ನವದೆಹಲಿ : ಭಾರತೀಯ ಐಟಿ ಕಂಪನಿಗಳಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಸರ್ಕಾರ ಶಾಕ್ ಕೊಟ್ಟಿದೆ. ಭಾರತದ 8 ಟೆಕ್ ಕಂಪನಿಗಳು, ಐಟಿ ಉದ್ಯೋಗಿಗಳನ್ನ PERM ಕಾರ್ಯಕ್ರಮದಿಂದ ಅಮಾನತುಗೊಳಿಸಲಾಗಿದೆ. H1B ವಿಸಾ ದುರುಪಯೋಗ ಆರೋಪದಡಿ ಕಂಪನಿಗಳ ವಿರುದ್ಧ ಟ್ರಂಪ್ ಸರ್ಕಾರ ಕ್ರಮಕ್ಕೆ ಮುಂದಾಗಿದ್ದು, ಈ ಕುರಿತ ವರದಿ ಇಲ್ಲಿದೆ ನೋಡಿ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರವು ದೇಶದ ವಲಸೆ ವ್ಯವಸ್ಥೆಯ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ. ವಿದೇಶಿ ಉದ್ಯೋಗಿಗಳಿಗೆ ಗ್ರೀನ್ ಕಾರ್ಡ್ ಪ್ರಕ್ರಿಯೆಯಲ್ಲಿ ಪರ್ಮನೆಂಟ್ ಲೇಬರ್ ಸರ್ಟಿಫಿಕೇಷನ್ ಪ್ರಮುಖವಾಗಿದೆ.. ಆದ್ರೀಗ ಅಮೆರಿಕಾ ಸರ್ಕಾರ ಮೈಕ್ರೋಸಾಫ್ಟ್ ಸೇರಿದಂತೆ ಹಲವು ಪ್ರಮುಖ ಐಟಿ ಕಂಪನಿಗಳನ್ನು ಈ ಕಾರ್ಯಕ್ರಮದಿಂದ ಅಮಾನತುಗೊಳಿಸಿದೆ. ಈ ಪಟ್ಟಿಯಲ್ಲಿ ಭಾರತೀಯ ಕಂಪನಿಗಳಾದ ಮೈಕ್ರೋಸಾಫ್ಟ್, ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ ಸೇರಿದಂತೆ 8 ಕಂಪನಿಗಳನ್ನ ಅಮಾನತುಗೊಳಿಸಲಾಗಿದೆ ಅಂತ, ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಈ ಕಂಪನಿಗಳಿಂದ ಸಲ್ಲಿಕೆಯಾಗುವ ಹೊಸ PERM ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಮತ್ತು ಈಗಾಗಲೇ ಸಲ್ಲಿಕೆಯಾಗಿರುವ ಕೆಲವು ಬಾಕಿ ಅರ್ಜಿಗಳ ಪ್ರಕ್ರಿಯೆಯನ್ನೂ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಕಾರ್ಮಿಕ ಇಲಾಖೆ ತಿಳಿಸಿದೆ.
PERM ಕಾರ್ಯಕ್ರಮದಿಂದ ಅಮಾನತುಗೊಂಡಿರುವ 8 ಕಂಪನಿಗಳು H-1B ವೀಸಾವನ್ನ ದುರುಪಯೋಗ ಪಡಿಸಿಕೊಂಡಿದೆ ಅಂತ,ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗಂಭೀರ ಆರೋಪ ಮಾಡಿದ್ದಾರೆ. H-1B ವಿಸಾದ ಮೂಲಕ ನಕಲಿ ಉದ್ಯೋಗ ಸೃಷ್ಟಿ, ಕಡಿಮೆ ವೇತನ ನೀಡುವುದು, ಸ್ಥಳೀಯ ಅಮೆರಿಕನ್ ಕಾರ್ಮಿಕರನ್ನು ಬದಲಾಯಿಸುವುದು ಹೀಗೆ ಹಲವು ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗ್ತಿದೆ ಅಂತ ಆರೋಪಿಸಲಾಗಿದೆ. ಜೆಡಿ ವ್ಯಾನ್ಸ್ ಅವರ ಪ್ರಕಾರ, ಮೈಕ್ರೋಸಾಫ್ಟ್ ಸುಮಾರು 6,000 ಅಮೆರಿಕನ್ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದ್ದು, ಇದೇ ವೇಳೆ ಕಂಪನಿಗೆ ಸುಮಾರು 6,300 H-1B ವೀಸಾಗಳು ಮತ್ತು ಸುಮಾರು 3,000 ಗ್ರೀನ್ ಕಾರ್ಡ್‌ಗಳು ದೊರೆತಿವೆ ಅಂತ ಹೇಳಿದ್ದಾರೆ.
ಇನ್ನು PERM ಯೋಜನೆಯಿಂದ ಭಾರತೀಯ ಐಟಿ ಕಂಪನಿಗಳನ್ನ ಅಮಾನತುಗೊಳಿಸಿದಕ್ಕೆ ಭಾರತೀಯ ವಿದೇಶಾಂಗ ಸಚಿವಾಲಯ ತೀವ್ರ ಖಂಡನೆ ವ್ಯಕ್ತಪಡಿಸಿದೆ.PERM ಪ್ರಕ್ರಿಯೆ ಮತ್ತು ಎಚ್-1ಬಿ ವೀಸಾ ಕಾರ್ಯಕ್ರಮಗಳು ಸಂಪೂರ್ಣವಾಗಿ ವಿಭಿನ್ನವಾದವು. PERM ಅರ್ಜಿಗಳ ಅಮಾನತಿನಿಂದಾಗಿ ಪ್ರಸ್ತುತ ಚಾಲ್ತಿಯಲ್ಲಿರುವ ಎಚ್-1ಬಿ ವೀಸಾಗಳ ಸಿಂಧುತ್ವಕ್ಕಾಗಲಿ ಅಥವಾ ಎಚ್-1ಬಿ ವೀಸಾದಾವರ ಸ್ಥಿತಿಗತಿಯ ಮೇಲಾಗಲಿ ಯಾವುದೇ ತಕ್ಷಣದ ಪರಿಣಾಮ ಬೀರುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದಾರೆ.
ಒಟ್ಟಾರೆ ಟ್ರಂಪ್ ಸರ್ಕಾರದ ಈ ದಿಢೀರ್ ನಿರ್ಧಾರದಿಂದ ಐಟಿ ಕಂಪನಿಗಳ ಮೇಲೆ ಗಂಭೀರ ಪರಿನಾಮ ಬೀರಲಿದೆ.. ಭಾರತೀಯ ಮೂಲದ 8 ಕಂಪನಿಗಳನ್ನ ಅಮಾನತುಗೊಳಿಸಿರೋದಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ..