SOCIAL MEDIA

Newsletter

PARTNER SITES
Select Language Select State

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ!

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ದೊಡ್ಡಮಟ್ಟದ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಸಿಎಂ ಡಿ.ಕೆ. ಶಿವಕುಮಾರ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಉಗ್ರವಾಗಿ ಆಗ್ರಹಿಸಿದ್ದಾರೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 09, 2026, 11:00 PM IST | Updated: Oct 09, 2026, 11:05 PM IST
Image Credit: DK Shivakumar
Join

ನವದೆಹಲಿ: "ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿ, ತಾವೆಸಗಿರುವ ತಪ್ಪನ್ನು ಒಪ್ಪಿಕೊಳ್ಳಬೇಕು" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀವ್ರವಾಗಿ ಆಗ್ರಹಿಸಿದ್ದಾರೆ.

ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮ ಹಾಗೂ ಅರ್ಹ ಮತದಾರರ ಹೆಸರು ಕೈಬಿಟ್ಟಿರುವುದನ್ನು ಖಂಡಿಸಿ, ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆಗೆ ಒತ್ತಾಯಿಸಿ ನವದೆಹಲಿಯ ವಿಜಯ್ ಚೌಕ್ ಬಳಿ ಶುಕ್ರವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ವಿರೋಧ ಪಕ್ಷಗಳನ್ನು ನಿರ್ಲಕ್ಷಿಸುತ್ತಿರುವುದಕ್ಕೆ ಆಕ್ಷೇಪ
"ವಿರೋಧ ಪಕ್ಷಗಳ ನಾಯಕರು ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತಿದ್ದರೂ ಮುಖ್ಯ ಚುನಾವಣಾ ಆಯುಕ್ತರು ಅವರನ್ನು ಭೇಟಿಯಾಗುತ್ತಿಲ್ಲ ಎಂದರೆ ಇದರ ಅರ್ಥವೇನು? ಅವರು ತಪ್ಪು ಮಾಡಿರುವುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೇ?" ಎಂದು ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

"ಚುನಾವಣಾ ಆಯೋಗವು ಸಂವಿಧಾನವನ್ನು ರಕ್ಷಿಸಲು ರೂಪಿಸಲಾಗಿರುವ ಸ್ವಾಯತ್ತ ಸಂಸ್ಥೆ. ಪ್ರತಿಯೊಬ್ಬರನ್ನೂ ಸಮಾನತೆಯಿಂದ ನೋಡುವುದು ಇದರ ಧರ್ಮ. ವಿರೋಧ ಪಕ್ಷವೇ ಇಲ್ಲದೆ ಸರ್ಕಾರ ನಡೆಸುವುದನ್ನು ಯಾವ ಪ್ರಜಾಪ್ರಭುತ್ವ ವ್ಯವಸ್ಥೆಯೂ ಒಪ್ಪುವುದಿಲ್ಲ. ನಮ್ಮ ರಾಜ್ಯದಲ್ಲಿ ನಡೆದಿರುವ ಎಸ್‌ಐಆರ್ ಅಕ್ರಮದ ಬಗ್ಗೆ ನಾವು ದೂರು ನೀಡಿದ ಮೇಲಷ್ಟೇ ಒಂದೇ ರಾತ್ರಿಯಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ" ಎಂದರು.

ಸುಪ್ರೀಂ ಕೋರ್ಟ್ ಮಧ್ಯಪ್ರವೇಶಕ್ಕೆ ಮನವಿ
"ನಮೂನೆ 6ರ (Form 6) ಬದಲಾವಣೆಗೆ ಅನುಮತಿ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಆಯೋಗಕ್ಕೆ ಚಾಟಿ ಬೀಸಿದೆ. ಈ ಅನ್ಯಾಯದ ವಿರುದ್ಧ ದನಿ ಎತ್ತಿದ ನ್ಯಾಯಾಲಯಕ್ಕೆ ಧನ್ಯವಾದಗಳು. ಸುಪ್ರೀಂ ಕೋರ್ಟ್ ಮತ್ತೊಮ್ಮೆ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ದೇಶ ಹಾಗೂ ಪ್ರಜಾಪ್ರಭುತ್ವವನ್ನು ಉಳಿಸುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ" ಎಂದರು.

ಚುನಾವಣಾ ಆಯುಕ್ತರು ಬಿಜೆಪಿ 'ಟೂಲ್' ಆಗಬಾರದು
"ಪ್ರಜಾಪ್ರಭುತ್ವ ಜೀವಂತವಾಗಿರಬೇಕಾದರೆ ಪ್ರಧಾನಿಯವರು ತಕ್ಷಣವೇ ಚುನಾವಣಾ ಆಯುಕ್ತರಿಗೆ ಹುದ್ದೆಯಿಂದ ಕೆಳಗಿಳಿಯಲು ಸೂಚನೆ ನೀಡಬೇಕು. ಇದು ಪ್ರಧಾನಮಂತ್ರಿಯವರ ಕರ್ತವ್ಯ. ಇಂತಹ ಗಂಭೀರ ವಿಷಯಗಳ ನಡುವೆ ಆಯುಕ್ತರನ್ನು ಹುದ್ದೆಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವೇ ಹೇಳಿದೆ. ಆಯುಕ್ತರು ಬಿಜೆಪಿಯ ಕೈಗೊಂಬೆಯಾಗಲಿ ಅಥವಾ ಯಾವುದೇ ರಾಜಕೀಯ ಪಕ್ಷದ 'ಟೂಲ್' ಆಗಲಿ ಕೆಲಸ ಮಾಡಬಾರದು" ಎಂದು ಖಾರವಾಗಿ ನುಡಿದರು.

"ಸಾಂವಿಧಾನಿಕ ಹುದ್ದೆಯಲ್ಲಿರುವವರು ಸಮತೋಲನ ಕಾಯ್ದುಕೊಳ್ಳಬೇಕು. ಆದರೆ ಜ್ಞಾನೇಶ್ ಕುಮಾರ್ ಅವರು ತಮ್ಮ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಪ್ರಧಾನಿಯವರು ಅವರ ರಾಜಿನಾಮೆಯನ್ನು ಕೇಳುವ ತಿಳುವಳಿಕೆ ತೋರಲಿದ್ದಾರೆ ಎಂದು ಭಾವಿಸುತ್ತೇನೆ. ತಕ್ಷಣವೇ ಈಗಿನ ಎಸ್‌ಐಆರ್‌ ಪ್ರಕ್ರಿಯೆಯನ್ನು ರದ್ದುಪಡಿಸಿ, ಎಲ್ಲ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ಮುಕ್ತ ಹಾಗೂ ನ್ಯಾಯಯುತವಾದ ಹೊಸ ನೀತಿಯನ್ನು ತರಬೇಕು" ಎಂದು ಒತ್ತಾಯಿಸಿದರು.

ಮತದಾನದ ಹಕ್ಕಿನ ರಕ್ಷಣೆಗೆ ಜಾಗೃತಿ ಅಭಿಯಾನಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಿಎಂ, ಮತದಾನದ ಹಕ್ಕಿನ ರಕ್ಷಣೆಗಾಗಿ ರಾಜ್ಯದ ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿಯೂ ಪಕ್ಷದ ವತಿಯಿಂದ ಜನಜಾಗೃತಿ ಅಭಿಯಾನ ನಡೆಸಲಾಗುವುದು ಎಂದರು.  

"ಇದು ಯಾವುದೇ ಒಂದೇ ಪಕ್ಷಕ್ಕೆ ಸೀಮಿತವಾದ ಹೋರಾಟವಲ್ಲ; ಸಂವಿಧಾನ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಯ ಹೋರಾಟ. ನಮೂನೆ 6 ಸಲ್ಲಿಸುವ ಮೂಲಕ ಅರ್ಹರು ಹೆಸರು ಸೇರ್ಪಡೆಗೊಳಿಸಬಹುದು. ಎಐಸಿಸಿ ಮಾರ್ಗದರ್ಶನದಂತೆ ರಾಜ್ಯದ ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಇರುವುದನ್ನು ಸರಿಪಡಿಸಲು ನಮ್ಮ ಸರ್ಕಾರ ಹಾಗೂ ಪಕ್ಷ ನೆರವಾಗಲಿದೆ" ಎಂದು ಅವರು ತಿಳಿಸಿದರು.

ರಾಷ್ಟ್ರಮಟ್ಟದಲ್ಲಿ ಒಗ್ಗೂಡಿದ ಪ್ರತಿಪಕ್ಷಗಳು
ಎಸ್‌ಐಆರ್‌ ಅಕ್ರಮಗಳ ವಿರುದ್ಧ ದೆಹಲಿಯ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರಮಟ್ಟದ ಪ್ರತಿಪಕ್ಷಗಳ ನಾಯಕರು ಚರ್ಚಿಸಿದ್ದು, ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಅವಧಿಯಲ್ಲಿ ನಡೆದಿರುವ ಮತದಾನದ ಹಕ್ಕಿನ ದುರುಪಯೋಗದ ವಿರುದ್ಧ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲಿವೆ ಎಂದು ಅವರು ಸ್ಪಷ್ಟಪಡಿಸಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES