SOCIAL MEDIA

Newsletter

PARTNER SITES
Select Language Select State

ಸೌಜನ್ಯಾ ಪ್ರಕರಣ ಮರುತನಿಖೆ: ಸಾಕ್ಷ್ಯಗಳ ಸಮೇತ ಎಸ್‌ಐಟಿ ಕಚೇರಿಗೆ ಹಾಜರಾದ ಮಹೇಶ್ ಶೆಟ್ಟಿ ತಿಮರೋಡಿ

ಸೌಜನ್ಯಾ ಪ್ರಕರಣದ ಮರುತನಿಖೆಯು ಮತ್ತೊಂದು ಮಹತ್ವದ ಘಟ್ಟ ತಲುಪಿದೆ. ಪ್ರಕರಣದ ಪ್ರಮುಖ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆಗೆ ಹಾಜರಾಗಿ ತಮ್ಮ ಬಳಿಯಿದ್ದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 26, 2026, 18:46 IST | Updated: Nov 26, 2026, 18:50 IST
Image Credit: Mahesh Thimarody
Join

ಮಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ಚುರುಕುಗೊಂಡಿರುವ ಬೆನ್ನಲ್ಲೇ, ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ಮಂಗಳೂರಿನ ವಿಶೇಷ ತನಿಖಾ ತಂಡದ (ಎಸ್‌ಐಟಿ) ಕಚೇರಿಗೆ ಹಾಜರಾಗಿ ತಮ್ಮ ಬಳಿಯಿದ್ದ ಮಹತ್ವದ ದಾಖಲೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ.  

ವಿಚಾರಣೆ ಹಾಗೂ ದಾಖಲೆ ಸಲ್ಲಿಕೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಕೇವಲ 90 ದಿನಗಳ ಕಾಲಾವಧಿಯಲ್ಲೇ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ನಾವು ಒತ್ತಾಯಿಸುವುದಿಲ್ಲ. ಸಾಕ್ಷ್ಯಗಳನ್ನು ಕಲೆಹಾಕುವುದು ಅಷ್ಟು ಸುಲಭದ ಕೆಲಸವಲ್ಲ. ತನಿಖೆಗೆ ಹೆಚ್ಚಿನ ಸಮಯ ತೆಗೆದುಕೊಂಡರೂ ನಮ್ಮ ಆಕ್ಷೇಪವಿಲ್ಲ. ಈ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿಗಳೇ ನಮಗೆ ನ್ಯಾಯ ದೊರಕಿಸಿಕೊಡಬೇಕು" ಎಂದು ಒತ್ತಾಯಿಸಿದರು.  

ಮುಂದುವರಿದು ಮಾತನಾಡಿದ ತಿಮರೋಡಿ, "ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಈಗಿನ ಮುಖ್ಯಮಂತ್ರಿಗಳು, ‘ನನ್ನಂತಹ ಸಾವಿರ ಡಿ.ಕೆ. ಶಿವಕುಮಾರ್‌ಗಳು ನಿಮ್ಮ ರಕ್ಷಣೆಗೆ ಇದ್ದಾರೆ’ ಎಂದು ಹೇಳಿದ್ದರು. ಆ ಮಾತನ್ನು ಯಾರಿಗೆ ಮತ್ತು ಯಾವ ಸಂದರ್ಭದಲ್ಲಿ ಹೇಳಿದ್ದರು ಎಂಬುದು ಇಡೀ ರಾಜ್ಯದ ಜನತೆಗೆ ತಿಳಿದಿದೆ. ಆದ್ದರಿಂದ ನಾವು ಕೇವಲ ಎಸ್‌ಐಟಿಯಲ್ಲಿ ಮಾತ್ರ ನ್ಯಾಯ ಕೇಳುತ್ತಿಲ್ಲ; ಬದಲಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ದೇಶದ ಸರ್ವೋಚ್ಚ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದೇವೆ" ಎಂದು ಮಾರ್ಮಿಕವಾಗಿ ನುಡಿದರು.

"ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಾಕ್ಷ್ಯಗಳನ್ನು ಇನ್ನೂ ಪತ್ತೆಹಚ್ಚಬೇಕಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಅಡಗಿರುವ ಸತ್ಯ ಮತ್ತು ಸಾಕ್ಷ್ಯಗಳನ್ನು ಹೊರತೆಗೆಯಲು ಹಲವು ವೈಜ್ಞಾನಿಕ ಮಾರ್ಗಗಳಿವೆ. ತನಿಖಾಧಿಕಾರಿಗಳು ಅವುಗಳನ್ನು ಹುಡುಕಿಯೇ ತೀರುತ್ತಾರೆ ಮತ್ತು ಪ್ರಕರಣದ ಹಿಂದಿರುವ ನಿಜವಾದ ಆರೋಪಿಗಳನ್ನು ಪತ್ತೆಹಚ್ಚುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ. ಈಗಾಗಲೇ ಹೊಸ ಸಾಕ್ಷಿಗಳು ಮುಂದೆ ಬರುತ್ತಿದ್ದು, ಕೆಲವು ಗೌಪ್ಯ ಸಾಕ್ಷಿಗಳೂ ತನಿಖೆಗೆ ಸಹಕರಿಸುತ್ತಿದ್ದಾರೆ. ನಮ್ಮ ಬಳಿಯಿರುವ ಮತ್ತಷ್ಟು ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಒದಗಿಸಲಿದ್ದೇವೆ. ಎಸ್‌ಐಟಿ ಅಧಿಕಾರಿಗಳು ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ" ಎಂದು ವಿವರಿಸಿದರು.

ಏನಿದು ಸೌಜನ್ಯಾ ಪ್ರಕರಣ? (ಪ್ರಕರಣದ ಹಿನ್ನೆಲೆ)   2012ರ ಅಕ್ಟೋಬರ್ 9ರಂದು ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ 17 ವರ್ಷದ ಸೌಜನ್ಯಾ ಕಾಲೇಜು ಮುಗಿಸಿ ಮನೆಗೆ ಮರಳುವ ವೇಳೆ ನಾಪತ್ತೆಯಾಗಿದ್ದರು. ಮರುದಿನ (ಅಕ್ಟೋಬರ್ 10) ಧರ್ಮಸ್ಥಳದ ಮಣ್ಣಸಂಕ ಬಳಿಯ ನಿರ್ಜನ ಪ್ರದೇಶದಲ್ಲಿ ಆಕೆಯ ಮೃತದೇಹ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ಕರಾವಳಿ ಸೇರಿದಂತೆ ಇಡೀ ರಾಜ್ಯದಲ್ಲಿ ಭಾರಿ ಆಕ್ರೋಶ ಹಾಗೂ ಪ್ರತಿಭಟನೆಗಳಿಗೆ ಕಾರಣವಾಗಿತ್ತು.  

ಪ್ರಾರಂಭದಲ್ಲಿ ಬೆಳ್ತಂಗಡಿ ಪೊಲೀಸರು ಹಾಗೂ ನಂತರ ಸಿಐಡಿ ತನಿಖೆ ನಡೆಸಿ, ಸಂತೋಷ್ ರಾವ್ ಎಂಬಾತನನ್ನು ಏಕೈಕ ಆರೋಪಿಯನ್ನಾಗಿ ಬಂಧಿಸಿದ್ದರು. ಆದರೆ, ತನಿಖೆಯಲ್ಲಿ ಲೋಪದೋಷಗಳಿವೆ ಮತ್ತು ಪ್ರಭಾವಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಕುಟುಂಬಸ್ಥರು ಹಾಗೂ ಹೋರಾಟಗಾರರು ತೀವ್ರ ಹೋರಾಟ ನಡೆಸಿದ ಪರಿಣಾಮ, ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸುದೀರ್ಘ ವಿಚಾರಣೆಯ ಬಳಿಕ 2023ರ ಜೂನ್‌ನಲ್ಲಿ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿ ಸಂತೋಷ್ ರಾವ್‌ನನ್ನು ನಿರ್ದೋಷಿ ಎಂದು ಖುಲಾಸೆಗೊಳಿಸಿತ್ತು. ಅಲ್ಲದೆ, ತನಿಖಾ ಸಂಸ್ಥೆಗಳ ವೈಫಲ್ಯದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತ್ತು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES