ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶದ ಜ್ವಾಲೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೀತಿರೋ ಬೃಹತ್ ರೈತರ ಹೋರಾಟ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎಲ್ಲೆಲ್ಲೂ ರೈತರೇ ರೈತರು... ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ ಸಿಂಹಗರ್ಜನೆ. ಒಂದೆಡೆ ಧರಣಿ ಸತ್ಯಾಗ್ರಹ, ಮತ್ತೊಂದೆಡೆ ಸಕ್ಕರೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕುತ್ತಿರುವ ರೈತರು. ಹೌದು ಇದು ಅನ್ನದಾತರ ಒಗ್ಗಟ್ಟಿನ ಶಕ್ತಿಗೆ ಸಾಕ್ಷಿಯಾದ ಗುರ್ಲಾಪುರದ ರೌದ್ರಾವತಾರ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ಕಬ್ಬು ಬೆಳೆಗಾರರ ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ! ನಮ್ಮ ಕಬ್ಬಿಗೆ ಸೂಕ್ತ ಬೆಲೆ ಕೊಡಿ, ಇಲ್ಲದಿದ್ರೆ ಹೋರಾಟ ಬಿಡಲ್ಲ ಅಂತ ಸಾವಿರಾರು ರೈತರು ಬೀದಿಗಿಳಿದು ಹೋರಾಟದ ಅಖಾಡದಲ್ಲೇ ಬೀಡುಬಿಟ್ಟಿದ್ದಾರೆ. ಗುರ್ಲಾಪುರದಲ್ಲಿ ಎಲ್ಲಿ ನೋಡಿದರೂ ಕಣ್ಣು ಹಾಯಿಸಿದಷ್ಟೂ ರೈತರೇ ರೈತರು. ನಮಗೆ ನ್ಯಾಯ ಸಿಗುವವರೆಗೂ ಒಂದು ಹೆಜ್ಜೆಯೂ ಹಿಂದೆ ಇಡಲ್ಲ ಅಂತ ಕಬ್ಬು ಬೆಳೆಗಾರರು ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲೇಬೇಕು. ಕಬ್ಬು ಬೆಳೆಗಾರರ ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲೇಬೇಕು ಇವೇ ಗುರ್ಲಾಪುರದಲ್ಲಿ ಧಗಧಗಿಸುತ್ತಿರೋ ರೈತ ಹೋರಾಟದ ಪ್ರಮುಖ ಬೇಡಿಕೆಗಳು. ನಾಲ್ಕು ದಿನ ಕಳೆದರೂ ಈ ಹೋರಾಟದ ಕಾವು ಎಳ್ಳಷ್ಟೂ ಕಡಿಮೆಯಾಗಿಲ್ಲ. ಬದಲಾಗಿ, ದಿನದಿಂದ ದಿನಕ್ಕೆ ರೈತರ ಒಗ್ಗಟ್ಟು ನೂರರಷ್ಟು ಬಲಗೊಳ್ಳುತ್ತಿದೆ. ನ್ಯಾಯ ಸಿಗೋವರೆಗೂ ವಿಶ್ರಮಿಸೋ ಮಾತೇ ಇಲ್ಲ ಅಂತ ಬಿಸಿಲನ್ನೂ ಲೆಕ್ಕಿಸದೆ ರೈತರು ಎಚ್ಚರಿಕೆಯ ಮುನ್ನೆಚ್ಚರಿಕೆ ನೀಡಿದ್ದಾರೆ. ಇತ್ತ ಹೋರಾಟದ ಕಾವು ಸಕ್ಕರೆ ಕಾರ್ಖಾನೆಗಳಿಗೂ ತಟ್ಟಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಬಿಸಿ ಮುಟ್ಟಿಸೋ ಉದ್ದೇಶದಿಂದ ರೈತರ ಪಡೆ ಇದೀಗ ಸಕ್ಕರೆ ಕಾರ್ಖಾನೆಗಳ ಬಾಗಿಲು ತಟ್ಟುತ್ತಿದೆ.
ಬೇಡಕಿಹಾಳ, ಜೈನಾಪುರ, ಉಗಾರ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆಗಳಿಗೆ ದಿಢೀರ್ ಭೇಟಿ ನೀಡಿದ ರೈತರ ತಂಡ, ಕಾರ್ಖಾನೆ ಮಾಲೀಕರಿಗೆ ಮನವಿ ಪತ್ರ ಸಲ್ಲಿಸಿದೆ. ಎಂಎಸ್‌ಪಿ ದರ ನಿಗದಿಯಾಗುವವರೆಗೂ ಯಾವುದೇ ಕಾರಣಕ್ಕೂ ಸಕ್ಕರೆ ಮಾರಾಟ ಮಾಡಬೇಡಿ, ಎಂದು ಪಟ್ಟು ಹಿಡಿದಿದ್ದಾರೆ. ರೈತರ ಈ ಧರ್ಮಸಂಕಟಕ್ಕೆ ಸಕ್ಕರೆ ಕಾರ್ಖಾನೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಧನಾತ್ಮಕವಾಗಿ ಸ್ಪಂದಿಸಿರುವುದು ಈ ಹೋರಾಟಕ್ಕೆ ಮತ್ತಷ್ಟು ಆನೆಬಲ ತಂದಿದೆ.
ಒಂದೆಡೆ ಗುರ್ಲಾಪುರದಲ್ಲಿ ಬೃಹತ್ ಜನಸ್ತೋಮದ ಧರಣಿ. ಮತ್ತೊಂದೆಡೆ ಸಕ್ಕರೆ ಕಾರ್ಖಾನೆಗಳ ಮೇಲೆ ಒತ್ತಡ ಹೇರೋ ತಂತ್ರ. ಕಬ್ಬು ಬೆಳೆಗಾರರ ಈ ಕ್ರಾಂತಿಕಾರಿ ಹೋರಾಟ ಇದೀಗ ಇಡೀ ರಾಜ್ಯದ ಗಮನ ಸೆಳೆದಿದೆ. ಒಟ್ಟಿನಲ್ಲಿ ಅನ್ನದಾತರ ಈ ಕಣ್ಣೀರು ಮತ್ತು ಆಕ್ರೋಶಕ್ಕೆ ಸರ್ಕಾರ ಸ್ಪಂದಿಸುತ್ತಾ? ಕಬ್ಬಿಗೆ ಸೂಕ್ತ ಬೆಲೆ ಸಿಗುತ್ತಾ? ನಿರಂತರವಾಗಿ ಬೀದಿಯಲ್ಲಿ ಕುಳಿತಿರೋ ರೈತರ ಹೋರಾಟಕ್ಕೆ ನ್ಯಾಯ ಸಿಗೋದು ಯಾವಾಗ? ಉತ್ತರ ಏನೇ ಇರಲಿ... ನ್ಯಾಯ ಸಿಗುವವರೆಗೂ ಹೋರಾಟದ ಅಖಾಡದಿಂದ ಹಿಂದೆ ಸರಿಯಲ್ಲ ಎಂಬ ರೈತರ ಎಚ್ಚರಿಕೆ ಮಾತ್ರ ಅತ್ಯಂತ ಸ್ಪಷ್ಟವಾಗಿದೆ.