Shakti Yojana buses: ರಾಜ್ಯದಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಇಂಧನವಿಲ್ಲದೆ ಸಂಚಾರ ಸ್ಥಗಿತಗೊಂಡಿರುವ ಗಂಭೀರ ಬೆಳವಣಿಗೆಯೊಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದಿದೆ. ಸಾರಿಗೆ ಸಂಸ್ಥೆಗೆ ಡೀಸೆಲ್ ಪೂರೈಸಲು ಹಣವಿಲ್ಲದಿರುವುದು ಸರ್ಕಾರದ ಆರ್ಥಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ತೀವ್ರವಾಗಿ ಕಿಡಿಕಾರಿದ್ದಾರೆ.
ಕಳೆದ ಎರಡು ದಿನಗಳಿಂದ ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಡೀಸೆಲ್ ಅಭಾವ ಸೃಷ್ಟಿಯಾಗಿದೆ. ಹಣ ಪಾವತಿಸದ ಕಾರಣ ಡಿಪೋ ಮ್ಯಾನೇಜರ್‌ಗಳಿಗೆ ಡೀಸೆಲ್ ಸಿಗುತ್ತಿಲ್ಲ. ಡೀಸೆಲ್ ಬರುತ್ತದೆ ಎಂದು ಮೇಲಾಧಿಕಾರಿಗಳು ಹೇಳುತ್ತಿದ್ದರೂ ಇದುವರೆಗೆ ಬಂದಿಲ್ಲ. ಸರ್ಕಾರವು ದಿವಾಳಿ ಆಗಿರುವುದರಿಂದಲೇ ಈ ಪರಿಸ್ಥಿತಿ ಎದುರಾಗಿದೆ ಎಂದು ದೊಡ್ಡನಗೌಡ ಪಾಟೀಲ್ ಆರೋಪಿಸಿದ್ದಾರೆ. ಸಾರಿಗೆ ಸಚಿವರೇ ಸಂಸ್ಥೆಯು 8 ಸಾವಿರ ಕೋಟಿ ರೂಪಾಯಿ ನಷ್ಟದಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ. ಗ್ಯಾರೆಂಟಿ ಯೋಜನೆಗಳನ್ನು ಜಾರಿಗೆ ತಂದಿರುವ ಸರ್ಕಾರ, ಅವುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ದೊಡ್ಡನಗೌಡ ಪಾಟೀಲ್ ಟೀಕಿಸಿದ್ದಾರೆ.
ಈ ಅನಿರೀಕ್ಷಿತ ಡೀಸೆಲ್ ಕೊರತೆಯಿಂದಾಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವ ಸಮಯದಲ್ಲಿ ಬಸ್‌ಗಳು ಸಿಗದೆ ಪರದಾಡುವಂತಾಗಿದೆ. ಕುಷ್ಟಗಿ ಡಿಪೋಗೆ ಭೇಟಿ ನೀಡಿದಾಗ ನೂರಾರು ಜನರು ಬಸ್ಸಿಗಾಗಿ ಕಾದು ಕುಳಿತಿದ್ದ ದೃಶ್ಯ ಕಂಡುಬಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸ್ವತಃ ತಾವೇ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿ ಅವರವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಕುಷ್ಟಗಿ ಕ್ಷೇತ್ರದ ಶಾಸಕ ದೊಡ್ಡನಗೌಡ ಪಾಟೀಲ್ ತಿಳಿಸಿದರು.
ಬರಗಾಲ ಹಾಗೂ ಗುಳೆ ಹೋಗುವ ಸಂಕಷ್ಟ
ಪ್ರಸ್ತುತ ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಜನರು ಬದುಕು ಸಾಗಿಸಲು ಕಷ್ಟಪಡುತ್ತಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜನರು ಊರು ಬಿಟ್ಟು ಗುಳೆ ಹೋಗುವ ಸ್ಥಿತಿ ಎದುರಾಗಿದೆ. ಜನರು ತಮಗೆ ಕರೆ ಮಾಡಿ ತಮ್ಮ ಸಂಕಷ್ಟ ತೋಡಿಕೊಳ್ಳುತ್ತಿದ್ದು, ಅವರ ನೋವನ್ನು ಕೇಳಿದರೆ ಬೇಸರವಾಗುತ್ತದೆ ಎಂದು ಹೇಳಿದ್ದಾರೆ. ವಿಬಿಜೀ ರಾಮಜಿ MGNREGA ಸಂಬಂಧಿತ ಕೆಲಸಗಳನ್ನು ಆರಂಭಿಸುವಂತೆ ಹೇಳಿದ್ದರೂ, ಅದಕ್ಕೂ ಸರ್ಕಾರದಿಂದ ಸರಿಯಾಗಿ ಹಣ ಬಿಡುಗಡೆ ಆಗುತ್ತಿಲ್ಲ ಎಂದು ಸರ್ಕಾರದ ವೈಫಲ್ಯವನ್ನು ಎತ್ತಿತೋರಿಸಿದರು.
ಕೇಂದ್ರದ ಪರಿಹಾರ ಹಾಗೂ ರಾಜಕೀಯ ವಾಗ್ದಾಳಿ
ಕೇಂದ್ರ ಸರ್ಕಾರದಿಂದ ಬರ ಪರಿಹಾರದ ಹಣ ಬಂದಿಲ್ಲ ಎಂಬ ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದೊಡ್ಡನಗೌಡ ಪಾಟೀಲ್ ಅವರು, ಕೇಂದ್ರ ಸರ್ಕಾರದ ಉನ್ನತ ತಂಡವು ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿ ಬರ ಅಧ್ಯಯನ ನಡೆಸಿದೆ. ಆ ತಂಡವು ವರದಿ ನೀಡಿದ ಬಳಿಕ ನಿಯಮಾನುಸಾರ ಹಣ ಬಿಡುಗಡೆ ಆಗುತ್ತದೆ. ಅದಕ್ಕೂ ಮುನ್ನ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ನಾವು ನಿಯೋಗ ತೆರಳಲು ಸಲಹೆ ನೀಡಿದ್ದರೂ, ನಮ್ಮನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಅಲ್ಲದೆ, ಕಾಂಗ್ರೆಸ್ ಪಕ್ಷದ ಆಂತರಿಕ ಬೆಳವಣಿಗೆಗಳು ಮತ್ತು ಸ್ಟಿಂಗ್ ಆಪರೇಷನ್ ಕುರಿತಾದ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ದೊಡ್ಡನಗೌಡ ಪಾಟೀಲ್ ಅವರು, ಸ್ವತಃ ಆ ಪಕ್ಷದ ಹಿರಿಯ ಮುಖಂಡ ರಾಜಣ್ಣ ಅವರೇ ಈ ಹಿಂದೆ ತಮ್ಮ ಪಕ್ಷದಲ್ಲೇ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಂದು ಬಳಿ ಸ್ಟಿಂಗ್ ಆಪರೇಷನ್ ಫ್ಯಾಕ್ಟರಿ ಇದೆ ಎಂದೆಲ್ಲ ಹೇಳಿಕೆಗಳು ಬಂದಿದ್ದವು. ಜನತೆ ನಮ್ಮನ್ನು ಆಯ್ಕೆ ಮಾಡಿದ್ದು ಕ್ಷೇತ್ರದ ಅಭಿವೃದ್ಧಿಗಾಗಿ ವಿನಃ ಇಂತಹ ಅನಗತ್ಯ ರಾಜಕೀಯ ಹೇಳಿಕೆಗಳನ್ನು ನೀಡಲು ಅಲ್ಲ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ತರಾಟೆಗೆ ತೆಗೆದುಕೊಂಡರು.