ಸವದತ್ತಿ ಯಲ್ಲಮ್ಮನ ದರ್ಶನ ಪಡೆದು ಹಿಂದಿರುಗುತ್ತಿದ್ದ ವಿಜಯಪುರ ಜಿಲ್ಲೆಯ ಮಲಘಾಣ ಗ್ರಾಮದ ಭಕ್ತರ ಕ್ರೂಸರ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಅಪಘಾತ ಸಂಭವಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಬಳಿಕ ಬಳಿ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ನಡೆದಿದೆ. ಈ ರಸ್ತೆ ಅಪಘಾತದಲ್ಲಿ ಕ್ರೂಸರ್ ಚಾಲಕ ಸೇರಿ ನಾಲ್ವರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ಮಾನವೀಯತೆಯಿಂದಾಗಿ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಆಗಿದೆ.

ಟ್ರ್ಯಾಕ್ಟರ್‌ಗೆ ಡಿಕ್ಕಿ, ಕ್ರೂಸರ್ ಪಲ್ಟಿ:
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಟ್ರ್ಯಾಕ್ಟರ್ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕ್ರೂಸರ್ ಪಲ್ಟಿ ಆಗಿದ್ದು, ಕ್ರೂಸರ್‌ನಲ್ಲಿ ಪ್ರಯಾಣಿಸುತ್ತಿದ್ದ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿದ್ದ ಭಕ್ತರು ಗಾಯಗೊಂಡಿದ್ದಾರೆ.

ಡ್ರೈವರ್ ಸೇರಿ 11 ಜನ ಮಹಿಳೆಯರು ಪ್ರಾಣಾಪಾಯದಿಂದ ಪಾರು:
ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿದ್ದ ವಿಜಯಪುರ ಜಿಲ್ಲೆಯ ಮಲಘಾಣ ಗ್ರಾಮದ ಭಕ್ತರು ಕ್ರೂಸರ್ ನಲ್ಲಿ ವಾಪಸ್ ತಮ್ಮೂರಿಗೆ ಮರಳುತ್ತಿದ್ದ ಸಂದರ್ಭದಲ್ಲಿ ಈ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ದುರ್ಘಟನೆಯಲ್ಲಿ ಅದೃಷ್ಟವಶಾತ್ ಕ್ರೂಸರ್ ನಲ್ಲಿದ್ದ ಡ್ರೈವರ್ ಸೇರಿ 11 ಜನ ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಕ್ರೂಸರ್ ಚಾಲಕ ಸೇರಿ ನಾಲ್ಕೈದು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಮಹಿಳೆಯರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಸ್ಥಳೀಯರ ಮಾನವೀಯತೆಯಿಂದ ಎಲ್ಲರೂ ಸೇಫ್:
ಇನ್ನು ಕ್ರೂಸರ್ ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದಾಗ ಡಿಕ್ಕಿಯ ರಭಸಕ್ಕೆ ಕ್ರೂಸರ್ ಪಲ್ಟಿ ಆಗಿತ್ತು. ಈ ಸಂದರ್ಭದಲ್ಲಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಪಲ್ಟಿಯಾಗಿದ್ದ ಕ್ರೂಸರ್ ಕಿಟಕಿಯ ಗಾಜು ಒಡೆದು, ಎಲ್ಲ ಮಹಿಳೆಯರನ್ನ ರಕ್ಷಿಸಿದರು. ಗಾಯಾಳುಗಳನ್ನು ಆಟೋ ರಿಕ್ಷಾ ಮೂಲಕ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದ ಸ್ಥಳೀಯರು ಅಷ್ಟೂ ಜನರ ಪ್ರಾಣ ಉಳಿಸುವಲ್ಲಿ ಯಶಸ್ವಿ ಆಗಿದ್ದಾರೆ.

ಸಣ್ಣ ಪುಟ್ಟ ಗಾಯಗೊಂಡವರಿಗೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಪ್ರಥಮ ಚಿಕಿತ್ಸೆ ಕೊಡಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ 108 ವಾಹನದಲ್ಲಿ ಬಾದಾಮಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ರಸ್ತೆ ಅಪಘಾತ ನಡೆದ ಘಟನಾ ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.