• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ರಾಷ್ಟ್ರೀಯ
  • /ಲೋಕಸಭೆ ಕ್ಷೇತ್ರಗಳ ಸಂಖ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಕೇಂದ್ರ ಅಸ್ತು! 2051ರವರೆಗೆ ರಾಜ್ಯಗಳ ಸ್ಥಾನ ಹಂಚಿಕೆ ಯಥಾಸ್ಥಿತಿ

ಲೋಕಸಭೆ ಕ್ಷೇತ್ರಗಳ ಸಂಖ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಕೇಂದ್ರ ಅಸ್ತು! 2051ರವರೆಗೆ ರಾಜ್ಯಗಳ ಸ್ಥಾನ ಹಂಚಿಕೆ ಯಥಾಸ್ಥಿತಿ

ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನ ಶೇ.50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಪ್ರಸ್ತುತ 543 ಇರುವ ಸ್ಥಾನಗಳು ಸುಮಾರು 815ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನ ಹಂಚಿಕೆಯ ಅನುಪಾತವನ್ನ 2051ರವರೆಗೆ ಯಥಾಸ್ಥಿತಿಯಲ್ಲಿ ಉಳಿಸಲು ಕೇಂದ್ರ ಉದ್ದೇಶಿಸಿದೆ. ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೂ ಈ ಪ್ರಸ್ತಾವನೆ ಸಂಬಂಧಿಸಿದೆ. ಈ ಕುರಿತು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.

Written ByPuttaraj K Alur
Published: Nov 27, 2026, 18:07 IST|Updated: Nov 27, 2026, 18:19 IST
joinshare
ಲೋಕಸಭೆ ಕ್ಷೇತ್ರಗಳ ಸಂಖ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಕೇಂದ್ರ ಅಸ್ತು! 2051ರವರೆಗೆ ರಾಜ್ಯಗಳ ಸ್ಥಾನ ಹಂಚಿಕೆ ಯಥಾಸ್ಥಿತಿ
Image Credit: PM Modi

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ!  ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

2

ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು? ಪ್ಲಾಟ್‌ಫಾರಂ ಡೋರ್ ಹೊರತುಪಡಿಸಿ ಇರುವ ಪರ್ಯಾಯಗಳೇನು?

3

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ತೇಜಸ್ವಿ ಸೂರ್ಯ ಆಗ್ರಹ!

4

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

5

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Lok Sabha Seats: ಲೋಕಸಭೆಯ ಒಟ್ಟು ಸ್ಥಾನಗಳ ಸಂಖ್ಯೆಯನ್ನ ಶೇ.50ರಷ್ಟು ಹೆಚ್ಚಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಪ್ರಸ್ತುತ 543 ಇರುವ ಲೋಕಸಭಾ ಸ್ಥಾನಗಳು ಸುಮಾರು 815ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ರಾಜ್ಯಗಳ ನಡುವಿನ ಲೋಕಸಭಾ ಸ್ಥಾನಗಳ ಹಂಚಿಕೆಯ ಅನುಪಾತವನ್ನ 2051ರವರೆಗೆ ಬದಲಾಯಿಸದೆ ಮುಂದುವರಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ದಕ್ಷಿಣ ಭಾರತದ ರಾಜ್ಯಗಳು ವ್ಯಕ್ತಪಡಿಸುತ್ತಿದ್ದ ಆತಂಕದ ಹಿನ್ನೆಲೆಯಲ್ಲಿ ಈ ಹೊಸ ಸೂತ್ರವನ್ನ ರೂಪಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ತಿದ್ದುಪಡಿ ಪ್ರಸ್ತಾವನೆಗಳಿಗೆ ಅನುಮೋದನೆ ದೊರೆತಿದೆ. ನವೆಂಬರ್ 30ರಿಂದ ಆರಂಭವಾಗಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಗಳನ್ನ ಮಂಡಿಸುವ ಸಾಧ್ಯತೆಯಿದೆ.

