Mandya News: ಮಂಡ್ಯದ ಜನನಿಬಿಡ ಮಹಾವೀರ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನ ಅಡ್ಡಗಟ್ಟಿ 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದ ಯುವಕನನ್ನ ಮಂಡ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನ ಪತ್ತೆಹಚ್ಚಿ ವಿಚಾರಣೆ ಕೈಗೊಂಡಿದ್ದಾರೆ. ಕೌಟುಂಬಿಕ ಕಲಹ ಹಾಗೂ ಮಾನಸಿಕ ಸಮಸ್ಯೆಯಿಂದ ಯುವಕ ಈ ರೀತಿ ವರ್ತಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಮಂಡ್ಯ ನಗರದ ಪ್ರಮುಖ ಸಂಚಾರ ಕೇಂದ್ರಗಳಲ್ಲಿ ಒಂದಾದ ಮಹಾವೀರ ವೃತ್ತದಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಟ್ರಾಫಿಕ್‌ನಲ್ಲಿ ನಿಂತಿತ್ತು. ಇದೇ ವೇಳೆ ಬೈಕ್‌ನಲ್ಲಿ ಬಂದ ಯುವಕ ಏಕಾಏಕಿ ಬಸ್ಸಿನ ಮುಂಭಾಗಕ್ಕೆ ತೆರಳಿ ತನ್ನ ವಾಹನವನ್ನ ಅಡ್ಡಲಾಗಿ ನಿಲ್ಲಿಸಿದ್ದಾನೆ. ಬಳಿಕ ಬಸ್ಸಿನ ಎದುರು ನಿಂತು ಜೋರಾಗಿ 'ಅಲ್ಲಾಹು ಅಕ್ಬರ್' ಎಂದು ಘೋಷಣೆ ಕೂಗಿದ್ದಾನೆ ಎನ್ನಲಾಗಿದೆ.
ಜನನಿಬಿಡ ರಸ್ತೆಯಲ್ಲಿ ನಡೆದ ಈ ಅನಿರೀಕ್ಷಿತ ಘಟನೆಯಿಂದ ಬಸ್ಸಿನಲ್ಲಿದ್ದ ಪ್ರಯಾಣಿಕರು, ಚಾಲಕ ಮತ್ತು ನಿರ್ವಾಹಕರು ಸೇರಿದಂತೆ ಸ್ಥಳದಲ್ಲಿದ್ದ ಸಾರ್ವಜನಿಕರು ಕೆಲಕಾಲ ಆತಂಕಕ್ಕೊಳಗಾಗಿದ್ದಾರೆ. ಘೋಷಣೆ ಕೂಗಿದ ಬಳಿಕ ಯುವಕ ತನ್ನ ಬೈಕ್ ಹತ್ತಿ ಅಲ್ಲಿಂದ ವೇಗವಾಗಿ ತೆರಳಿದ್ದಾನೆ. ಈ ಸಂಪೂರ್ಣ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಗಮನ ಸೆಳೆದಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಮಂಡ್ಯ ಪೊಲೀಸರು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಬೈಕ್‌ನ ನೋಂದಣಿ ಸಂಖ್ಯೆಯನ್ನ ಆಧರಿಸಿ ಯುವಕನ ಗುರುತು ಪತ್ತೆಹಚ್ಚಿದ್ದಾರೆ. ಬಳಿಕ ಆತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪೊಲೀಸರ ವಶದಲ್ಲಿರುವ ಯುವಕನನ್ನ ಮಂಡ್ಯ ತಾಲೂಕಿನ ಹಾಲಹಳ್ಳಿ ಗ್ರಾಮದ ನಿವಾಸಿ ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾ ರಾಣಿ, ಯುವಕನನ್ನ ವಶಕ್ಕೆ ಪಡೆದು ಪ್ರಾಥಮಿಕ ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.
Umar Farooq stopped his bike in the middle of traffic, stood in front of a bus and shouted “Allahu Akbar” and “Nara-e-Takbir" in Mandya, Karnataka. Passengers and locals were left terrified. He then fled on his bike. https://t.co/SVBWy8a4EO
— Team Hindu United (@TeamHinduUnited) November 20, 2026
ವಿಚಾರಣೆ ಸಂದರ್ಭದಲ್ಲಿ ಉಮರ್ ಫಾರೂಕ್ ಅಸಹಜವಾಗಿ ವರ್ತಿಸುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ತನ್ನೊಳಗೆ ದೇವರು ಪ್ರವೇಶಿಸಿದ್ದರಿಂದ ಘೋಷಣೆ ಕೂಗಿದ್ದಾಗಿ ಆತ ಹೇಳಿಕೊಂಡಿದ್ದಾನೆಂದು ಎಸ್ಪಿ ಮಾಹಿತಿ ನೀಡಿದ್ದಾರೆ. ಈ ಹೇಳಿಕೆಯ ಹಿನ್ನೆಲೆಯಲ್ಲಿ ಆತನ ಮಾನಸಿಕ ಸ್ಥಿತಿಯ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯ ವೈಯಕ್ತಿಕ ಹಾಗೂ ಕೌಟುಂಬಿಕ ವಿಚಾರಗಳ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಉಮರ್ ಫಾರೂಕ್ ತನ್ನ ಎರಡನೇ ಪತ್ನಿಯೊಂದಿಗೆ ಕೌಟುಂಬಿಕ ಕಲಹ ಹೊಂದಿದ್ದನು ಎನ್ನಲಾಗಿದೆ. ಈ ಸಂಬಂಧ ಆತನ ಪತ್ನಿ ಈ ಹಿಂದೆಯೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೌಟುಂಬಿಕ ಸಮಸ್ಯೆ ಮತ್ತು ಮಾನಸಿಕ ಒತ್ತಡದ ಹಿನ್ನೆಲೆಯಲ್ಲಿ ಆತ ಕಳೆದ ಕೆಲವು ದಿನಗಳಿಂದ ಅಸಹಜವಾಗಿ ವರ್ತಿಸುತ್ತಿದ್ದ ಎಂಬ ವಿಚಾರವೂ ಸ್ಥಳೀಯರು ಹಾಗೂ ಕುಟುಂಬಸ್ಥರ ವಿಚಾರಣೆಯಿಂದ ತಿಳಿದುಬಂದಿದೆ ಎಂದು ವರದಿಯಾಗಿದೆ.
ಸದ್ಯ ಆರೋಪಿಯ ಮಾನಸಿಕ ಆರೋಗ್ಯದ ಸ್ಥಿತಿಯನ್ನ ಖಚಿತಪಡಿಸಿಕೊಳ್ಳಲು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ಪೊಲೀಸರು ಮುಂದಾಗಿದ್ದಾರೆ. ವೈದ್ಯಕೀಯ ಪರೀಕ್ಷೆಯ ವರದಿ ಬಂದ ಬಳಿಕ ಹಾಗೂ ಪ್ರಕರಣದ ಕುರಿತು ಸಂಪೂರ್ಣ ತನಿಖೆ ನಡೆಸಿದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಡಾ.ಶೋಭಾ ರಾಣಿ ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಯಾವುದೇ ಊಹಾಪೋಹಗಳು ಅಥವಾ ವದಂತಿಗಳನ್ನ ಹರಡದಂತೆ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ಪ್ರಕರಣದ ನಿಜವಾದ ಹಿನ್ನೆಲೆ ಮತ್ತು ಆರೋಪಿಯ ಆರೋಗ್ಯದ ಸ್ಥಿತಿಯ ಕುರಿತು ವೈದ್ಯಕೀಯ ತಪಾಸಣೆ ಹಾಗೂ ತನಿಖೆಯ ನಂತರ ಹೆಚ್ಚಿನ ಸ್ಪಷ್ಟತೆ ದೊರೆಯಬೇಕಿದೆ.