SOCIAL MEDIA

Newsletter

PARTNER SITES
Select Language Select State

9.5 ಲಕ್ಷದ ಕಾರು ಬೇಡ, 13 ಲಕ್ಷದ ಕಾರೇ ಬೇಕು! ಮದುವೆ ರದ್ದು ಮಾಡಿದ ಪೊಲೀಸ್ ಕಾನ್‌ಸ್ಟೆಬಲ್ ಸಸ್ಪೆಂಡ್!

ಹರಿಯಾಣದ ಸೋನಿಪತ್‌ನಲ್ಲಿ ₹13 ಲಕ್ಷ ಮೌಲ್ಯದ ಮಾರುತಿ ಬ್ರೆಝಾ ಕಾರು ವರದಕ್ಷಿಣೆಯಾಗಿ ನೀಡಬೇಕೆಂದು ಒತ್ತಾಯಿಸಿ ಮದುವೆ ರದ್ದುಗೊಳಿಸಿದ ಆರೋಪದ ಮೇಲೆ ದೆಹಲಿ ಪೊಲೀಸ್ ಪೇದೆ ಕುಲದೀಪ್ ಎಂಬಾತನನ್ನ ಅಮಾನತುಗೊಳಿಸಲಾಗಿದೆ. ವಧುವಿನ ಕುಟುಂಬವು ₹9.5 ಲಕ್ಷದ ಹ್ಯುಂಡೈ ಔರಾ ಕಾರು ಬುಕ್ ಮಾಡಿದ್ದರೂ, ವರ ಬ್ರೆಝಾ ಕಾರಿಗೆ ಪಟ್ಟು ಹಿಡಿದಿದ್ದ ಎಂದು ವಧುವಿನ ತಂದೆ ಆರೋಪಿಸಿದ್ದಾರೆ.

Written By Puttaraj K Alur
Published: Nov 24, 2026, 11:55 IST | Updated: Nov 24, 2026, 12:07 IST
Image Credit: Dowry Harassment
Join

Dowry Harassment: ಮದುವೆ ಮಂಟಪ ಸಿದ್ಧವಾಗಿತ್ತು, ವಧು ಮದುವೆಯ ಉಡುಪಿನಲ್ಲಿ ವರನಿಗಾಗಿ ಕಾಯುತ್ತಿದ್ದಳು. ಸಂಬಂಧಿಕರು, ಸ್ನೇಹಿತರು ಸೇರಿದಂತೆ ನೂರಾರು ಅತಿಥಿಗಳು ಸಮಾರಂಭಕ್ಕೆ ಆಗಮಿಸಿದ್ದರು. ಆದರೆ ವರನಿಗೆ ಬೇಕಿದ್ದ ದುಬಾರಿ ಕಾರು ಸಿಗಲಿಲ್ಲವೆಂಬ ಕಾರಣಕ್ಕೆ ಮದುವೆಯೇ ರದ್ದಾಯಿತು ಎಂಬ ಆರೋಪ ಕೇಳಿಬಂದಿದೆ. ಸುಮಾರು 13 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಸುಜುಕಿ ಬ್ರೆಝಾ ಕಾರಿಗೆ ಬೇಡಿಕೆ ಇಟ್ಟು ಮದುವೆ ನಿಲ್ಲಿಸಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಕುಲದೀಪ್ ಎಂಬಾತನನ್ನ ಅಮಾನತುಗೊಳಿಸಲಾಗಿದೆ.

ಈ ಘಟನೆ ಹರಿಯಾಣದ ಸೋನಿಪತ್‌ನಲ್ಲಿ ನವೆಂಬರ್ 20ರಂದು ನಡೆದಿದೆ. ವರದಕ್ಷಿಣೆ ಬೇಡಿಕೆ ಮತ್ತು ಮದುವೆ ರದ್ದುಗೊಳಿಸಿದ ಆರೋಪದ ಕುರಿತು ವಧುವಿನ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ದೆಹಲಿ ಪೊಲೀಸ್ ಇಲಾಖೆ ಕಾನ್‌ಸ್ಟೆಬಲ್ ವಿರುದ್ಧ ಇಲಾಖಾ ವಿಚಾರಣೆ ಆರಂಭಿಸಿದೆ.

ಆರು ತಿಂಗಳ ಹಿಂದೆಯೇ ನಿಶ್ಚಯವಾಗಿದ್ದ ಮದುವೆ

ವಧುವಿನ ತಂದೆ ಸುಭಾಷ್ ಕುಮಾರ್ ನೀಡಿರುವ ದೂರಿನ ಪ್ರಕಾರ, ಸುಮಾರು ಆರು ತಿಂಗಳ ಹಿಂದೆಯೇ ಕುಲದೀಪ್ ಮತ್ತು ಅವರ ಮಗಳ ಮದುವೆ ನಿಶ್ಚಯವಾಗಿತ್ತು. ನವೆಂಬರ್ 20ರಂದು ಸೋನಿಪತ್‌ನ ಮಮ್‌ಚಂದ್ ವಾಟಿಕಾದಲ್ಲಿ ಮದುವೆ ನಡೆಸಲು ಎರಡೂ ಕುಟುಂಬಗಳು ತೀರ್ಮಾನಿಸಿದ್ದವು. ಅದರಂತೆ ವಧುವಿನ ಕುಟುಂಬ ಮದುವೆಗೆ ಭರ್ಜರಿ ಸಿದ್ಧತೆ ಮಾಡಿಕೊಂಡಿತ್ತು. ವರನಿಗೆ ಉಡುಗೊರೆಯಾಗಿ ನೀಡಲು ಸುಮಾರು 9.5 ಲಕ್ಷ ರೂಪಾಯಿ ಮೌಲ್ಯದ ಹುಂಡೈ ಔರಾ ಕಾರನ್ನ ಬುಕ್ ಮಾಡಲಾಗಿತ್ತು. ಆದರೆ ವರ ಕುಲದೀಪ್‌ಗೆ ಆ ಕಾರು ಇಷ್ಟವಾಗಿರಲಿಲ್ಲ.

ತನಗೆ ಹುಂಡೈ ಔರಾ ಬೇಡ, ಸುಮಾರು 13 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಬ್ರೆಝಾ ಕಾರನ್ನೇ ನೀಡಬೇಕೆಂದು ಒತ್ತಾಯಿಸಿದ್ದಾನೆ ಎಂಬುದು ವಧುವಿನ ತಂದೆಯ ಆರೋಪ. ಇದರಿಂದ ವಧುವಿನ ಕುಟುಂಬ ಮೊದಲೇ ಬುಕ್ ಮಾಡಿದ್ದ ಹುಂಡೈ ಔರಾ ಕಾರಿನ ಬುಕಿಂಗ್ ರದ್ದುಗೊಳಿಸಿ ಬ್ರೆಝಾ ಕಾರಿಗಾಗಿ ಹುಡುಕಾಟ ನಡೆಸಿದೆ. ಆದರೆ ಮದುವೆಗೆ ಕೆಲವೇ ದಿನಗಳು ಬಾಕಿ ಇದ್ದುದರಿಂದ ಬೇಡಿಕೆಯ ಕಾರನ್ನ ಸಮಯಕ್ಕೆ ಸರಿಯಾಗಿ ವ್ಯವಸ್ಥೆ ಮಾಡಲು ಸಾಧ್ಯವಾಗಿರಲಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ.

ಚಿನ್ನಾಭರಣ, ಪೀಠೋಪಕರಣಗಳಿಗೂ ಬೇಡಿಕೆ ಇಟ್ಟಿದ್ದರಾ?