543ರಿಂದ ಸುಮಾರು 815ಕ್ಕೆ ಲೋಕಸಭಾ ಸ್ಥಾನಗಳ ಹೆಚ್ಚಳ

ಪ್ರಸ್ತುತ ಲೋಕಸಭೆಯಲ್ಲಿ 543 ಚುನಾಯಿತ ಸ್ಥಾನಗಳಿವೆ. ಕೇಂದ್ರದ ಹೊಸ ಪ್ರಸ್ತಾವನೆಯ ಪ್ರಕಾರ, ದೇಶದ ಎಲ್ಲ ರಾಜ್ಯಗಳಲ್ಲೂ ಈಗಿರುವ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನ ಶೇ.50ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ ಲೋಕಸಭೆಯ ಒಟ್ಟು ಬಲ ಸುಮಾರು 815ಕ್ಕೆ ಏರಿಕೆಯಾಗಬಹುದು. ವಿಶೇಷವೆಂದರೆ ಈ ಹೆಚ್ಚಳವನ್ನ ಕೆಲವು ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸದೆ ಎಲ್ಲಾ ರಾಜ್ಯಗಳಿಗೂ ಸಮಾನ ಅನುಪಾತದಲ್ಲಿ ಅನ್ವಯಿಸುವ ಉದ್ದೇಶವಿದೆ. ಇದರಿಂದ ಪ್ರಸ್ತುತ ರಾಜ್ಯಗಳ ನಡುವೆ ಇರುವ ಸ್ಥಾನ ಹಂಚಿಕೆಯ ಪ್ರಮಾಣದಲ್ಲಿ ಬದಲಾವಣೆ ಆಗದಂತೆ ನೋಡಿಕೊಳ್ಳಲು ಕೇಂದ್ರ ಮುಂದಾಗಿದೆ.

2051ರವರೆಗೆ ರಾಜ್ಯಗಳ ಸ್ಥಾನ ಹಂಚಿಕೆಯಲ್ಲಿ ಬದಲಾವಣೆ ಇಲ್ಲ

ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ ರಾಜ್ಯಗಳ ನಡುವೆ ಲೋಕಸಭಾ ಸ್ಥಾನಗಳನ್ನ ಹಂಚಿಕೆ ಮಾಡುವ ವಿಚಾರ ಪ್ರಮುಖವಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಸ್ಥಾನಗಳನ್ನ ಮರುಹಂಚಿಕೆ ಮಾಡಿದರೆ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಬಹುದು ಎಂಬ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 1971ರ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗಿರುವ ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯ ಅನುಪಾತವನ್ನ ಇನ್ನೂ 25 ವರ್ಷಗಳ ಕಾಲ ಮುಂದುವರಿಸಲು ಕೇಂದ್ರ ಪ್ರಸ್ತಾಪಿಸಿದೆ. ಅಂದರೆ 2051ರವರೆಗೆ ರಾಜ್ಯಗಳ ಪ್ರಸ್ತುತ ಅನುಪಾತವನ್ನ ಕಾಯ್ದುಕೊಳ್ಳುವ ಉದ್ದೇಶ ಹೊಂದಿದೆ. ಈ ಕ್ರಮದಿಂದ ಯಾವುದೇ ರಾಜ್ಯದ ಲೋಕಸಭಾ ಪ್ರಾತಿನಿಧ್ಯದ ಪಾಲು ಕಡಿಮೆಯಾಗುವ ಆತಂಕವನ್ನ ನಿವಾರಿಸುವ ಪ್ರಯತ್ನ ಮಾಡಲಾಗಿದೆ.

ದಕ್ಷಿಣ ಭಾರತದ ರಾಜ್ಯಗಳ ಆತಂಕಕ್ಕೆ ಪರಿಹಾರದ ಸೂತ್ರ

ಕ್ಷೇತ್ರ ಮರುವಿಂಗಡಣೆ ವಿಚಾರದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳು ತಮ್ಮ ಆತಂಕವನ್ನ ವ್ಯಕ್ತಪಡಿಸಿದ್ದವು. ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಿರುವ ರಾಜ್ಯಗಳಿಗೆ ಹೊಸ ಜನಗಣತಿಯ ಆಧಾರದ ಮೇಲೆ ಲೋಕಸಭಾ ಸ್ಥಾನಗಳನ್ನ ಮರುಹಂಚಿಕೆ ಮಾಡಿದರೆ, ಉತ್ತರ ಭಾರತದ ಹೆಚ್ಚಿನ ಜನಸಂಖ್ಯೆ ಹೊಂದಿರುವ ರಾಜ್ಯಗಳಿಗೆ ಹೆಚ್ಚಿನ ಸ್ಥಾನಗಳು ಸಿಗಬಹುದು ಎಂಬ ಕಳವಳವಿತ್ತು. ಇದರಿಂದ ದಕ್ಷಿಣ ಭಾರತದ ರಾಜ್ಯಗಳ ಸಂಸತ್ತಿನ ಪ್ರಾತಿನಿಧ್ಯದ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಿಗೂ ಶೇ.50ರಷ್ಟು ಸ್ಥಾನಗಳನ್ನ ಹೆಚ್ಚಿಸುವುದು ಮತ್ತು 1971ರ ಜನಗಣತಿಯ ಆಧಾರದ ಮೇಲಿನ ಸ್ಥಾನ ಹಂಚಿಕೆಯ ಅನುಪಾತವನ್ನ 2051ರವರೆಗೆ ಮುಂದುವರಿಸುವ ಪ್ರಸ್ತಾವನೆಯನ್ನ ಕೇಂದ್ರ ಮುಂದಿಟ್ಟಿದೆ.

ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೂ ಸಂಬಂಧ

ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಪ್ರಸ್ತಾವನೆಯೂ ಈ ಬೆಳವಣಿಗೆಯೊಂದಿಗೆ ಸಂಬಂಧ ಹೊಂದಿದೆ. ಮಹಿಳಾ ಮೀಸಲಾತಿ ಕಾಯ್ದೆ ಅಂಗೀಕಾರವಾಗಿದ್ದರೂ, ಅದರ ಅನುಷ್ಠಾನ ಕ್ಷೇತ್ರ ಮರುವಿಂಗಡಣೆ ಮತ್ತು ಜನಗಣತಿ ಪ್ರಕ್ರಿಯೆಗೆ ಸಂಬಂಧಿಸಿದೆ. ಇದೀಗ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನ ಹೆಚ್ಚಿಸುವ ಪ್ರಸ್ತಾವನೆಯ ಮೂಲಕ ಮಹಿಳಾ ಮೀಸಲಾತಿಯನ್ನ ಜಾರಿಗೆ ತರುವ ಪ್ರಕ್ರಿಯೆಗೆ ವೇಗ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. 2029ರ ಲೋಕಸಭಾ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ತರುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಈ ಕುರಿತು ಅಂತಿಮ ನಿರ್ಧಾರ ಮಸೂದೆಗೆ ಸಂಸತ್ತಿನ ಅನುಮೋದನೆ ದೊರೆತ ನಂತರವೇ ಸ್ಪಷ್ಟವಾಗಲಿದೆ.

ನವೆಂಬರ್ 30ರಿಂದ ಸಂಸತ್ತಿನ ವಿಶೇಷ ಅಧಿವೇಶನ

ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ತಿದ್ದುಪಡಿ ಮಸೂದೆಗಳನ್ನ ಮಂಡಿಸಲು ಕೇಂದ್ರ ಸರ್ಕಾರ ಸಂಸತ್ತಿನ ವಿಶೇಷ ಅಧಿವೇಶನವನ್ನ ಕರೆದಿದೆ. ನವೆಂಬರ್ 30ರಿಂದ ಲೋಕಸಭೆಯ ವಿಶೇಷ ಕಲಾಪ ಆರಂಭವಾಗಲಿದ್ದು, ಡಿಸೆಂಬರ್ 2ರಂದು ರಾಜ್ಯಸಭೆಯ ಕಲಾಪ ನಡೆಯಲಿದೆ. ಡಿಸೆಂಬರ್ 3ರವರೆಗೆ ಅಧಿವೇಶನ ಮುಂದುವರಿಯುವ ನಿರೀಕ್ಷೆಯಿದೆ. ಈ ಅಧಿವೇಶನದಲ್ಲಿ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಮಸೂದೆ ಕಾನೂನಾಗಿ ಜಾರಿಯಾಗಿದೆ ಎಂದರ್ಥವಲ್ಲ. ಸಂಸತ್ತಿನ ಅನುಮೋದನೆ ದೊರೆತ ಬಳಿಕವೇ ಮುಂದಿನ ಪ್ರಕ್ರಿಯೆ ಆರಂಭವಾಗಲಿದೆ.

ಏಪ್ರಿಲ್‌ನಲ್ಲಿ ಮಸೂದೆಗೆ ಸಿಗದಿತ್ತು ಅಗತ್ಯ ಬಹುಮತ

ಕೇಂದ್ರ ಸರ್ಕಾರ ಈ ಹಿಂದೆ 2026ರ ಏಪ್ರಿಲ್‌ನಲ್ಲಿಯೂ ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಮಸೂದೆಯನ್ನ ಲೋಕಸಭೆಯಲ್ಲಿ ಮಂಡಿಸಿತ್ತು. ಆದರೆ ಮಸೂದೆ ಅಂಗೀಕಾರಕ್ಕೆ ಅಗತ್ಯವಿದ್ದ ಮೂರನೇ ಎರಡರಷ್ಟು ಬಹುಮತ ದೊರೆಯದ ಕಾರಣ ಅದು ಅಂಗೀಕಾರವಾಗಿರಲಿಲ್ಲ. ಆ ಸಂದರ್ಭದಲ್ಲಿ ಮತದಾನದಲ್ಲಿ ಭಾಗವಹಿಸಿದ್ದ 528 ಸದಸ್ಯರ ಪೈಕಿ 298 ಮಂದಿ ಮಸೂದೆಯ ಪರವಾಗಿ ಮತ ಚಲಾಯಿಸಿದ್ದರು. 230 ಸದಸ್ಯರು ವಿರೋಧವಾಗಿ ಮತ ಹಾಕಿದ್ದರು. ಮಸೂದೆ ಅಂಗೀಕಾರವಾಗಲು 352 ಮತಗಳ ಅಗತ್ಯವಿತ್ತು.

ಹೀಗಾಗಿ ಈ ಬಾರಿ ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯ ಅನುಪಾತವನ್ನ 2051ರವರೆಗೆ ಯಥಾಸ್ಥಿತಿಯಲ್ಲಿ ಉಳಿಸುವ ಪ್ರಸ್ತಾವನೆಯೊಂದಿಗೆ ಕೇಂದ್ರ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಒಟ್ನಲ್ಲಿ ಲೋಕಸಭಾ ಸ್ಥಾನಗಳನ್ನ ಶೇ.50ರಷ್ಟು ಹೆಚ್ಚಿಸುವುದು, ರಾಜ್ಯಗಳ ನಡುವಿನ ಸ್ಥಾನ ಹಂಚಿಕೆಯ ಅನುಪಾತವನ್ನ 2051ರವರೆಗೆ ಉಳಿಸುವುದು ಮತ್ತು ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಜಾರಿಗೆ ತರುವ ಉದ್ದೇಶಗಳು ಕೇಂದ್ರದ ಹೊಸ ಪ್ರಸ್ತಾವನೆಯಲ್ಲಿ ಪ್ರಮುಖವಾಗಿವೆ. ಈಗ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಈ ಮಸೂದೆಗಳ ಭವಿಷ್ಯ ನಿರ್ಧಾರವಾಗಬೇಕಿದೆ.

Add Zee News as a Preferred Source
TAGS:
Narendra Modi
Kannada News