social media Effect health risk: ಸುಂದರವಾಗಿ ಕಾಣಬೇಕು, ಮುಖದಲ್ಲಿರುವ ಮೊಡವೆ, ಕಪ್ಪು ಕಲೆಗಳು ಮತ್ತು ಪಿಗ್ಮೆಂಟೇಶನ್ ಸಮಸ್ಯೆಗಳು ದೂರವಾಗಬೇಕು ಎಂಬ ಆಸೆ ಯಾರಿಗೆ ತಾನೇ ಇರುವುದಿಲ್ಲ? ಇದೇ ಆಸೆಯನ್ನು ಬಂಡವಾಳವಾಗಿಸಿಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ನೂರಾರು ಸೌಂದರ್ಯವರ್ಧಕ ಉತ್ಪನ್ನಗಳ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿವೆ. ಅದರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವೇ ದಿನಗಳಲ್ಲಿ ಮುಖ ಬೆಳ್ಳಗಾಗುತ್ತದೆ, ಕಪ್ಪು ಕಲೆಗಳು ಮಾಯವಾಗುತ್ತವೆ ಎಂಬ ಆಮಿಷವೊಡ್ಡುವ ಜಾಹೀರಾತುಗಳಿಗೇನೂ ಕಡಿಮೆ ಇಲ್ಲ. ಆದರೆ ಇಂತಹ ಜಾಹೀರಾತುಗಳನ್ನು ನಂಬಿ ಕ್ರೀಮ್ ಖರೀದಿಸಿ ಬಳಸುವುದು ಎಷ್ಟು ಸುರಕ್ಷಿತ? ಇದಕ್ಕೆ ಕೇರಳದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ.
ಹೌದು, ಕೇರಳದ ಮಲಪ್ಪುರಂನ 17 ವರ್ಷದ ಯುವತಿಯೊಬ್ಬಳು ಇನ್‌ಸ್ಟಾಗ್ರಾಮ್‌ನಲ್ಲಿ ಬಂದ ಫೇರ್‌ನೆಸ್ ಕ್ರೀಮ್ ಜಾಹೀರಾತು ನೋಡಿ ಅದನ್ನು ಖರೀದಿಸಿದ್ದಳು. ಮೊಡವೆ, ಕಪ್ಪು ಕಲೆಗಳು ಮತ್ತು ಮುಖದ ಮೇಲಿನ ಇತರ ಕಲೆಗಳು ಮಾಯವಾಗುತ್ತವೆ ಎಂಬ ಪ್ರಚಾರಕ್ಕೆ ಮರುಳಾಗಿದ್ದ ಯುವತಿ, ಜಾಹೀರಾತಿನಲ್ಲಿದ್ದ ವಾಟ್ಸ್‌ಆ್ಯಪ್ ನಂಬರ್‌ಗೆ ಸಂದೇಶ ಕಳುಹಿಸಿ ಕ್ರೀಮ್ ಆರ್ಡರ್ ಮಾಡಿದ್ದಳು. ಆರಂಭದಲ್ಲಿ ಮುಖದಲ್ಲಿ ಬದಲಾವಣೆ ಕಂಡಂತೆ ಅನಿಸಿದ್ದರಿಂದ ಸುಮಾರು ಒಂದು ವರ್ಷದವರೆಗೆ ಪದೇಪದೇ ಅದೇ ಕ್ರೀಮ್ ಬಳಸಿದ್ದಳು.
ಆದರೆ, ದಿನ ಕಳೆದಂತೆ ಆಕೆಯ ಆರೋಗ್ಯದಲ್ಲಿ ಏರುಪೇರಾಗತೊಡಗಿತು. ಇದ್ದಕ್ಕಿದ್ದಂತೆ ರಕ್ತದೊತ್ತಡ ಕಡಿಮೆಯಾಗುವುದು, ಪ್ರಜ್ಞೆ ತಪ್ಪುವುದು, ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳು ಎದುರಾದವು. ನಡೆಯಲು, ಮೆಟ್ಟಿಲು ಹತ್ತಲೂ ಕಷ್ಟವಾಗಿದ್ದರಿಂದ ಕೊನೆಗೆ ಆಸ್ಪತ್ರೆಗೆ ದಾಖಲಿಸಲಾಯಿತು.
ರಕ್ತದಲ್ಲಿ ಅಪಾಯಕಾರಿ ಪ್ರಮಾಣದ ಪಾದರಸ ಪತ್ತೆ!
ಮಲಪ್ಪುರಂನ ಆಸ್ಟರ್ MIMS ಮದರ್ ಆಸ್ಪತ್ರೆಯಲ್ಲಿ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ರಕ್ತ ಮತ್ತು ದೇಹದಲ್ಲಿ ಪಾದರಸದ ಪ್ರಮಾಣ ಅಪಾಯಕಾರಿಯಾಗಿ ಹೆಚ್ಚಾಗಿರುವುದು ಪತ್ತೆಯಾಯಿತು. ಕಿಡ್ನಿ ತಜ್ಞೆ ಡಾ. ಗೌರಿ ಎಸ್. ಅವರ ಪ್ರಕಾರ, ಪಾದರಸವು ಕಿಡ್ನಿಯ ಕಾರ್ಯನಿರ್ವಹಣೆಗೆ ಗಂಭೀರ ಹಾನಿ ಉಂಟುಮಾಡಬಹುದು. ಕಿಡ್ನಿಯಲ್ಲಿರುವ ರಕ್ತ ಶುದ್ಧೀಕರಿಸುವ ಫಿಲ್ಟರ್‌ಗಳ ಮೇಲೂ ಪರಿಣಾಮ ಬೀರಬಹುದು.ಪರೀಕ್ಷೆಯಲ್ಲಿ ಯುವತಿಗೆ ಮೆಂಬ್ರೇನಸ್ ನೆಫ್ರೋಪತಿ ಎಂಬ ಕಿಡ್ನಿ ಕಾಯಿಲೆ ಇರುವುದು ಪತ್ತೆಯಾಯಿತು. ಈ ಕಾಯಿಲೆಯಿಂದ ಕಿಡ್ನಿಯ ಫಿಲ್ಟರ್‌ಗಳಿಗೆ ಹಾನಿಯಾಗುತ್ತದೆ.
ಕ್ರೀಮ್‌ನಲ್ಲಿತ್ತು 12,500 ಪಿಪಿಎಂ ಪಾದರಸ!
ಯುವತಿ ಬಳಸುತ್ತಿದ್ದ ಕ್ರೀಮ್ ಅನ್ನು ಪರೀಕ್ಷಿಸಿದಾಗ ವೈದ್ಯರೇ ಬೆಚ್ಚಿಬಿದ್ದಿದ್ದರು. ಪಿಟಿಐ ವರದಿಯ ಪ್ರಕಾರ, ಆ ಕ್ರೀಮ್‌ನಲ್ಲಿ ಬರೋಬ್ಬರಿ 12,500 ಪಿಪಿಎಂ ಪಾದರಸ ಪತ್ತೆಯಾಗಿತ್ತು. ಸಾಮಾನ್ಯವಾಗಿ ಸೌಂದರ್ಯವರ್ಧಕ ಉತ್ಪನ್ನಗಳಲ್ಲಿ ಪಾದರಸದ ಅನುಮತಿಸಲಾದ ಮಿತಿ 1 ಪಿಪಿಎಂಗಿಂತ ಕಡಿಮೆ ಇರಬೇಕು. ಆದರೆ ಈ ಕ್ರೀಮ್‌ನಲ್ಲಿ ಮಿತಿಗಿಂತ ಸಾವಿರಾರು ಪಟ್ಟು ಹೆಚ್ಚಿನ ಪ್ರಮಾಣದ ಪಾದರಸ ಇತ್ತು. ಈ ಉತ್ಪನ್ನದಲ್ಲಿದ್ದ ಪಾದರಸವೇ ಯುವತಿಯ ಕಿಡ್ನಿ ಸಮಸ್ಯೆಗೆ ಕಾರಣವಾಗಿರುವ ಸಾಧ್ಯತೆಯನ್ನು ವೈದ್ಯಕೀಯ ಪರೀಕ್ಷೆಗಳು ಸೂಚಿಸಿವೆ.
ಕ್ರೀಮ್ ಖರೀದಿಸುವ ಮುನ್ನ ಈ ಎಚ್ಚರಿಕೆ ಇರಲಿ!
ಈ ಘಟನೆ ಹಿನ್ನೆಲೆಯಲ್ಲಿ ವೈದ್ಯರು ಸೌಂದರ್ಯವರ್ಧಕ ಉತ್ಪನ್ನಗಳ ಬಳಕೆಯಲ್ಲಿ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ಅಥವಾ ಇತರ ಸಾಮಾಜಿಕ ಜಾಲತಾಣಗಳ ಜಾಹೀರಾತುಗಳನ್ನು ನೋಡಿ ಅಪರಿಚಿತ ಕ್ರೀಮ್‌ಗಳನ್ನು ಖರೀದಿಸಬೇಡಿ. ಉತ್ಪನ್ನದ ತಯಾರಕರು, ಪದಾರ್ಥಗಳು, ಗುಣಮಟ್ಟ ಮತ್ತು ಅನುಮೋದನೆಗಳ ವಿವರ ಪರಿಶೀಲಿಸಿ. ಕೆಲವೇ ದಿನಗಳಲ್ಲಿ ಮುಖ ಬೆಳ್ಳಗಾಗುತ್ತದೆ, ಕಲೆಗಳು ಸಂಪೂರ್ಣ ಮಾಯವಾಗುತ್ತವೆ ಎಂಬ ಆಮಿಷಗಳಿಗೆ ಮರುಳಾಗಬೇಡಿ. ಮೊಡವೆ, ಕಪ್ಪು ಕಲೆ ಅಥವಾ ಪಿಗ್ಮೆಂಟೇಶನ್ ಸಮಸ್ಯೆಗಳಿದ್ದರೆ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ. ವೈದ್ಯರ ಸಲಹೆ ಇಲ್ಲದೆ ಯಾವುದೇ ಕ್ರೀಮ್ ಅನ್ನು ದೀರ್ಘಕಾಲ ಬಳಸಬೇಡಿ.
ನೆನಪಿಡಿ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ. ಸೋಶಿಯಲ್ ಮೀಡಿಯಾದಲ್ಲಿ ಕಾಣಿಸುವ ಪ್ರತಿಯೊಂದು ಜಾಹೀರಾತೂ ಸುರಕ್ಷಿತ ಉತ್ಪನ್ನದ ಭರವಸೆಯಲ್ಲ!