ಹಾಲಿನ ಬೆಲೆ 8 ರೂ. ಏರಿಕೆ ಸಮರ್ಥಿಸಿಕೊಂಡ ಕೃಷಿ ಸಚಿವ ನರೇಂದ್ರ ಸ್ವಾಮಿ ಹೇಳಿದ್ದೇನು ಗೊತ್ತಾ?
ರಾಜ್ಯದಲ್ಲಿ ಹಾಲಿನ ಬೆಲೆ ಏರಿಕೆ ಭಾರೀ ಸದ್ದು ಮಾಡುತ್ತಿದ್ದು ಈ ಬಗ್ಗೆ ಕೃಷಿ ಸಚಿವ ಪಿ.ಎಂ. ನರೇಂದ್ರ ಸ್ವಾಮಿ ಸರ್ಕಾರದ ಈ ನಿರ್ಧಾರದಿಂದ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರಿಗೆ ಇದರಿಂದ ಪ್ರಯೋಜನವಾಗಿಲದೆ ಎಂದಿದ್ದಾರೆ.
ಶಿವಮೊಗ್ಗ: ಹಾಲಿನ ದರವನ್ನು ಒಮ್ಮೆಗೆ 8 ರೂ. ಏರಿಕೆ ಮಾಡಿರುವುದು ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಕೃಷಿ ಸಚಿವ ಪಿ. ಎಂ. ನರೇಂದ್ರ ಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷಿ ಸಚಿವ ನರೇಂದ್ರ ಸ್ವಾಮಿ, ಹಾಲಿನ ಬೆಲೆ ಏರಿಕೆಯಿಂದ ಹೈನುಗಾರಿಕೆಯನ್ನೇ ಅವಲಂಬಿಸಿರುವ ರೈತರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.
ಹಾಲಿನ ದರ 8 ರೂ. ಹೆಚ್ಚಳ.. ಇದರ ಹಂಚಿಕೆ ಹೇಗಿರಲಿದೆ?
ಸಿಎಂ ಹಾಗೂ ಸಚಿವರ ಒಮ್ಮತದೊಂದಿಗೆ ಸಚಿವ ಸಂಪುಟದಲ್ಲಿ ಹಾಲಿನ ದರ 8 ರೂ. ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಹಾಲಿನ ಬೆಲೆಯಲ್ಲಿ ಹೆಚ್ಚಿಸಲಾದ 8 ರೂ.ಗಳಲ್ಲಿ 7 ರೂ. ರೈತರಿಗೇ ಸೇರಲಿದೆ ಹಾಗೂ 1 ರೂ. ಹಾಲು ಒಕ್ಕೂಟಗಳಿಗೆ ನೀಡಲಾಗುತ್ತದೆ. ಹೆಚ್ಚುವರಿ ಹಣವನ್ನು ಸರ್ಕಾರ ತನ್ನ ಬಳಿ ಇಟ್ಟುಕೊಳ್ಳುತ್ತಿಲ್ಲ ಎಂದು ಕೃಷಿ ಸಚಿವರು ವಿವರಿಸಿದರು.
ಮುಂದಿನ ದಿನದಲ್ಲಿ ಒಕ್ಕೂಟಗಳಿಗೇ ಪೂರ್ಣ ಅಧಿಕಾರ:
ಇನ್ಮುಂದೆ ಹಾಲಿನ ಬೆಲೆ ನಿಗದಿ ಮಾಡುವ ಜವಾಬ್ದಾರಿ ಆಯಾ ಹಾಲು ಒಕ್ಕೂಟಗಳಿಗೇ ಸೀಮಿತವಾಗಲಿದೆ. ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಸ್ಥಿತಿ ಅರಿತು ಒಕ್ಕೂಟಗಳೇ ಬೆಲೆ ಪರಿಷ್ಕರಣೆ ಮಾಡಲಿವೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪಶು ಆಹಾರ ಮತ್ತು ನಿರ್ವಹಣಾ ವೆಚ್ಚ ಹೆಚ್ಚುತ್ತಿದ್ದು, ರೈತರ ಪರಿಸ್ಥಿತಿಯನ್ನು ಕಡೆಗಣಿಸಬಾರದು. ಹೈನುಗಾರಿಕೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ಶ್ರಮವಿದ್ದು, ಅವರಿಗೆ ತಕ್ಕ ಪ್ರತಿಫಲ ಸಿಗಬೇಕು. ರಾಜ್ಯದಲ್ಲಿ ಬೆಲೆ ಕಡಿಮೆಯಿರುವ ಕಾರಣ ಪಕ್ಕದ ರಾಜ್ಯದವರು ಹಾಲು ಖರೀದಿಸುತ್ತಿದ್ದಾರೆ ಎಂದು ತಿಳಿಸಿದರು.
2014ರಿಂದೀಚೆಗೆ ಪೆಟ್ರೋಲ್ ಬೆಲೆ ಎಷ್ಟು ಬಾರಿ ಏರಿಕೆಯಾಗಿದೆ ಎಂಬುದನ್ನೂ ಸಾರ್ವಜನಿಕರು ಪ್ರಶ್ನಿಸಬೇಕು. ಹಾಲಿನ ಬೆಲೆ ಏರಿಕೆ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಯಾರಾದರೂ ಸಾಬೀತುಪಡಿಸಲಿ. ಸರ್ಕಾರದ ಆದೇಶಗಳು ಮತ್ತು ಅನುದಾನಗಳಿಗೆ ನಿರ್ದಿಷ್ಟ ಷರತ್ತು ಹಾಗೂ ಮಾರ್ಗಸೂಚಿಗಳಿರುತ್ತವೆ ಎಂದು ಹೇಳಿದರು.
ರಾಜ್ಯದಲ್ಲಿಲ್ಲ ಮೇವಿನ ಕೊರತೆ:
ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ ಕೃಷಿ ಸಚಿವರು, ಎಂತಹ ಬರಗಾಲ ಇದ್ದರೂ ಸಹ ಧನಕರುಗಳಿಗೆ ಮೇವಿನ ಕೊರತೆ ಆಗದಂತೆ ನಿಗಾವಹಿಸಲು ಸರ್ಕಾರ ವಿವಿಧ ಇಲಾಖೆಗಳ ಸಮನ್ವಯದೊಂದಿಗೆ, ವಿಶ್ವ ವಿದ್ಯಾಲಯಗಳ ಜವಾಬ್ದಾರಿಯಲ್ಲಿ ಬೇಡಿಕೆಗೆ ತಕ್ಕಂತೆ ಮೇವಿನ ಸಂಗ್ರಹಣೆ ಮಾಡಲಾಗಿದೆ. ಮತ್ತೆ ಮೇವಿನ ಉತ್ಪಾದನೆಗೂ ತಯಾರಿ ಮಾಡಲಾಗಿದೆ ಎಂದು ದೃಢಪಡಿಸಿದರು.
ಸ್ಟಿಂಗ್ ಆಪರೇಷನ್ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ನರೇಂದ್ರ ಸ್ವಾಮಿ, ಒಬ್ಬ ಮಹಾನ್ ನಾಯಕನ ಷಡ್ಯಂತ್ರ ಇದೀಗ ಬಯಲಾಗಿದೆ. ತಾನೇ ಹಾಕಿದ ಬಲೆಗೆ, ಅವರೇ ಸಿಲುಕಿದ್ದಾರೆ. ತನಿಖೆ ನಡೆಯುತ್ತಿರುವುದರಿಂದ ಸಂಪೂರ್ಣ ಮಾಹಿತಿ ಇಲ್ಲದೆ ಮಾತನಾಡುವುದು ಸರಿಯಲ್ಲ. ಸಿಸಿಬಿ ಕ್ಲೀನ್‌ಚಿಟ್ ವಿಚಾರವಾಗಿ ಗೃಹ ಸಚಿವರು ಸೂಕ್ತ ಉತ್ತರ ನೀಡಲಿದ್ದಾರೆ. ಪಕ್ಷದ ಇಬ್ಬರು ಪ್ರಮುಖ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿಸಲು ಷಡ್ಯಂತ್ರ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ತಂದು ರಾಜಕೀಯ ಲಾಭ ಪಡೆಯಲು ಷಡ್ಯಂತ್ರ ರೂಪಿಸಿದ ನಾಯಕನೇ ತಾನು ಹಾಕಿದ ಬಲೆಗೆ ಸಿಲುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.