ಬೆಂಗಳೂರು: ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯು 9ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಕೊರೆಯುವ ಚಳಿ, ಗಾಳಿ ಹಾಗೂ ಸುರಿಯುವ ಮಳೆಯ ನಡುವೆಯೂ ಮಹಿಳಾ ಕಾರ್ಯಕರ್ತೆಯರು ತಮ್ಮ ಪುಟ್ಟ ಮಕ್ಕಳ ಸಮೇತ ರಸ್ತೆಯಲ್ಲೇ ಕುಳಿತು ಹಕ್ಕೊತ್ತಾಯ ಮಂಡಿಸುತ್ತಿದ್ದಾರೆ. ಸರ್ಕಾರದಿಂದ ಸ್ಪಷ್ಟವಾದ ಲಿಖಿತ ಭರವಸೆ ದೊರೆಯುವವರೆಗೂ ಯಾವುದೇ ಕಾರಣಕ್ಕೂ ಧರಣಿ ಸ್ಥಳದಿಂದ ಕದಲುವುದಿಲ್ಲ ಎಂದು ಕಾರ್ಯಕರ್ತೆಯರು ಬಿಗಿ ಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿಗಳು ನೀಡಿದ ಮನವಿಗೂ ಜಗ್ಗದ ಆಶಾ ಕಾರ್ಯಕರ್ತೆಯರು, ತಮ್ಮ ಬದುಕಿನ ಸಂಕಷ್ಟಗಳು ಹಾಗೂ ಬೇಡಿಕೆಗಳು ಈಡೇರುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ನಡುವೆ, ಹೋರಾಟ ನಿರತ ಆಶಾ ಕಾರ್ಯಕರ್ತರಿಗೆ ನಟ ವಿನೋದ್ ರಾಜ್ ಅವರು ಭೇಟಿ ನೀಡಿ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಬದುಕಿನ ಹೋರಾಟಕ್ಕೆ ವಿನೋದ್ ರಾಜ್ ಸಾಥ್
ಧರಣಿ ಸ್ಥಳಕ್ಕೆ ಆಗಮಿಸಿದ ವಿನೋದ್ ರಾಜ್ ಅವರು, ಆಶಾ ಕಾರ್ಯಕರ್ತೆಯರ ಪ್ರತಿಭಟನೆಯನ್ನು ಕೇವಲ ಬೇಡಿಕೆಗಳ ಹೋರಾಟವಲ್ಲ, ಬದಲಿಗೆ ಏರುತ್ತಿರುವ ಬೆಲೆ ಏರಿಕೆಯ ವಿರುದ್ಧದ ಬದುಕಿನ ಹೋರಾಟ ಎಂದು ಬಣ್ಣಿಸಿದರು. ಕಾರ್ಯಕರ್ತೆಯರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿಗಳು ಸದನದಲ್ಲಿ ಅಥವಾ ಸಭೆಗಳಲ್ಲಿ ಎಲ್ಲಾ ಅಂಕಿಅಂಶಗಳನ್ನು ನೀಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಿಮ್ಮ ಬೇಡಿಕೆಗಳನ್ನು ಈಡೇರಿಸದೇ ಇರುವಷ್ಟು ಕಠಿಣ ಮನಸ್ಸು ಡಿಕೆ ಶಿವಕುಮಾರ್ ಅವರಿಗೆ ಇಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅಭಿಪ್ರಾಯಪಟ್ಟರು.
ಮುಂದುವರಿದು ಮಾತನಾಡಿದ ಅವರು, "ನಾನು ನಿಮ್ಮ ಮತ್ತು ಸರ್ಕಾರದ ನಡುವಿನ ಕೊಂಡಿಯಲ್ಲ. ಆದರೆ, ನಿಮ್ಮ ನ್ಯಾಯಯುತ ಹೋರಾಟಕ್ಕೆ ನಿಮ್ಮದೇ ಆದ ದಾರಿಯಲ್ಲಿ ಖಂಡಿತವಾಗಿಯೂ ಪರಿಹಾರ ಸಿಕ್ಕೇ ಸಿಗುತ್ತದೆ" ಎಂದು ಭರವಸೆ ತುಂಬಿದರು.
ಕೊರೊನಾ ವಾರಿಯರ್ಸ್ ಹಾಗೂ ಬೆಲೆ ಏರಿಕೆ ಪ್ರಸ್ತಾಪ
ಸಂಕಷ್ಟದ ಸಮಯದಲ್ಲಿ ಸಮಾಜದ ಸೇವೆಗೆ ನಿಂತ ಆಶಾ ಕಾರ್ಯಕರ್ತೆಯರ ಕಾರ್ಯವನ್ನು ಶ್ಲಾಘಿಸಿದ ವಿನೋದ್ ರಾಜ್, "ಕರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಜನರ ಪ್ರಾಣ ಉಳಿಸಿದವರು ನೀವೇ. ಅಂತಹ ನಿಮ್ಮ ಬದುಕು ಇಂದು ಕಷ್ಟದಲ್ಲಿದೆ" ಎಂದು ಕಳವಳ ವ್ಯಕ್ತಪಡಿಸಿದರು.
ಇದೇ ವೇಳೆ, ಬೆಲೆ ಏರಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದರು. "ಇವತ್ತು ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕಾದ ತುರ್ತು ಅಗತ್ಯವಿದೆ. ಹಿಂದೆ ಮನಮೋಹನ್ ಸಿಂಗ್ ಹಾಗು ಸೀತಾರಾಮ್ ಯಚೂರಿಯವರು ಬೆಲೆ ಏರಿಕೆಯ ಪರಿಣಾಮಗಳ ಬಗ್ಗೆ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದರು. ಆದರೆ, ಕೇಂದ್ರ ಸರ್ಕಾರ ಯಾಕೆ ಇನ್ನೂ ಎಚ್ಚೆತ್ತುಕೊಂಡಿಲ್ಲ? ಜನಸಂಖ್ಯೆ ಜಾಸ್ತಿಯಾಗಿದೆ ಎಂದು ಕಾರಣ ನೀಡುತ್ತಾರೆ, ಅದರ ಪರಿಣಾಮ ಏನೆಂಬುದು ಇವಾಗ ಗೊತ್ತಾಗುತ್ತಿದೆ" ಎಂದು ಹೇಳಿದರು.
ಅಗತ್ಯ ವಸ್ತುಗಳ ವಿತರಣೆ ಹಾಗೂ ಮನವಿ
ಪ್ರತಿಭಟನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಆಶಾ ಕಾರ್ಯಕರ್ತೆಯರಿಗೆ ವಿನೋದ್ ರಾಜ್ ಅವರು ತರಕಾರಿ, ಅಕ್ಕಿ ಹಾಗೂ ನೀರಿನ ಬಾಟಲಿಗಳನ್ನು ಹಸ್ತಾಂತರಿಸುವ ಮೂಲಕ ನೆರವು ನೀಡಿದರು. ಕೊನೆಯಲ್ಲಿ, "ಆದಷ್ಟು ಬೇಗ ಈ ಆಶಾ ತಾಯಂದಿರ ಕಷ್ಟಕ್ಕೆ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಸ್ಪಂದಿಸಬೇಕು" ಎಂದು ಅವರು ಮನವಿ ಮಾಡಿದರು.