SOCIAL MEDIA

Newsletter

PARTNER SITES
Select Language Select State

ದುರ್ಗಾ ಪೂಜೆಯಲ್ಲಿ ಘೋರ ದುರಂತ: ಕಾಲ್ತುಳಿತಕ್ಕೆ 19 ಮಂದಿ ಬಲಿ, 35ಕ್ಕೂ ಹೆಚ್ಚು ಜನರಿಗೆ ಗಾಯ!

ಕೋಲ್ಕತ್ತಾದ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ ಸಂಜೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 19 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರೀ ಮಳೆ, ಜನಸಂದಣಿ ಹಾಗೂ ಕಿರಿದಾದ ಪ್ರವೇಶ-ನಿರ್ಗಮನ ದ್ವಾರಗಳಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ.

Written By Puttaraj K Alur
Published: Oct 18, 2026, 06:29 AM IST | Updated: Oct 18, 2026, 07:47 AM IST
Image Credit: Kolkata Stampede
Join

Kolkata Durga Puja Stampede: ನವರಾತ್ರಿ ಸಂಭ್ರಮದಲ್ಲಿ ದುರ್ಗಾದೇವಿಯ ದರ್ಶನ ಪಡೆಯಲು ತೆರಳಿದ್ದ ಭಕ್ತರ ಪಾಲಿಗೆ ಹಬ್ಬದ ಸಂಭ್ರಮವೇ ಕಣ್ಣೀರಿನ ಕಡಲಾಗಿ ಮಾರ್ಪಟ್ಟಿದೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ದುರ್ಗಾ ಪೂಜೆಯ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಮೃತರಲ್ಲಿ ಮಹಿಳೆಯರು ಹಾಗೂ ಮಗು ಸೇರಿರುವುದು ದುರಂತದ ತೀವ್ರತೆಯನ್ನ ಹೆಚ್ಚಿಸಿದೆ. ಶನಿವಾರ (ಅಕ್ಟೋಬರ್ 17) ಸಂಜೆ ಸಂಭವಿಸಿದ ಈ ಘಟನೆ ದೇಶದಾದ್ಯಂತ ಆಘಾತ ಮೂಡಿಸಿದೆ. 

ದುರ್ಗಾದೇವಿ ದರ್ಶನಕ್ಕೆ ಬಂದವರಿಗೆ ಎದುರಾದ ದುರಂತ!

ಉತ್ತರ ಕೋಲ್ಕತ್ತಾದ ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಚೋರ್ ಬಗಾನ್ ಸರ್ವಜನಿಕ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ದುರ್ಗಾ ಪೂಜೆಯ ಸಪ್ತಮಿ ದಿನವಾದ ಶನಿವಾರ ಸಂಜೆ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಆಗಮಿಸಿದ್ದರು. ಸಂಜೆ ಸುಮಾರು 7.40ರ ವೇಳೆಗೆ ಮಳೆ ಆರಂಭವಾದ ಪರಿಣಾಮ ಜನರು ಏಕಾಏಕಿ ಪೆಂಡಾಲ್‌ನತ್ತ ನುಗ್ಗಿದ್ದಾರೆ. ಇದೇ ವೇಳೆ ಒಳಗಿದ್ದವರು ಹೊರಬರಲು ಪ್ರಯತ್ನಿಸಿದ್ದರಿಂದ ನಿರ್ಗಮನ ದ್ವಾರದ ಬಳಿ ತೀವ್ರ ನೂಕುನುಗ್ಗಲು ಉಂಟಾಗಿದೆ. ಜನಸಂದಣಿಯ ಒತ್ತಡಕ್ಕೆ ಸಿಲುಕಿ ಹಲವರು ಕೆಳಗೆ ಬಿದ್ದಿದ್ದು, ಅವರ ಮೇಲೆ ಇತರರು ಬಿದ್ದ ಪರಿಣಾಮ ಕಾಲ್ತುಳಿತ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಕೆಲವೇ ಕ್ಷಣಗಳಲ್ಲಿ ಭಕ್ತರ ಆಕ್ರಂದನ ಮುಗಿಲುಮುಟ್ಟಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. 

ಕಿರಿದಾದ ದ್ವಾರ, ಬೆಳಕಿನ ಕೊರತೆಯೇ ದುರಂತಕ್ಕೆ ಕಾರಣ?

ದುರ್ಘಟನೆಗೆ ಪೆಂಡಾಲ್‌ನ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಕಿರಿದಾದ ವಿನ್ಯಾಸ ಹಾಗೂ ಜನಸಂದಣಿ ನಿರ್ವಹಣೆಯಲ್ಲಿನ ಲೋಪ ಕಾರಣವಾಗಿರಬಹುದು ಎಂಬ ಆರೋಪಗಳು ಕೇಳಿಬಂದಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪೆಂಡಾಲ್‌ನ ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಕಿರಿದಾಗಿದ್ದು, ಕೆಲವು ಪ್ರದೇಶಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆಯೂ ಇರಲಿಲ್ಲ. ಭಾರೀ ಮಳೆಯ ಸಂದರ್ಭದಲ್ಲಿ ಜನರು ಆಶ್ರಯಕ್ಕಾಗಿ ಒಂದೇ ಕಡೆ ನುಗ್ಗಿದ ಪರಿಣಾಮ ಪರಿಸ್ಥಿತಿ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಇದೇ ವೇಳೆ ಜನಸಂದಣಿಯ ಒತ್ತಡದಿಂದ ಪೆಂಡಾಲ್‌ನ ಒಂದು ಭಾಗ ಕುಸಿದಿರುವ ಸಾಧ್ಯತೆಯ ಬಗ್ಗೆಯೂ ವರದಿಗಳು ಪ್ರಕಟವಾಗಿವೆ. ಆದರೆ ದುರಂತಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.  

