ರಿಯಲ್ ಎಸ್ಟೇಟ್ ಕಂಪನಿ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಪ್ರವರ್ತಕರು ಕರೆದಿದ್ದ ಅಸಾಧಾರಣ ಸಾಮಾನ್ಯ ಸಭೆ ಅಂದರೆ EGM ಆರಂಭದಲ್ಲೇ ವಿಫಲವಾಗಿದೆ. ಸಭೆ ನಡೆಸಲು ಅಗತ್ಯವಿದ್ದ ಕನಿಷ್ಠ 30 ಸದಸ್ಯರ ಹಾಜರಾತಿಯನ್ನೂ ಪ್ರವರ್ತಕರು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಮತ್ತೊಂದೆಡೆ, ಷೇರುದಾರರಿಗೆ ಇ-ಮತದಾನದ ಅವಕಾಶ ನೀಡದಿರುವುದಕ್ಕೆ ಹೂಡಿಕೆದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಅನ್ಸಾಲ್ API ಸಭೆಯಲ್ಲಿ ನಡೆದಿದ್ದೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಸ್ಥಾಪಕ ಸುಶೀಲ್ ಅನ್ಸಾಲ್
ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (Ansal API) ಉತ್ತರ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಂಪನಿಯಾಗಿದ್ದು, ಪ್ರಸ್ತುತ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು ದಿವಾಳಿತನದ ಪ್ರಕ್ರಿಯೆಯನ್ನು (CIRP) ಎದುರಿಸುತ್ತಿದೆ ಎಂದು ವರದಿಯಾಗಿದೆ. ಈ ಸಂಸ್ಥೆ1967 ರಲ್ಲಿ ಸುಶೀಲ್ ಅನ್ಸಾಲ್ ಅವರಿಂದ ಸ್ಥಾಪಿಸಲ್ಪಟ್ಟ ಈ ಕಂಪನಿಯು ನವದೆಹಲಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ.
ರಿಯಲ್ ಎಸ್ಟೇಟ್ ವಲಯದ ಅನ್ಸಾಲ್ ಪ್ರಾಪರ್ಟೀಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಲ್ಲಿ ಪ್ರವರ್ತಕರಿಗೆ ಭಾರೀ ಹಿನ್ನಡೆಯಾಗಿದೆ. ನವೆಂಬರ್ 23ರಂದು ನವದೆಹಲಿಯ ಏರೋಸಿಟಿಯಲ್ಲಿರುವ ದಿ ರೋಸೇಟ್ ಹೌಸ್ ಹೋಟೆಲ್‌ನಲ್ಲಿ ಮಧ್ಯಾಹ್ನ 1 ಗಂಟೆಗೆ EGM ಆಯೋಜಿಸಲಾಗಿತ್ತು. ಪ್ರವರ್ತಕರಾದ ಪ್ರಣವ್ ಅನ್ಸಾಲ್, ಸುಶೀಲ್ ಅನ್ಸಾಲ್ ಸೇರಿದಂತೆ ಪ್ರವರ್ತಕ ಗುಂಪಿನ ಸದಸ್ಯರು ಈ ಸಭೆ ಕರೆದಿದ್ದರು.
ಆದರೆ ಸಭೆ ಆರಂಭಕ್ಕೂ ಮುನ್ನವೇ ಕಾನೂನುಬದ್ಧ ಕೋರಂ ಕೊರತೆ ಎದುರಾಗಿದೆ. ಕಂಪನಿ ಕಾಯ್ದೆ 2013ರ ಸೆಕ್ಷನ್ 103ರ ಪ್ರಕಾರ ಅಗತ್ಯವಿರುವ ಕನಿಷ್ಠ 30 ಸದಸ್ಯರು ಸಭೆಯಲ್ಲಿ ಹಾಜರಿರಲಿಲ್ಲ. ಹೀಗಾಗಿ ಸಭೆಯನ್ನು ಮಾನ್ಯವಾಗಿ ನಡೆಸಲು ಸಾಧ್ಯವಾಗದೆ ಯಾವುದೇ ಕಾರ್ಯಸೂಚಿಯನ್ನೂ ಕೈಗೆತ್ತಿಕೊಳ್ಳಲಾಗಿಲ್ಲ. ಯಾವುದೇ ನಿರ್ಣಯ ಅಂಗೀಕಾರವಾಗದೆ EGM ವಿಫಲವಾಗಿದೆ.
35 ಸಾವಿರಕ್ಕೂ ಹೆಚ್ಚು ಷೇರುದಾರರು.. ಇ-ವೋಟಿಂಗ್ ಎಲ್ಲಿ?
ಇನ್ನು ಈ ಸಭೆಯಲ್ಲಿ ಮತ್ತೊಂದು ಗಂಭೀರ ವಿವಾದ ಭುಗಿಲೆದ್ದಿದೆ. ಅನ್ಸಾಲ್ API ಕಂಪನಿಯಲ್ಲಿ 35 ಸಾವಿರಕ್ಕೂ ಹೆಚ್ಚು ಷೇರುದಾರರಿದ್ದಾರೆ. ಆದರೆ EGMನಲ್ಲಿ ರಿಮೋಟ್ ಇ-ವೋಟಿಂಗ್ ವ್ಯವಸ್ಥೆ ಕಲ್ಪಿಸದಿರುವುದು ಹೂಡಿಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕಂಪನಿಗಳ ನಿರ್ವಹಣೆ ಮತ್ತು ಆಡಳಿತ ನಿಯಮಗಳ 2014ರ ನಿಯಮ 20ರ ಪ್ರಕಾರ, ಪಟ್ಟಿಮಾಡಿದ ಕಂಪನಿಗಳು ಹಾಗೂ 1,000 ಅಥವಾ ಅದಕ್ಕಿಂತ ಹೆಚ್ಚು ಷೇರುದಾರರನ್ನು ಹೊಂದಿರುವ ಕಂಪನಿಗಳು ಇ-ಮತದಾನದ ಸೌಲಭ್ಯ ಒದಗಿಸಬೇಕಾಗುತ್ತದೆ. ಆದರೆ ಈ ಸಭೆಗೆ ಅಂತಹ ವ್ಯವಸ್ಥೆ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇ-ಮತದಾನದ ಅವಕಾಶ ನೀಡದಿರುವುದು ದೇಶದ ವಿವಿಧ ಭಾಗಗಳಲ್ಲಿರುವ ಸಣ್ಣ ಹೂಡಿಕೆದಾರರ ಮತದಾನದ ಹಕ್ಕಿಗೆ ಧಕ್ಕೆ ತಂದಿದೆ ಎಂದು ಷೇರುದಾರರು ಆಕ್ಷೇಪಿಸಿದ್ದಾರೆ. ಸಭೆಗೆ ಆಗಮಿಸಿದ್ದ ಸಾರ್ವಜನಿಕ ಷೇರುದಾರರು ಪ್ರಕ್ರಿಯೆಯ ಕಾನೂನುಬದ್ಧತೆಯನ್ನೇ ಪ್ರಶ್ನಿಸಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ದೆಡೆ ಅಗತ್ಯವಿರುವ 30 ಸದಸ್ಯರ ಕೋರಂ ಇಲ್ಲ. ಮತ್ತೊಂದೆಡೆ ಇ-ಮತದಾನದ ವ್ಯವಸ್ಥೆಯೂ ಇಲ್ಲ. ಈ ಎರಡು ಪ್ರಮುಖ ಲೋಪಗಳಿಂದಾಗಿ ಅನ್ಸಾಲ್ API ಪ್ರವರ್ತಕರು ಕರೆದಿದ್ದ EGM ಯಾವುದೇ ನಿರ್ಣಯ ಕೈಗೊಳ್ಳದೆ ಅಂತ್ಯಗೊಂಡಿದೆ.
ಒಟ್ಟಿನಲ್ಲಿ, ಸಾವಿರಾರು ಷೇರುದಾರರನ್ನು ಹೊಂದಿರುವ ರಿಯಲ್ ಎಸ್ಟೇಟ್ ಕಂಪನಿಯಲ್ಲಿ ಕಾರ್ಪೊರೇಟ್ ಆಡಳಿತ ಮತ್ತು ಹೂಡಿಕೆದಾರರ ಹಕ್ಕುಗಳ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.