SOCIAL MEDIA

Newsletter

PARTNER SITES
Select Language Select State

ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ.. ಭಕ್ತರಿಗಾಗಿ ಭರ್ಜರಿ ಸಿದ್ಧತೆ!

Hasanamba Jatra Mahotsava: ವರ್ಷವಿಡೀ ಕಾದು ಕುಳಿತಿದ್ದ ಭಕ್ತರ ನಿರೀಕ್ಷೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ.. ನಾಳೆ ಮಧ್ಯಾಹ್ನ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಹಾಸನಾಂಬೆ ತಾಯಿಯ ಗರ್ಭಗುಡಿಯ ಬಾಗಿಲು ತೆರೆಯಲಿದೆ. ತಾಯಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇತ್ತ ಭಕ್ತರ ಸ್ವಾಗತಕ್ಕೆ ಹಾಸನ ನಗರಿ ಸಿಂಗಾರಗೊಂಡಿದೆ. ವಿದ್ಯುತ್ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳ ಜೊತೆಗೆ ಭಕ್ತರ ಸುರಕ್ಷತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕಲ್ಪಿಸಲಾಗಿದೆ.

Written By Ramya. R. Gowda
Published: Oct 28, 2026, 05:59 PM IST | Updated: Oct 28, 2026, 06:04 PM IST
Join

ವರ್ಷವಿಡೀ ಕಾದು ಕುಳಿತಿದ್ದ ಭಕ್ತರ ನಿರೀಕ್ಷೆಗೆ ಇನ್ನೇನು ಕೆಲವೇ ಗಂಟೆಗಳಲ್ಲಿ ತೆರೆ ಬೀಳಲಿದೆ.. ನಾಳೆ ಮಧ್ಯಾಹ್ನ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಹಾಸನಾಂಬೆ ತಾಯಿಯ ಗರ್ಭಗುಡಿಯ ಬಾಗಿಲು ತೆರೆಯಲಿದೆ. ತಾಯಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ಇತ್ತ ಭಕ್ತರ ಸ್ವಾಗತಕ್ಕೆ ಹಾಸನ ನಗರಿ ಸಿಂಗಾರಗೊಂಡಿದೆ. ವಿದ್ಯುತ್ ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳ ಜೊತೆಗೆ ಭಕ್ತರ ಸುರಕ್ಷತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕಲ್ಪಿಸಲಾಗಿದೆ. ಹಾಗಾದ್ರೆ, ಈ ಬಾರಿಯ ಹಾಸನಾಂಬೆ ಜಾತ್ರಾ ಮಹೋತ್ಸವದ ವಿಶೇಷತೆಗಳೇನು? ಭಕ್ತರಿಗೆ ಏನೆಲ್ಲಾ ವ್ಯವಸ್ಥೆ ಮಾಡಲಾಗಿದೆ? ದರ್ಶನಕ್ಕೆ ತೆರಳುವ ಮುನ್ನ ಭಕ್ತರು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ ಏನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್..

ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ತಾಯಿಯ ಸನ್ನಿಧಿಯಲ್ಲಿ ಭಕ್ತಿಯ ಸಂಭ್ರಮ ಮನೆಮಾಡಿದೆ.. ಅಕ್ಟೋಬರ್ 29ರ ಗುರುವಾರ ಮಧ್ಯಾಹ್ನ 12 ಗಂಟೆಯ ನಂತರ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಗರ್ಭಗುಡಿಯ ಬಾಗಿಲು ತೆರೆಯಲಿದೆ. ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ.

ತಾಯಿಯ ದರ್ಶನಕ್ಕಾಗಿ ರಾಜ್ಯದ ಮೂಲೆಮೂಲೆಗಳಿಂದ ಭಕ್ತಸಾಗರವೇ ಹರಿದುಬರುವ ನಿರೀಕ್ಷೆಯಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕುಡಿಯುವ ನೀರು, ಶೌಚಾಲಯ, ಜರ್ಮನ್ ಟೆಂಟ್, ವೈದ್ಯಕೀಯ ಸೇವೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಮೈಸೂರು ದಸರಾ ಮಾದರಿಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಹಾಸನ ನಗರಿ ಹೊಸ ಕಳೆಯಿಂದ ಕಂಗೊಳಿಸುತ್ತಿದೆ.

ಈ ಬಾರಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಸಂಗೀತ ಸಂಜೆ, ಕುಸ್ತಿ, ಕಬಡ್ಡಿ, ವಾಲಿಬಾಲ್, ರಂಗೋಲಿ ಸ್ಪರ್ಧೆ, ಕೋಲಾಟ ಹಾಗೂ ಜಾನುವಾರು ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಲಿವೆ. ಹಳೆಯ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯಲಿರುವ ಕುಸ್ತಿ ಪಂದ್ಯಾವಳಿಯಲ್ಲಿ 450ಕ್ಕೂ ಹೆಚ್ಚು ಕುಸ್ತಿಪಟುಗಳು ಭಾಗವಹಿಸುವ ನಿರೀಕ್ಷೆಯಿದೆ.

