SOCIAL MEDIA

Newsletter

PARTNER SITES
Select Language Select State
LIVE NOW

Kannada News Today Live : "ಆಶಾ" ಬೇಡಿಕೆಗೆ ನೋ ಎಂದ ಆರೋಗ್ಯ ಸಚಿವ ಖಾದರ್‌ : ಸಿಎಂ, ಆರ್ಥಿಕ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ

Kannada Breaking News : ಗೌರವಧನವನ್ನು ₹15 ಸಾವಿರಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ನಡೆಯ ಕುರಿತು ಆರೋಗ್ಯ ಸಚಿವ ಯು.ಟಿ.ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬೇಡಿಕೆಯನ್ನು ತಕ್ಷಣವೇ ಈಡೇರಿಸಲು ಸಾಧ್ಯವಿಲ್ಲ ಎಂದಿರುವ ಅವರು, ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಇದರ ನಡುವೆ.. ಈ ಸುದ್ದಿ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ ವಿವರಗಳಿಗಾಗಿ Zee Kannada News ವೆಬ್‌ ಪುಟ ನೋಡುತ್ತೀರಿ..

Written By Krishna NK
Published: Nov 26, 2026, 14:52 IST | Updated: Nov 26, 2026, 15:13 IST
Image Credit: Kannada News
Join

ಗೌರವಧನವನ್ನು ಮಾಸಿಕ ₹15,000ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ನಡೆಯ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತೆಯರ ಬೇಡಿಕೆಯನ್ನು ತಕ್ಷಣವೇ ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಈ ಕುರಿತು ಮುಖ್ಯಮಂತ್ರಿ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರತಿಭಟನಾ ನಿರತ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಆಶಾ ಕಾರ್ಯಕರ್ತರು ಲಿಖಿತ ಭರವಸೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಸಿಎಂ ಮಾತಿನ ಮೇಲೆ ನಂಬಿಕೆ ಇಲ್ಲ ಎಂದ ಮೇಲೆ ಇನ್ನೇನು ಮಾಡಲು ಸಾಧ್ಯ? ನಮ್ಮ ಮಾತಿಗೆ ಗೌರವ ಕೊಡಿ ಎಂದು ಮನವಿ ಮಾಡುತ್ತೇನೆ. ಒಬ್ಬರಿಗೆ ಲಿಖಿತ ರೂಪದಲ್ಲಿ ಭರವಸೆ ನೀಡಿದರೆ ಎಲ್ಲರಿಗೂ ಕೊಡಬೇಕಾಗುತ್ತದೆ. ಇದು ಇಡೀ ರಾಜ್ಯದಲ್ಲಿ ವ್ಯಾಪಿಸುತ್ತದೆ. ಸರ್ಕಾರಕ್ಕೂ ತನ್ನದೇ ಆದ ಮಿತಿಗಳಿವೆ," ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 48,000 ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಅವರಿಗೆ ತಿಂಗಳಿಗೆ ಸರಿಸುಮಾರು ₹7,000 ಗೌರವಧನ ನೀಡಲಾಗುತ್ತಿದೆ. ಇದನ್ನು ₹15,000ಕ್ಕೆ ಹೆಚ್ಚಿಸಬೇಕೆಂಬುದು ಕಾರ್ಯಕರ್ತೆಯರ ಪ್ರಮುಖ ಆಗ್ರಹವಾಗಿದೆ. ಆದರೆ, ಯಾವುದೇ ಪೂರ್ವ ಚರ್ಚೆಗಳಿಲ್ಲದೆ ಈ ಬೇಡಿಕೆಯನ್ನು ತಕ್ಷಣ ಈಡೇರಿಸುವುದು ಕಷ್ಟಸಾಧ್ಯ ಎಂದು ಸಚಿವರು ತಿಳಿಸಿದ್ದಾರೆ.

ಎಲ್ಲಾ 48,000 ಆಶಾ ಕಾರ್ಯಕರ್ತೆಯರಿಗೆ ₹15,000 ಗೌರವಧನ ನೀಡುವುದರಿಂದ ಸರ್ಕಾರದ ಬೊಕ್ಕಸದ ಮೇಲೆ ಎಷ್ಟು ಆರ್ಥಿಕ ಹೊರೆ ಬೀಳಲಿದೆ ಎಂಬುದರ ಕುರಿತು ಸಮಗ್ರವಾಗಿ ಲೆಕ್ಕಾಚಾರ ಮತ್ತು ಪರಿಶೀಲನೆ ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಕೈಬಿಟ್ಟು, ಕೂಡಲೇ ಕರ್ತವ್ಯಕ್ಕೆ ಮರಳುವಂತೆ ಆರೋಗ್ಯ ಸಚಿವ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.. ಪ್ರಮುಖ ಸುದ್ದಿಗಳ ಹೆಚ್ಚಿನ ವಿವರಗಳಿಗಾಗಿ Zee Kannada News ವೆಬ್‌ ಪುಟ ಗಮನಿಸಿ.

26 Nov 2026 15:13 IST

ಜಪಾನ್‌ ಪ್ರವಾಸದ ಬಳಿಕ ಸಿಎಂ ಮಾತೇ ಬದಲಾಗಿದೆ : ಆರ್‌ ಅಶೋಕ್‌

ಆಶಾ ಕಾರ್ಯಕರ್ತರ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಆರೋಗ್ಯ ಸಚಿವರು 'ಯೂ-ಟರ್ನ್' ಹೊಡೆದಿದ್ದು, ಇದು ದುರಹಂಕಾರ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆಯಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೂಲಕ ₹15,000 ನೀಡುವುದಾಗಿ ಭರವಸೆ ನೀಡಿ ಈಗ ಮಾತು ತಪ್ಪಿ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಅಲ್ಲದೆ, ಜಪಾನ್ ಪ್ರವಾಸದ ಬಳಿಕ ಸಿಎಂ ಮಾತೇ ಬದಲಿಸಿದ್ದಾರೆ, ಇದರ ಜೊತೆಗೆ ಬಿಸಿಯೂಟ, ಅಂಗನವಾಡಿ, ಸಾರಿಗೆ ನೌಕರರಿಗೂ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.

ಆರೋಗ್ಯ ರಾಜ್ಯದ ವಿಷಯವಾಗಿದ್ದು, ಕೇರಳ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ₹10,000–₹12,000 ನೀಡುತ್ತಿರುವಾಗ ಕೇಂದ್ರದ ಮೇಲೆ ದೂರುವುದು ಸರಿಯಲ್ಲ ಎಂದ ಅವರು, ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರುವವರೆಗೂ ಅಧಿವೇಶನದಲ್ಲಿ ಹೋರಾಟ ಮುಂದುವರಿಸುವುದಾಗಿ ಮತ್ತು ಎನ್‌ಡಿಎ (NDA) ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

26 Nov 2026 15:00 IST

ಆಶಾ ಕಾರ್ಯಕರ್ತೆಯರ ಲಿಖಿತ ಭರವಸೆಯ ಬೇಡಿಕೆಗೆ ನೋ ಎಂದ ಸಿಎಂ

"ಸಿಎಂ ಮಾತಿನ ಮೇಲೆ ನಂಬಿಕೆ ಇಲ್ಲ ಎಂದ ಮೇಲೆ ಏನು ಮಾಡಲು ಸಾಧ್ಯ? ನಮ್ಮ ಮಾತಿಗೆ ಗೌರವ ಕೊಡಿ ಎಂದು ಮನವಿ ಮಾಡುತ್ತೇನೆ. ಒಬ್ಬರಿಗೆ ಲಿಖಿತ ರೂಪದಲ್ಲಿ ನೀಡಿದರೆ ರಾಜ್ಯದಾದ್ಯಂತ ಎಲ್ಲರಿಗೂ ಕೊಡಬೇಕಾಗುತ್ತದೆ, ಸರ್ಕಾರಕ್ಕೆ ತನ್ನದೇ ಆದ ಮಿತಿ ಇದೆ" ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಹೇಳಿದರು.

ಅಲ್ಲದೆ, ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿದ್ದು ಕೇಂದ್ರ ಸರ್ಕಾರ. ಹೀಗಿರುವಾಗ ಕೇಂದ್ರದ ಮುಂದೆ ಏಕೆ ಬೇಡಿಕೆಗಳನ್ನು ತರುತ್ತಿಲ್ಲ ಎಂದು ಪ್ರಶ್ನಿಸಿದ ಅವರು, "ನಾವು ಗೌರವ ಕೊಡಬೇಕು, ಗೌರವಧನ ನೀಡಬೇಕು. 17 ಇಲಾಖೆಗಳಲ್ಲಿ ಬೇಡಿಕೆಗಳಿದ್ದು, ಎಲ್ಲರಿಗೂ ಲಿಖಿತ ಉತ್ತರ ನೀಡಲು ಆಗುವುದಿಲ್ಲ. ಈ ಬಗ್ಗೆ ಕ್ಯಾಬಿನೆಟ್ ಮತ್ತು ಅಸೆಂಬ್ಲಿಯಲ್ಲಿ ಚರ್ಚಿಸುತ್ತೇವೆ" ಎಂದರು.

ಜಪಾನ್‌ನಿಂದ ವಿಡಿಯೋ ಕರೆ ಮೂಲಕವೂ ಅವರೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದ ಸಿಎಂ, "ಯಾರನ್ನೂ ಬ್ಲಾಕ್‌ಮೇಲ್ ಮಾಡಲು ಸಾಧ್ಯವಿಲ್ಲ. ತಾಯಂದಿರ ಬಳಿ ವಿನಮ್ರ ಮನವಿ ಮಾಡುತ್ತೇನೆ, ಸರ್ಕಾರಕ್ಕೆ ಸ್ಪಂದಿಸಿ" ಎಂದು ಕೋರಿದರು.
 

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES