಮಾಹಿತಿಗಳ ಪ್ರಕಾರ, ರೈಲಿನಲ್ಲಿ ಪ್ರಯಾಣಿಕರ ನಡುವಿನ ಈ ಜಟಾಪಟಿ ನವೆಂಬರ್ 6, ಶುಕ್ರವಾರ ರಾತ್ರಿ ಚರ್ಚ್‌ಗೇಟ್-ವಿರಾರ್ ಫಾಸ್ಟ್ ಲೋಕಲ್‌ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ರೈಲಿನಲ್ಲಿ ಪ್ರಯಾಣಿಕರ ಗಲಾಟೆ ವಿವರ:
ಮುಂಬೈನ ಚರ್ಚ್‌ಗೇಟ್-ವಿರಾರ್ ಫಾಸ್ಟ್ ಲೋಕಲ್ ರೈಲಿನಲ್ಲಿ ಶುಕ್ರವಾರ (ನ. 6) ರಾತ್ರಿ 10:30 ರ ಸುಮಾರಿಗೆ ರೈಲು ಗ್ರಾಂಟ್ ರಸ್ತೆ ಮತ್ತು ಮುಂಬೈ ಸೆಂಟ್ರಲ್ ನಿಲ್ದಾಣಗಳ ನಡುವೆ ಪ್ರಯಾಣಿಸುತ್ತಿದ್ದಾಗ ರೈಲಿನ ದ್ವಾರದ ಬಳಿ ನಿಲ್ಲುವ ವಿಚಾರವಾಗಿ ಮೊದಲಿಗೆ ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದ ಆರಂಭವಾಗಿದ್ದು ಈ ವೇಳೆ ಮೊದಲು ಓರ್ವ ಪ್ರಯಾಣಿಕ ಇನ್ನೊಬ್ಬ ಪ್ರಯಾಣಿಕನ ಮೇಲೆ ಕೈ ಮಾಡಲು ಮುಂದಾಗಿದ್ದಾನೆ. ಬಳಿಕ ಇಬ್ಬರ ನಡುವೆ ಹೊಡೆದಾಟ ನಡೆದಿದ್ದು ಓರ್ವ ಚಲಿಸುತ್ತಿದ್ದ ರೈಲಿನಿಂದ ಕೆಳಗೆ ಬಿದ್ದಿದ್ದಾನೆ ಎಂದು ವರದಿ ಆಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಮುಂಬೈ ಲೋಕಲ್ ರೈಲಿನಲ್ಲಿ ನಡೆದಿರುವ ಈ ಜಟಾಪಟಿಗೆ ಸಂಬಂಧಿಸಿದ ವಿಡಿಯೋದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಇಬ್ಬರು ಪ್ರಯಾಣಿಕರು ಪರಸ್ಪರ ಗುದ್ದಾಡುವುದನ್ನು ಕಾಣಬಹುದಾಗಿದೆ. ಗಲಾಟೆ ನಡುವೆ ಒಬ್ಬ ಪ್ರಯಾಣಿಕ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹಿಂದಕ್ಕೆ ಹೆಜ್ಜೆ ಹಾಕುತ್ತಿರುವಂತೆ ತೋರುತ್ತದೆ. ಬಳಿಕ ಕ್ಷಣಾರ್ಧದಲ್ಲಿ ಆತನ ಕಾಲುಗಳು ಸ್ಲಿಪ್ ಆಗಿ ರೈಲಿನಿಂದ ಕೆಳಗೆ ಬೀಳುತ್ತಾನೆ. ಲಭ್ಯವಿರುವ ಮಾಹಿತಿಗಳ ಪ್ರಕಾರ, ಪ್ರಯಾಣಿಕ ಮುಂಬೈ ಸೆಂಟ್ರಲ್ ನಿಲ್ದಾಣದ ಬಳಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ.
ತಪ್ಪಿದ ಭಾರೀ ದುರಂತ:
ಈ ಗಲಾಟೆಯಲ್ಲಿ ಪ್ರಯಾಣಿಕ ಕೆಳಗೆ ಬೀಳುವ ಸಂದರ್ಭದಲ್ಲಿ ರೈಲು ಮುಂಬೈ ಸೆಂಟ್ರಲ್ ನಿಲ್ದಾಣದ ಸಮೀಪವಿದ್ದರಿಂದ ರೈಲು ನಿಲುಗಡೆಗಾಗಿ ನಿಧಾನಗತಿಯಲ್ಲಿ ಚಲಿಸುತ್ತಿತ್ತು. ಹೀಗಾಗಿ ಸಂಭವಿಸಬಹುದಾಗಿದ್ದ ಭಾರೀ ದುರಂತವೊಂದು ತಪ್ಪಿದ್ದು, ರೈಲಿನಿಂದ ಕೆಳಗೆ ಬಿದ್ದ ವ್ಯಕ್ತಿಗೆ ತೀವ್ರ ಗಾಯಗಳಾಗಿಲ್ಲ. ಜೊತೆಗೆ ಆತ ಪ್ರಾಣಾಪಾಯದಿಂದಲೂ ಪಾರಾಗಿದ್ದಾನೆ ಎಂದು ವರದಿ ಆಗಿದೆ.
ಮುಂಬೈ ಲೋಕಲ್ ರೈಲಿನಿಂದ ಪ್ರಯಾಣಿಕ ಬೀಳುವ ವೈರಲ್ ದೃಶ್ಯವನ್ನು ಇಲ್ಲಿ ವೀಕ್ಷಿಸಿ:
ಮುಂಬೈ ಲೋಕಲ್ ರೈಲಿನಲ್ಲಿ ನಡೆದಿರುವ ಈ ಘಟನೆ ವಾಣಿಜ್ಯ ನಗರಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಮನ ಸೆಳೆದಿದೆ. ಇದು ಕಿಕ್ಕಿರಿದ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸುವ ಹಾಗೂ ರೈಲಿನ ಪ್ರವೇಶದ್ವಾರದಲ್ಲೇ ನಿಂತು ಪ್ರಯಾಣಿಸುವವರಿಗೆ ಎಚ್ಚರಿಕೆ ಗಂಟೆ ಆಗಿದೆ.
ಮುಂಬೈ ಲೋಕಲ್ ರೈಲಿನಲ್ಲಿ ಕೊ*ಲೆ:
ಗಮನಾರ್ಹವಾಗಿ, ಈ ಹಿಂದೆ ಜೂನ್ 2026ರಲ್ಲಿ ತೆರೆದ ಕೋಚ್ ಬಾಗಿಲಿನ ಬಗ್ಗೆ ನಡೆದ ವಾಗ್ವಾದದಲ್ಲಿ ಮುಂಬೈ ಲೋಕಲ್ ರೈಲಿನ ಒಳಗೆ 22 ವರ್ಷದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಹ*ತ್ಯೆ ಮಾಡಲಾಗಿತ್ತು.
ಚರ್ಚ್‌ಗೇಟ್-ನಲ್ಲಸೋಪರಾ ಫಾಸ್ಟ್ ಲೋಕಲ್ ರೈಲಿನ ಪ್ರಥಮ ದರ್ಜೆ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಬಲಿಪಶು ಮಾಯಾಂಕ್ ಲೋಹರ್, ಹೊರಗೆ ಸುರಿಯುತ್ತಿರುವ ಭಾರೀ ಮಳೆಯ ಸಮಯದಲ್ಲಿ ಕೋಚ್ ಬಾಗಿಲು ಮುಚ್ಚಬೇಕೇ ಅಥವಾ ತೆರೆದಿರಬೇಕೇ ಎಂಬ ಪ್ರಶ್ನೆಗೆ ಸಹ ಪ್ರಯಾಣಿಕ ಮಾತಿನ ಚಕಮಕಿಗೆ ಇಳಿದಿದ್ದನು.
ಈ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಬಲು ಬೇಗ ಗಂಭೀರ ಪರಿಸ್ಥಿತಿಗೆ ತಲುಪಿ ಅಪರಿಚಿತ ವ್ಯಕ್ತಿ ಹರಿತವಾದ ಆಯುಧವನ್ನು ಹೊರತೆಗೆದು ಮಾಯಾಂಕ್ ಲೋಹರ್ ಅವರ ಹೊಟ್ಟೆಯ ಭಾಗಕ್ಕೆ ಇರಿದ ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದನು, ಬಳಿಕ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದನು.
ಈ ಘಟನೆಯಲ್ಲಿ ಮುಂಬೈ ಲೋಕಲ್ ರೈಲು ರಾತ್ರಿ ಸುಮಾರು 11:04 ಕ್ಕೆ ಬೋರಿವಲಿ ನಿಲ್ದಾಣವನ್ನು ತಲುಪಿದಾಗ ರೈಲು ಸಂಪೂರ್ಣವಾಗಿ ನಿಲ್ದಾಣದಲ್ಲಿ ನಿಲ್ಲುವ ಮೊದಲೇ ಜನಸಂದಣಿಯೊಳಗೆ ಆರೋಪಿ ಪರಾರಿ ಆಗಿದ್ದನು. ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಬಂಧಿತ ಆರೋಪಿಯನ್ನು 30 ವರ್ಷದ ರೋಷನ್ ಸುವರ್ಣ ಎಂದು ಗುರುತಿಸಲಾಗಿದೆ.