ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲು ಶಿಫ್ಟ್‌ಗೆ ಕೊನೆ ಕ್ಷಣದ ಬ್ರೇಕ್ ಬಿದ್ದಿದ್ದೇಕೆ?
Prajwal Revanna : ಬೆಳಗಾವಿಯ ಹಿಂಡಲಗಾ ಜೈಲು ಶಿಫ್ಟಿಂಗ್ ಗೆ ಬ್ರೇಕ್ ಬಿದ್ದಿದೆ. ಕಾರಾಗೃಹ ಇಲಾಖೆ ಡಿಜಿಪಿ ಆದೇಶದಂತೆ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಸಿದ್ಧತೆ ನಡೆದಿತ್ತು.
ಬೆಂಗಳೂರು: ಅತ್ಯಾಚಾರ ಆರೋಪಿ ಪ್ರಜ್ವಲ್ ರೇವಣ್ಣ ಜೈಲು ಶಿಪ್ಟಿಂಗ್ ಗೆ ಬ್ರೇಕ್ ಬಿದ್ದಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಜೈಲಿಗೆ ಕರೆದೊಯ್ಯುತ್ತಿದ್ದ ಪ್ರಜ್ವಲ್ ರೇವಣ್ಣರನ್ನ ಮಾರ್ಗಮಧ್ಯದಿಂದಲೇ ವಾಪಸ್ ಕರೆತರಲಾಗಿದೆ. ಈ ರೀತಿ ಏಕಾಏಕಿ ಯೂಟರ್ನ್ ಹೊಡೆದಿದ್ದು ನಾನಾ ಚರ್ಚೆಗೆ ಕಾರಣವಾಗಿದೆ.
ಪರಪ್ಪನ ಅಗ್ರಹಾರ ಜೈಲಿನಿಂದ ಶಿಫ್ಟ್ ಆಗಬೇಕಿದ್ದ ಪ್ರಜ್ವಲ್ ರೇವಣ್ಣಗೆ ಕೊನೆ ಕ್ಷಣದಲ್ಲಿ ರಿಲೀಪ್ ಸಿಕ್ಕಿದೆ. ಬೆಳಗಾವಿಯ ಹಿಂಡಲಗಾ ಜೈಲು ಶಿಫ್ಟಿಂಗ್ ಗೆ ಬ್ರೇಕ್ ಬಿದ್ದಿದೆ. ಕಾರಾಗೃಹ ಇಲಾಖೆ ಡಿಜಿಪಿ ಆದೇಶದಂತೆ ಪ್ರಜ್ವಲ್ ರೇವಣ್ಣ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸಲು ಸಿದ್ಧತೆ ನಡೆದಿತ್ತು. ಅದರಂತೆ CAR ಎಸ್ಕಾರ್ಟ್ ಸಿಬ್ಬಂದಿ ಪ್ರಜ್ವಲ್ ನನ್ನು ಬೆಂಗಳೂರಿನಿಂದ ಕರೆದೊಯ್ಯುತ್ತಿದ್ದರು. ಆದರೆ ಮಾರ್ಗಮಧ್ಯೆ ಹಿರಿಯ ಅಧಿಕಾರಿಗಳಿಂದ ಕರೆ ಬಂದ ಹಿನ್ನೆಲೆ ಪ್ರಜ್ವಲ್ ನನ್ನು ವಾಪಸ್ ಕರೆತರಲಾಗಿದೆ. ಆದರೆ ಈ ಬೆಳವಣಿಗೆ ಹಲವು ಚರ್ಚೆ ಹುಟ್ಟುಹಾಕಿದೆ.
ನಕಲಿ ಸುಪ್ರಿಂ ಕೋರ್ಟ್ ಆದೇಶ ಸೃಷ್ಟಿಸಿ ಕೈದಿಯನ್ನ ಬಿಡುಗಡೆ ಮಾಡಿದ ಆರೋಪದಲ್ಲಿ ಕಾರಗೃಹ ಇಲಾಖೆಯ ಉತ್ತರ ವಲಯದ ಡಿಜಿಪಿ ಸೋಮಶೇಖರ್ ಜೈಲು ಸೇರಿದ್ದಾರೆ. ಇದರ ನಡುವೆ ಹಿಂಡಲಗಾ ಜೈಲಿನಲ್ಲಿ ಪ್ರಜ್ವಲ್ ರೇವಣ್ಣಗೆ ಸೂಕ್ತ ಭದ್ರತೆ ಒದಗಿಸಲು ತೊಂದರೆಯಾಗಲಿದೆ ಎಂದು ಅಲ್ಲಿನ ಜೈಲಿನ ಅಧೀಕ್ಷಕರು ವರದಿ ನೀಡಿದ್ದಾರೆ. ಹೀಗಾಗಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡುವ ಆದೇಶ ಹಿಂಪಡೆಯಲಾಗಿದೆ. ಈಗ ಬೇರೆ ಜೈಲಿಗೆ ಸ್ಥಳಾಂತರಿಸುವ ಕುರಿತು ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಅಂತ ಕಾರಾಗೃಹ ಇಲಾಖೆಯ ಡಿಜಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ, ಪ್ರಜ್ವಲ್ ರೇವಣ್ಣ ವಿರುದ್ಧದ ಎರಡು ಪ್ರಕರಣಗಳ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯುತ್ತಿದೆ.ವಿಚಾರಣೆಯ ಕೆಲವು ಹಂತಗಳಲ್ಲಿ ಆರೋಪಿಗಳು ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾದ ಅಗತ್ಯವಿರುತ್ತದೆ. ಹೀಗಾಗಿ ನ್ಯಾಯಾಲಯದ ವಿಚಾರಣೆ ಹಾಗೂ ಭದ್ರತಾ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ಜೈಲು ಸ್ಥಳಾಂತರದ ಬಗ್ಗೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಬೇಕಿದೆ.
ಒಟ್ಟಿನಲ್ಲಿ, ಪ್ರಜ್ವಲ್ ರೇವಣ್ಣ ಜೈಲು ಸ್ಥಳಾಂತರ ಸದ್ಯಕ್ಕೆ ಮುಂದೂಡಿಕೆಯಾಗಿದೆ. ಹೀಗಾಗಿ ಸದ್ಯ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಶಿಫ್ಟಿಂಗ್ ನಿರ್ಧಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಪ್ರಜ್ವಲ್ ಪರ ವಕೀಲರು ಮುಂದಾಗಿದ್ದಾರೆ. ಅದರೆ ಈಗ ಶಿಫ್ಟಿಂಗ್ ಗೆ ತಾತ್ಕಲಿಕ ಬ್ರೇಕ್ ಬಿದ್ದಿರೋದು ಪ್ರಜ್ವಲ್ ರೇವಣ್ಣ ನಿಟ್ಟುಸಿರು ಬಿಡುವಂತಾಗಿದೆ.