ಕಬ್ಬಿನ ದರ ಏರಿಕೆಗಾಗಿ ಮಂಡ್ಯದಲ್ಲಿ ರೈತರ ರಣಕಹಳೆ.. ಮೈಶುಗರ್ ಸಕ್ಕರೆ ಗೋದಾಮಿಗೆ ಅನ್ನದಾತರ ಮುತ್ತಿಗೆ
ಕಬ್ಬಿನ ದರ ಏರಿಕೆ ಮಾಡಿ, ರಾಜ್ಯದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ಮಂಡ್ಯದಲ್ಲಿ ರೈತರು ಮೈಶುಗರ್ ಸಕ್ಕರೆ ಗೋದಾಮಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆಗೆ ಆಗ್ರಹಿಸಿ ರೈತರ ನಿರಂತರ ಹೋರಾಟ ನಡೆಯುತಿದೆ. ಇಂದು ಮಂಡ್ಯದಲ್ಲೂ ಅನ್ನದಾತರು ಸಿಡಿದೆದ್ದಿದ್ದಾರೆ. ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಸಕ್ಕರೆ ಗೋದಾಮಿಗೆ ಬೀಗ ಹಾಕಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ದೊಡ್ಡ ಹೈಡ್ರಾಮವೇ ನಡೆದಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ.
ಒಂದು ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸ್ತಿರೋ ರೈತರು, ಮತ್ತೊಂದೆಡೆ ಗೇಟ್ ಮೇಲೆತ್ತಿ ಹೈಡ್ರಾಮಾ ಸೃಷ್ಟಿಸ್ತಿರೋ ರೈತರು ಈ ಎಲ್ಲಾ ದೃಶ್ಯ ಕಂಡು ಬಂದಿದ್ದು ಮಂಡ್ಯದಲ್ಲಿ. ಹೌದು.! ಕಬ್ಬು ಬೆಳೆದ ರೈತರಿಗೆ ಸೂಕ್ತ ಬೆಲೆ ಸಿಗಬೇಕು, ಬೆವರು ಸುರಿಸಿ ಬೆಳೆದ ಬೆಳೆಗೆ ನ್ಯಾಯಯುತ ದರ ನಿಗದಿಯಾಗಬೇಕು ಎಂದು ಆಗ್ರಹಿಸಿ, ಕಬ್ಬಿನ ದರ ಹೆಚ್ಚಳಕ್ಕೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತರು ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದರು. ಟನ್ ಕಬ್ಬಿಗೆ 5,500 ರೂಪಾಯಿ ದರ ನಿಗದಿಪಡಿಸಬೇಕು. ರೈತರ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೊ. ನಂಜುಂಡಸ್ವಾಮಿ ಅವರ ಪುತ್ರಿ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಸಕ್ಕರೆ ಗೋದಾಮಿಗೆ ಮುತ್ತಿಗೆ ಹಾಕಲು ಮುಂದಾದ ರೈತರನ್ನು ಆರಂಭದಲ್ಲಿ ಕಾರ್ಖಾನೆ ಆಡಳಿತ ಮಂಡಳಿ ತಡೆಯಿತು. ಕಾರ್ಖಾನೆಯ ಗೇಟ್ ಬಂದ್ ಮಾಡಿ ರೈತರು ಒಳ ಪ್ರವೇಶಿಸದಂತೆ ನಿರ್ಬಂಧಸಲಾಗಿತ್ತು. ಇದರಿಂದ ಕೆರಳಿದ ರೈತರು ಗೇಟ್ ಬಳಿ ಜಮಾಯಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಗೇಟ್ ಏರಿ ಯತ್ನಿಸಿದ ರೈತರನ್ನು ಪೊಲೀಸರು ತಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಹೈಡ್ರಾಮ ಸೃಷ್ಟಿಯಾಗಿತ್ತು.
ಮೊದಲು ಕಬ್ಬಿನ ದರ ಏರಿಕೆ.. ನಂತರ ಸಕ್ಕರೆ ಮಾರಾಟ!
ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕೊನೆಗೂ ಕಾರ್ಖಾನೆಯ ಗೇಟ್ ತೆರೆಯಲಾಗಿದೆ. ಒಳ ಪ್ರವೇಶಿಸಿದ ರೈತರು ನೇರವಾಗಿ ಸಕ್ಕರೆ ಗೋದಾಮಿನತ್ತ ತೆರಳಿ ಮುತ್ತಿಗೆ ಹಾಕಿ ಗೋದಾಮಿನೊಳಗಿದ್ದ ಟ್ರ್ಯಾಲಿಗಳನ್ನು ಹೊರಗೆ ಎಳೆದು ಹಾಕಿದ ರೈತರು, ಸಕ್ಕರೆ ಗೋದಾಮಿಗೆ ಬೀಗ ಹಾಕಿದ್ದಾರೆ. ಕಬ್ಬಿನ ದರ ನಿಗದಿಯಾಗುವವರೆಗೆ ಸಕ್ಕರೆ ಮಾರಾಟ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಸಕ್ಕರೆ ಮಾರಾಟ ನಡೆಯುತ್ತಿದೆ ಮೊದಲು ಕಬ್ಬಿನ ದರ ಹೆಚ್ಚಳ ಮಾಡಬೇಕು. ಅಲ್ಲಿಯವರೆಗೆ ಸಕ್ಕರೆ ಮಾರಾಟ ಮಾಡಬಾರದು, ಸಕ್ಕರೆ ಸಾಮಾನ್ಯ ಜನರಿಗೆ ಕಡಿಮೆ ಬೆಲೆ, ಹಾಗೂ ಕಮರ್ಷಿಯಲ್ ಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ. ರೈತರಿಗೆ ಬೆಂಬಲ ಬೆಲೆ ಕೊಡಿ ಎಂದು ರೈತ ಸಂಘಗಳು ಆಗ್ರಹಿಸಿವೆ.
ಸಿಎಂ ದುಡ್ಡಿಲ್ಲ ಅಂತಾರೆ, ಬರಗಾಲದ ಪರಿಸ್ಥಿತಿ ಇದೆ, ಸರ್ಕಾರಿ ವೇತನದಲ್ಲಿ ಕಡಿತ ಮಾಡಿ ಪರಿಹಾರ ಕೊಡಿ, ತಕ್ಷಣವೇ ನಮ್ಮ ಬೇಡಿಕೆ ಈಡೇರಿಸುವಂತೆ ರೈತರು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಳ್ಳ-ಮಳ್ಳರ ಆಟವಾಡ್ತಿದ್ದಾರೆ. ಯಾವ ಸಮಿತಿ ಮಾಡ್ತಿದ್ದಾರೆ, ಸರ್ಕಾರಕ್ಕೆ ಆದಾಯ ಬರ್ತಿದೆ. ನಮ್ಮ ಸಿಎಂ ಬೇಜವಾಬ್ದಾರಿತನದಿಂದ ಮಾತನಾಡ್ತಾರೆ. ಇವರು ಕೋಟ್ಯಾಂತರ ಸಾಲ ಮಾಡಿದ್ದಾರೆ. ರೈತರಿಗಾಗಿ ಸಾಲ ಮಾಡಲು ಆಗಲ್ವಾ? ಅನ್ನ ಬೆಳೆಯುವ ರೈತರನ್ನ ಉಳಿಸುವ ಕೆಲಸ ಮಾಡಿ. ನಾವು ಕಬ್ಬು ಬೆಳೆಯದಿದ್ದರೆ ಕಾರ್ಖಾನೆ ಮಾಲಿಕರ ಕಥೆ ಏನಾಗಬೇಡ. ರೈತರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೆ ಸಕ್ಕರೆ ಗೋದಾಮಿಗೆ ಬೀಗ ಹಾಕಿದ್ದೇವೆ. ತಕ್ಷಣವೇ ಬೇಡಿಕೆ ಈಡೇರಿಸಿ, ಇಲ್ಲ ಕೇಂದ್ರ ರಾಜ್ಯ ಸರ್ಕಾರ ಅಸ್ತಿತ್ವ ಕಳೆದುಕೊಳ್ಳುತ್ತೀರಿ. ಕಬ್ಬಿನ ದರ ಹೆಚ್ಚಳದ ಬೇಡಿಕೆಯನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೈತರ ಬೇಡಿಕೆ ಈಡೇರುವವರೆಗೂ ಸಕ್ಕರೆ ಮಾರಾಟ ಮಾಡದ ಹಾಗೆ ಸಿಎಂ ಸೂಚನೆ ಕೊಟ್ರು, ಕಾರ್ಖಾನೆಯಲ್ಲಿರೋ ಸಕ್ಕರೆ ಮಾತ್ರ ಮಾರಾಟವಾಗ್ತಿದೆ ಎಂದು ರೊಚ್ಚಿಗೆದ್ದ ರೈತರು ಸಕ್ಕರೆ ಗೋದಾಮಿಗೆ ಬೀಗ ಹಾಕಿದ್ದಾರೆ. ಒಟ್ಟಾರೆ ಕಬ್ಬಿನ ಬೆಲೆ ವಿಚಾರವಾಗಿ ರೈತರು ಮತ್ತು ಸರ್ಕಾರದ ನಡುವಿನ ಹೋರಾಟ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.