ನವದೆಹಲಿ: ದೇಶದಲ್ಲಿ ಉದ್ಯಮ ಮತ್ತು ವ್ಯವಹಾರ ಮಾಡುವುದನ್ನು ಮತ್ತಷ್ಟು ಸುಲಭಗೊಳಿಸುವ ಹಾಗೂ ತೆರಿಗೆದಾರರ ಮೇಲಿನ ಅನಗತ್ಯ ಕಾನೂನು ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಜಿಎಸ್‌ಟಿ (GST) ಮಂಡಳಿಯು ಅತ್ಯಂತ ಪ್ರಮುಖ ಹಾಗೂ ಐತಿಹಾಸಿಕ ಸುಧಾರಣೆಗಳನ್ನು ಘೋಷಿಸಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ 57 ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ತೆರಿಗೆದಾರರಿಗೆ ಸಂಬಂಧಿಸಿದ ಅನುಷ್ಠಾನ ಮತ್ತು ವಿಚಾರಣೆಯ ನಿಬಂಧನೆಗಳ ಕುರಿತು ಹಲವು ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ಜಿಎಸ್‌ಟಿ ಅಧಿಕಾರಿಗಳ ಬಂಧನ ಅಧಿಕಾರ ಸಂಪೂರ್ಣ ರದ್ದು
ಈ ಹೊಸ ಸುಧಾರಣೆಯ ಅತ್ಯಂತ ಪ್ರಮುಖ ಅಂಶವೆಂದರೆ ಜಿಎಸ್‌ಟಿ ಅಧಿಕಾರಿಗಳಿಗಿದ್ದ ನೇರ ಬಂಧನದ ಅಧಿಕಾರವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇಲ್ಲಿಯವರೆಗೆ, ಜಿಎಸ್‌ಟಿ ಅಧಿಕಾರಿಗಳು ಗಂಭೀರ ತೆರಿಗೆ ವಂಚನೆ ಮತ್ತು ನಕಲಿ ಇನ್‌ಪುಟ್ ತೆರಿಗೆ ಕ್ರೆಡಿಟ್ (ITC) ಪಡೆದಿರುವಂತಹ ಕೆಲವು ನಿರ್ದಿಷ್ಟ ಪ್ರಕರಣಗಳಲ್ಲಿ ತೆರಿಗೆದಾರರನ್ನು ಬಂಧಿಸುವ ವಿಶೇಷ ಅಧಿಕಾರವನ್ನು ಹೊಂದಿದ್ದರು. ಆದರೆ ಈ ಅಧಿಕಾರವನ್ನು ಸಂಪೂರ್ಣವಾಗಿ ರದ್ದುಗೊಳಿಸುವ ಮೂಲಕ, ಸರಳ ತೆರಿಗೆ ವಿವಾದಗಳು ಮತ್ತು ವ್ಯವಹಾರ-ಸಂಬಂಧಿತ ಸಣ್ಣಪುಟ್ಟ ತಪ್ಪುಗಳು ಕ್ರಿಮಿನಲ್ ಪ್ರಕರಣಗಳಾಗಿ ಬದಲಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇನ್ಮುಂದೆ ತೆರಿಗೆ ಅಧಿಕಾರಿಗಳು ತೆರಿಗೆ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ನೇರ ಬಂಧನಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಪ್ರಾಸಿಕ್ಯೂಷನ್ ಮಿತಿ ಭಾರಿ ಪ್ರಮಾಣದಲ್ಲಿ ಏರಿಕೆ
ಬಂಧನದ ಅಧಿಕಾರ ರದ್ದತಿಯ ಜೊತೆಗೆ, ಜಿಎಸ್‌ಟಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡುವ (ಪ್ರಾಸಿಕ್ಯೂಷನ್) ಮಿತಿಯನ್ನು ಸಹ ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಇದುವರೆಗೆ ₹1 ಕೋಟಿ ತೆರಿಗೆ ವಂಚನೆಯನ್ನು ಒಳಗೊಂಡ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿತ್ತು, ಆದರೆ ಈಗ ಆ ಮಿತಿಯನ್ನು ₹5 ಕೋಟಿಗೆ ಹೆಚ್ಚಿಸಲಾಗಿದೆ. ಇದರರ್ಥ ₹5 ಕೋಟಿಗಿಂತ ಕಡಿಮೆ ಮೌಲ್ಯದ ತೆರಿಗೆ ವ್ಯತ್ಯಾಸ ಅಥವಾ ವಂಚನೆ ಪ್ರಕರಣಗಳಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡುವ ಸಾಧ್ಯತೆ ಇರುವುದಿಲ್ಲ. ಇದರಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳಿಗೆ ನಿರಾಳತೆ ಸಿಕ್ಕಂತಾಗಿದೆ.
ತೆರಿಗೆ ಸಂಗ್ರಹ ಮತ್ತು ವ್ಯವಹಾರ ಸ್ನೇಹಿ ವಾತಾವರಣಕ್ಕೆ ಆದ್ಯತೆ
ಕಠಿಣ ಶಿಕ್ಷೆ ಅಥವಾ ಅಪರಾಧ ಕ್ರಮಗಳಿಗಿಂತ ತೆರಿಗೆ ಸಂಗ್ರಹಣೆ, ದಂಡ ಮತ್ತು ಬಡ್ಡಿ ವಿಧಿಸುವ ಮೂಲಕ ತೆರಿಗೆ ನಿಯಮಗಳ ಸರಳ ಅನುಸರಣೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಜಿಎಸ್‌ಟಿ 2.0 ಯೋಜನೆಯ ಭಾಗವಾಗಿ, ಮಂಡಳಿಯು ನೋಂದಣಿ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು, ಇನ್‌ಪುಟ್ ತೆರಿಗೆ ಕ್ರೆಡಿಟ್ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು, ಮರುಪಾವತಿಗಳನ್ನು ವೇಗಗೊಳಿಸುವುದು ಮತ್ತು ವಿವಾದಗಳನ್ನು ಕಡಿಮೆ ಮಾಡುವುದಕ್ಕೆ ಆದ್ಯತೆ ನೀಡಿದೆ. ಒಟ್ಟಾರೆಯಾಗಿ ಉದ್ಯಮ ಕ್ಷೇತ್ರಕ್ಕೆ ಮುಕ್ತ ಹಾಗೂ ಸೌಹಾರ್ದಯುತ ವಾತಾವರಣ ನಿರ್ಮಿಸುವುದು ಕೇಂದ್ರ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಅಗತ್ಯ ಕಾನೂನು ತಿದ್ದುಪಡಿಗಳ ನಂತರ ಈ ಹೊಸ ನಿಯಮಗಳು ಜಾರಿಗೆ ಬರಲಿವೆ.