SOCIAL MEDIA

Newsletter

PARTNER SITES
Select Language Select State

ಮೈಸೂರಲ್ಲಿ ಬುಧವಾರದಂದು ಮಾಂಸ ಮಾರಾಟ ಬಂದ್‌! ಯಾಕೆ ಗೊತ್ತಾ?

Complete Ban on Meat Sale Tomorrow in mysore | ಬುಧವಾರದಂದು ಮೈಸೂರಿನಾದ್ಯಂತ ಮಾಂಸ ಮಾರಾಟ ನಿಷೇಧಿಸಲಾಗಿದೆ.

Written By Ramya. R. Gowda
Published: Nov 24, 2026, 13:35 IST | Updated: Nov 24, 2026, 13:40 IST
Join

ಮೈಸೂರು : ಬುಧವಾರ ಮೈಸೂರು ನಗರದಾದ್ಯಂತ ಚಿಕನ್, ಮಟನ್ ಸೇರಿದಂತೆ ಎಲ್ಲಾ ತರಹದ ಮಾಂಸ ಮಾರಾಟವನ್ನು ಮಹಾನಗರ ಪಾಲಿಕೆ ಸಂಪೂರ್ಣವಾಗಿ ಬ್ಯಾನ್ ಮಾಡಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚಬೇಕು. ಒಂದು ವೇಳೆ ರೂಲ್ಸ್ ಬ್ರೇಕ್ ಮಾಡಿ ಕದ್ದುಮುಚ್ಚಿ ಮಾರಾಟ ಮಾಡಿದ್ರೆ ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಅಂತ ಎಚ್ಚರಿಕೆ ನೀಡಲಾಗಿದೆ.

ಮೈಸೂರು ಸಾಂಸ್ಕೃತಿಕ ನಗರಿ ಮೈಸೂರಿನ ನಾನ್-ವೆಜ್ ಪ್ರಿಯರಿಗೆ ಮೈಸೂರು ಮಹಾನಗರ ಪಾಲಿಕೆ ಒಂದು ಬೇಸರದ ಸುದ್ದಿ ಕೊಟ್ಟಿದೆ. ನಾಳೆ, ಅಂದರೆ ನವೆಂಬರ್ 25ರ ಬುಧವಾರ ಮೈಸೂರು ನಗರದ ತುಂಬಾ ಎಲ್ಲಾ ತರಹದ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿ ಪಾಲಿಕೆ ಅಧಿಕೃತ ಆದೇಶ ಹೊರಡಿಸಿದೆ. ಹೀಗಾಗಿ ಬುಧವಾರ ಮೈಸೂರಿನಲ್ಲಿ ಎಲ್ಲೂ ಚಿಕನ್, ಮಟನ್, ಮೀನು ಸೇರಿದಂತೆ ಯಾವುದೇ ಮಾಂಸದ ಅಂಗಡಿಗಳು ಓಪನ್ ಆಗಲ್ಲ. ನಾನ್-ವೆಜ್ ಇಲ್ಲದೆ ಊಟ ಸೇರಲ್ಲ ಅನ್ನೋರಿಗೆ ನಾಳೆ ಒಂದು ದಿನ ಬ್ರೇಕ್ ಬೀಳೋದು ಪಕ್ಕಾ ಆಗಿದೆ.

ಮಾಂಸ ಮಾರಾಟ ಬ್ಯಾನ್ ಗೆ ಕಾರಣ ಏನು?
ಮಹಾನ್ ತತ್ವಜ್ಞಾನಿ ಹಾಗೂ ಮಾನವತಾವಾದಿ ಸೈಂಟ್ ಟಿ.ಎಲ್. ವಾಸವಾನಿ ಅವರ ಜಯಂತಿ ಇರುವುದರಿಂದ ಪಾಲಿಕೆ ಈ ನಿರ್ಧಾರ ತಗೊಂಡಿದೆ. ಪ್ರಾಣಿ ಹಿಂಸೆ ತಡೆಯಬೇಕು ಮತ್ತು ವಾಸವಾನಿ ಅವರ ಅಹಿಂಸಾ ತತ್ವಕ್ಕೆ ಗೌರವ ಕೊಡಬೇಕು ಅನ್ನೋ ಉದ್ದೇಶದಿಂದ ಪ್ರತಿ ವರ್ಷದಂತೆ ಈ ಸಲ ಕೂಡ ಒಂದು ದಿನ ಪ್ರಾಣಿವಧೆ ಮತ್ತು ಮಾಂಸ ಮಾರಾಟಕ್ಕೆ ಬ್ರೇಕ್ ಹಾಕಲಾಗಿದೆ. ಸೈಂಟ್ ಟಿ.ಎಲ್. ವಾಸವಾನಿ ಅವರ ಜಯಂತಿಯನ್ನು ಅಹಿಂಸಾ ದಿನವನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ, ನಗರದಾದ್ಯಂತ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.

ಪಾಲಿಕೆಯಿಂದ ಖಡಕ್ ಸೂಚನೆ
ಮೈಸೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು (ಪರಿಸರ) ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ಕಸಾಯಿಖಾನೆಗಳು ಮತ್ತು ಮಾಂಸದ ಅಂಗಡಿಗಳನ್ನು ನಾಳೆ ಕಡ್ಡಾಯವಾಗಿ ಮುಚ್ಚಲೇಬೇಕು ಅಂತ ಖಡಕ್ ಸೂಚನೆ ಕೊಟ್ಟಿದ್ದಾರೆ.ಸಾಮಾನ್ಯ ದಿನಗಳಲ್ಲಿ ಮೈಸೂರಿನಲ್ಲಿ ಬುಧವಾರ ಬಂತು ಅಂದ್ರೆ ಮಾಂಸದ ಅಂಗಡಿಗಳ ಮುಂದೆ ಜನ ಕ್ಯೂ ನಿಂತಿರುತ್ತಾರೆ, ಭರ್ಜರಿ ವ್ಯಾಪಾರ ನಡೆಯುತ್ತೆ. ಆದ್ರೆ ನಾಳೆ ನಗರದ ಯಾವುದೇ ಮೂಲೆಯಲ್ಲೂ ಮಾಂಸ ಮಾರಾಟ ನಡೆಯದಂತೆ ಅಧಿಕಾರಿಗಳು ಹದ್ದಿನ ಕಣ್ಣಿಡಲಿದ್ದಾರೆ.ಒಂದು ದಿನದ ಮಟ್ಟಿಗೆ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಮುಚ್ಚಿ ಸಹಕರಿಸಬೇಕು. ಸಾರ್ವಜನಿಕರು ಕೂಡ ಪಾಲಿಕೆಯ ಆದೇಶಕ್ಕೆ ಗೌರವ ಕೊಟ್ಟು ಕೈಜೋಡಿಸಬೇಕು ಅಂತ ಪ್ರಕಟಣೆಯಲ್ಲಿ ಕೇಳಿಕೊಳ್ಳಲಾಗಿದೆ.

ರೂಲ್ಸ್ ಬ್ರೇಕ್ ಮಾಡಿದ್ರೆ ಬೀಳುತ್ತೆ ಕಠಿಣ ಶಿಕ್ಷೆ!
ಪಾಲಿಕೆಯ ಆದೇಶವನ್ನು ಮೀರಿ ಯಾರಾದ್ರೂ ಕದ್ದುಮುಚ್ಚಿ ಮಾಂಸ ಮಾರಾಟ ಮಾಡೋದು ಕಂಡುಬಂದ್ರೆ ಅಂಥವರಿಗೆ ಪಾಲಿಕೆ ಅಧಿಕಾರಿಗಳು ಸರಿಯಾಗಿ ಬಿಸಿ ಮುಟ್ಟಿಸಲಿದ್ದಾರೆ. ನಿಯಮ ಉಲ್ಲಂಘನೆ ಮಾಡುವ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳ ತಂಡ ನಗರದಾದ್ಯಂತ ರೌಂಡ್ಸ್ ಹೊಡೆಯಲಿದ್ದು, ಎಲ್ಲಾ ಏರಿಯಾಗಳಲ್ಲೂ ಪರಿಶೀಲನೆ ನಡೆಸಲಿದೆ.
ಒಟ್ಟಿನಲ್ಲಿ, ಸೈಂಟ್ ಟಿ.ಎಲ್. ವಾಸವಾನಿ ಜಯಂತಿಯ ಪ್ರಯುಕ್ತ ನಾಳೆ ಮೈಸೂರು ನಗರದಲ್ಲಿ ಅಹಿಂಸಾ ದಿನವನ್ನು ಆಚರಿಸಲಾಗುತ್ತಿದ್ದು, ಮಾಂಸ ಮಾರಾಟಕ್ಕೆ ಸಂಪೂರ್ಣ ವಿರಾಮ ಬೀಳಲಿದೆ. ಹೀಗಾಗಿ ಮೈಸೂರಿನ ನಾನ್-ವೆಜ್ ಪ್ರಿಯರು ನಾಳೆ ಒಂದು ದಿನ ಸಸ್ಯಾಹಾರಿ ಊಟಕ್ಕೆ ಹೊಂದಿಕೊಳ್ಳಲೇಬೇಕಾಗಿದೆ.

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.
Read More

ZEENEWS TRENDING STORIES