ಕಾರಿನ ಬೇಡಿಕೆಯ ಜೊತೆಗೆ ವರನ ಕುಟುಂಬ ಚಿನ್ನಾಭರಣ ಮತ್ತು ಇತರ ವಸ್ತುಗಳನ್ನೂ ಕೇಳಿತ್ತು ಎಂದು ವಧುವಿನ ತಂದೆ ಆರೋಪಿಸಿದ್ದಾರೆ. ವರನಿಗೆ ಎರಡು ತೊಲಾ ಚಿನ್ನದ ಸರ, ವರನ ತಾಯಿಗೆ ನಾಲ್ಕು ತೊಲಾ ಚಿನ್ನದ ಕಿವಿಯೋಲೆ ಹಾಗೂ ಬೆಳ್ಳಿಯ ಕಾಲುಂಗುರ ನೀಡಲು ಸಿದ್ಧತೆ ಮಾಡಲಾಗಿತ್ತು ಎನ್ನಲಾಗಿದೆ. ಇದಲ್ಲದೆ ವರನ ಸಹೋದರ ಮತ್ತು ಅವರ ಪತ್ನಿಗೂ ಆಭರಣಗಳನ್ನ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಕುಟುಂಬ ದೂರಿನಲ್ಲಿ ಹೇಳಿದೆ.

ಸೋಫಾ, ಅಲ್ಮಿರಾ ಸೇರಿದಂತೆ ವಿವಿಧ ಪೀಠೋಪಕರಣಗಳನ್ನ ಕೂಡ ನೀಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ವರದಿಯಾಗಿದೆ. ಮದುವೆ ಸಮಾರಂಭಕ್ಕಾಗಿ ಸುಮಾರು 1,200 ಅತಿಥಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. 11 ಸಾವಿರ ರೂಪಾಯಿ ವೆಚ್ಚದಲ್ಲಿ ಅಲಂಕೃತ ಕುದುರೆ ಹಾಗೂ 13,500 ರೂಪಾಯಿ ವೆಚ್ಚದಲ್ಲಿ ಡಿಜೆ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಮದುವೆಯ ಸಿದ್ಧತೆಗಳಿಗಾಗಿ ಸುಮಾರು 30 ಲಕ್ಷ ರೂಪಾಯಿ ಖರ್ಚು ಮಾಡಿರುವುದಾಗಿ ವಧುವಿನ ತಂದೆ ತಿಳಿಸಿದ್ದಾರೆ.

ಮಂಟಪಕ್ಕೆ ಬಂದ ವರ, ಮದುವೆ ಮಾಡಿಕೊಳ್ಳದೆ ವಾಪಸ್!

ನವೆಂಬರ್ 20ರಂದು ಸಂಜೆ ಸುಮಾರು 7.15ರ ವೇಳೆಗೆ ಕುಲದೀಪ್ ತನ್ನ ತಾಯಿಯೊಂದಿಗೆ ಸಾಮಾನ್ಯ ಉಡುಪಿನಲ್ಲಿ ಮದುವೆ ಮಂಟಪಕ್ಕೆ ಬಂದಿದ್ದಾನೆ. ಅಲ್ಲಿ ಬ್ರೆಝಾ ಕಾರಿನ ವ್ಯವಸ್ಥೆ ಮಾಡದಿರುವುದನ್ನ ಗಮನಿಸಿ ವಧುವಿನ ಕುಟುಂಬದವರೊಂದಿಗೆ ವಾಗ್ವಾದ ನಡೆಸಿದ್ದಾನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ವೇಳೆ ವಧುವಿನ ತಂದೆ ಸುಭಾಷ್ ಕುಮಾರ್ ಮತ್ತು ಕುಟುಂಬದ ಇತರರು ವರ ಹಾಗೂ ಆತನ ತಾಯಿಯನ್ನ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಮದುವೆ ಸಮಾರಂಭವನ್ನ ಮುಂದುವರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಅವರ ಮನವಿಗೆ ಒಪ್ಪದ ಕುಲದೀಪ್ ಮತ್ತು ಆತನ ತಾಯಿ ಮಂಟಪದಿಂದ ಹೊರಟುಹೋಗಿದ್ದಾರೆ ಎನ್ನಲಾಗಿದೆ. ಮದುವೆಯ ಉಡುಪಿನಲ್ಲಿದ್ದ ವಧು ಮಂಟಪದಲ್ಲೇ ಕಾಯುತ್ತಿದ್ದಳು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಾನ್‌ಸ್ಟೆಬಲ್ ಅಮಾನತು, ಇಲಾಖಾ ವಿಚಾರಣೆ ಆರಂಭ