ಇನ್ನು ಗರ್ಭಗುಡಿಯ ಬಾಗಿಲು ಪದೇಪದೆ ಮುಚ್ಚದಂತೆ ಹಾಗೂ ಭಕ್ತರಿಗೆ ಸುಗಮವಾಗಿ ದರ್ಶನ ದೊರೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉತ್ಸವ ಯಶಸ್ವಿಯಾಗಲು ಎಲ್ಲರೂ ಪಕ್ಷಾತೀತವಾಗಿ ಸಹಕರಿಸಬೇಕು ಎಂಬುದು ಜಿಲ್ಲಾ ಉಸ್ತುವಾರಿ ಸಚಿವರ ಮನವಿ.ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಿಗಿ ಭದ್ರತಾ ವ್ಯವಸ್ಥೆ ರೂಪಿಸಿದೆ. ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೂರು ಪಾಳಿಗಳಲ್ಲಿ ಒಟ್ಟು ಎರಡು ಸಾವಿರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಅವರ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ರೂಪಿಸಲಾಗಿದೆ. ಜನಸಂದಣಿಯ ಪ್ರಮಾಣಕ್ಕೆ ಅನುಗುಣವಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮೇಲ್ವಿಚಾರಣೆ ನಡೆಸಲಿದ್ದಾರೆ. ಭಕ್ತರ ಅನುಕೂಲಕ್ಕಾಗಿ ಧರ್ಮದರ್ಶನದ ಸರತಿ ಸಾಲು, 300 ರೂಪಾಯಿ ಹಾಗೂ 1,000 ರೂಪಾಯಿ ವಿಶೇಷ ದರ್ಶನದ ಸಾಲು, ಗೋಲ್ಡ್ ಪಾಸ್ ಹೊಂದಿರುವವರು ಮತ್ತು ಗಣ್ಯರ ಪ್ರವೇಶ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಮಳೆ ಬಂದರೂ ಭಕ್ತರಿಗೆ ತೊಂದರೆಯಾಗದಂತೆ ಜರ್ಮನ್ ಟೆಂಟ್‌ಗಳು ಮತ್ತು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರ ಅನುಕೂಲಕ್ಕೂ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಜನಸಂದಣಿ ನಿಯಂತ್ರಣ, ವಾಹನ ಸಂಚಾರ ನಿರ್ವಹಣೆ ಹಾಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಭಕ್ತರು ಪೊಲೀಸ್ ಸಿಬ್ಬಂದಿಯ ಸೂಚನೆಗಳನ್ನು ಪಾಲಿಸಿ, ಸರತಿ ಸಾಲಿನಲ್ಲಿ ಶಾಂತವಾಗಿ ಸಾಗುವಂತೆ ಮನವಿ ಮಾಡಲಾಗಿದೆ.
ಒಂದೆಡೆ ವರ್ಷಕ್ಕೊಮ್ಮೆ ತಾಯಿ ಹಾಸನಾಂಬೆಯ ದರ್ಶನ ಪಡೆಯುವ ಭಕ್ತರ ಕಾತರ.. ಮತ್ತೊಂದೆಡೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವ ಹಾಸನ ನಗರಿ.. ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ಧಾರ್ಮಿಕ ಸಂಭ್ರಮದೊಂದಿಗೆ ಈ ಬಾರಿಯ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲು ಸಜ್ಜಾಗಿದೆ.

ಭಕ್ತರಿಗೆ ಸುಗಮ ದರ್ಶನ ಕಲ್ಪಿಸುವುದು, ಜನಸಂದಣಿ ನಿಯಂತ್ರಿಸುವುದು ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಜಿಲ್ಲಾಡಳಿತದ ಪ್ರಮುಖ ಗುರಿಯಾಗಿದೆ. ವಿಶೇಷ ದರ್ಶನದ ಟಿಕೆಟ್ ವ್ಯವಸ್ಥೆ, ಪ್ರಸಾದ ವಿತರಣೆ ಹಾಗೂ ಗಣ್ಯರ ಭೇಟಿಗೂ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ಒಟ್ಟಿನಲ್ಲಿ, ಹಾಸನಾಂಬೆ ತಾಯಿಯ ಸನ್ನಿಧಿಯಲ್ಲಿ ಭಕ್ತಿ ಮತ್ತು ಸಂಪ್ರದಾಯದ ಜೊತೆಗೆ ಉತ್ಸವದ ವೈಭವವೂ ಮೇಳೈಸಲಿದೆ. ನಾಡಿನ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ದರ್ಶನದ ವ್ಯವಸ್ಥೆ ಕಲ್ಪಿಸುವ ಸವಾಲು ಜಿಲ್ಲಾಡಳಿತದ ಮುಂದಿದೆ. ಎಲ್ಲ ಸಿದ್ಧತೆಗಳ ನಡುವೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ತಾಯಿಯ ದರ್ಶನಕ್ಕಾಗಿ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ..

 

Add Zee News as a Preferred Source
TAGS:

About the Author

ರಮ್ಯಾ. ಆರ್‌ ಗೌಡ (Ramya. R. Gowda) : 2022ರಿಂದ ಮಾಧ್ಯಮ ಲೋಕದಲ್ಲಿದ್ದು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಡೆಸ್ಕ್'ನಲ್ಲಿಯೂ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2025ರಿಂದ ʼಜೀ ಕನ್ನಡ ನ್ಯೂಸ್‌' ವೆಬ್ ವಿಭಾಗದಲ್ಲಿ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು ಇತ್ತೀಚಿನ ಸುದ್ದಿಗಳ ಜೊತೆಗೆ ಮನರಂಜನೆ, ಕ್ರೀಡೆ, ವೈರಲ್‌, ಲೈಫ್‌ಸ್ಟೈಲ್‌ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ZEENEWS TRENDING STORIES