ಬೆಂಗಳೂರು ನಿರ್ಮಾಣ ಹಂತದ ಕಟ್ಟಡದಲ್ಲಿ ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು?
ಮತ್ತೊಂದೆಡೆ, ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು..? ಅದನ್ನ ತಂದುಕೊಟ್ಟವರು ಯಾರು..? ಈ ಕೃತ್ಯದ ಹಿಂದೆ ಯಾರಿದ್ದಾರೆ ಅನ್ನೋದನ್ನ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರಿನ ಪುಲಿಕೇಶಿನಗರದಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತನಿಖೆ ಕುತೂಹಲ ಮೂಡಿಸಿದೆ. ಸ್ಫೋಟಕ್ಕೆ ನಿಖರ ಕಾರಣವೇನು ಅನ್ನೋದು ಎಫ್‌ಎಸ್‌ಎಲ್ ವರದಿಯಿಂದ ಸ್ಪಷ್ಟವಾಗಬೇಕಿದೆ. ಮತ್ತೊಂದೆಡೆ, ಸ್ಫೋಟಕ ವಸ್ತುಗಳಿದ್ದ ಪಾರ್ಸೆಲ್ ಎಲ್ಲಿಂದ ಬಂತು..? ಅದನ್ನ ತಂದುಕೊಟ್ಟವರು ಯಾರು..? ಈ ಕೃತ್ಯದ ಹಿಂದೆ ಯಾರಿದ್ದಾರೆ ಅನ್ನೋದನ್ನ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಷ್ಟಕ್ಕೂ ಈ ಪಾರ್ಸೆಲ್ ಹಿಂದಿನ ರಹಸ್ಯವೇನು ಅಂತೀರಾ ಇಲ್ಲಿದೆ ಕಂಪ್ಲೀಟ್ ರಿಪೋರ್ಟ್.
ಒಂದೆಡೆ ಸ್ಫೋಟದ ನಿಖರ ಕಾರಣ ತಿಳಿಯಲು ಎಫ್‌ಎಸ್‌ಎಲ್ ವರದಿಗಾಗಿ ಪೊಲೀಸರ ಕಾಯುವಿಕೆ. ಮತ್ತೊಂದೆಡೆ ಪಾರ್ಸೆಲ್‌ನ ಮೂಲ ಪತ್ತೆಹಚ್ಚಿ,ಇದರ ಹಿಂದೆ ಇರುವವರ ಹೆಡೆಮುರಿ ಕಟ್ಟಲು ತನಿಖೆಯ ವೇಗ ಹೆಚ್ಚಳ. ಇದು ಸದ್ಯ ಪುಲಕೇಶಿ
ನಗರದಲ್ಲಿ ನಡೆದ ಅನುಮಾಸ್ಪದ ಸ್ಪೋಟದ ತನಿಖೆಯ ಹೈಲೆಟ್. ಈ ಪ್ರಕರಣದ ತನಿಖೆ ಹಲವು ಆಯಾಮಗಳಲ್ಲಿ ಮುಂದುವರೆದಿದೆ. ಪೂರ್ವ ವಿಭಾಗದ ಪೊಲೀಸರಿಂದ ಐದಕ್ಕೂ ಹೆಚ್ಚು ವಿಶೇಷ ತಂಡಗಳ ರಚನೆಯಾಗಿದ್ದು, ಈಗಾಗಲೇ ನೂರಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನ ಪರಿಶೀಲಿಸಲಾಗಿದೆ. ಹೊರಗಿನಿಂದಲೇ ಸ್ಫೋಟಕ ವಸ್ತುಗಳು ಬಂದಿರುವ ಶಂಕೆಯ ಹಿನ್ನೆಲೆ, ಅವುಗಳ ಮೂಲ ಪತ್ತೆಹಚ್ಚಲು ಪೊಲೀಸರು ಸಾಕ್ಷ್ಯಗಳನ್ನ ಕಲೆಹಾಕುತ್ತಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಪೊಲೀಸರಿಗೆ ಪ್ರಮುಖ ಸುಳಿವು ಸಿಗಬೇಕಿರೋದು ಪಾರ್ಸೆಲ್ ತಂದುಕೊಟ್ಟ ವ್ಯಕ್ತಿಯಿಂದ. ಗಿಫ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಿದರೆ ತೊಂದರೆಯಾಗಬಹುದು ಅನ್ನೋ ಕಾರಣಕ್ಕೆ ಆರೋಪಿಗಳ ತಂಡದ ಯಾರೋ ಒಬ್ಬರು ನೇರವಾಗಿ ಪಾರ್ಸೆಲ್ ತಂದುಕೊಟ್ಟಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪಾರ್ಸೆಲ್ ನೀಡಿದ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಿಸಿಟಿವಿ ದೃಶ್ಯಗಳನ್ನ ಜಾಲಾಡಲಾಗುತ್ತಿದೆ. ಆದರೆ,ಪ್ರಕರಣದ ತನಿಖೆಗೆ ಗಾಯಾಳುಗಳ ಹೇಳಿಕೆಗಳು ನಿರ್ಣಾಯಕವಾಗಿವೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಸೆಕ್ಯೂರಿಟಿ ಗಾರ್ಡ್ ಅಲ್ಲಾವುದ್ದೀನ್, ಪಾರ್ಸೆಲ್ ವಿಚಾರವಾಗಿ ನೀಡುತ್ತಿರುವ ಹೇಳಿಕೆಗಳಲ್ಲಿ ಗೊಂದಲವಿದೆ.ಒಂದು ಬಾರಿ ಯಾರೋ ಪಾರ್ಸೆಲ್ ಕೊಟ್ಟರು ಎಂದರೆ, ಮತ್ತೊಮ್ಮೆ ಅದನ್ನ ಎಲ್ಲೋ ಇಟ್ಟು ಹೋಗಿದ್ದರು ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ.
ಇನ್ನು ಮತ್ತೊಬ್ಬ ಗಾಯಾಳು ಸೂರಜ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಸದ್ಯ ಅವರು ಸರಿಯಾಗಿ ಹೇಳಿಕೆ ದಾಖಲಿಸುವ ಸ್ಥಿತಿಯಲ್ಲಿಲ್ಲ.ಮತ್ತೊಂದೆಡೆ ಕಟ್ಟಡದ ಮಾಲೀಕ ರೆಹಮಾನ್ ಹೇಳಿಕೆಯನ್ನೂ ಪೊಲೀಸರು ದಾಖಲಿಸಿಕೊಂಡಿದ್ದಾರೆ.ಈ ಘಟನೆಗೂ ತನಗೂ ಸಂಬಂಧವಿಲ್ಲ,ಏನಾಗಿದೆ ಅನ್ನೋದೇ ಗೊತ್ತಿಲ್ಲ ಎಂದು ಹೇಳಿದ್ದಾರೆ. ವೈಯಕ್ತಿಕ ದ್ವೇಷದ ಆಯಾಮದ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಪೂರ್ವ ವಿಭಾಗದ ಡಿಸಿಪಿ ನೇತೃತ್ವದಲ್ಲಿ ತನಿಖೆ ಮುಂದುವರೆದಿದ್ದು, ಪಾರ್ಸೆಲ್ ತಂದುಕೊಟ್ಟ ವ್ಯಕ್ತಿಯ ಪತ್ತೆಯೇ ಪ್ರಕರಣದ ಹಿಂದಿರುವವರ ಸುಳಿವು ನೀಡುವ ಪ್ರಮುಖ ಕೊಂಡಿಯಾಗುವ ಸಾಧ್ಯತೆಯಿದೆ. ಎಫ್‌ಎಸ್‌ಎಲ್ ವರದಿ ಮತ್ತು ಗಾಯಾಳುಗಳ ಸ್ಪಷ್ಟ ಹೇಳಿಕೆಗಳ ಬಳಿಕ ಸ್ಫೋಟದ ಹಿಂದಿನ ರಹಸ್ಯ ಬಯಲಾಗುವ ನಿರೀಕ್ಷೆಯಿದೆ.