ಗಾಯಾಳುಗಳು ಆಸ್ಪತ್ರೆಗೆ ದಾಖಲು; ರಕ್ಷಣಾ ಕಾರ್ಯಾಚರಣೆ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕೋಲ್ಕತ್ತಾ ಪೊಲೀಸರು, ಅಗ್ನಿಶಾಮಕ ದಳ, ವಿಪತ್ತು ನಿರ್ವಹಣಾ ತಂಡಗಳು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಗಾಯಗೊಂಡವರನ್ನ ರಕ್ಷಿಸಿ ಕೋಲ್ಕತ್ತಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ಚಪ್ಪಲಿಗಳು, ಬ್ಯಾಗ್‌ಗಳು ಹಾಗೂ ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯಗಳು ದುರಂತದ ಭೀಕರತೆಗೆ ಸಾಕ್ಷಿಯಾಗಿವೆ. ಮುನ್ನೆಚ್ಚರಿಕಾ ಕ್ರಮವಾಗಿ ದುರ್ಗಾ ಪೂಜಾ ಪೆಂಡಾಲ್‌ಗೆ ಸಾರ್ವಜನಿಕರ ಪ್ರವೇಶವನ್ನ ಸ್ಥಗಿತಗೊಳಿಸಲಾಗಿದ್ದು, ಘಟನಾ ಸ್ಥಳದಲ್ಲಿ ಪೊಲೀಸ್ ಭದ್ರತೆಯನ್ನ ಹೆಚ್ಚಿಸಲಾಗಿದೆ. 

ಮೃತರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಘೋಷಣೆ

 

 ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಹಾಗೂ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಗಾಯಾಳುಗಳಿಗೆ ₹5 ಲಕ್ಷ ಪರಿಹಾರ ನೀಡುವುದಾಗಿಯೂ ಪ್ರಕಟಿಸಲಾಗಿದೆ. ಇದಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರು ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ₹50 ಸಾವಿರ ಪರಿಹಾರ ಘೋಷಿಸಿದ್ದಾರೆ. 

 

ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ಸಂತಾಪ

 

 ಕೋಲ್ಕತ್ತಾ ಕಾಲ್ತುಳಿತ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಘಟನೆಗೆ ಆಘಾತ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ. ದುರಂತದ ಬೆನ್ನಲ್ಲೇ ಪೂಜಾ ಸಮಿತಿಯ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದೆ. ಜನಸಂದಣಿ ನಿಯಂತ್ರಣ ಮತ್ತು ಸುರಕ್ಷತಾ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ನಡೆದಿದೆಯೇ ಎಂಬುದನ್ನ ಪರಿಶೀಲಿಸಲಾಗುತ್ತಿದೆ. 

 

 

ಹಬ್ಬದ ಸಂಭ್ರಮದ ನಡುವೆ ಸುರಕ್ಷತೆ ಕುರಿತು ಪ್ರಶ್ನೆ

 

ಪ್ರತಿ ವರ್ಷ ಕೋಲ್ಕತ್ತಾದ ದುರ್ಗಾ ಪೂಜೆ ಲಕ್ಷಾಂತರ ಭಕ್ತರನ್ನ ಆಕರ್ಷಿಸುತ್ತದೆ. ವೈಭವದ ಅಲಂಕಾರ, ವಿಶಿಷ್ಟ ಪೆಂಡಾಲ್‌ಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ವಿಶ್ವಪ್ರಸಿದ್ಧಿ ಪಡೆದಿರುವ ಈ ಆಚರಣೆಯಲ್ಲಿ ಜನಸಂದಣಿ ನಿರ್ವಹಣೆ ಅತ್ಯಂತ ಮಹತ್ವದ್ದಾಗಿದೆ. ಈ ದುರಂತವು ದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಮರ್ಪಕ ಪ್ರವೇಶ ಮತ್ತು ನಿರ್ಗಮನ ವ್ಯವಸ್ಥೆ, ತುರ್ತು ರಕ್ಷಣಾ ಮಾರ್ಗಗಳು, ಪೊಲೀಸ್ ಭದ್ರತೆ ಹಾಗೂ ವೈದ್ಯಕೀಯ ಸೌಲಭ್ಯಗಳ ಅಗತ್ಯವನ್ನ ಮತ್ತೊಮ್ಮೆ ನೆನಪಿಸಿದೆ. ದೇವಿಯ ಆಶೀರ್ವಾದ ಪಡೆಯಲು ಸಂತಸದಿಂದ ತೆರಳಿದ್ದ ಕುಟುಂಬಗಳು ಇಂದು ತಮ್ಮ ಆತ್ಮೀಯರನ್ನ ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ಕೋಲ್ಕತ್ತಾದ ಈ ದುರಂತವು ಹಬ್ಬದ ಸಂಭ್ರಮದ ನಡುವೆ ಸಾರ್ವಜನಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂಬ ಎಚ್ಚರಿಕೆಯ ಸಂದೇಶ ನೀಡಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES