ಕಬ್ಬು ಬೆಳೆಗಾರರ ಹೋರಾಟಕ್ಕೆ ಸ್ಪಂದನೆ: ಅ. 26ಕ್ಕೆ ಬೆಳಗಾವಿ ಸುವರ್ಣ ಸೌಧದಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ!
ಕಬ್ಬು ಬೆಳೆಗಾರರ ಹೋರಾಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದ್ದು ಇದೇ ಅಕ್ಟೋಬರ್ 26ಕ್ಕೆ ಬೆಳಗಾವಿಯಲ್ಲಿ ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಕಬ್ಬು ದರ ನಿಗದಿ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಪ್ರತಿ ಟನ್ ಕಬ್ಬಿಗೆ 5,500 ರೂಪಾಯಿ ದರ ನಿಗದಿಪಡಿಸುವಂತೆ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ಕೊನೆಗೂ ಮಹತ್ವದ ಗಟ್ಟಕ್ಕೆ ತಲುಪಿದೆ. ರೈತರ ಹೋರಾಟದ ಬೆನ್ನಲ್ಲೇ ಅಕ್ಟೋಬರ್ 26ರಂದು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಈ ಸಭೆಯಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರು ಭಾಗಿಯಾಗಲಿದ್ದಾರೆ. ಸಭೆಯ ಬಳಿಕ ರಾಜ್ಯದಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗುತ್ತಾ ಎಂಬ ಕುತೂಹಲ ಮೂಡಿದೆ. ಈ ನಡುವೆ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಮನವಿ ಮಾಡಿದ್ದಾರೆ.
ಹೌದು... ಕಬ್ಬಿಗೆ ಟನ್‌ಗೆ 5,500 ರೂಪಾಯಿ ದರ ನಿಗದಿಪಡಿಸಬೇಕೆಂದು ಪಟ್ಟು ಹಿಡಿದಿರುವ ಕಬ್ಬು ಬೆಳೆಗಾರರು. ತಮ್ಮ ಬೇಡಿಕೆ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರವಾದ ಹೋರಾಟ ನಡೆಸಿದ್ದರು. ರೈತರ ಹೋರಾಟದ ಪರಿಣಾಮ ಇದೀಗ ರಾಜ್ಯ ಸರ್ಕಾರ ಮಹತ್ವದ ಸಭೆ ನಡೆಸಲು ಮುಂದಾಗಿದ್ದು ಅಕ್ಟೋಬರ್ 26ರಂದು ಮುಖ್ಯಮಂತ್ರಿ ನೇತೃತ್ವದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸಭೆ ನಡೆಯಲಿದೆ. ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಲಿದ್ದಾರೆ. ಕಬ್ಬಿನ ದರ ನಿಗದಿ ಹಾಗೂ ಹಂಗಾಮು ಆರಂಭದ ವಿಚಾರವಾಗಿ ಈ ಸಭೆ ಮಹತ್ವ ಪಡೆದುಕೊಂಡಿದೆ. ಇನ್ನು ಸಭೆ ನಡೆಯುವ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಅವರಿಗೆ ಜಿಲ್ಲಾಡಳಿತದಿಂದ ಮಾಹಿತಿ ರವಾನೆಯಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಭೆಯ ಕುರಿತು ಮಾಹಿತಿ ನೀಡಿದ್ದಾರೆ ಎಂದು ಚೂನಪ್ಪ ಪೂಜಾರಿ ತಿಳಿಸಿದ್ದಾರೆ.
ಇನ್ನೂ ಇತ್ತೀಚೆಗೆ ಕಿತ್ತೂರಿನಲ್ಲಿ ಹೋರಾಟಕ್ಕೆ ಬೆಂಬಲಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದಸರಾ ಹಬ್ಬದ ಬಳಿಕ ಸಭೆ ನಡೆಸುವುದಾಗಿ ಘೋಷಿಸಿದ್ದರು. ರೈತರಿಗೆ ಕೊಟ್ಟ ಭರವಸೆಯಂತೆ ಸಿಎಂ ಸಭೆ ದಿನಾಂಕ ನಿಗದಿಯಾಗಿರುವುದು ಕಬ್ಬು ಬೆಳೆಗಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಆದರೆ, ರೈತರ ಪ್ರಮುಖ ಬೇಡಿಕೆಯಾಗಿರುವ ಟನ್‌ಗೆ 5,500 ರೂಪಾಯಿ ದರದ ಕುರಿತು ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುತ್ತದೆಯೇ? ಸಕ್ಕರೆ ಕಾರ್ಖಾನೆಗಳ ಮಾಲೀಕರು ರೈತರ ಬೇಡಿಕೆಗೆ ಸ್ಪಂದಿಸುತ್ತಾರಾ? ಸಭೆಯ ಬಳಿಕ ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭ ಮಾಡಲಿವೆಯಾ? ಎಂಬ ಪ್ರಶ್ನೆಗಳಿಗೆ ಸಿಎಂ ಸಭೆಯಲ್ಲಿ ಸ್ಪಷ್ಟವಾದ ಉತ್ತರ ಸಿಗಲಿದೆ. ಯಾಕೆಂದರೆ ಎಂಎಸ್‌ಪಿ 60 ನಿಗದಿಗಾಗಿ ಕೇಂದ್ರ ಸರ್ಕಾರಕ್ಕೆ ನವೆಂಬರ್ 26 ವರೆಗೂ ಒಂದು ತಿಂಗಳ ಕಾಲಾವಕಾಶ ಕೊಟ್ಟಿದೆ. ಮತ್ತೊಂದೆಡೆ ಸಕ್ಕರೆ ಕಾರ್ಖಾನೆಗಳು ಟನ್ ಗೆ 500 ರುಪಾಯಿ ಮತ್ತು ರಾಜ್ಯ ರಾಜ್ಯ ಸರ್ಕಾರ 1000 ಸಾವಿರ ರುಪಾಯಿ ಬೆಂಬಲ ಬೆಲೆ ಒತ್ತಾಯಿಸುತ್ತಾ ಬಂದಿದ್ದಾರೆ.
ಒಟ್ಟಿನಲ್ಲಿ ಕಬ್ಬಿನ ದರದ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಅಕ್ಟೋಬರ್ 26ರ ಸಭೆ ನಿರ್ಣಾಯಕವಾಗುವ ಸಾಧ್ಯತೆಯಿದೆ. ರೈತರ ಬೇಡಿಕೆಗೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸಲಿದೆ? ಕಬ್ಬು ನುರಿಸುವ ಹಂಗಾಮಿಗೆ ಹಸಿರು ನಿಶಾನೆ ಸಿಗಲಿದೆಯಾ? ಎಂಬುದಕ್ಕೆ ಸಭೆಯ ಬಳಿಕ ಉತ್ತರ ಸಿಗಬೇಕಿದೆ.