ಬಾಗಲಕೋಟೆಯಲ್ಲಿ ರೈತರ ಬಂದ್ ಕರೆ: ರಾಷ್ಟ್ರೀಯ ಹೆದ್ದಾರಿ ತಡೆ ಹಿನ್ನಲೆ BNS 163 ನಿಷೇದಾಜ್ಞೆ ಜಾರಿ
ಕಬ್ಬಿನ ದರ ಏರಿಕೆಗೆ ಆಗ್ರಹಿಸಿ ರೈತರು ಬಾಗಲಕೋಟೆಯಲ್ಲಿಂದು ಬಂದ್‌ಗೆ ಕರೆ ನೀಡಿದ್ದು ಈ ಹಿನ್ನಲೆಯಲ್ಲಿ ಬಿಎನ್ಎಸ್ 163 ಅಡಿಯಲ್ಲಿ ನಿಷೇದಾಜ್ಞೆ ಘೋಷಿಸಲಾಗಿದೆ.
ಎಂಎಸ್‌ಪಿ ಮತ್ತು ಕಬ್ಬಿನ ಬೆಲೆ ಏರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದು ಬಂದ್‌ಗೆ ಕರೆ ನೀಡಿದ್ದು, ರಾಷ್ಟ್ರೀಯ ಹೆದ್ದಾರಿ ತಡೆಗೆ ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು ನಿಷೇದಾಜ್ಞೆಯನ್ನು ಘೋಷಿಸಲಾಗಿದೆ.
ಹೌದು, ಎಂಎಸ್‌ಪಿ ಟನ್ ಕಬ್ಬಿಗೆ 5500 ಬೆಲೆ ನಿಗದಿ ವಿಚಾರವಾಗಿ ಹೋರಾಟ ನಡೆಸುತ್ತಿರುವ ರೈತರು ಇಂದು ಬಾಗಲಕೋಟೆಯಲ್ಲಿ ಬಂದ್‌ಗೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನೂ ತಡೆಯುವ ಬಗ್ಗೆ ರೈತರು ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯಲ್ಲಿ ಬಿಎನ್ಎಸ್ 163 ಅಡಿಯಲ್ಲಿ ನಿಷೇದಾಜ್ಞೆ ಘೋಷಿಸಲಾಗಿದ್ದು, 31 ಅಕ್ಟೋಬರ್ 2026 ರಂದು ಬೆಳಿಗ್ಗೆ 6 ರಿಂದ ರಾತ್ರಿ 10 ರವರೆಗೆ ನಿಷೇದಾಜ್ಞೆ ಜಾರಿಯಲ್ಲಿರಲಿದೆ.
ಬಾಗಲಕೋಟೆ ಡಿಸಿ ಸಂಗಪ್ಪ ಅವರಿಂದ ನಿಷೇದಾಜ್ಞೆ ಜಾರಿಗೊಳಿಸಲಾಗಿದ್ದು, ಎಸ್ ಪಿ ಸಿದ್ದಾರ್ಥ್ ಗೋಯೆಲ್ ಅವರ ಪತ್ರದ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ತಡೆ, ಟೋಲ್ ತಡೆ, ಪ್ರತಿಭಟನೆ ನಡೆಸಿ ಸಾರ್ವಜನಿಕ ಶಾಂತಿ ಕದಡದಂತೆ ತಡೆಯಲು ನಿಷೇದಾಜ್ಞೆ ಹೊರಡಿಸಲಾಗಿದ್ದು, ಈ ಕೆಳಗಿನಂತೆ ಸೂಚನೆ ನೀಡಲಾಗಿದೆ.
* ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯ ಹಾದುಹೋಗುವ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಲ್ಲಿ,
5 ಅಥವಾ 5ಕ್ಕಿಂತ ಹೆಚ್ಚು ಜನರು ಗುಂಪು ಪ್ರತಿಭಟನೆ, ಧರಣಿ, ಮೆರವಣಿಗೆ ನಡೆಸುವಂತಿಲ್ಲ.
* ಯಾವುದೇ ಉದ್ದೇಶಕ್ಕೆ ರಸ್ತೆ ತಡೆ ನಡೆಸುವುದು, ವಾಹನ ಸಂಚಾರ ಸಂಪೂರ್ಣ ಅಥವಾ ಭಾಗಶಃ ಬಂದ್ ಮಾಡುವಂತಿಲ್ಲ.
* ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವುದು ನಿಷೇಧ.
* ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ಬಂದ್ ಮಾಡುವುದು, ಟೋಲ್ ಸಂಗ್ರಹಣಾ ಕಾರ್ಯಕ್ಕೆ ಅಡ್ಡಿಪಡಿಸುವುದು, ಟೋಲ್ ಸಂಗ್ರಹಣಾ ಸಿಬ್ಬಂದಿಯ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡುವುದು ಮತ್ತು ಟೋಲ್ ಪ್ಲಾಜಾದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಯಾವುದೇ ಚಟುವಟಿಕೆ ನಿಷೇಧ.
* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟ್ರಾಕ್ಟರ್, ಸರ್ವಿಸ್ ರಸ್ತೆ, ಪ್ರವೇಶ ಮತ್ತು ನಿರ್ಗಮನ ಮಾರ್ಗಗಳಲ್ಲಿ ಟೋಲ್ ಪ್ಲಾಜಾ, ಟೋಲ್ ಪ್ಲಾಜಾ ಪ್ರದೇಶಗಳಲ್ಲಿ ಹಾಗೂ ಅವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಟ್ರ್ಯಾಕ್ಟರ್, ಟ್ರಕ್, ಲಾರಿ, ಕಾರು ಅಥವಾ ಇತರೆ ವಾಹನಗಳನ್ನು ಗುಂಪುಗೂಡಿಸಿ ನಿಲ್ಲಿಸುವುದು, ವಾಹನಗಳ ಸಾಲು ನಿಲ್ಲಿಸುವುದು, ವಾಹನಗಳನ್ನು ಅಡ್ಡಲಾಗಿ ನಿಲ್ಲಿಸಿ ರಸ್ತೆ ತಡೆ ನಿರ್ಮಿಸುವುದು ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡಚಣೆ ಉಂಟುಮಾಡುವುದು ನಿಷೇಧ.
* ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಥವಾ ಅವುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಧರಣಿ, ಮೆರವಣಿಗೆ, ಪ್ರತಿಭಟನೆ ಅಥವಾ ಗುಂಪು ಸೇರುವ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡುವುದು, ರಸ್ತೆಯ ಮೇಲೆ ಕುಳಿತುಕೊಳ್ಳುವುದು, ಟೈರ್ ಸುಡುವುದು, ಬ್ಯಾರಿಕೇಡ್ ಹಾಕುವುದು ಅಥವಾ ಇತರೆ ವಸ್ತುಗಳನ್ನು ಅಡ್ಡಲಾಗಿ ಇರಿಸುವುದು ಮತ್ತು ಸಾರ್ವಜನಿಕ ಸಂಚಾರಕ್ಕೆ ಅಡಚಣೆಯಾಗುವ ಯಾವುದೇ ರೀತಿಯ ಚಟುವಟಿಕೆಗಳನ್ನು ತೊಡಗುವುದನ್ನು ನಿಷೇಧಿಸಲಾಗಿದೆ.
ಈ ಆದೇಶ ಯಾರಿಗೆ ಅನ್ವಯಿಸಲ್ಲ:
* ಆಂಬುಲೆನ್ಸ್, ಪೊಲೀಸ್ ವಾಹನಗಳು, ತುರ್ತು ವೈದ್ಯಕೀಯ ಸೇವೆಗಳ ವಾಹನಗಳು ಮತ್ತು ಅಗ್ನಿ ಸೇವೆಗಳ ವಾಹನಗಳ ಸುಗಮ ಸಂಚಾರಕ್ಕೆ ಯಾವುದೇ ಅಡಚಣೆ ಉಂಟುಮಾಡಬಾರದು. ಶಾಲಾ-ಕಾಲೇಜು, ಹಿರಿಯ ನಾಗರಿಕರು, ರೋಗಿಗಳು, ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವ ವ್ಯಕ್ತಿಗಳು ಮತ್ತು ಅವರ ಆರೈಕೆದಾರರಿಗೆ ಈ ಆದೇಶ ಅನ್ವಯಿಸುವುದಿಲ್ಲ.
* ರಾಷ್ಟ್ರೀಯ ಹೆದ್ದಾರಿ, ಟೋಲ್ ಪ್ಲಾಜಾಗಳು, ರಸ್ತೆ ಸುರಕ್ಷತಾ ಉಪಕರಣಗಳು, ಬ್ಯಾರಿಕೇಡ್ ಹಾಗೂ ಇತರೆ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟುಮಾಡುವ ಮತ್ತು ಅವುಗಳ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಅಧಿಕಾರ/ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸುವುದನ್ನು ನಿಷೇಧಿಸಲಾಗಿದೆ.
* ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳು, ಟೋಲ್ ಪ್ಲಾಜಾಗಳು, ಪ್ರಮುಖ ಜಂಕ್ಷನ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಬಂದೋಬಸ್ತ್ ಮತ್ತು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಕೈಗೊಳ್ಳಲು ಸೂಚನೆ.
ಈ ಆದೇಶ ಉಲ್ಲಂಘಿಸುವವರ ವಿರುದ್ಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023 ಹಾಗೂ ಇತರೆ ಅನ್ವಯವಾಗುವ ಕಾನೂನಿನಡಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ.