ಹಾಸನ ಡಿಸಿ ಲತಾಕುಮಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು: ಲಂಚದ ಸುಳಿಯಲ್ಲಿ ಸಿಲುಕಿದ್ರಾ ಜಿಲ್ಲಾಧಿಕಾರಿ?
ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಅವರ ಸಿಬ್ಬಂದಿ ವಿರುದ್ದ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಹಾಸನ ಡಿಸಿ ವಿರುದ್ಧ ಕೋಟ್ಯಂತರ ರೂಪಾಯಿ ಹಣಕಾಸು ವ್ಯವಹಾರದ ಗಂಭೀರ ಆರೋಪಗಳು ಕೇಳಿ ಬಂದಿವೆ.
ಸಕಲೇಶಪುರ ಕ್ರಷರ್ ಕಡತ ವಿಲೇವಾರಿ ಹಗರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಹಾಗು ಅವರ ಸಿಬ್ಬಂದಿಯ ವಿರುದ್ಧ ಲೋಕಾಯುಕ್ತ ಎಡಿಜಿಪಿಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರು ದಾಖಲಿಸಿದ್ದಾರೆ. ಇದರಲ್ಲಿ ಕೋಟ್ಯಂತರ ರೂ. ಹಣಕಾಸು ವ್ಯವಹಾರದ ಬಗ್ಗೆ ಗಂಭೀರ ಆರೋಪ ಮಾಡಲಾಗಿದ್ದು, ವಾಟ್ಸಾಪ್ ಚಾಟ್ ವೈರಲ್ ಆದ ಬೆನ್ನಲ್ಲೇ ಹಾಸನ ಡಿಸಿಗೆ ಸಂಕಷ್ಟ ಎದುರಾಗಿದೆ.
ವಾಟ್ಸಾಪ್ ಚಾಟ್ ಬೆನ್ನಲ್ಲೇ ಹಾಸನ ಡಿಸಿಗೆ ಸಂಕಷ್ಟ?
ಸಾರ್ವಜನಿಕವಾಗಿ ಬಿಡುಗಡೆಯಾಗಿರುವ WhatsApp ಸಂಭಾಷಣೆಗಳಲ್ಲಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿ (DC), ಉಪವಿಭಾಗಾಧಿಕಾರಿ (AC), ಅಪರ ಜಿಲ್ಲಾಧಿಕಾರಿ (ADC), ತಹಶೀಲ್ದಾರ್ ಹಾಗೂ ಇತರ ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಕೋಟ್ಯಂತರ ರೂಪಾಯಿಗಳ ಹಣಕಾಸಿನ ವ್ಯವಹಾರದ ಬಗ್ಗೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಮ್ಮ ದೂರಿನಲ್ಲಿ ಆರೋಪ ಮಾಡಿದ್ದಾರೆ. ಹಣದ ಹಂಚಿಕೆ ಮತ್ತು ಹೊಂದಾಣಿಕೆಯಲ್ಲಿ ಡಿಸಿ, ಮತ್ತವರ ಪಿಎ ಸೇರಿದಂತೆ ಮಧ್ಯವರ್ತಿಗಳ ಮೂಲಕ ಹಣದ ವಹಿವಾಟು ನಡೆದಿರುವ ಕುರಿತು ಕೇಳಿಬಂದಿರುವ ಗಂಭೀರ ಆರೋಪ ಇದಾಗಿದೆ.
ಸಕಲೇಶಪುರದ ಮೂರು ಕ್ರಷರ್ ಕಡತಗಳ ಅನುಮೋದನೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಹಣದ ವ್ಯವಹಾರಗಳ ಕುರಿತು ಗಂಭೀರ ಆರೋಪಗಳ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ, 1988 ಯಡಿಯಲ್ಲಿ ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಕೋರಿ ಲೋಕಾಯುಕ್ತಕ್ಕೆ ದೂರು ದಾಖಲಿಸಲಾಗಿದೆ.
ಸಾರ್ವಜನಿಕವಾಗಿ ಪ್ರಸಾರಗೊಂಡಿರುವ ವಾಟ್ಸಾಪ್ (WhatsApp) ಸಂಭಾಷಣೆಗಳ ಸ್ಕ್ರೀನ್ಶಾಟ್ಗಳಲ್ಲಿ ಭಾರೀ ಭ್ರಷ್ಟಾಚಾರದ ಉಲ್ಲೇಖ ಇದ್ದು, ಪ್ರಕರಣದಲ್ಲಿ ಉನ್ನತ ಅಧಿಕಾರಿಗಳ ಹುದ್ದೆಗಳನ್ನು ಉಲ್ಲೇಖಿಸಿ ಲಕ್ಷಾಂತರ ರೂಪಾಯಿಗಳ ಹಣಕಾಸಿನ ವ್ಯವಹಾರ, ಹಂಚಿಕೆ, ಹೊಂದಾಣಿಕೆ ಹಾಗೂ ಸರ್ಕಾರಿ ಕಡತಗಳ ವಿಲೇವಾರಿಗೆ ನಡೆದಿರುವ ಆರೋಪ,
ಗಂಭೀರ ಸ್ವರೂಪದ ಸಂಭಾಷಣೆಗಳಲ್ಲಿ DC, AC, ADC, ತಹಶೀಲ್ದಾರ್ ಹಾಗೂ DC PA ಸೇರಿದಂತೆ ವಿವಿಧ ವ್ಯಕ್ತಿಗಳ ಉಲ್ಲೇಖಗಳಿದೆ.
ಸರ್ಕಾರಿ ಅಧಿಕಾರಿಗಳ ಹೆಸರಿನಲ್ಲಿ ಹಣದ ವ್ಯವಹಾರಗಳನ್ನು ನಡೆಸಿರುವ ಸಾಧ್ಯತೆಯ ಕುರಿತು ಸಾರ್ವಜನಿಕ ಹಿತಾಸಕ್ತಿಯಿಂದ ಸಮಗ್ರ ತನಿಖೆ ನಡೆಸುವುದು ಅತ್ಯಗತ್ಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಾಸನ ಜಿಲ್ಲಾಧಿಕಾರಿ (DC) ಸಂಬಂಧಿಸಿದ ಹಣದ ವ್ಯವಹಾರಗಳು:
ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ವಾಟ್ಸಾಪ್ ಸಂಭಾಷಣೆಗಳಲ್ಲಿ ಜಿಲ್ಲಾಧಿಕಾರಿ (DC) ಅವರಿಗೆ ಸಂಬಂಧಿಸಿದಂತೆ ₹50 ಲಕ್ಷ, ₹60 ಲಕ್ಷ ಹಾಗೂ ₹75 ಲಕ್ಷದವರೆಗಿನ ಮೊತ್ತಗಳ ಉಲ್ಲೇಖಗಳು ಕಂಡುಬಂದಿದೆ. ವಿವಿಧ ಹಂತಗಳಲ್ಲಿ ಹಣದ ಹೊಂದಾಣಿಕೆ, ಪಾವತಿ ಮತ್ತು ಹಂಚಿಕೆ ಕುರಿತು ಚರ್ಚಿಸಿರುವುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಈ ಮೊತ್ತಗಳು ಯಾವ ಉದ್ದೇಶಕ್ಕಾಗಿ ಪ್ರಸ್ತಾಪವಾಗಿವೆ, ಹಣವನ್ನು ಯಾರು ಪಾವತಿಸಿದ್ದಾರೆ. ಯಾರಿಗೆ ತಲುಪಿಸಲಾಗಿದೆ? ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳ ಅಧಿಕೃತ ಕರ್ತವ್ಯಗಳೊಂದಿಗೆ ಈ ವ್ಯವಹಾರಗಳಿಗೆ ಸಂಬಂಧವಿದೆಯೇ ಎಂಬುದನ್ನು ತನಿಖೆಯ ಮೂಲಕ ದೃಢಪಡಿಸಬೇಕಾಗಿದೆ.
ಹಾಸನ ಎಸಿಗೆ ಸಂಬಂಧಿಸಿದ ಹಣದ ವ್ಯವಹಾರಗಳ ಉಲ್ಲೇಖ:
ಸಂಭಾಷಣೆಗಳಲ್ಲಿ ಉಪವಿಭಾಗಾಧಿಕಾರಿ (AC) ಅವರಿಗೆ ಸಂಬಂಧಿಸಿದಂತೆ ಸುಮಾರು ₹13 ಲಕ್ಷ ಮತ್ತು ₹20 ಲಕ್ಷಗಳ ಮೊತ್ತಗಳ ಉಲ್ಲೇಖವಿದೆ. ಅಪರ ಜಿಲ್ಲಾಧಿಕಾರಿ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳ ಹೆಸರಿನಲ್ಲಿಯೂ ಹಣದ ಹಂಚಿಕೆ ಮತ್ತು ಪಾವತಿಗಳ ಕುರಿತು ಚರ್ಚಿಸಿರುವುದು ಕಂಡುಬರುತ್ತದೆ.
ಪ್ರತಿಯೊಂದು ಮೊತ್ತದ ಮೂಲ, ಪಾವತಿದಾರ. ಮಧ್ಯವರ್ತಿ ಮತ್ತು ಅಂತಿಮ ಫಲಾನುಭವಿಯನ್ನು ಪತ್ತೆಹಚ್ಚಬೇಕು. ಸಂಬಂಧಪಟ್ಟ ವ್ಯಕ್ತಿಗಳ ಬ್ಯಾಂಕ್ ಖಾತೆಗಳು, ಯುಪಿಐ ವಹಿವಾಟುಗಳು, ಹಣ ವರ್ಗಾವಣೆ ದಾಖಲೆಗಳು, ನಗದು ಠೇವಣಿಗಳು ಮತ್ತು ಇತರ ಹಣಕಾಸಿನ ದಾಖಲೆಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕು. ಈ ಮೊತ್ತಗಳೆಲ್ಲವೂ ಪ್ರತ್ಯೇಕ ವ್ಯವಹಾರಗಳೇ ಅಥವಾ ಒಂದೇ ವ್ಯವಹಾರದ ವಿವಿಧ ಹಂತಗಳ ಉಲ್ಲೇಖಗಳೇ ಎಂಬುದನ್ನೂ ದೃಢಪಡಿಸಬೇಕು.
ಸಂಬಂಧಪಟ್ಟ ಮೂಲ ಮೊಬೈಲ್ ಸಾಧನಗಳು, ಮೂಲ ವಾಟ್ಸಾಪ್ ಚಾಟ್ಗಳು, ಲಭ್ಯವಿರುವ ಬ್ಯಾಕಪ್ಗಳು, ಮೆಟಾಡೇಟಾ ಮತ್ತು ಇತರ ಡಿಜಿಟಲ್ ದಾಖಲೆಗಳನ್ನು ಕಾನೂನುಬದ್ಧವಾಗಿ ಪಡೆದು ವಿಧಿವಿಜ್ಞಾನ ಪ್ರಯೋಗಾಲಯದ ಕಳಿಸಬೇಕು. ಸಂದೇಶಗಳನ್ನು ಕಳುಹಿಸಿದವರು, ಸ್ವೀಕರಿಸಿದವರು, ದಿನಾಂಕ, ಸಮಯ, ಸಂದೇಶಗಳ ನಿರಂತರತೆ ಪತ್ತೆಹಚ್ಚಬೇಕು. ಈ ದೂರಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಲೋಕಾಯುಕ್ತ ಎಡಿಜಿಪಿಗೆ ದೂರು ದಾಖಲಿಸಲಾಗಿದೆ.