ಮೈಸೂರಿನಲ್ಲಿ ಪರಿಸರ ಸ್ನೇಹಿ ದೀಪಾವಳಿ: ಪಟಾಕಿ ಬಳಕೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ
ಮೈಸೂರಿನಲ್ಲಿ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಮೈಸೂರು ಮಹಾನಗರ ಪಾಲಿಕೆಯು ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಹೊರಡಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶವಿದ್ದು, ಉಳಿದ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಹಾಗೂ ಮಾಲಿನ್ಯರಹಿತವಾಗಿ ಆಚರಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಸಾರ್ವಜನಿಕರು ಮತ್ತು ಪಟಾಕಿ ಮಾರಾಟಗಾರರಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ವಾಯುಮಾಲಿನ್ಯ ಮತ್ತು ಶಬ್ದಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಂಡಿರುವ ಮೈಸೂರು ಮಹಾನಗರ ಪಾಲಿಕೆ, ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು ಹಾಗೂ ನಿಗದಿತ ಸಮಯದಲ್ಲೇ ಪಟಾಕಿ ಸಿಡಿಸಬೇಕು ಎಂದು ಕಡಕ್ ಆದೇಶ ಹೊರಡಿಸಿದೆ.
ರಾತ್ರಿ 8 ರಿಂದ 10ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ:
ಹೌದು, ಸುಪ್ರೀಂ ಕೋರ್ಟ್ ನೀಡಿರುವ ಪ್ರಮುಖ ನಿರ್ದೇಶನಗಳ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಪಟಾಕಿ ಸಿಡಿಸಲು ಕೇವಲ ರಾತ್ರಿ 8ರಿಂದ 10 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಈ ನಿಗದಿತ ಅವಧಿಯನ್ನು ಹೊರತುಪಡಿಸಿ ಉಳಿದ ಯಾವುದೇ ಸಮಯದಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸುವಂತಿಲ್ಲ:
ಅಷ್ಟೇ ಅಲ್ಲದೆ, ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ಧಾರ್ಮಿಕ ಕೇಂದ್ರಗಳು ಸೇರಿದಂತೆ ನಗರದ ನಿಷೇಧಿತ ಹಾಗೂ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ಪಟಾಕಿ ಸಿಡಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹಸಿರು ಪಟಾಕಿ ಖರೀದಿಸುವಾಗ ಇರಲಿ ಎಚ್ಚರ:
ಹಸಿರು ಪಟಾಕಿಗಳನ್ನು ಖರೀದಿಸುವಾಗ ಸಾರ್ವಜನಿಕರು ವಿಶೇಷ ಎಚ್ಚರಿಕೆ ವಹಿಸಬೇಕಿದೆ. ಪಟಾಕಿ ಪ್ಯಾಕೆಟ್‌ಗಳ ಮೇಲೆ ಹಸಿರು ಪಟಾಕಿಯ ಅಧಿಕೃತ ಚಿಹ್ನೆ ಮತ್ತು ಕ್ಯೂಆರ್ ಕೋಡ್ ಇರುವುದನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಮೊಬೈಲ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ, ಅದು ಅಧಿಕೃತ ಸಂಸ್ಥೆಗಳಿಂದ ಪ್ರಮಾಣೀಕರಿಸಲ್ಪಟ್ಟ ಅಸಲಿ ಹಸಿರು ಪಟಾಕಿಯೇ ಎಂಬುದನ್ನು ಖಚಿತಪಡಿಸಿಕೊಂಡೇ ಖರೀದಿಸುವಂತೆ ಮೈಸೂರು ಮಹಾನಗರ ಪಾಲಿಕೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ನಿಯಮ ಮೀರಿದರೆ ಗೋದಾಮು ಮುಟ್ಟುಗೋಲು, ಕಾನೂನು ಕ್ರಮ:
ಮೈಸೂರು ಮಹಾ ನಗರ ಪಾಲಿಕೆಯ ಈ ನಿಯಮಗಳು ಕೇವಲ ಸಾರ್ವಜನಿಕರಿಗೆ ಮಾತ್ರವಲ್ಲ, ಪಟಾಕಿ ಮಾರಾಟಗಾರರು ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಒಂದು ವೇಳೆ ನಿಷೇಧಿತ ರಾಸಾಯನಿಕಯುಕ್ತ ಪಟಾಕಿಗಳನ್ನು ದಾಸ್ತಾನು ಮಾಡುವುದು ಅಥವಾ ಮಾರಾಟ ಮಾಡುವುದು ಕಂಡುಬಂದರೆ, ಅಂತಹ ಗೋದಾಮು ಹಾಗೂ ಅಂಗಡಿಗಳನ್ನು ತಕ್ಷಣವೇ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ. ನಿಯಮ ಉಲ್ಲಂಘಿಸುವ ವ್ಯಾಪಾರಿಗಳು ಹಾಗೂ ಸಾರ್ವಜನಿಕರ ವಿರುದ್ಧ ಪರಿಸರ ಸಂರಕ್ಷಣೆ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ತಿಳಿಸಿದೆ.