ಘಟನೆಗೆ ಸಂಬಂಧಿಸಿದಂತೆ ವಧುವಿನ ಕುಟುಂಬ ಸೋನಿಪತ್ ಪೊಲೀಸರಿಗೆ ದೂರು ನೀಡಿದೆ. ದೆಹಲಿ ಪೊಲೀಸ್ ಇಲಾಖೆಯ ಉತ್ತರ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಕುಲದೀಪ್‌ನನ್ನ ನವೆಂಬರ್ 23ರಂದು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅವರ ವಿರುದ್ಧ ಇಲಾಖಾ ವಿಚಾರಣೆಯನ್ನೂ ಆರಂಭಿಸಲಾಗಿದೆ. ಸೋನಿಪತ್ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಗಹ್ಲಾವತ್ ಅವರು ವಧುವಿನ ಕುಟುಂಬದಿಂದ ದೂರು ಸ್ವೀಕರಿಸಿರುವುದನ್ನ ಖಚಿತಪಡಿಸಿದ್ದಾರೆ. ಸಮುದಾಯದ ಮುಖಂಡರ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಕುಟುಂಬ ಒಂದು ದಿನದ ಕಾಲಾವಕಾಶ ಕೇಳಿದ್ದ ಹಿನ್ನೆಲೆಯಲ್ಲಿ ಮಾತುಕತೆಗೆ ಅವಕಾಶ ನೀಡಲಾಗಿತ್ತು ಎಂದು ವರದಿಯಾಗಿದೆ.

ಆರೋಪಗಳನ್ನ ನಿರಾಕರಿಸಿದ ಕುಲದೀಪ್

ಇನ್ನೊಂದೆಡೆ ತನ್ನ ವಿರುದ್ಧ ಕೇಳಿಬಂದಿರುವ ಆರೋಪಗಳನ್ನ ಕಾನ್‌ಸ್ಟೆಬಲ್ ಕುಲದೀಪ್ ನಿರಾಕರಿಸಿದ್ದಾನೆ. ತಾನು ಯಾವುದೇ ಕಾರು ಅಥವಾ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿಲ್ಲವೆಂದು ಹೇಳಿಕೊಂಡಿದ್ದಾನೆ. ಮದುವೆ ಸಮಾರಂಭದಲ್ಲಿ ಉಂಟಾದ ಸಣ್ಣ ಭಿನ್ನಾಭಿಪ್ರಾಯವನ್ನ ದೊಡ್ಡ ವಿವಾದವನ್ನಾಗಿ ಮಾಡಲಾಗಿದೆ ಎಂಬುದು ಆತನ ವಾದವಾಗಿದೆ. ಮದುವೆ ಮೆರವಣಿಗೆಯನ್ನ ತಾನೇ ವಾಪಸ್ ಕಳುಹಿಸಿಲ್ಲ, ವಧುವಿನ ಕಡೆಯವರೇ ಮದುವೆ ಮುಂದುವರಿಸಲು ಅವಕಾಶ ನೀಡಲಿಲ್ಲವೆಂದು ಆತ ಹೇಳಿದ್ದಾನೆ.

ಒಟ್ನಲ್ಲಿ ದುಬಾರಿ ಕಾರಿನ ಬೇಡಿಕೆಯಿಂದ ಮದುವೆ ರದ್ದಾಗಿದೆ ಎಂಬ ಆರೋಪ ಸೋನಿಪತ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಧುವಿನ ಕುಟುಂಬದ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಕಾನ್‌ಸ್ಟೆಬಲ್‌ನನ್ನ ಅಮಾನತುಗೊಳಿಸಿ ತನಿಖಾ ಪ್ರಕ್ರಿಯೆ ಆರಂಭಿಸಿದೆ. ಮತ್ತೊಂದೆಡೆ ಆರೋಪಗಳನ್ನ ಕುಲದೀಪ್ ನಿರಾಕರಿಸಿದ್ದು, ಪ್ರಕರಣದ ಮುಂದಿನ ಬೆಳವಣಿಗೆಗಳತ್ತ ಗಮನ ನೆಟ್ಟಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES